ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ನೇಕಾರರ ವಸತಿ ಕಾರ್ಯಾಗಾರ ಯೋಜನೆಯಡಿ ನಿರ್ಮಾಣ ಮಾಡಿದ್ದ 38 ಮನೆಗಳು ಎಲ್ಲಿವೆ ಎಂಬುದು ಯಾರಿಗೂ ಗೊತ್ತಿಲ್ಲ ಎಂಬ ಮಾತು ಹೆಗ್ಗೋಡು ಸುತ್ತಮುತ್ತ ಚರ್ಚೆಯಾಗುತ್ತಿತ್ತು.
ಆ ಕಟ್ಟೆಪುರಾಣದ ಎಳೆ ಹಿಡಿದು, ‘ಪತ್ರಿಧ್ವನಿ’ ಸುದ್ದಿತಾಣ, ಮಾಹಿತಿ ಹಕ್ಕಿನಡಿ ಶಿವಮೊಗ್ಗದ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಮಾಹಿತಿ ಕೆದಕಿದಾಗ, ಬಡ ನೇಕಾರರ ವಸತಿ ಯೋಜನೆಯಡಿ ಹೆಗ್ಗೋಡಿನ ಚರಕ ಮತ್ತು ದೇಸಿ ಸಂಸ್ಥೆಗಳ ಪ್ರವರ್ತಕರು ಕೈಮಗ್ಗ ಇಲಾಖೆ ಮಂಜೂರು ಮಾಡಿದ್ದ ಅನುದಾನವನ್ನು ಎಲ್ಲಾ ನಿಯಮ ಗಾಳಿಗೆ ತೂರಿ ದುರ್ಬಳಕೆ ಮಾಡಿರುವುದು ದಾಖಲೆಸಹಿತ ಬೆಳಕಿಗೆ ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಚರಕ ಮತ್ತು ದೇಸಿ ಸಂಸ್ಥೆ ನಡುವಿನ ವ್ಯವಹಾರಗಳು ಪಾರದರ್ಶಕವಾಗಿವೆ. ಗ್ರಾಮೀಣ ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬನೆಗಾಗಿಯೇ ಎರಡೂ ಸಂಸ್ಥೆಗಳು ಶ್ರಮಿಸುತ್ತಿವೆ ಎಂದು ಮತ್ತೆ ಮತ್ತೆ ಸಾಬೀತು ಮಾಡುವ ಪ್ರಯತ್ನಗಳು ನಡೆಯುತ್ತಿವೆ.
ಅದರ ಭಾಗವಾಗಿ ಬೆಂಗಳೂರಿನ ‘ಸಮುದಾಯ’ದಂತಹ ತಂಡಗಳು ಜಾಥಾಗಳನ್ನೂ ನಡೆಸಿದೆ. ಸರಣಿ ಪತ್ರಿಕಾಗೋಷ್ಠಿಗಳೂ, ಪ್ರಚಾರ ತಂತ್ರಗಳೂ ಜಾರಿಯಲ್ಲಿವೆ. ಲಾಕ್ ಡೌನ್ ತಂದ ನಷ್ಟದಿಂದ ಮಹಿಳೆಯರನ್ನು ಪಾರು ಮಾಡುವ ಶತಪ್ರಯತ್ನ ನಡೆಸುತ್ತಿರುವುದಾಗಿ ದೇಸಿ ಪರವಾಗಿ ಅದರ ಟ್ರಸ್ಟಿ ಪ್ರಸನ್ನ ಅವರು ಹೇಳುತ್ತಲೇ ಬಂದಿದ್ದಾರೆ. ಈ ನಡುವೆ “ಸರ್ಕಾರ ಮತ್ತು ವಿವಿಧ ಇಲಾಖೆಗಳಿಂದ ಕೋಟ್ಯಂತರ ರೂಪಾಯಿ ಅನುದಾನ ಬರಬೇಕಿದೆ. ಅಧಿಕಾರಶಾಹಿ ಮತ್ತು ಆಡಳಿತ ವರ್ಗ ಬಡ ಮಹಿಳೆಯರಿಗೆ ನ್ಯಾಯಯುತವಾಗಿ ಸಿಗಬೇಕಾದ ಅನುದಾನ ನೀಡಲು ಅಡ್ಡಗಾಲಾಗಿದ್ದಾರೆ” ಎಂಬ ಗಂಭೀರ ಆರೋಪಗಳನ್ನೂ ಪ್ರಸನ್ನ ಮಾಡಿದ್ದಾರೆ.
ಆದರೆ, ಸರ್ಕಾರ ಈವರೆಗೆ ಕಳೆದ 25 ವರ್ಷಗಳಲ್ಲಿ ನೀಡಿರುವ ವಿವಿಧ ಅನುದಾನಗಳು ಎಷ್ಟರಮಟ್ಟಿಗೆ ನಿಜವಾಗಿಯೂ ಗ್ರಾಮೀಣ ಮಹಿಳೆಯರ ಹಿತಕ್ಕೆ ಬಳಕೆಯಾಗಿವೆ? ಮಹಿಳೆಯರ ಹೆಸರಿನಲ್ಲಿ ಪಡೆದುಕೊಂಡಿರುವ ಸರ್ಕಾರದ ಅನುದಾನ ಆ ಮಹಿಳೆಯರ ಏಳಿಗೆಗೆ ಬಳಕೆಯಾಗಿದೆಯೇ ಅಥವಾ ಚರಕವನ್ನು ಸುತ್ತುವರಿದಿರುವ ಹಿತಾಸಕ್ತ ಗುಂಪುಗಳ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಬಳಕೆಯಾಗಿವೆಯೇ? ಎಂಬುದಕ್ಕೆ ಈ ನೇಕಾರರ ವಸತಿ ಯೋಜನೆ ಕರ್ಮಕಾಂಡ ನಿದರ್ಶನ.
ನೇಕಾರರ ತಲೆಮೇಲೆ ಒಂದು ಸೂರು ಮತ್ತು ನೇಯ್ಗೆ ಕಾಯಕಕ್ಕೆ ಒಂದು ಸುಸಜ್ಜಿತ ಜಾಗ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ 2009-10ರಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಡಿ ಜಾರಿಗೆ ತಂದ ಯೋಜನೆಯೇ ನೇಕಾರರ ವಸತಿ ಕಾರ್ಯಾಗಾರ ಯೋಜನೆ.
