ನವಿಲು ಮರಿಗಳ ಭಕ್ಷಣೆ – ಸಂಸತ್ ಭವನದ ಬೆಕ್ಕುಗಳಿಗೆ ಅರ್ಧಚಂದ್ರ!
ಬ್ರಿಟಿಷರ ಸಂಸತ್ ಭವನ ಸಮುಚ್ಚಯವಾದ ‘ವೆಸ್ಟ್ ಮಿನಿಸ್ಟರ್’ಗೆ ಬೆಕ್ಕುಗಳು ಬೇಕೆಂದು ಅಲ್ಲಿನ ಸಂಸದರು ಕೂಗೆಬ್ಬಿಸಿದ್ದಾರೆ. ನಮ್ಮ ಸಂಸದ್ ಭವನದಿಂದ ಬೆಕ್ಕುಗಳನ್ನು ಹೊರಹಾಕುವ ಬಗೆ ಹೇಗೆಂಬ ಚರ್ಚೆ ಜರುಗಿದೆ. ವೆಸ್ಟ್ ಮಿನಿಸ್ಟರ್ ನಲ್ಲಿ ಇಲಿಗಳ ಕಾಟದಿಂದ ಬ್ರಿಟಿಷ್ ಸಂಸದರು ಬೇಸತ್ತಿದ್ದಾರೆ. ನಮ್ಮ ಸಂಸದ್ ಭವನದಲ್ಲಿ ರಾಷ್ಟ್ರೀಯ ಪಕ್ಷಿಯಾದ ನವಿಲು ಮರಿಗಳನ್ನು ಭಕ್ಷಿಸುತ್ತಿವೆಯೆಂಬ ಅನುಮಾನದ ಮೇರೆಗೆ ಬೆಕ್ಕುಗಳಿಗೆ ಅರ್ಧಚಂದ್ರ ಪ್ರಯೋಗ ಕಾದಿದೆ. ಎರಡು ತಿಂಗಳ ಹಿಂದೆ ಹೊರಬಿದ್ದ ವರದಿಯೊಂದು ಬೆಕ್ಕುಗಳನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ನವಿಲುಮರಿಗಳನ್ನು ಅದರಲ್ಲೂ ಪಾರ್ಲಿಮೆಂಟ್ ಹೌಸ್ ಸಮುಚ್ಚಯದೊಳಗೆ ಬೆಕ್ಕುಗಳು ತಿನ್ನತೊಡಗಿವುದು ದುರದೃಷ್ಟಕರ ಎಂದು ನಿರ್ದೇಶಕ ಕೆ.ಶ್ರೀನಿವಾಸನ್ ಅವರ ವರದಿ ಹೇಳಿದೆ.
ಆದರೆ ಬೆಕ್ಕುಗಳು ನವಿಲುಮರಿಗಳಿಗೆ ಬಾಯಿ ಹಾಕಿದ್ದನ್ನು ಈವರೆಗೆ ಪ್ರತ್ಯಕ್ಷವಾಗಿ ಯಾರೂ ಕಂಡಿಲ್ಲ. ಎರಡು ತಿಂಗಳ ಹಿಂದೆ ನಾಲ್ಕು ನವಿಲುಮರಿಗಳು ಮೊಟ್ಟೆಯೊಡೆದು ಹೊರಬಂದವು. ಈಗ ಒಂದೇ ಉಳಿದಿದೆ. ಮೂರನ್ನು ಬೆಕ್ಕುಗಳೇ ತಿಂದಿರಬೇಕು ಎಂಬುದು ಸಂಸದ್ ಭವನದ ಉದ್ಯೋಗಿಗಳ ನಂಬಿಕೆ.
ಪಾರ್ಲಿಮೆಂಟ್ ಕಟ್ಟಡದಲ್ಲಿ ಬಹುಕಾಲದಿಂದ ವಾಸಿಸಿರುವ ಬೆಕ್ಕುಗಳಿಗೆ ಆಹಾರ, ಆಶ್ರಯ ಲಭಿಸಿರುವುದಲ್ಲದೆ, ಹಸಿವು ಹಿಂಗಿಸಿಕೊಳ್ಳಲು ಇಲಿ ಹೆಗ್ಗಣಗಳೂ ಹೇರಳ ಉಂಟು.
