ರಾಜ್ಯಾದ್ಯಂತ ಗುರುವಾರ ಮಧ್ಯಾಹ್ನದಿಂದಲೇ ಅಘೋಷಿತ ಲಾಕ್ ಡೌನ್ ಜಾರಿಯಾಗಿದೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ನಂತಹ ಕ್ರಮ ಜರುಗಿಸುವುದಿಲ್ಲ ಎಂಬ ಸ್ವತಃ ಮುಖ್ಯಮಂತ್ರಿಗಳ ಮಾತು, ಮೈಕ್ರೋ ಕಂಟೈನ್ ಮೆಂಟ್ ಝೋನ್ ಆದ್ಯತೆಯಾಗಲೀ, ಲಾಕ್ ಡೌನ್ ಎಂಬುದು ಕೊನೆಯ ಅಸ್ತ್ರವಾಗಲಿ ಎಂಬ ಪ್ರಧಾನಿ ಮೋದಿಯ ಸಲಹೆಯ ಹೊರತಾಗಿಯೂ ಕರ್ನಾಟಕ ಯಾವ ಮುನ್ಸೂಚನೆ ಇಲ್ಲದೆ, ಒಂದೇ ಒಂದು ಕ್ಷಣವೂ ಕಾಲಾವಕಾಶವಿಲ್ಲದೆ ಸಂಪೂರ್ಣ ಲಾಕ್ ಡೌನ್ ಗೆ ಜಾರಿದೆ.
ಹೀಗೆ ಯಾವ ಸೂಚನೆಯನ್ನೂ ನೀಡದೆ ಏಕಾಏಕಿ ಜಾರಿಮಾಡಲಾದ ಅಘೋಷಿತ ಲಾಕ್ ಡೌನ್ ನಿಂದಾಗಿ ರಾಜ್ಯಾದ್ಯಂತ ಕೋಟ್ಯಂತರ ಜನರ ಬದುಕಿನ ಆಧಾರವಾಗಿರುವ ವಿವಿಧ ಸರಕು- ಸೇವೆಗಳ ವ್ಯಾಪಾರ ವಹಿವಾಟಿಗೆ ಭಾರೀ ಪೆಟ್ಟು ಬಿದ್ದಿದೆ. ಒಂದು ಕಡೆ ಎರಡನೇ ಅಲೆಯ ಕೋವಿಡ್ ದಿಢೀರ್ ತೀವ್ರಗೊಂಡಿರುವುದರಿಂದ ವಹಿವಾಟುದಾರರಿಗೆ ವ್ಯಾಪಾರ ಸರಕು-ಸಾಮಗ್ರಿಗಳ ದಾಸ್ತಾನಿನಲ್ಲಿ ವಹಿಸಬೇಕಾದ ಮುಂಜಾಗ್ರತೆ ವಹಿಸಲು ಅವಕಾಶವಾಗಿಲ್ಲ. ಜೊತೆಗೆ ಲಾಕ್ ಡೌನ್ ಹೇರುವ ಮುನ್ನವಾದರೂ ಸರ್ಕಾರ ಕನಿಷ್ಟ ವಾರದ ಮುನ್ಸೂಚನೆಯನ್ನೂ ನೀಡಿಲ್ಲ. ಹಾಗಾಗಿ ಸಹಜವಾಗೇ ಜನ ದೀಢೀರ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅದರಲ್ಲೂ ಹಣ್ಣು ತರಕಾರಿ, ಆಹಾರ ಪದಾರ್ಥ, ಬೇಕರಿ, ಸ್ವೀಟ್ ಸ್ಟಾಲ್, ಹೋಟೆಲ್, ಬೀದಿಬದಿ ವ್ಯಾಪಾರಿಗಳ ಪಾಲಿಗೆ ಇದು ಮರ್ಮಾಘಾತ ತಂದಿದೆ. ಸಗಟು ಹಣ್ಣು ತರಕಾರಿ ಮಾರಾಟಕ್ಕೆ ಬದಲಿ ವ್ಯವಸ್ಥೆ ಮಾಡುವುದಾಗಿಯೂ, ಆ ಅಂಗಡಿಗಳಿಗೆ ಅವಕಾಶ ನೀಡುವುದಾಗಿಯೂ ಸರ್ಕಾರ ಹೇಳಿದ್ದರೂ, ಅಂತಹ ಬದಲಿ ವ್ಯವಸ್ಥೆಗೆ ದಿಢೀರನೇ ಇಡೀ ಸರಕು ಸಾಗಿಸಿ ಎಲ್ಲವನ್ನೂ ಹೊಂದಿಸಿಕೊಳ್ಳುವುದು ಕೆಲವೇ ಗಂಟೆಗಳಲ್ಲಿ ಆಗುವ ಮಾತಲ್ಲ. ಮತ್ತೊಂದು ಕಡೆ ಅಘೋಷಿತ ಲಾಕ್ ಡೌನ್ ಜಾರಿಯ ಕೆಲವೇ ಗಂಟೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಕೂಡ ಜಾರಿಗೆ ಬಂದಿರುವುದರಿಂದ, ವ್ಯಾಪಾರಿಗಳು ಕಷ್ಟಪಟ್ಟು ಅಂಗಡಿ-ಮುಂಗಟ್ಟು ತೆರೆದರೂ ಕೊಳ್ಳುವ ಜನ ಬರಲು ಪೊಲೀಸರು ಬಿಡುತ್ತಿಲ್ಲ.
ಹಾಗಾಗಿ, ಕಳೆದ ವರ್ಷದ ವಿವೇಚನಾರಹಿತ ಲಾಕ್ ಡೌನ್ ಮತ್ತು ಅದರ ಸುದೀರ್ಘ ಅವಧಿಯ ಹೇರಿಕೆಯಿಂದಾಗಿ ಈಗಾಗಲೇ ಜೀವಮಾನವಿಡೀ ಸುಧಾರಿಸಿಕೊಳ್ಳಲಾಗದ ಆರ್ಥಿಕ ಹೊಡೆತ ತಿಂದಿರುವ ಸಣ್ಣಪುಟ್ಟ ವ್ಯಾಪಾರಿಗಳು, ಅಂಗಡಿ ಮುಂಗಟ್ಟು ನಡೆಸುವವರು, ಸಣ್ಣ ಉದ್ಯಮಿಗಳು, ಬೀದಿಬದಿ ವ್ಯಾಪಾರಿಗಳು ಈಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕೃಷಿ, ಉದ್ಯಮ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿದ್ದರೂ, ವಾಸ್ತವವಾಗಿ ಪೊಲೀಸರು ಎಲ್ಲಾ ಬಗೆಯ ಅಂಗಡಿಮುಂಗಟ್ಟುಗಳನ್ನು ರಾಜ್ಯಾದ್ಯಂತ ಮುಚ್ಚಿಸಿರುವುದರಿಂದ ಕೃಷಿಗೆ ಬೇಕಾದ ಬೀಜ, ಗೊಬ್ಬರ, ಕೃಷಿ ಪಂಪ್, ಪೈಪ್ ಮತ್ತಿತರ ನೀರಾವರಿ ಸಾಮಗ್ರಿ, ಟ್ರ್ಯಾಕ್ಟರ್, ಟಿಲ್ಲರ್ ಗ್ಯಾರೇಜ್, ಬಿಡಿಭಾಗಗಳ ಲಭ್ಯತೆ ಇಲ್ಲದೆ ಕೃಷಿ ಚಟುವಟಿಕೆ ಹೇಗೆ ಸಾಗುತ್ತದೆ ? ಎಂಬುದು ರೈತರ ಮತ್ತು ವ್ಯಾಪಾರಿಗಳ ಪ್ರಶ್ನೆ.