ಮಾಹಿತಿ ಹಕ್ಕು ಕಾಯ್ದೆಯಡಿ ‘ಪ್ರತಿಧ್ವನಿ’ ಪಡೆದುಕೊಂಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಚರಕ ಸಂಸ್ಥೆಯ ನೇಕಾರರಾದ 38 ಮಂದಿ ಆ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದರು.
ಸರ್ಕಾರದ ವಸತಿ ಯೋಜನೆಯ ನಿಯಮಾನುಸಾರ; ನೇಕಾರರು ಯಾವುದೇ ತಕರಾರು, ಷರತ್ತುಗಳಿಲ್ಲದ ತಮ್ಮ ಸ್ವಂತ ನಿವೇಶನದ ದಾಖಲೆಗಳನ್ನು ನೀಡಬೇಕಿತ್ತು. ಆದರೆ, ಚರಕ ಸಂಸ್ಥೆ ದೇಸಿ ಟ್ರಸ್ಟ್ ಗೆ ಸೇರಿದ ಭೂ ಪರಿವರ್ತನೆಯೇ (ಅಲಿನೇಷನ್) ಆಗದ, ಕೃಷಿ ಭೂಮಿಯನ್ನೇ ನಿವೇಶನವೆಂದು ದಾಖಲೆ ಸೃಷ್ಟಿಸಿ, ಟ್ರಸ್ಟ್ ನೀಡಿದ ನೋಂದಣಿ ಕೂಡ ಆಗದ ಸ್ವಾಧೀನ ಪತ್ರವನ್ನು ಭೂದಾಖಲೆಯಾಗಿ ನೀಡಿದೆ. ಮೊದಲನೆಯದಾಗಿ 38 ನಿವೇಶನಗಳಿರುವ ಜಾಗ ಇಂದಿಗೂ ಅಧಿಕೃತವಾಗಿ ದೇಸಿ ಟ್ರಸ್ಟ್ ಹೆಸರಿನಲ್ಲಿಯೇ ಇದೆ. ಮತ್ತು ಆ ಯೋಜನೆಯಡಿ ಮನೆ ನಿರ್ಮಾಣವಾಗುವಾಗ ಅದು ಕೃಷಿ ಭೂಮಿಯಾಗಿತ್ತೇ ವಿನಃ, ಅಲಿನೇಟೆಡ್ ನಿವೇಶನವಾಗಲೀ, ಪಂಚಾಯ್ತಿ ಅನುಮೋದಿತ ನಿವೇಶನವಾಗಲೀ ಆಗಿರಲೇ ಇಲ್ಲ!


ಫಲಾನುಭವಿಯ ಹೆಸರಿಗಾಗಲೀ, ಚರಕ ಸಂಸ್ಥೆಯ ಹೆಸರಿಗಾಗಲೀ ನಿವೇಶನವೇ ಇಲ್ಲದಿದ್ದರೂ ನಿಯಮಗಳನ್ನು ಮೀರಿ, ದೇಸಿ ಟ್ರಸ್ಟಿನ ಭೂಮಿಯನ್ನೇ 38 ಮಂದಿಯ ಹೆಸರಿನಲ್ಲಿ ನೋಂದಣಿರಹಿತ ಸಾಮಾನ್ಯ ಛಾಪಾ ಕಾಗದದಲ್ಲಿ ಸ್ವಾಧೀನ ಪತ್ರ ಎಂಬ ದಾಖಲೆ ಸೃಷ್ಟಿಸಿ ಅನುದಾನ ಪಡೆದುಕೊಳ್ಳಲಾಗಿದೆ.
ಕನಿಷ್ಟ ಹಾಗೆ ಪಡೆದುಕೊಂಡ ಆ ಮನೆಗಳನ್ನು ನಿಯಮದಂತೆ ಅಡುಗೆ ಕೋಣೆ, ಶೌಚಾಲಯ, ಸ್ನಾನದ ಕೋಣೆಸಹಿತ ಸುಸಜ್ಜಿತ ಮನೆಯಾಗಿ ನಿರ್ಮಿಸಿ, ಆ ಮನೆಗಳಲ್ಲಿ ನೇಕಾರರಿಗೆ ವಸತಿಗೆ ವ್ಯವಸ್ಥೆ ಮಾಡಲಾಗಿದೆಯೇ? ಅಲ್ಲಿಯೇ ಅವರು ಕೈಮಗ್ಗ ಜೋಡಿಸಿಕೊಂಡು ನೇಯ್ಗೆ ಕೆಲಸ ಮಾಡುತ್ತಿದ್ದಾರೆಯೇ ಎಂದು ಪರಿಶೀಲಿಸಲು ‘ಪ್ರತಿಧ್ವನಿ’ ಹೆಗ್ಗೋಡಿನ ಹೊನ್ನೇಸರದ ದೇಸಿ ಸಂಸ್ಥೆಯ ಮಾಲೀಕತ್ವದ ಜಾಗದಲ್ಲಿರುವ ‘ಶ್ರಮಜೀವಿ ಆಶ್ರಮ’ಕ್ಕೆ ಭೇಟಿ ನೀಡಿದಾಗ ಕಂಡುಬಂದ ಚಿತ್ರಣ ಬೇರೆಯೇ ಇತ್ತು.