ಸಂಸದ್ ಭವನದ ನಿರ್ವಹಣೆ ಸೇವೆಯನ್ನು ಭಾರತ್ ವಿಕಾಸ್ ಗ್ರೂಪ್ ವಹಿಸಿಕೊಡಲಾಗಿದೆ. ಈ ಸಂಸ್ಥೆಯ ವ್ಯವಸ್ಥಾಪಕ ರಾಜೇಂದರ್ ಶರ್ಮ ಅವರ ಪ್ರಕಾರ ಬೆಕ್ಕುಗಳು ಬಲು ಜಾಣ ಮಾರ್ಜಾಲಗಳು. ಎಷ್ಟು ಪ್ರಯತ್ನಿಸಿದರೂ ತಪ್ಪಿಸಿಕೊಂಡು ಬಿಡುತ್ತವೆ. ಈವರೆಗೆ ಹಿಡಿಯಲು ಸಾಧ್ಯವಾಗಿರುವುದು ಒಂದೆರಡನ್ನು ಮಾತ್ರ. ಬೆಕ್ಕುಗಳು ಓಡಾಡುವ ಜಾಗೆಗಳಲ್ಲಿ ಬೋನುಗಳನ್ನು ಇಡಲಾಗಿದೆ. ಅವುಗಳನ್ನು ಆಕರ್ಷಿಸಲು ಬೋನುಗಳ ಒಳಗೆ ಮಾಂಸದ ತುಣುಕಗಳನ್ನು ಸಿಕ್ಕಿಸಲಾಗಿದೆ.
ಬ್ರಿಟಿಷ್ ಪಾರ್ಲಿಮೆಂಟ್ ಸಮುಚ್ಚಯದೊಳಕ್ಕೆ ಬೆಕ್ಕುಗಳ ಪ್ರವೇಶಕ್ಕೆ ಕಾನೂನಿನ ಅನುಮತಿ ಇಲ್ಲ. ಭದ್ರತಾ ನಾಯಿಗಳು ಮತ್ತು ಸಂಸದರ ಸಹಾಯಕರು ಮಾತ್ರವೇ ಒಳ ಬರಬಹುದು. ಇಲಿಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ. ಊಟ ತಿಂಡಿ ತಿನಿಸುಗಳಿಗೆ ಬಾಯಿ ಹಾಕುವುದಲ್ಲದೆ, ಟೀ ರೂಮಿನಲ್ಲಿ ಹಾಗೂ ಡೆಸ್ಕುಗಳಿಂದ ಡೆಸ್ಕುಗಳಿಗೆ ಎಗ್ಗಿಲ್ಲದೆ ನುಗ್ಗಿ ಓಡುವುದ ಕಂಡಿರುವ ಸಂಸದರು ರೋಸಿ ಹೋಗಿದ್ದಾರೆಂಬುದು ಎರಡು ವರ್ಷಗಳ ಹಿಂದಿನ ದಿ ಟೆಲಿಗ್ರಾಫ್ ಪತ್ರಿಕೆಯ ವರದಿ. ಬ್ರಿಟನ್ ನ ಪ್ರಧಾನಿ ಮನೆ ಮತ್ತು ಇತರೆ ಕಚೇರಿಗಳಿಗೆ ಬೆಕ್ಕುಗಳನ್ನು ನೀಡಲಾಗಿದೆ. ಪಾರ್ಲಿಮೆಂಟ್ ಗೆ ಯಾಕಿಲ್ಲ ಎಂಬುದು ಸಂಸದರ ಆಕ್ರೋಶ. ಪಾರ್ಲಿಮೆಂಟ್ ಸಮುಚ್ಚಯದಲ್ಲಿ ಇಲಿಗಳು ಮತ್ತು ಕೀಟನಾಶಕ್ಕೆ 1.30 ಲಕ್ಷ ಪೌಂಡುಗಳು ವೆಚ್ಚವಾದ ರಸೀತಿಗಳು ಬೆಕ್ಕಿಗಾಗಿ ಸಂಸದರ ಬೇಡಿಕೆಗೆ ಇನ್ನಷ್ಟು ಬಲ ಕೊಟ್ಟಿದ್ದವಂತೆ.