ಹಾಗಾಗಿ ಸರ್ಕಾರ ಅಗತ್ಯವಸ್ತು ಸೇವೆಯ ಬಗ್ಗೆ ಏನೇ ಸ್ಪಷ್ಟನೆ ನೀಡಿದ್ದರೂ ಅಂತಹ ಸ್ಪಷ್ಟನೆಗಳು ಕೇವಲ ಕಾಗದ ಮೇಲೆ ಉಳಿದಿದ್ದು, ವಾಸ್ತವದಲ್ಲಿ ಹಾಲು, ತರಕಾರಿ ಅಂಗಡಿಗಳು ತೆರೆದಿದ್ದರೂ ಪೊಲೀಸರ ಲಾಠಿಗಳಿಗೆ ಬೆದರಿರುವ ಜನ ರಸ್ತೆಗಿಳಿಯಲೇ ಭಯಪಡುತ್ತಿರುವ ಹಿನ್ನೆಲೆಯಲ್ಲಿ ಕೊಳ್ಳುವವರೇ ಇಲ್ಲದೆ ತರಕಾರಿ-ಹಣ್ಣುಗಳು ತಿಪ್ಪೆ ಸೇರುತ್ತಿವೆ. ಉದ್ಯಮ-ವ್ಯವಹಾರಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಉದ್ಯಮ, ಕಚೇರಿ, ಕಾರ್ಖಾನೆಗಳು ಕೆಲಸ ಮಾಡಲು ಅವಕಾಶವಿದೆ ಎಂದಿದ್ದರೂ, ನೌಕರರು, ಕೆಲಸಗಾರರು ಮತ್ತು ಸಿಬ್ಬಂದಿ, ಪೊಲೀಸರ ಪ್ರಹಾರಕ್ಕೆ ಅಂಜಿ ಹೊರಬರಲೇ ಹೆದರುತ್ತಿರುವುದರಿಂದ ಅದೂ ಕೂಡ ನಾಮಕಾವಸ್ಥೆಯಾಗಿದೆ.
ಹೀಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಲ್ಲಾ ಬಗೆಯ ಚಟುವಟಿಕೆಗಳನ್ನು ನಿರ್ಬಂಧಿಸಿ, ಕರ್ಫ್ಯೂಗಿಂತ ಬಿಗಿ ಲಾಕ್ ಡೌನ್ ಹೇರಿದ್ದರೂ, ಬಿಜೆಪಿ ಸರ್ಕಾರ ಅಧಿಕೃತವಾಗಿ ಲಾಕ್ ಡೌನ್ ಎಂದು ಘೋಷಿಸಿಲ್ಲ ಏಕೆ ಎಂಬುದು ಹಲವರನ್ನು ಕಾಡುತ್ತಿರುವ ಪ್ರಶ್ನೆ.
ಅದಕ್ಕೆ ಉತ್ತರ; ಪಂಚಾಯ್ತಿ ಚುನಾವಣೆಯಿಂದ ಸಂಸತ್ತಿನ ಕಾಯ್ದೆಕಾನೂನು ಜಾರಿಯವರೆಗೆ ಪ್ರತಿಯೊಂದು ವಿಷಯದಲ್ಲಿ ತಂತ್ರಗಾರಿಕೆಯಲ್ಲಿ ನಿಪುಣವಾಗಿರುವ ಬಿಜೆಪಿ, ಈ ವಿಷಯದಲ್ಲಿ ಕೂಡ ಅತ್ಯಂತ ಜಾಣ ತಂತ್ರಗಾರಿಕೆ ಹೆಣೆದಿದೆ. ಜನರ ಬದುಕು, ದುಡಿಮೆ ನಾಶವಾದರೂ ಪರವಾಗಿಲ್ಲ; ತನ್ನ ಪಕ್ಷದ ಮತ್ತು ಸರ್ಕಾರದ ಇಮೇಜ್ ಹಾಳಾಗಬಾರದು, ನಾಳೆ ಪರಿಹಾರ, ಪ್ಯಾಕೇಜುಗಳ ಹೊಣೆಗಾರಿಕೆ ತನ್ನ ಹೆಗಲಿಗೆ ಅಂಟಬಾರದು, ಪದೇ ಪದೇ ಲಾಕ್ ಡೌನ್ ಮಾಡಿ ಜನರ ಬದುಕು ದಿವಾಳಿ ಮಾಡಿದರು ಎಂಬ ಕಂಳಕ ಅಂಟಬಾರದು ಎಂಬ ಲೆಕ್ಕಾಚಾರದಲ್ಲಿ ಹೀಗೆ ಅಘೋಷಿತ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಜೊತೆಗೆ, ಈಗಾಗಲೇ ವಾಸ್ತವವಾಗಿ ಕರೋನಾ ಸೋಂಕಿಗಿಂತ, ಕೇವಲ ಆಮ್ಲಜನಕದ ಕೊರತೆಯಿಂದಾಗಿ ಸಾವಿರಾರು ಜೀವ ಬಲಿಯಾಗಿವೆ. ಸದ್ಯ ಮೆಟ್ರೋ ರೈಲು, ವಿಮಾನ ನಿಲ್ದಾಣ, ಮಠಮಾನ್ಯಗಳ ಅನುದಾನ, ಹೆದ್ದಾರಿ, ಫ್ಲೈಓವರ್, ವಿವಿಧ ಬೃಹತ್ ನೀರಾವರಿ ಯೋಜನೆ, ಬೃಹತ್ ವಿಗ್ರಹ-ಮೂರ್ತಿಗಳು, ಧ್ವಜಸ್ತಂಭಗಳಿಗಾಗಿ ಬೊಕ್ಕಸ ಬರಿದುಮಾಡಿರುವ ಸರ್ಕಾರಕ್ಕೆ ತುರ್ತಾಗಿ ಆಮ್ಲಜನಕ ತಯಾರಿಕೆಗೆ, ಸಾಗಣೆಗೆ, ಔಷಧಿ, ಲಸಿಕೆ ಖರೀದಿಗೆ ಬೊಕ್ಕಸ ಬೋರಲು ಬಿದ್ದಿದೆ. ಹಾಗಾಗಿ, ತತಕ್ಷಣಕ್ಕೆ ಘೋಷಿತವೋ, ಅಘೋಷಿತವೂ ಲಾಕ್ ಡೌನ್ ಹೇರಿ ಜನರನ್ನು ಮನೆಯಲ್ಲಿಯೇ ಕಟ್ಟಿಹಾಕದೇ ಹೋದರೆ, ಆಸ್ಪತ್ರೆಗಳಷ್ಟೇ ಅಲ್ಲ, ಬೀದಿಬೀದಿಯಲ್ಲಿ ಸಾಲುಸಾಲು ಜನರ ಹೆಣ ಬೀಳಬಹುದು. ಆಗ ಸರ್ಕಾರ ಖಜಾನೆ ಲೂಟಿ ಹೋಡೆದದ್ದು ಮತ್ತು ಕರೋನಾ ಎರಡನೇ ಅಲೆಯ ತಡೆಗೆ ಯಾವ ತಯಾರಿಯನ್ನೂ ಮಾಡಿಕೊಳ್ಳದ ತಮ್ಮ ಹೊಣೆಗೇಡಿತನಕ್ಕೆ ಜನ ತಿರುಗಿಬೀಳುತ್ತಾರೆ ಎಂಬ ಭಯವಿದೆ. ಆ ಭಯದಲ್ಲೇ ಹೀಗೆ ಬೆಳಗ್ಗೆ ಒಂದು ಆದೇಶ, ಮಧ್ಯಾಹ್ನ ಮತ್ತೊಂದು, ರಾತ್ರಿ ಇನ್ನೊಂದು ಆದೇಶಗಳ ಮೂಲಕ ಜನರನ್ನು ದಿಕ್ಕುತಪ್ಪಿಸಿ ಕಳ್ಳದಾರಿಯಲ್ಲಿ ಪೊಲೀಸರ ಮೂಲಕ ಲಾಕ್ ಡೌನ್ ಹೇರಲಾಗುತ್ತಿದೆ.