2010-11ರ ಸುಮಾರಿಗೆ ಅಲ್ಲಿ ನೇಕಾರರ ವಸತಿ ಯೋಜನೆಯಡಿ ಗುಂಪಾಗಿ ಸಾಲು ಕೊಠಡಿಗಳನ್ನು ನಿರ್ಮಿಸಿದ್ದರೂ ಅವುಗಳಲ್ಲಿ ಅಂದಿನಿಂದ ಈವರೆಗೆ ಯಾವುದೇ ಫಲಾನುಭವಿ ವಾಸವಿಲ್ಲ ಮತ್ತು ಅಲ್ಲಿ ನೇಯ್ಗೆ ಚಟುವಟಿಕೆ ಕೂಡ ನಡೆದದ್ದು ವಿರಳ. ಆರಂಭದಲ್ಲಿ ಕೆಲವು ವರ್ಷ 15-16 ಮಗ್ಗಗಳನ್ನು ಅಲ್ಲಿ ಬಳಿಸಿದ್ದರೂ, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅಲ್ಲಿ ಅಕ್ಷರಶಃ ನೇಯ್ಗೆ ಚಟುವಟಿಕೆಯೇ ನಡೆಯುತ್ತಿಲ್ಲ. ಒಂದೆರಡು ಕೊಠಡಿಗಳಲ್ಲಿ ಬಳಸದ ಮಗ್ಗ ಇಟ್ಟಿದ್ದರೆ, ಉಳಿದ ಕೊಠಡಿಗಳಲ್ಲಿ ಕೆಲವನ್ನು ಚರಕ ಸಂಸ್ಥೆಗೆ ಭೇಟಿ ನೀಡುವ ಗಣ್ಯ ಅತಿಥಿಗಳ ವಾಸ್ತವ್ಯಕ್ಕಾಗಿ, ಉಳಿದವುಗಳನ್ನು ಚರಕದ ಇನ್ನಿತರೆ ಚಟುವಟಿಗಳಿಗೆ ಬಳಸಿಕೊಳ್ಳಲಾಗಿದೆ(ವಾಸ್ತವವಾಗಿ ಇಡೀ ಹೆಗ್ಗೋಡಿನಲ್ಲಿ ಚರಕ ಸಂಸ್ಥೆ ಈಗ ನಡೆಸುತ್ತಿರುವುದು ಬೆರಳೆಣಿಕೆಯ ಮಗ್ಗ ಮಾತ್ರ ಎಂಬುದು ಸಂಸ್ಥೆಯ ನೇಕಾರರೇ ಹೇಳುವ ಮಾತು!).

ಈ ನಡುವೆ, “ಟೈಟಾನ್ ಸಂಸ್ಥೆಯ ಸಿಎಸ್ ಆರ್ ಅನುದಾನದಡಿ ಚರಕದ ಬಣ್ಣಗಾರಿಕೆಯ ಪ್ರಯೋಗಾಲಯ ನಿರ್ಮಾಣಕ್ಕಾಗಿ ಎರಡು ವರ್ಷಗಳ ಹಿಂದೆ ನೇಕಾರರ ವಸತಿ ಯೋಜನೆ ಮನೆಗಳನ್ನೇ ಕೆಡವಿ, ಹೊಸ ಕಟ್ಟಡ ಕಟ್ಟಲಾಗಿತ್ತು (ಈ ಕೆಡವುವಿದ್ದೂ ಕೂಡ ಯೋಜನೆಯ ನಿಯಮದ ಪ್ರಕಾರ ಅಕ್ರಮ! ). ಈಗ ಅದೇ ಜಾಗದಲ್ಲಿ ರಂಗಮಂದಿರ ನಿರ್ಮಾಣ ಮಾಡಲಾಗುತ್ತಿದೆ” ಎಂದು ರಂಗ ಮಂದಿರದ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದನ್ನು ಚರಕ ಸಂಸ್ಥೆಯ ಕಾರ್ಯದರ್ಶಿ ರಮೇಶ್ ತೋರಿಸಿದರು. “ಕನಿಷ್ಟ ಹತ್ತು ವರ್ಷಗಳವರೆಗೆ ನೇಕಾರರ ವಸತಿ ಕಾರ್ಯಾಗಾರ ಯೋಜನೆಯ ಮನೆಯಲ್ಲಿ ನೇಕಾರರು ವಾಸವಿದ್ದು, ಸ್ವತಃ ಅಲ್ಲಿಯೇ ಕೈಮಗ್ಗ ಯಂತ್ರ ಇಟ್ಟುಕೊಂಡು ನೇಕಾರರಿಗೆ ವೃತ್ತಿ ಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ಆ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು, ಮತ್ತೊಬ್ಬರಿಗೆ ಪರಭಾರೆ ಮಾಡಬಾರದು ಎಂಬ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಅಲ್ಲಿ ಚರಕದ ನೇಕಾರಿಕೆಗೆ ಸಂಬಂಧವೇ ಪಡದ ರಂಗ ಚಟುವಟಿಕೆಗಾಗಿ ರಂಗ ಮಂದಿರ ನಿರ್ಮಾಣ ಮಾಡಲಾಗುತ್ತಿದೆ” ಎಂಬುದು ಸಂಸ್ಥೆಯ ಹಿರಿಯ ಸಿಬ್ಬಂದಿಯೇ ವ್ಯಕ್ತಪಡಿಸುವ ಅಸಮಾಧಾನ!