ಆದರೆ ಬ್ರಿಟನ್ನಿನ ಸಂಸತ್ತಿಗೆ ಈಗಲೂ ಬೆಕ್ಕುಗಳು ಮಂಜೂರಾಗಿರುವ ಸುದ್ದಿ ಇಲ್ಲ. ಆದರೆ ಭಾರತದ ಸಂಸತ್ತಿನಿಂದ ಬೆಕ್ಕುಗಳನ್ನು ಹೊರಹಾಕಲಾಗುತ್ತಿರುವುದು ಪಕ್ಕಾ ಸುದ್ದಿ. ಇಲಿ ಹೆಗ್ಗಣಗಳು ನಮ್ಮ ಸಂಸತ್ತಿನಲ್ಲೂ ಹೇರಳವಾಗಿವೆ. ಬೆಕ್ಕುಗಳು ಖಾಲಿಯಾದರೆ ಹೆಗ್ಗಣಗಳು ಕಾರುಬಾರಿಗೆ ಮಿತಿಯೇ ಇರದು.
ರಾಷ್ಟ್ರೀಯ ಪಕ್ಷಿ ನವಿಲು ಮರಿಗಳನ್ನು ಉಳಿಸಲು ಹೋಗಿ, ಸಂಸದ್ ಭವನವನ್ನು ಹೆಗ್ಗಣಗಳ ಕಾರುಬಾರಿಗೆ ಒಪ್ಪಿಸುವುದು ಎಷ್ಟರಮಟ್ಟಿಗೆ ವಿವೇಕದ ನಡೆ ಎಂಬುದನ್ನು ಯಾರೂ ಆಲೋಚಿಸಿದಂತಿಲ್ಲ.
ಝಾರ್ಖಂಡ್-16 ಗೋಹತ್ಯೆ ಕೇಸು ಎಲ್ಲ 53 ಮಂದಿ ಖುಲಾಸೆ
ದನದ ಮಾಂಸ ಮಾರುತ್ತಿದ್ದನೆಂಬ ಆಪಾದನೆ ಮೇರೆಗೆ ಕಲಾಂತಸ್ ಬರ್ಲಾ ಎಂಬ ಆದಿವಾಸಿ ಕ್ರೈಸ್ತ ಯುವಕನನ್ನು ಝಾರ್ಖಂಡ್ ನ ಖುಂಟಿ ಜಿಲ್ಲೆಯ ಗ್ರಾಮವೊಂದರಲ್ಲಿ ಇತ್ತೀಚೆಗೆ ಗುಂಪೊಂದು ಜಜ್ಜಿ ಕೊಂದಿತು. ಈತನೊಂದಿಗೆ ಗುಂಪಿನ ದಾಳಿಗೆ ಸಿಕ್ಕಿದ್ದ ಇನ್ನಿಬ್ಬರು ಆದಿವಾಸಿ ಕ್ರೈಸ್ತ ಯುವಕರು ರಾಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ.
ನದೀ ಬದಿಯ ಮಾರುಕಟ್ಟೆಯಲ್ಲಿ ದನದ ಮಾಂಸ ಮಾರುತ್ತಿದ್ದರು ಮತ್ತು ಸಮೀಪದಲ್ಲೇ ಗೋವಿನ ಕಳೇಬರವಿತ್ತು ಎಂಬುದಾಗಿ ಹಬ್ಬಿದ್ದ ವಾಟ್ಸ್ಯಾಪ್ ವದಂತಿಗಳು ಬರ್ಲಾನ ಪ್ರಾಣವನ್ನು ಬಲಿ ತೆಗೆದುಕೊಂಡವು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ದನದ ಮಾಂಸವಾಗಲಿ, ಗೋವಿನ ಕಳೇಬರವಾಗಲಿ ಕಂಡು ಬಂದಿಲ್ಲ ಎಂದು ಝಾರ್ಖಂಡ್ ಪೊಲೀಸ್ ಮಹಾನಿರ್ದೇಶಕರು ಹೇಳಿಕೆ ನೀಡಿದ್ದಾರೆ.