ಹೀಗೆ ಅಘೋಷಿತ ಪೊಲೀಸ್ ಲಾಕ್ ಡೌನ್ ಹೇರುವ ಮೂಲಕ ಒಂದು ಕಡೆ ಕರೋನಾ ನಿಯಂತ್ರಣಕ್ಕೆ ಕ್ರಮಕೈಗೊಂಡಿದ್ದೇವೆ ಎಂಬುದನ್ನು ಬಿಂಬಿಸಿದಂತೆಯೂ ಆಯಿತು, ಲಾಕ್ ಡೌನ್ ಮಾಡಿ ಜನರ ಬದುಕು ಕಿತ್ತುಕೊಂಡರು. ಮುನ್ನೆಚ್ಚರಿಕೆ ವಹಿಸುವ ಕಾಲದಲ್ಲಿ ಮುನ್ನೆಚ್ಚರಿಕೆ ವಹಿಸಲಿಲ್ಲ, ಬದಲಾಗಿ ಚುನಾವಣೆ, ಕುಂಭಮೇಳ, ಐಪಿಎಲ್ ಗಳಲ್ಲಿ ಮುಳುಗಿದ್ದರು. ಮತಕ್ಕಾಗಿ, ದಂಧೆಗಾಗಿ ಜನರ ಜೀವ ಒತ್ತೆ ಇಟ್ಟರು ಎಂಬ ಕಂಳಕದ ಜೊತೆಗೆ, ದಿಢೀರ್ ಲಾಕ್ ಡೌ್ನ್ ಹೇರಿ ಜನರನ್ನು ಬಡತನಕ್ಕೆ ನೂಕಿದರು ಎಂಬ ಅಪಖ್ಯಾತಿಯೂ ಅಂಟಲಿದೆ ಎಂಬ ಹಿನ್ನೆಲೆಯಲ್ಲಿ ಹೀಗೆ ಜನರ ಕೆಂಗಣ್ಣಿನಿಂದ ಜಾರಿಕೊಳ್ಳುವ ಉಪಾಯ ಹೆಣೆಯಲಾಗಿದೆ.
ಆದರೆ, ರಾಜ್ಯಾದ್ಯಂತ ಜನ ರೊಚ್ಚಿಗೆದ್ದಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಕರೋನಾ ತಡೆಗೆ ಮುಂದಾಗದೆ, ತಜ್ಞರ ಎಚ್ಚರಿಕೆಯ ಹೊರತಾಗಿಯೂ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡದೆ, ಕನಿಷ್ಟ ಅಗತ್ಯ ಪ್ರಮಾಣದ ಆಸ್ಪತ್ರೆ, ವೈದ್ಯಕೀಯ ಸಲಕರಣೆ, ಸಿಬ್ಬಂದಿಯನ್ನು ಸಜ್ಜುಗೊಳಿಸದೇ ಮಠಮಂದಿರಗಳಿಗೆ ಜನರ ತೆರಿಗೆ ಹಣ ಸುರಿದು ಕೈತೊಳೆದುಕೊಂಡ ಸರ್ಕಾರದ ಹೊಣೆಗೇಡಿತನವನ್ನು, ಜನವಿರೋಧಿ ನಡೆಯನ್ನು ಜನ ಪ್ರಶ್ನಿಸತೊಡಿಗಿದ್ದಾರೆ. ಹಾಗಾಗಿ, ಈ ಬಾರಿ ತನ್ನ ಅವಿವೇಕಿತನ ಮತ್ತು ಜನದ್ರೋಹಿ ನಡೆಗಳಿಗೆ ಸರ್ಕಾರ ತತಕ್ಷಣಕ್ಕೆ ಅಲ್ಲದೇ ಇದ್ದರೂ, ಸದ್ಯ ಭವಿಷ್ಯದಲ್ಲಾದರೂ ಬೆಲೆ ತೆರಬೇಕಾಗುತ್ತದೆ.