ಅಂದರೆ “ಮೊದಲನೆಯದಾಗಿ ನೇಕಾರರದ್ದಲ್ಲದ, ಅವರಿಗೆ ಕಾನೂನು ರೀತ್ಯ ಯಾವ ಹಕ್ಕೂ ಇಲ್ಲದ ಜಾಗವನ್ನು ನಿವೇಶನವೆಂದು ತೋರಿಸಿ ಮನೆ ಪಡೆಯಲಾಯಿತು. ಪಡೆದ ನಂತರ ಕೂಡ ಆ ಮನೆಗಳು ಅವರಿಗೆ ಸೇರಲಿಲ್ಲ. ಬದಲಾಗಿ ಬಡವರ ಹೆಸರಿನಲ್ಲಿ ಮನೆ ಪಡೆದು ಚರಕ ಮತ್ತು ದೇಸಿ ಸಂಸ್ಥೆಗಳು ಬಳಸಿಕೊಂಡವು. ಎರಡನೆಯದಾಗಿ ಆ ಮನೆಗಳನ್ನು ಕೂಡ ಕೆಡವಿ ಅಲ್ಲಿ ಮತ್ತೊಂದು ಯೋಜನೆಯ ಅನುದಾನ ಪಡೆದು ಮತ್ತೊಂದು ಕಟ್ಟಡ ನಿರ್ಮಾಣ ಮಾಡಲಾಯಿತು. ಈಗ ಇನ್ನೊಂದು ಸಂಸ್ಥೆಯ ಅನುದಾನ ಪಡೆದು ಅದೇ ಜಾಗದಲ್ಲಿ ಮತ್ತೊಂದು ನಿರ್ಮಾಣ ಕಾರ್ಯ ನಡೆಯುತ್ತಿದೆ! ಅಂದರೆ, ಒಂದೇ ಜಾಗ, ಮೂರು ಮೂರು ಬೇರೆ ಬೇರೆ ಉದ್ದೇಶದ, ಬೇರೆ ಬೇರೆ ಚಟುವಟಿಕೆಯ ಮತ್ತು ಬೇರೆ ಬೇರೆ ಸಂಸ್ಥೆಗಳ ಅನುದಾನ! ಇದೊಂದು ರೀತಿಯಲ್ಲಿ ಒಬ್ಬನೇ ಪಾತ್ರಧಾರಿ, ದೃಶ್ಯಕ್ಕೊಂದು ಪಾತ್ರಮಾಡಿದಂತೆ” ಎಂದು ಅವರು, ನೇಕಾರರ ವಸತಿ ಯೋಜನೆಯ ಸಮಾಧಿಯ ಮೇಲೆ ನಡೆಯುತ್ತಿರುವ ಬೇರೆ ಬೇರೆ ಕಟ್ಟುವ- ಕೆಡುವುವ ‘ಆಟ’ಗಳನ್ನು ವಿವರಿಸಿದರು.

ಅಂದರೆ; ಬಡ ನೇಕಾರರಿಗೆ ಸೂರು ಕಲ್ಪಿಸುವ ಉದ್ದೇಶಿತ ಯೋಜನೆಯ ಮನೆಗಳು ಈಗ ಆ ನೇಕಾರರ ಬದಲಿಗೆ, ಚರಕ ಸಂಸ್ಥೆಯ ಬಳಕೆಯಲ್ಲಿವೆ. ಮತ್ತು ಆ ಜಾಗದ ಮಾಲೀಕತ್ವ ಈಗಲೂ ದೇಸಿ ಸಂಸ್ಥೆಯ ಹೆಸರಲ್ಲೇ ಮುಂದುವರಿದಿರುವುದರಿಂದ ಕಾನೂನು ರೀತ್ಯ ಆ ಎಲ್ಲಾ ಕಟ್ಟಡಗಳ ಮಾಲೀಕತ್ವ ದೇಸಿಗೇ ಸೀಮಿತವಾಗಿದೆ. ಹಾಗಾಗಿ, ವಾಸ್ತವವಾಗಿ ನೋಡಿದರೆ, ಕೈಮಗ್ಗ ಮತ್ತು ಜವಳಿ ಇಲಾಖೆಯ ನೇಕಾರರ ವಸತಿ ಕಾರ್ಯಾಗಾರ ಯೋಜನೆಯಡಿ ಮಂಜೂರಾದ 38 ಮನೆಗಳು ಈಗ ಕೇವಲ ಏಳೆಂಟು ವರ್ಷದಲ್ಲೇ ನಾಪತ್ತೆಯಾಗಿವೆ! ತಲಾ 60 ಸಾವಿರ ರೂಪಾಯಿ ಸಾಲ ಮತ್ತು ಸಹಾಯಧನದಡಿ ನಿರ್ಮಾಣವಾದ ಸ್ವತ್ತುಗಳಲ್ಲಿ ಯಾವುದೂ ಈಗ ಅಸಲೀ ಫಲಾನುಭವಿಗಳ ಸ್ವಾಧೀನದಲ್ಲಿಲ್ಲ!
ಸರ್ಕಾರಿ ಯೋಜನೆಯಡಿ ನಿರ್ಮಾಣವಾದ ಮನೆಗಳು ಹೀಗೆ ಕಾಣೆಯಾಗಿರುವ ಬಗ್ಗೆ ಕುತೂಹಲಗೊಂಡ ‘ಪ್ರತಿಧ್ವನಿ’, ಫಲಾನುಭವಿಗಳಲ್ಲಿ ಕೆಲವರನ್ನು ಮಾತನಾಡಿಸಿ, ಅವರಿಗೆ ಸರ್ಕಾರ ಕೊಟ್ಟ ಮನೆ ಏನಾದವು? ಅನುದಾನವೇನಾಯಿತು ಎಂದು ವಿಚಾರಿಸಿತು. ಆಗ ಸಿಕ್ಕ ಉತ್ತರ ಮತ್ತು ಆ ಕುರಿತು ಮಾಹಿತಿ ಹಕ್ಕಿನಡಿ ಅದೇ ಫಲಾನುಭವಿಗಳ ಮನೆ ಮಂಜೂರಾತಿ ಕಡತ ಪರಿಶೀಲಿಸಿದಾಗ, ಇಡೀ ಯೋಜನೆಯನ್ನು ಅಮಾಯಕ ನೇಕಾರರ ಹೆಸರಲ್ಲಿ ಚರಕ ಮತ್ತು ಅಂತಿಮವಾಗಿ ದೇಸಿ ಸಂಸ್ಥೆಯ ಆಸ್ತಿ ಸೃಷ್ಟಿಗೆ ಬಳಸಿಕೊಂಡಿರುವುದು ಮೇಲ್ನೋಟಕ್ಕೇ ಕಂಡುಬಂದಿತು. ಅಂದರೆ ಅಮಾಯಕ ನೇಕಾರರ ಮನೆಯ ಕನಸಿನ ಮೇಲೆ ದೇಸಿ ಸಂಸ್ಥೆಯ ಪ್ರತಿಷ್ಠಿತ ‘ಶ್ರಮಜೀವಿ ಆಶ್ರಮ’ ವಿಜೃಂಭಿಸುತ್ತಿದೆ!
