ನಾಗರ ಪಂಚಮಿ ಬಂತು. ಹಾವನ್ನು ದೇವರೆಂದು ಪೂಜಿಸುವ ನಾಡಿದು. ಮನುಷ್ಯ ಭಕ್ತಿಯಿಂದಲೊ ಅಥವಾ ಭಯದಿಂದಲೊ ನಾಗರ ಕಲ್ಲಿಗೆ (ಕಲ್ಲು ನಾಗರಕ್ಕೆ) ಹಾಲೆರೆಯುತ್ತಾನೆ. ಇಲ್ಲಿ ಭಯ ಮತ್ತು ಭಕ್ತಿಗಳ ನಡುವೆ ಎರುವ ಅಂತರ ನಂಬಿಕೆ ಅಷ್ಟೇ. ಹೌದು ಎಲ್ಲ ವಿಷಯಗಳಲ್ಲೂ ನಂಬಿಕೆಗಳಿಸುವುದು ಸುಲಭವಲ್ಲ. ಅಂತಹ ಸಾಲಿನಲ್ಲಿ ಹಾವುಗಳ ವಿಷಯವೂ ಒಂದು. ಬಹುಶ: ಹಾವಿನ ಕುರಿತಾಗಿ ನಮ್ಮ ಪುರಾಣಗಳಲ್ಲಿ ಬರುವ ರೋಚಕ ಸಂಗತಿಗಳು, ಸಿನಿಮಾ ಮತ್ತು ಈಗೀಗ ಸೀರಿಯಲ್‍ಗಳಲ್ಲಿ ತೋರಿಸುವ ವಿಜೃಂಭಿತ ದೃಶ್ಯಗಳು ಹಾಗೂ ಜನ ಕಟ್ಟುವ ಕಲ್ಪಿತ ಕಥೆಗಳಿಂದ ಹಾವು ನಮ್ಮಲ್ಲಿ ಭಯವನ್ನುಂಟು ಮಾಡುವ ಭಯಾನಕ ಜೀವಿಯಾಗಿ ಉಳಿದಿದೆ.
ಏತನ್ಮಧ್ಯೆ ಹಾವು ನಮ್ಮಂತೆ ಒಂದು ಜೀವಿ. ಅದಕ್ಕೆ ಹಾನಿ ಮಾಡಬೇಡಿ ಎನ್ನುತ್ತ ಜನರಲ್ಲಿ ಅರಿವು ಮೂಡಿಸುತ್ತಿರುವ ಬುಡ್ಡಾಸಾಬ ಅವರ ಕಹಾನಿ ನೋಡೋಣ ಬನ್ನಿ.
ಇವರು ಬುಡ್ನೆಸಾಬ ರಾಜೆಸಾಬ ಸೂರೇಬಾನ, ವಯಸ್ಸು-40, ನರಗುಂದದ ನಿವಾಸಿ ವೃತ್ತಿಯಿಂದ ಗೃಹರಕ್ಷಕದಳ ಸಿಬ್ಬಂದಿಯಾಗಿ 11 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು ಸ್ಥಳೀಯರಲ್ಲಿ ಉರಗ ಪ್ರೇಮಿಯೆಂದು ಚಿರಪರಿಚಿತರು. ನರಗುಂದದ ಯಾವುದೇ ಮನೆ, ಕಛೇರಿ, ಶಾಲೆಯಲ್ಲಿ ಹಾವುಗಳು ಅಕಸ್ಮಾತಾಗಿ ಸೇರಿಕೊಂಡಿದ್ದರೇ ತಕ್ಷಣ ನೆನಪಿಗೆ ಬರೋದು ಬುಡ್ಡಾ. ಸುಮಾರು ವರ್ಷಗಳಿಂದ ತಮ್ಮ ವೃತ್ತಿಯೊಂದಿಗೆ ಉರಗ ಸಂರಕ್ಷಣೆಯ ಸೇವೆಯನ್ನು ಮಾಡುತ್ತಿದ್ದು ಇಲ್ಲಿವರೆಗೆ 400 ಕ್ಕೂ ಅಧಿಕ ವಿವಿಧ ಜಾತಿಯ ಹಾವುಗಳನ್ನು ಸಂರಕ್ಷಿಸಿದ್ದಾರೆ.
ಪ್ರತಿ ಬಾರಿ ರಕ್ಷಿಸಿದಾಗ, ಹಾವುಗಳ ಬಗ್ಗೆ ಇರುವ ಮೂಢನಂಬಿಕೆ, ಅವುಗಳ ರಕ್ಷಣೆ ಹೀಗೆ ಹಲವಾರು ವಿಷಯಗಳನ್ನು ಜನರಿಗೆ ತಿಳಿಸುವುದು ಇವರ ವಿಶೇಷತೆ.

ಯಾರೇ ಯಾವುದೆ ಸಮಯದಲ್ಲಿ ಉರಗ ರಕ್ಷಣೆಗಾಗಿ ಕರೆ ಮಾಡಿದರೆ ತಕ್ಷಣ ಸ್ಥಳಕ್ಕೆ ಧಾವಿಸಿ ಉರಗಗಳನ್ನು ಸುರಕ್ಷಿತವಾಗಿ ರಕ್ಷಿಸಿ ಅವುಗಳ ಆವಾಸಕ್ಕೆ ಬಿಡುತ್ತಾರೆ. ಇವರು ಒಬ್ಬ ಉತ್ತಮ ನಿಸರ್ಗ ಸಂರಕ್ಷಕರಾಗಿದ್ದು ಇವರು ತುಂಬಾ ಸರಳ ಮತ್ತು ಸುರಕ್ಷಾ, ಸಂರಕ್ಷಣಾ ವಿಧಾನದ ಮೂಲಕ ಹಾವುಗಳನ್ನು ರಕ್ಷಿಸುತ್ತಾರೆ. ಅನಿವಾರ್ಯತೆ ಇದ್ದಾಗ ಮಾತ್ರ ಕೈಯಿಂದ ಹಿಡಿದು ಬ್ಯಾಗನಲ್ಲಿ ಹಾಕುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಕಾಟನ್ ಬಟ್ಟೆಯ ಚೀಲದ ಬಾಯಿಗೆ 4 ಇಂಚು ಸುತ್ತಳತೆ ಮತ್ತು 5ಅಡಿ ಉದ್ದವಿರುವ ಪೈಪ್‍ನ್ನುಕಟ್ಟಿ ಹಾವಿನ ಎದುರಿಗೆ ಇಡುತ್ತಾರೆ ಆಗ ಹಾವು ತಾನಾಗಿಯೇ ಒಳಗೆ ಸೇರಿಕೊಳ್ಳುತ್ತದೆ.
ಲಾಕ್ ಡೌನ್ ಸಮಯದಲ್ಲಿ 100 ಕ್ಕೂ ಅಧಿಕ ಹಾವಿನ ರಕ್ಷಣೆ:
ಲಾಕ್ ಡೌನ್ ಸಂದಂರ್ಭದಲ್ಲಿ ಇವರು 100ಕ್ಕು ಅಧಿಕ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದು ಅದರಲ್ಲಿ ಹೆಚ್ಚಾಗಿ ನಾಗರಹಾವುಗಳೇ ಎನ್ನುವುದು ವಿಶೇಷ. ಕೊಳಕು ಮಂಡಲ ಅಥವಾ ದಾಸರ ಹಾವು (ರಸ್ಸೆಲ್ಸ್ ವೈಪರ್) ಅತ್ಯಂತ ಭಯಾನಕ ಮತ್ತು ವಿಷಕಾರಿ ಹಾವಾಗಿದ್ದು ಉರಗರಕ್ಷಕ ಎಷ್ಟೆ ಅನುಭವಿಯಾಗಿದ್ದರು ರಕ್ಷಿಸುವುದು ಸುಲಭದ ಮಾತಲ್ಲ ಆದರೆ ಬುಡ್ಡಾ ರಸ್ಸೆಲ್ಸ್ ವೈಪರ್ ರಕ್ಷಣೆಯಲ್ಲಿ ಎತ್ತಿದ ಕೈ. ಇಲ್ಲಿಯವರೆಗೆ ಇವರು 10ಕ್ಕು ಅಧಿಕ ರಸ್ಸೆಲ್ಸ್ ವೈಪರ್‍ಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ (ಪೈಪ್-ಇನ್-ಬ್ಯಾಗ್ ಮೆಥಡ್).
