ಆ ನಿಲ್ದಾಣವೇ ಹಾಗಿತ್ತು: ಹಲವು ನೆನಪಿನ ಬುತ್ತಿಗಳ ಆಗರ ಅಲ್ಲಿತ್ತು. ಧಾರವಾಡದ ಹಳೆಯ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಹಳೆಯ ಕಟ್ಟಡ ತೆರವುಗೊಳಸಿ ಹೊಸ ಕಟ್ಟಡ ಕಟ್ಟಲಾಗುತ್ತಿದೆ. ಪ್ರತಿ ವರ್ಷ ಈ ಊರಿಗೆ ಕಲಿಯಲು ಸಹಸ್ರ ಸಂಖ್ಯೆಯಲ್ಲಿ ರಾಜ್ಯದ ನಾನಾ ಮೂಲೆಯಿಂದ ಆಗಮಿಸುತ್ತಿದ್ದ ವಿದ್ಯಾರ್ಥಿಗಳು ಮೊದಲು ನೋಡುತ್ತಿದ್ದುದು ಇದೇ ರೈಲು ನಿಲ್ದಾಣ. ಇಲ್ಲಿ ಪ್ರಥಮಾಗಮನದ ಖುಷಿ, ಕಲಿತು ಹೊರಟನಂತರದ ಬೇಸರ, ಸಾಧನೆ ಮಾಡಿದ, ಕಲಿತ ಸುಂದರ ಊರು ಎಂಬ ಅಭಿಮಾನ ಹೀಗೆ ಹತ್ತು ಹಲವು ಸವಿ ಸವಿ ನೆನಪುಗಳಿವೆ…..
ಅದು ಧಾರವಾಡದ ರೈಲು ನಿಲ್ದಾಣದ ಕಟ್ಟಡ. 1924 ರಲ್ಲಿ ಬ್ರಿಟೀಷರು ಕಟ್ಟಿದ್ದು. ಅದರ ಮೇಲಿರುವ ಗಡಿಯಾರವೇ ಹಲವರ ಪಾಲಿಗೆ ವಾಚು. 1924 ರ ನಂತರ ಹಳೆಯ ಕಟ್ಟಡ್ಕಕೆ ಹೊಸ ಸ್ಪರ್ಶ ನೀಡಿದ್ದರೂ ಕಟ್ಡ ಕೆಡವಿರಲಿಲ್ಲ. ಅದರ ಮುಂದೆ ಹಾಗೂ ಅಕ್ಕ ಪಕ್ಕ ಹಲವಾರು ನಿವೃತ್ತರು ತಮ್ಮ ತಮ್ಮ ಜೀವನದ ಸಿಹಿ ಕಹಿ ಕ್ಷಣಗಳನ್ನು ಮೆಲುಕುಗಳನ್ನು ಹಾಕುತ್ತ ಕೂಡುತ್ತಿದ್ದರು. ಕಟ್ಟಡದ ಪಾರಂಪರಿಕ ವಿನ್ಯಾಸ, ಧಾರವಾಡದ ಜಿಟಿಜಿಟಿ ಮಳೆ, ತಂಪಾದ ಇಳೆ, ಆ ಇಳೆ ಸಮಯ… ಇನ್ನೂ ಮನದಲ್ಲಿ ಅಚ್ಚು ಮೂಡಿದೆ.