ಫಲಾನುಭವಿಗಳಲ್ಲಿ ಒಬ್ಬರಾದ ಸತೀಶ್ ಬಿನ್ ರಾಮಪ್ಪ, ಭೀಮನಕೋಣೆ ಮಾತನಾಡಿ, “ಚರಕದಲ್ಲಿ ನಾನು ಕೆಲಸ ಮಾಡುತ್ತಿದ್ದಾಗ, ಹತ್ತು ವರ್ಷದ ಹಿಂದೆ ಜವಳಿ ಇಲಾಖೆಯಿಂದ ಮನೆ ಬಂದಿದೆ ಎಂದು ಚರಕದವರು ನಮ್ಮ ಕಡೆಯಿಂದ ದಾಖಲೆ ಕೇಳಿದ್ದರು. ದಾಖಲೆ ಕೊಟ್ಟಿದ್ದೆವು. ಶ್ರಮಜೀವಿ ಆಶ್ರಮದಲ್ಲಿ ಈಗ ಉದ್ದನೆಯ ಕಟ್ಟಡವಿರುವುದನ್ನೇ ಅಡಿಪಾಯದ ಹಂತದಿಂದ ಮನೆ ಪೂರ್ತಿಯಾಗುವವರೆಗೆ ನಮ್ಮದು ಎಂದೇ ಫೋಟೋ ತೆಗೆಸಿ ಕೊಟ್ಟಿದ್ದೆವು. ಹೀಗೆ 38 ಮಂದಿಯೂ ಬಾಗಿಲ ಮುಂದೆ ನಿಂತು ಫೋಟೋ ತೆಗೆಸಿ ದಾಖಲೆ ಕೊಟ್ಟಿದ್ದೆವು. ಆ ನಂತರ ಆ ಮನೆಗಳಲ್ಲಿ ನಾವು ವಾಸವೂ ಇರಲಿಲ್ಲ; ನೇಕಾರಿಕೆಯನ್ನೂ ಮಾಡಲಿಲ್ಲ. ಅದನ್ನು ಚರಕ- ದೇಸಿ ಸಂಸ್ಥೆಗಳೇ ಬಳಸಿಕೊಂಡವು” ಎಂದರು.
ಹಾಗಾದರೆ, ಸರ್ಕಾರದಿಂದ ಬಂದ ಹಣ ಏನಾಯಿತು? ಎಂಬ ಪ್ರಶ್ನೆಗೆ ಅವರು, “ನಮಗೆ 40 ಸಾವಿರ ರೂಪಾಯಿ ಬಾಂಡ್ ಮಾಡಿಸಿ ಕೊಟ್ಟರು. ಅದು ಹೊರತುಪಡಿಸಿ, ಬೇರೆ ಹಣವನ್ನಾಗಲೀ, ಮನೆಯನ್ನಾಗಲೀ, ಜಾಗವನ್ನಾಗಲೀ ನಮಗೆ ಕೊಡಲಿಲ್ಲ. ಹೀಗಾಗಿ ನಮಗೆ ಅತ್ತ ಮನೆಯೂ ಇಲ್ಲ; ಇತ್ತ ಹಣವೂ ಕೈಗೆ ಬರಲಿಲ್ಲ. ಸರ್ಕಾರಿ ದಾಖಲೆಯಲ್ಲಿ ಈ ಯೋಜನೆಯಡಿ ಮನೆ ಪಡೆದಿರುವುದರಿಂದ ಮತ್ತೆ ಮುಂದೆ ಯಾವುದೇ ಸರ್ಕಾರಿ ವಸತಿ ಯೋಜನೆಯಲ್ಲೂ ಮನೆ ಪಡೆಯಲೂ ಆಗಲಿಲ್ಲ” ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

“ನೇಕಾರರ ಹೆಸರಲ್ಲಿ ಸರ್ಕಾರದ ಅನುದಾನ ಪಡೆದುಕೊಂಡರು. ನೆಲದಿಂದ ಹಿಡಿದು, ಕಟ್ಟಡದವರೆಗೆ ಯಾವುದರ ಮೇಲೂ ಅವರಿಗೆ ಹಕ್ಕು ಕೊಡಲಿಲ್ಲ. ಬದಲಾಗಿ ಸರ್ಕಾರದಿಂದ ಬಂದ ಹಣದಲ್ಲಿ40 ಸಾವಿರ ಮಾತ್ರ ಬಾಂಡ್ ಮಾಡಿಸಿಕೊಟ್ಟು ಕೈತೊಳೆದುಕೊಳ್ಳಲಾಯಿತು. ಕನಿಷ್ಟ ಆ ಮನೆಗಳನ್ನು ನೇಕಾರಿಗೆ, ಕೈಮಗ್ಗದ ಚಟುವಟಿಕೆಗೇ ಸೀಮಿತವಾಗಿ ಬಳಸಿಕೊಂಡಿದ್ದರೂ ಬೇಸರವಿರಲಿಲ್ಲ. ಅದೂ ಮಾಡಲಿಲ್ಲ. ಅಲ್ಲಿ ಅತಿಥಿಗಳ ವಾಸ್ತವ್ಯ, ರಂಗಕೇಂದ್ರದಂತಹ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದು ನಿಜವಾಗಿಯೂ ಚರಕ ಹೆಸರಲ್ಲಿ ದೇಸಿ ಸಂಸ್ಥೆಯನ್ನು, ಆ ಸಂಸ್ಥೆಯ ರೂವಾರಿಗಳ ಪ್ರತಿಷ್ಠೆ ಬೆಳೆಸುವ ವೈಖರಿಯೇ ವಿನಃ ಗ್ರಾಮೀಣ ಬಡ ಮಹಿಳೆಯರ ಒಳಿತಿನ ಕೆಲಸವೆಂದು ಹೇಳಲಾದೀತೆ?” ಎಂಬುದು ಚರಕದ ಮತ್ತೊಬ್ಬ ಹಿರಿಯ ಮಾಜಿ ಮಹಿಳಾ ಉದ್ಯೋಗಿಯ ಅಳಲು.