ಖುಂಟಿ ಜಿಲ್ಲಾ ನ್ಯಾಯಾಲಯದ ದಾಖಲೆಗಳ ಪ್ರಕಾರ ಕಳೆದ ಆರು ವರ್ಷಗಳ ಅವಧಿಯಲ್ಲಿ ಗೋಹತ್ಯೆಯ 16 ಕೇಸುಗಳಡಿ ಕನಿಷ್ಠ 53 ಮಂದಿಯ ಮೇಲೆ ಮೊಕದ್ದಮೆ ಹೂಡಲಾಗಿತ್ತು. ಎಲ್ಲರೂ ಖುಲಾಸೆಯಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಪ್ರಕರಣ ನಡೆದಿರುವುದೇ ಅನುಮಾನ ಎಂದು ನ್ಯಾಯಾಧೀಶರು ಹಲವು ಪ್ರಕರಣಗಳಲ್ಲಿ ಹೇಳಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಸಾಕ್ಷೀದಾರರು ನ್ಯಾಯಾಲಯಕ್ಕೆ ಬರುವುದೇ ಇಲ್ಲ. ಎರಡು ಕೇಸುಗಳ ಸಾಕ್ಷೀದಾರರು ಬಜರಂಗದಳದವರು. ಅವರೂ ನ್ಯಾಯಾಲಯಕ್ಕೆ ಬರಲಿಲ್ಲ. ಸಾಕ್ಷ್ಯಾಧಾರಗಳನ್ನು ಪೊಲೀಸರು ಹಾಜರುಪಡಿಸಿಲ್ಲ, ಮಾಂಸವನ್ನು ಹಾಜರು ಪಡಿಸಿದರೂ ಅದು ದನದ ಮಾಂಸವೇ ಎಂಬುದರ ಖಾತರಿ ಇರುವುದಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳನ್ನು ಹಾಜರುಪಡಿಸುವುದಿಲ್ಲ. ಹೀಗಾಗಿ ಆಪಾದಿತರೆಲ್ಲ ಖುಲಾಸೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಬಲಿ ಮುಂಡಾ ಎಂಬ ಆದಿವಾಸಿ ಇಂತಹುದೇ ಒಂದು ಸುಳ್ಳು ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಅನುಭವಿಸಿದ ಕಷ್ಟನಷ್ಟಗಳನ್ನು ಸುಲಭಕ್ಕೆ ಮರೆಯಲಾಗದು ಎನ್ನುತ್ತಾನೆ ಬಲಿ ಮುಂಡಾ ಎಂಬ ಆದಿವಾಸಿ. ತನ್ನ ಹಳ್ಳಿಯಿಂದ ಖುಂಟಿ ಜಿಲ್ಲಾ ನ್ಯಾಯಾಲಯಕ್ಕೆ 21 ಸಲ ಅಲೆಯಬೇಕಾಯಿತು. ಕಾನೂನು ಸಂಬಂಧಿ ವೆಚ್ಚಕ್ಕೆ ಮಾಡಿದ ಸಾಲ 14 ಸಾವಿರ ರುಪಾಯಿ. ಜೊತೆಗೆ ಖುಲಾಸೆಗೆ ಮುನ್ನ 89 ದಿನಗಳ ಜೈಲು ವಾಸ. ಜೀವಂತ ಉಳಿದದ್ದೇ ದೊಡ್ಡ ಸಾಧನೆ, ಜೈಲಿನಲ್ಲಿ ಕೆಟ್ಟ ಆರೋಗ್ಯ ಸದ್ಯಕ್ಕೆ ಸರಿಹೋಗುವುದಿಲ್ಲ. ವಿನಾ ಕಾರಣ ಜೈಲಿಗೆ ಹೋಗಿ ಹೆಸರು ಕೆಟ್ಟಿತು. ಏನು ಮಾಡಲಿ, ದೇವರಿದ್ದಾನೆ, ನೋಡಿಕೊಳ್ಳುತ್ತಾನೆ ಎಂಬುದು ಬಲಿ ಮುಂಡಾನ ಅಳಲು.
2019ರ ಜನವರಿಯಲ್ಲಿ ಖುಲಾಸೆಯಾದ ಬಲಿ ಮುಂಡಾ ಈಗಲೂ ಕುದುರಿಕೊಂಡಿಲ್ಲ.
ನಜಾಫ್ ಗಢದ ವಿದ್ಯುತ್ ”ಚೋರ”ರು!
ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರಿಗೆ ‘ನಜಾಫ್ ಗಢದ ನವಾಬ’ ಎಂಬ ಬಿರುದಾವಳಿ ಅಂಟಿಕೊಂಡಿದ್ದುಂಟು. ದೆಹಲಿಯ ಈ ನಜಾಫ್ ಗಢ ಜಿಲ್ಲೆ ವಿದ್ಯುಚ್ಛಕ್ತಿ ಕಳ್ಳತನದ ಕೆಟ್ಟ ಹೆಸರನ್ನು ಹೊತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ದೆಹಲಿಯ ನಾನಾ ವಿಶೇಷ ನ್ಯಾಯಾಲಯಗಳಲ್ಲಿ ವಿದ್ಯುತ್ ಕಳ್ಳತನದ ಸುಮಾರು 5000 ಕೇಸುಗಳ ವಿಚಾರಣೆ ನಡೆಯುತ್ತಿದೆ. ಈ ಪೈಕಿ ನಜಾಫ್ ಗಢ ಜಿಲ್ಲೆಯ ಕೇಸುಗಳೇ ಎರಡು ಸಾವಿರ. ಇದೇ ಜಿಲ್ಲೆಯ ಡಿಚಾಂವ್ ಕಲಾನ್ ಎಂಬ ಹಳ್ಳಿಯೊಂದಕ್ಕೆ ಪೂರೈಕೆ ಮಾಡಲಾಗುವ ವಿದ್ಯುಚ್ಛಕ್ತಿಯ ಪೈಕಿ ಶೇ.85.59ರಷ್ಟನ್ನು ಕದಿಯಲಾಗುತ್ತಿದೆಯಂತೆ!
ವಿದ್ಯುಚ್ಛಕ್ತಿಯನ್ನು ಕದಿಯದೆ ತಮಗೆ ಬೇರೆ ದಾರಿಯೇ ಇಲ್ಲ ಎನ್ನುತ್ತಾರೆ ಈ ಹಳ್ಳಿಯ ರೈತರು. ಕಾರಣಗಳು ಹಲವಾರು. ಇಲ್ಲಿನ ಬಹಳಷ್ಟು ರೈತರು ಹೂಕೋಸು ಬೆಳೆಯುತ್ತಾರೆ. ಧಾರಾಳ ನೀರು ಬೇಡುವ ಬೆಳೆಯಿದು. ಕೊಳವೆ ಬಾವಿಗಳಿಗೆ ತಿಂಗಳಿಗಿಷ್ಟು ಎಂದು ನಿಗದಿತ ವಿದ್ಯುಚ್ಛಕ್ತಿ ದರವನ್ನು ಪಾವತಿ ಮಾಡಬೇಕು. ಆರು ತಿಂಗಳ ಕಾಲ ಹೆಚ್ಚೇನೂ ಬೆಳೆ ಇಡದಿದ್ದಾಗಲೂ ದರ ಪಾವತಿ ತಪ್ಪದು. ಏಕಾ ಏಕಿ ಮೂರು ನಾಲ್ಕು ದಿನಗಟ್ಟಲೆ ವಿದ್ಯುತ್ ಕಡಿತ ಮಾಡಲಾಗುತ್ತದೆ. ಬಿತ್ತನೆ ಪೂರ್ತಿ ಆಗಿರುವುದಿಲ್ಲ. ಜೊತೆಗೆ ವಿದ್ಯುತ್ ಮೀಟರ್ ಹಾಕಿಸಲು ಅಲೆದೂ ಅಲೆದೂ ಹೈರಾಣಾಗಿದ್ದೇನೆ. ಕದಿಯದೆ ಬೇರೇನು ದಾರಿ ಉಳಿದಿದೆ ನನಗೆ ಎಂಬುದು ರೈತ ಸತ್ಪಾಲ್ ಪ್ರಶ್ನೆ.
ನನ್ನ ಕೊಳವೆ ಬಾವಿ ಚಲಾಯಿಸಲು ಕಿಲೋವ್ಯಾಟ್ ಗೆ 125 ರುಪಾಯಿ ತೆರಬೇಕು. ಜೊತೆಗೆ ಸಾವಿರ ರುಪಾಯಿಗಳ ನಿಗದಿತ ದರ. ಹೀಗಾಗಿ ಕದಿಯಲೇಬೇಕಾಗುತ್ತದೆ ಎನ್ನುತ್ತಾನೆ ರಾಮ ಎಂಬ ಮತ್ತೊಬ್ಬ ರೈತ. ಈತ 70 ಸಾವಿರ ರುಪಾಯಿಗಳ ದಂಡ ತರಬೇಕಿದೆ.
