ಹಾಸನ ಜಿಲ್ಲೆ ಆಲೂರು ತಾಲೂಕಿನ ಕೋವಿಡ್-19 ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಶಿವಕಿರಣ್ ಬಿಡುವಿಲ್ಲದ ಕೆಲಸದ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರಾಗಿ ಇಂದು ಸಾವನ್ನಪ್ಪಿದ್ದಾರೆ. ಡಾ. ಶಿವಕಿರಣ್ ಅವರು ಕಳೆದ ಮೂರು ತಿಂಗಳಿನಿಂದ ಬಿಡುವಿಲ್ಲದೇ, ದಣಿವನ್ನ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ರೀತಿಯ ಮಿತಿಮೀರಿದ ಕೆಲಸದಿಂದಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ತಲೆನೋವಿನಿಂದ ಬಳಲುತ್ತಿದ್ದರೂ ಕರ್ತವ್ಯದೊಂದಿಗೆ ರಾಜಿ ಮಾಡಿಕೊಳ್ಳದ ಡಾ. ಶಿವಕಿರಣ್ ಕರ್ತವ್ಯ ನಿರತವಾಗಿರುವಾಗಲೇ ತಲೆ ಸುತ್ತಿ ಬಿದ್ದಿದ್ದಾರೆ.

ಜೂನ್ 3 ರಂದು ಈ ಘಟನೆ ನಡೆಯುತ್ತಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆಗಿರುವುದು ಗೊತ್ತಾಗಿದೆ. ತೀವ್ರ ನಿಗಾ ಘಟಕದಲ್ಲಿ ಹೋರಾಟ ನಡೆಸುತ್ತಲೇ ಇದ್ದ ಡಾ. ಶಿವಕಿರಣ್ ಕೊನೆಗೂ ಸಾವು ಗೆಲ್ಲುವಲ್ಲಿ ವಿಫಲರಾದರು.
ಇಂದು ಬೆಳಿಗ್ಗೆ ಸಾವನ್ನಪ್ಪಿದ್ದ ವೈದ್ಯರು, ಬಿಡುವಿಲ್ಲದ ಕೆಲಸದ ಒತ್ತಡದಿಂದಾಗಿಯೇ ಸಾವನ್ನಪ್ಪಿದ್ದಾಗಿ ಸಹೋದ್ಯೋಗಿಗಳು ತಿಳಿಸಿದ್ದಾರೆ. ಮೃತಪಟ್ಟ ವೈದ್ಯರಲ್ಲಿ ಕರೋನಾ ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಕಳೆದ 3 ತಿಂಗಳಿನಿಂದ ವೈದ್ಯರು, ದಾದಿಯರು ಅವಿರತವಾಗಿ ಬಿಡುವಿಲ್ಲದೇ ಸೇವೆ ಸಲ್ಲಿಸುತ್ತಿರುವುದೇ ಅವರ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗುತ್ತಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರ ಮೃತ ವೈದ್ಯರ ಕುಟುಂಬಕ್ಕೆ 30 ಲಕ್ಷ ಪರಿಹಾರ ಘೋಷಿಸಿದೆ.