“ಮೊದಲನೆಯದಾಗಿ ಬಡವರ ಹೆಸರಲ್ಲಿ ಸರ್ಕಾರಿ ಯೋಜನೆಯೊಂದಕ್ಕೆ ಭೂಮಿಯ ಕುರಿತು ಸುಳ್ಳು ದಾಖಲೆ ಸೃಷ್ಟಿಸಿ, ಕಣ್ಕಟ್ಟು ಮಾಡಿ ನಿಯಮಗಳನ್ನು ಮೀರಿ ದುರುಪಯೋಗಪಡಿಸಿಕೊಂಡಿದ್ದು ಕ್ರಿಮಿನಲ್ ಅಪರಾಧ. ಹಾಗೆ ಬಳಸಿಕೊಂಡು ಅನುದಾನವನ್ನು ಕನಿಷ್ಟ ಸಂಪೂರ್ಣ ಬಡ ನೇಕಾರರ ಒಳಿತಿಗಾಗಿಯೇ ಬಳಸಿದ್ದರೂ ಅದೊಂದು ರೀತಿಯಾಗುತ್ತಿತ್ತು. ಇಲ್ಲಿ ಅದನ್ನೂ ಮಾಡಿಲ್ಲ. ಬಡವರ ಹೆಸರಲ್ಲಿ ಅನುದಾನ ತಂದು ತಮ್ಮ ವೈಯಕ್ತಿಕ ಪ್ರಭಾವ ಮತ್ತು ತಮ್ಮ ಪ್ರತಿಷ್ಠೆಯ ಸಂಸ್ಥೆಗಳಿಗೆ ಬಳಸಿಕೊಳ್ಳಲಾಗಿದೆ. ಇದು ಚರಕ ಸಂಸ್ಥೆಯ ವ್ಯವಹಾರಗಳ ಒಂದು ಉದಾಹರಣೆಯಷ್ಟೆ. ಇಂತಹ ವ್ಯವಸ್ಥೆಯ ಕಾರಣಕ್ಕಾಗಿಯೇ ಬಡ ಮಹಿಳೆಯರು ಇಂದಿಗೂ ಸರ್ಕಾರದ ನಿಗದಿತ ಕನಿಷ್ಟ ವೇತನಕ್ಕಿಂತ ಕಳಪೆ ವೇತನದಲ್ಲಿ, ಕೆಲಸ ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ನಗರಗಳ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿನ ಮಹಿಳೆಯರಿಗೆ ಕನಿಷ್ಟ ಕೈತುಂಬ ಸಂಬಳವಾದರೂ ಸಿಗುತ್ತದೆ. ಇಲ್ಲಿ ಅದೂ ಕೂಡ ಸಿಗುವುದಿಲ್ಲ. ಹಾಗಂತ ಅಂದೂ ನಾವು ಪ್ರಸನ್ನ ಅವರ ಮುಂದೆ ಇಂತಹ ಪ್ರಶ್ನೆಗಳನ್ನು ಎತ್ತುವಂತಿರಲಿಲ್ಲ, ಇಂದೂ ಎತ್ತಲಾಗದ ಸ್ಥಿತಿ ಇದೆ. ಹಾಗಾಗಿಯೇ ಏನೇ ನಡೆದರೂ ಯಾವ ಹೆಣ್ಣುಮಕ್ಕಳೂ ಅದನ್ನು ಪ್ರಶ್ನಿಸುವುದಿರಲಿ, ನಿಮ್ಮಂಥವರ ಮುಂದೆ ಹೇಳಿಕೊಳ್ಳಲೂ ಅಂಜುತ್ತಾರೆ” ಎಂಬುದು ಹೆಸರು ಹೇಳಲಿಚ್ಚಿಸದ ಆ ಉದ್ಯೋಗಿಯ ಆಕ್ರೋಶ. ಅಲ್ಲಿನ ಅಂತಹ ಅನ್ಯಾಯಗಳನ್ನು ಪ್ರಶ್ನಿಸಿದ್ದಕ್ಕೇ ತಮ್ಮನ್ನು ಸಂಸ್ಥೆಯಿಂದ ದೂರಮಾಡಲಾಗಿದೆ ಎಂಬ ಅವರ ಕೊನೆಯ ಮಾತು ಚರಕ-ದೇಸಿಯಲ್ಲಿ ಇರುವ ಒಂದು ರೀತಿಯ ಸರ್ವಾಧಿಕಾರಿ ವ್ಯವಸ್ಥೆಗೆ ಕನ್ನಡಿ ಹಿಡಿದಂತಿತ್ತು.
ಇನ್ನು ಈ ಮನೆಗಳ ಜಾಡು ಪತ್ತೆಯ ಭಾಗವಾಗಿ ‘ಪ್ರತಿಧ್ವನಿ’, ಸ್ಥಳೀಯ ಹೆಗ್ಗೋಡು ಮತ್ತು ಭೀಮನಕೋಣೆ ಗ್ರಾಮ ಪಂಚಾಯ್ತಿಗಳಲ್ಲಿ ಕೂಡ 2009-10ನೇ ಸಾಲಿನಲ್ಲಿ ನೇಕಾರರ ವಸತಿ ಕಾರ್ಯಾಗಾರ ಯೋಜನೆಯಡಿ ಮನೆ ಪಡೆದ ಫಲಾನುಭವಿಗಳ ಪಟ್ಟಿ ನೀಡಿ, ಆ ಮನೆಗಳಿಗೆ ಸಂಬಂಧಿಸಿದಂತೆ ನಿವೇಶನ ಸಂಖ್ಯೆ, ಮನೆ ಸಂಖ್ಯೆ, ಡಿಮ್ಯಾಂಡ್, ನಲ್ಲಿ, ವಿದ್ಯುತ್ ಸಂಪರ್ಕ ಕುರಿತ ದಾಖಲೆ ಸೇರಿದಂತೆ ಯಾವುದಾದರೂ ವಿವರಗಳು ಲಭ್ಯವಿದೆಯೇ ಎಂದು ಲಿಖಿತ ಮಾಹಿತಿ ಕೋರಿತು. ಹೆಗ್ಗೋಡು ಮತ್ತು ಭೀಮನಕೋಣೆ ಪಂಚಾಯ್ತಿ ಆಡಳಿತ, ಪರಿಶೀಲನೆ ನಡೆಸಿ ಅಂತಹ ಯೋಜನೆಯಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಮನೆಯ ದಾಖಲೆಗಳಾಗಲೀ, ಆ ಮನೆಗಳಿಗೆ ನಲ್ಲಿ ನೀರು, ವಿದ್ಯುತ್ ಮತ್ತು ರಸ್ತೆಯಂತಹ ಮೂಲಸೌಕರ್ಯ ಒದಗಿಸಿದ ಕುರಿತ ಮಾಹಿತಿಯಾಗಲೀ ತಮ್ಮ ದಾಖಲೆಗಳಲ್ಲಿ ಲಭ್ಯವಿಲ್ಲ ಎಂದೂ ಹಿಂಬರಹ ನೀಡಿವೆ.