ಮಂಜುನಾಥ ಎಸ್ ನಾಯಕ, ಉರಗ ತಜ್ಞರು ಇವರ ಬಳಿ ಹಾವು ಸಂರಕ್ಷಣೆಯ ತರಬೇತಿಯನ್ನು ಪಡೆದು ಕೊಂಡು ಬುಡ್ಡಾ ಪ್ರಥಮ ಸಂರಕ್ಷಿಸಿದ ಹಾವು ನಾಗರ ಹಾವು ಎಂಬುದು ವಿಶೇಷ.

ಮಂಜುನಾಥ ಅವರ ಪ್ರಕಾರ, “ನಾನು ಎಷ್ಟೋ ಆಸಕ್ತರಿಗೆ ಉರಗ ಸಂರಕ್ಷಣೆಯ ತರಬೇತಿ ನೀಡಿದ್ದು ನಾ ಕಂಡ ಉರಗ ಸಂರಕ್ಷಕರಲ್ಲಿ ಬುಡ್ಡಾ ಒಬ್ಬ ಅದ್ಭುತ ಸಂರಕ್ಷಕ. ಹಾವನ್ನು ರಕ್ಷಿಸಿದ ಸ್ಥಳದಲ್ಲಿಯೇ ಸಾರ್ವಜನಿಕರಿಗೆ ಉರಗಗಳ ಮಹತ್ವ ಮತ್ತು ಮೂಢ ನಂಬಿಕೆ ಹಾಗೂ ತಪ್ಪು ಕಲ್ಪನೆಗಳ ಕುರಿತು ಜಾಗೃತಿ ಮೂಡಿಸುತ್ತಾರೆ. ಇವರು ಉರಗ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಉಚಿತವಾಗಿ ಮಾಡುತ್ತಾರೆ ಯಾರಿಂದಲೂ ಯಾವುದೇ ಹಣವನ್ನು ಪಡೆಯುವದಿಲ್ಲ”.
ಇದರ ಬಗ್ಗೆ ಕೇಳಿದಾಗ ಬುಡ್ಡಾಸಾಬ ಹೇಳಿದ್ದು ಹೀಗೆ, “ಜನರು ಹಾವಿನ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ. ಕೆಲವರು ಅವುಗಳನ್ನು ಕೊಲ್ಲಲು ಮುಂದಾದರೆ, ಹಲವರು ಅವುಗಳ ಕಂಡು ದೂರ ಓಡಿ ಹೋಗುತ್ತಾರೆ. ಅವುಗಳನ್ನು ಕಾಡಿಗೆ ಸುರಕ್ಷಿತವಾಗಿ ಬಿಡುವ ಕಡೆಗೆ ಯಾರೂ ಮುಂದಾಗುವುದಿಲ್ಲ. ಅದ್ದರಿಂದ ನಾನು ಇನ್ನೊಬ್ಬರಿಗೆ ದೂಷಿಸುವ ಬದಲು, ಅದನ್ನೇ ಮಾಡಿದರೆ ಹೇಗೆ ಎಂದು ಈ ಕಾರ್ಯವನ್ನು ಮಾಡುತ್ತಿದ್ದೇನೆ”.



