ರಾಷ್ಟ್ರ ಮಟ್ಟದ ಗೋ ವಿಜ್ಞಾನ ಐಚ್ಚಿಕ ಪರೀಕ್ಷೆಯನ್ನು ಫೆಬ್ರವರಿ 25ರಂದು ನಡೆಸಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸ್ಥಳೀಯ ಗೋವಿನ ಬಗ್ಗೆ ಆಸಕ್ತಿ ಬೆಳೆಸುವುದೇ ಈ ಪರೀಕ್ಷೆಯ ಉದ್ದೇಶ ಎಂದು ಪಿ.ಟಿ.ಐ ವರದಿ ಮಾಡಿದೆ.
ಈ ಪರೀಕ್ಷೆಯನ್ನು ನಡೆಸುವ RKA (ರಾಷ್ಟ್ರೀಯ ಕಾಮಧೇನು ಆಯೋಗ) ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪ್ರತಿ ವರ್ಷ ಐಚ್ಛಿಕ ಪರೀಕ್ಷೆಯನ್ನು ನಡೆಸಿಕೊಂಡು ಬಂದಿದೆ.
ಪಿಟಿಐ ವರದಿ ಮಾಡಿರುವಂತೆ RKA ಅಧ್ಯಕ್ಷ ವಲ್ಲಭಭಾಯಿ ಕತಿರಿಯಾ “ಯುವ ವಿದ್ಯಾರ್ಥಿಗಳಲ್ಲಿ ಮತ್ತು ಇತರ ನಾಗರಿಕರಲ್ಲಿ ಸ್ಥಳೀಯ ಗೋವಿನ ಬಗ್ಗೆ ಜಾಗೃತಿ ಮೂಡಿಸಲು RKA ಗೋ ವಿಜ್ಞಾನದ ಬಗ್ಗೆ ರಾಷ್ಟ್ರ ಮಟ್ಟದ ಪರೀಕ್ಷೆ ನಡೆಸಲು ಉದ್ದೇಶಿಸಿದೆ” ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ‘ಕಾಮಧೇನು ಗೋ ವಿಜ್ಞಾನ ಪ್ರಚಾರ-ಪ್ರಸಾರ ಪರೀಕ್ಷೆ’ಗೆ ಹಾಜರಾಗಬಹುದಾಗಿದ್ದು ಯಾವುದೇ ಪರೀಕ್ಷಾ ಶುಲ್ಕ ತೆರಬೇಕಿಲ್ಲ. RKA ಈಗಾಗಲೇ ಅಧ್ಯಯನ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಇಟ್ಟುಕೊಂಡಿದೆ ಎನ್ನಲಾಗುತ್ತಿದೆ.
ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ. RKA ವೆಬ್‌ಸೈಟ್‌ನಲ್ಲಿ ಪಠ್ಯಕ್ರಮ ಲಭ್ಯವಿರುತ್ತದೆ. ಪರೀಕ್ಷೆ ಮುಗಿದಂತೆ ಫಲಿತಾಂಶ ಪ್ರಕಟವಾಗಲಿದ್ದು ಆಗಲೇ ಪ್ರಮಾಣಪತ್ರವನ್ನೂ ವಿತರಿಸಲಾಗುವುದು.
ಪಿಟಿಐಗೆ ಮಾಹಿತಿ ನೀಡಿರುವ RKA ಮುಖ್ಯಸ್ಥರು “ಉತ್ತಮ ಅಂಕ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ಬಹುಮಾನವನ್ನೂ ವಿತರಿಸಲಾಗುವುದು” ಎಂದಿದ್ದಾರೆ.