ಅಂದರೆ, ಒಂದು ಕಡೆ ನಿವೇಶನ ಅಥವಾ ಜಾಗದ ಕುರಿತ ಯಾವ ದಾಖಲೆಯನ್ನೂ ಕಾನೂನು ರೀತ್ಯ ಪರಿಶೀಲಿಸದೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಂಪೂರ್ಣ ಮೂರು ಹಂತದ ಅನುದಾನ(ಪ್ರತಿಹಂತಕ್ಕೆ ತಲಾ 20 ಸಾವಿರದಂತೆ) ನೀಡಿದೆ. ಮತ್ತು ಚರಕ ಸಂಸ್ಥೆ ನೇಕಾರರ ಹೆಸರಲ್ಲಿ ಸರ್ಕಾರದ ಅನುದಾನ ಪಡೆದು ತನ್ನದಲ್ಲದ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ, ಅವುಗಳನ್ನೇ ನೇಕಾರರ ಮನೆ ಎಂದು ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿದೆ. ಈ ವಂಚನೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಂಸ್ಥೆಯ ಮುಖ್ಯಸ್ಥರಿಬ್ಬರೂ ಪಾಲುದಾರರು. ಜೊತೆಗೆ ಆ ಮನೆಗಳ ಮಾಲೀಕತ್ವ ಕೂಡ ಚರಕ ಸಂಸ್ಥೆ ಪಡೆಯದೆ ಇರುವುದರಿಂದ, ಮನೆಗಳೂ ಸೇರಿದಂತೆ ಇಡೀ ಜಾಗದ ಹಕ್ಕು ದೇಸಿ ಸಂಸ್ಥೆಯಲ್ಲೇ ಉಳಿದಿದೆ(ಹೊನ್ನೆಸರ ಗ್ರಾಮ, ಸರ್ವೆ ನಂಬರ್ 164, 164/1).
ಈ ಬಗ್ಗೆ ವಿಚಾರಿಸಿದಾಗ, ಚರಕ ಸಂಸ್ಥೆಯ ಕಾರ್ಯದರ್ಶಿ ರಮೇಶ್ ಅವರು, “ಹಿಂದೆ ಯೋಜನೆ ಬಂದಾಗ ನೇಕಾರರಿಗೆ ಎಂದೇ ಈ ಸಾಲುಮನೆಗಳನ್ನು ಕಟ್ಟಲಾಗಿತ್ತು. ನಂತರ ಅವರುಗಳು ಯಾರೂ ಇಲ್ಲಿ ವಾಸ್ತವ್ಯ ಹೂಡಲು ಇಷ್ಟಪಡಲಿಲ್ಲ. ಹಾಗಾಗಿ ಆ ಮನೆಗಳನ್ನೇ ಚರಕದ ನೇಕಾರಿಕೆ, ಅತಿಥಿಗಳ ವಾಸ್ತವ್ಯ ಮುಂತಾದ ಚಟುವಟಿಕೆಗೆ ಬಳಸಿಕೊಳ್ಳಲಾಗಿತ್ತು. ನಂತರ ಅದೇ ಮನೆಗಳನ್ನು ಕೆಡವಿ, ಟೈಟಾನ್ ಕಂಪನಿ ಅನುದಾನದ ‘ಸ್ಫೂರ್ತಿ’ ಬಣ್ಣಗಾರಿಕೆಯ ಯೋಜನೆಗೆ ಬಳಸಿದೆವು. ಆ ಜಾಗದ ಮಾಲೀಕತ್ವ ಈಗಲೂ ಸಂಪೂರ್ಣ ದೇಸಿಯದ್ದೇ ಆಗಿದೆ” ಎಂದು ಖಚಿತಪಡಿಸಿದರು. ಆದರೆ, ಈ ಬಗ್ಗೆ ಕೇಳಿದಾಗ, ಹೆಸರು ಹೇಳಲಿಚ್ಛಿಸದ ಫಲಾನುಭವಿಯೊಬ್ಬರು, “ಈ ಯೋಜನೆಯನ್ನು ತಂದಿರುವುದೇ ಆಶ್ರಮಕಟ್ಟಲು. ನಿಮ್ಮ ಹೆಸರಿನಲ್ಲಿ ಅನುದಾನ ಬರುತ್ತದೆ. ಆದರೆ ಈ ಮನೆಗಳಲ್ಲಿ ನೀವು ವಾಸ ಇರುವಂತಿಲ್ಲ” ಎಂದು ಪ್ರಸನ್ನ ಅವರು ತಾಕೀತು ಮಾಡಿದ್ದರು. ಆ ಕಾರಣಕ್ಕೇ ನಮಗೆ ಒಂದಿಷ್ಟು ಮೊತ್ತದ ಬಾಂಡ್ ಕೊಟ್ಟು ಸಮಾಧಾನ ಮಾಡಲಾಗಿತ್ತು ಎಂದು ಹೇಳಿದರು.