ದ್ವಾರಕಾದ ವಿಶೇಷ ನ್ಯಾಯಾಲಯದಲ್ಲಿ ದಿನಕ್ಕೆ 15 ಹೊಸ ಕೇಸುಗಳು ದಾಖಲಾಗುತ್ತಿವೆ.
ಗುಂಪು ಹತ್ಯೆ ಬಲಿಪಶುಗಳ ಮಕ್ಕಳಿಗೆ ಆಸರೆ
ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪತ್ನಿ ಸಲ್ಮಾ ಅನ್ಸಾರಿ ಉತ್ತರಪ್ರದೇಶದ ಅಲೀಗಢದಲ್ಲಿ ಒಂದು ಉದಾತ್ತ ಕೆಲಸ ಮಾಡುತ್ತಿದ್ದಾರೆ. ಗೋಹತ್ಯೆಯ ಆಪಾದನೆ ಹೊತ್ತು ಗುಂಪು ಹತ್ಯೆಗೆ ಈಡಾದವರ ಮಕ್ಕಳನ್ನು ತಾವು ನಡೆಸುವ ಶಾಲೆಗಳಿಗೆ ಸೇರಿಸಿಕೊಂಡು ಉಚಿತ ಶಿಕ್ಷಣ ನೀಡುತ್ತಿದ್ದಾರೆ. ರಾಜಸ್ತಾನದ ಅಲ್ವರ್ ಜಿಲ್ಲೆಯಲ್ಲಿ ಕಳೆದ ವರ್ಷ ಗುಂಪು ಹತ್ಯೆಗೀಡಾದ ರಕ್ಬರ್ ಖಾನನ ಆರು ವರ್ಷ ವಯಸ್ಸಿನ ಮಗ ಇಕ್ರಾನ್, ಅವನ ಹತ್ತು ವರ್ಷ ವಯಸ್ಸಿನ ಅಣ್ಣ, ನಾಲ್ಕು ವರ್ಷ ವಯಸ್ಸಿನ ತಮ್ಮನಿಗೆ ಈ ಶಾಲೆಗಳಲ್ಲಿ ಆಶ್ರಯ ದೊರೆತಿದೆ. ಇಕ್ರಾನ್ ಈಗಾಗಲೆ ಜಿಲ್ಲಾ ಬಾಕ್ಸಿಂಗ್ ಛಾಂಪಿಯನ್. ಝಾರ್ಖಂಡದಲ್ಲಿ ಬಡಿದು ಕೊಂದು ಮರಕ್ಕೆ ನೇಣು ಹಾಕಲಾದ ಮಜಲೂಂ ಅನ್ಸಾರಿಯ ಮೂವರು ಮಕ್ಕಳು ಕೂಡ ಇದೇ ತಿಂಗಳು ಈ ಶಾಲೆಗಳಿಗೆ ಸೇರಲಿದ್ದಾರೆ. ಇಂತಹ ನೆರವಿನ ಅಗತ್ಯವಿರುವ ಒಟ್ಟು 60 ಮಕ್ಕಳ ಹೆಸರುಗಳು ತಮಗೆ ಬಂದಿರುವುದಾಗಿ ಸಲ್ಮಾ ಹೇಳಿದ್ದಾರೆ. ಈ ಪೈಕಿ ಹಿಂದು ಮತ್ತು ಮುಸಲ್ಮಾನ ಎರಡೂ ಸಮುದಾಯಗಳ ಮಕ್ಕಳಿದ್ದಾರೆ. ಹೀಗೆ ಸೇರುವ ಮಕ್ಕಳಿಗೆ ನಮಾಜು ಮತ್ತು ಭಜನೆಯ ಅವಕಾಶ ಉಂಟು.
ಸಾರ್ವಜನಿಕವಾಗಿ ಅತ್ಯಂತ ಕ್ರೂರ ರೀತಿಯಿಂದ ಹತರಾಗುವ ತಂದೆಯರ ಈ ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ ಎನ್ನುತ್ತಾರೆ ಸಲ್ಮಾ ಅನ್ಸಾರಿ.