ಅಂದರೆ; ನೇಕಾರರ ವಸತಿ ಯೋಜನೆಯ ಮನೆಗಳೂ ಸೇರಿದಂತೆ ಇಡೀ ಜಾಗದ ಮೇಲೆ ಕನಿಷ್ಟ ಚರಕ ಸಂಸ್ಥೆಗೂ ಯಾವುದೇ ಕಾನೂನುಬದ್ಧ ಹಕ್ಕಿಲ್ಲ. ದೇಸಿ ಸಂಸ್ಥೆಯ ಜಾಗದಲ್ಲಿ ಶ್ರಮಜೀವಿ ಆಶ್ರಯವಿದೆ. ಅದೇ ಸಂಕೀರ್ಣದಲ್ಲಿರುವ ಕೊಠಡಿಗಳನ್ನೇ ನೇಕಾರರ ಮನೆಗಳೆಂದು ದಾಖಲೆ ಸೃಷ್ಟಿಸಿ ಅನುದಾನ ಪಡೆಯಲಾಗಿದೆ. ಅನುದಾನದ ಮೊತ್ತವನ್ನು ನೇಕಾರ ಫಲಾನುಭವಿಗಳಿಗೇ ನೀಡಿದರೂ, ಅವರ ಹೆಸರಿನಲ್ಲಿ ನಿರ್ಮಾಣವಾದ ಮನೆಗಳನ್ನು ದೇಸಿ ಸಂಸ್ಥೆಯ ಅಧೀನದಲ್ಲೇ ಉಳಿದಿವೆ ಮತ್ತು ಚರಕ ಸದ್ಯಕ್ಕೆ ಆ ಜಾಗದಲ್ಲಿ ತನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದರೂ, ಆ ಜಾಗದ ಮೇಲಾಗಲೀ, ಮನೆಗಳ ಮೇಲಾಗಲೀ ನೇಕಾರರಿಗಿರಲಿ, ಚರಕ ಸಂಸ್ಥೆಗೂ ಹಕ್ಕಿಲ್ಲ!

“ಚರಕ ಸಂಸ್ಥೆಯ ನೇಕಾರರ ಕಾಲೋನಿಯ ಬಗ್ಗೆ ಕೇಳಿದ್ದೆ. ಆದರೆ, ಅಲ್ಲಿಗೆ ಹಲವು ಬಾರಿ ಭೇಟಿನೀಡಿದಾಗಲೂ ಎಲ್ಲೂ ನೇಕಾರರು ವಾಸವಿರುವ ಕಾಲೋನಿ ಕಾಣಿಸಲಿಲ್ಲ. ಈಗ ನಿಮ್ಮ ದಾಖಲೆಗಳು ಹೇಳುತ್ತಿರುವುದು ನೇಕಾರರ ಕನಸಿನ ಮನೆಯ ಮೇಲೆ ಪ್ರಸನ್ನ ಅವರ ಪ್ರತಿಷ್ಠೆಯ ಶ್ರಮಿಜೀವಿ ಆಶ್ರಮ ತಲೆ ಎತ್ತಿದೆ ಎಂದು. ಅಂದರೆ, ತಮ್ಮ ಪ್ರತಿಷ್ಠೆ, ತಮ್ಮದೇ ಸ್ವಂತ ದೇಸಿ ಟ್ರಸ್ಟ್ ಪ್ರತಿಷ್ಠೆ ಮತ್ತು ಆಸ್ತಿ ಬೆಳೆಸಲು ಅವರು ಚರಕ ಮತ್ತು ಚರಕದ ಬಡ ನೇಕಾರ ಮಹಿಳೆಯರನ್ನು ಗಾಣದೆತ್ತಿನಂತೆ ಬಳಸಿಕೊಂಡಿದ್ದಾರೆ ಎಂಬುದು ಇದರಿಂದ ಸಾಬೀತಾಗುತ್ತಿದೆ. ಕನಿಷ್ಟ ಆ ನೇಕಾರರಿಗೆ ಸರ್ಕಾರದಿಂದ ಬಂದ ಮನೆಗಳನ್ನು ಕೂಡ ಕೊಡದೆ, ಹೀಗೆ ಮೋಸದಿಂದ ಆ ಮನೆಗಳನ್ನೇ ಶ್ರಮಿಜೀವಿ ಆಶ್ರಯ ಎಂದು ಬಿಂಬಿಸಿದ್ದಾರೆ. ದುರಂತವೆಂದರೆ, ನಾನೂ ಒಮ್ಮೆ ಆ ಆಶ್ರಮದಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದೆ. ಈಗ ನನಗೆ, ನಾನು ಅಂದು ನೇಕಾರರ ಸೂರಿನ ಕನಸಿನ ಸಮಾಧಿಯ ಮೇಲೆ ಮಲಗಿದ್ದೆ ಎಂದು ಪಾಪಪ್ರಜ್ಞೆ ಕಾಡುತ್ತಿದೆ” ಎಂದು ಆಗಿರುವ ಅಕ್ರಮಗಳ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಹಿರಿಯ ಪತ್ರಕರ್ತ ಕೆ ಪಿ ಸುರೇಶ್ ಕಂಜರ್ಪಣೆ, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಅರ್ಹ ಫಲಾನುಭವಿಗಳಿಗೆ ನೀಡಿದ ಮನೆಗಳು ಎಲ್ಲಿ ಹೋದವು ಎಂಬುದನ್ನು ಇಲಾಖೆ ಮತ್ತು ಸಾರ್ವಜನಿಕರು ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು.
ಒಟ್ಟಾರೆ ಗ್ರಾಮೀಣ ಬಡ ಮಹಿಳಾ ನೇಕಾರರಿಗೆ ನೆರಳು ಒದಗಿಸಬೇಕಿದ್ದ ಅವರ ಜೀವ ಮತ್ತು ದುಡಿಮೆಗೆ ಆಸರೆಯಾಗಬೇಕಿದ್ದ ನೇಕಾರರ ವಸತಿ ಕಾರ್ಯಾಗಾರ ಯೋಜನೆಯ ಮನೆಗಳೇ ಈಗ, ಅವರ ಪಾಲಿಗೆ ಅಂಗಳದ ಕೋಳಿ ಮಂಗಮಾಯವಾದಂತೆ ಕಾಣೆಯಾಗಿವೆ. ಕಳೆದ ಮನೆಗಳನ್ನು ಹುಡಕಲು ಯಾರಾದರೂ ಸಹಾಯ ಮಾಡುವಿರಾ? ಎಂದು ಅವರು ಈಗ ಅಂಗಾಲಾಚುತ್ತಿದ್ದಾರೆ!