ಹೊಸತು, ನೂತನ ಎಂಬಿತ್ಯಾದಿ ಕಾರಣಗಳಿಂದ ಆ ಕಟ್ಟಡ 90 ವರ್ಷಗಳ ನಂತರ ಕೆಡವಲಾಗುತ್ತಿದೆ. ಇನ್ನೂ ಅದು ಬರಿ ನೆನಪು ಮಾತ್ರ. ವಿಮಾನ ನಿಲ್ದಾಣ ರೀತಿಯಲ್ಲಿ ನೂತನ ಕಟ್ಟಡ ವನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಖುಷಿ ವಿಷಯವೇ ಸರಿ. ಆದರೆ ಧಾರವಾಡದ ಸಹಸ್ರಾರು ಸಂಖ್ಯೆಯ ಜನರಿಗೆ ಇಂದು ತಮ್ಮ ಒಲವಿನ ವಸ್ತುವನ್ನೊಂದು ಕಳೆದುಕೊಂಡ ಅನುಭವ. ಆ ಕಟ್ಟಡದೊಂದಿಗೆ ಅವರಿಗೆಲ್ಲ ಎಮೋಷನಲ್ ಅಟ್ಯಾಚ್ ಮೆಂಟ್ ಇದೆ. ಹಲವಾರು ನೆನಪಿನ ತಳುಕುಗಳಿವೆ. ಬೇಸರವಾದಾಗ ರೈಲುಗಳನ್ನು ನೋಡುತ್ತ ಕುಳಿತಿದ್ದು, ಪಾಸಾದ ಸ್ನೇಹಿತರ ಜತೆಗೆ ಇಲ್ಲಿ ಸಂಭ್ರಮಿಸಿದ್ದು. ಅದೇ ನೌಕರಿ ಸಿಕ್ಕಾಗ ಇಲ್ಲಿದ್ದ ಹಿರಿಯರ ಆಶೀರ್ವಾದ ಪಡೆದಿದ್ದು. ನಿವೃತ್ತರಾದಾಗ ಇಲ್ಲಿ ಸ್ನೇಹಿತರ ಸಂಘ ಬೆಳೆದಿದ್ದು ಹೀಗೆ ಹತ್ತು ಹಲವಾರು ಸಂಗತಿಗಳು ಮನದಲ್ಲಿ ಸುಳಿದು ಹೋಗುವಂತ ಜಾಗವಿದು.
ಈ ಜಾಗವೇ ಅಂತದ್ದು. ಸುತ್ತಲೂ ವಿಶಾಲವಾದ ಗಿಡಮರಗಳು, ರೈಲು ಬಂದಾಗ ಮಾತ್ರ ಸದ್ದು. ಉಳಿದ ಸಮಯ ಹಕ್ಕಿಪಿಕ್ಕಿಗಳ ಚಿಲಿಪಿಲಿ, ಸಂಜೆಯ ಹರಟೆ ಇದಕ್ಕಾಗಿ ಇಲ್ಲಿ ಒಂದು ಹಲವು ಸ್ನೇಹಿತರ ಗುಂಪುಗಳಿವೆ. ಸಮಯ ಬದಲಾದಂತೆ ಸದಸ್ಯರು ಬದಲಾದರೆ ಹೊರತು ನಿಲ್ದಾಣದ ಎದುರಿನ ಕಟ್ಟೆಗಳು ಮಾತ್ರ ಖಾಲಿ ಇರುತ್ತಿರಲಿಲ್ಲ. ಈ ನಿಲ್ದಾಣದ ಹಳಿಯ ಹಾದಿ ಹಿಡಿದು ಮುಂದೆ ಸಾಗಿದರೆ ಧಾರವಾಡ ವಿಶ್ವವಿದ್ಯಾಲಯ. ನಿಲ್ದಾಣದ ಎದುರಿಗೆ ಬಂದು ಎಡಕ್ಕೆ ಸಾಗಿದರೆ ಕರ್ನಾಟಕ ಕಾಲೇಜು. ಪರ ಊರಿನವರು ಇಲ್ಲಿ ಬಂದರೆ ಇಲ್ಲಿಯವರಾಗಿಬಿಡುತ್ತಿದ್ದರು. ಈಗಿನ್ನೂ ಧಾರವಾಡ ಬದಲಾಗಿದೆ. ಮೊದಲು ಯಾವಾಗಲೂ ಬಿಡದೇ ಮಳೆ ಸುರಿಯುತ್ತಿತ್ತು. ಅಲ್ಲಲ್ಲಿ ಹಸಿರು, ಅಲ್ಲಲ್ಲಿ ಕೆಸರು…ಒಟ್ಟಾರೆ ಈ ಪರಿಸರ ಅದ್ಭುತ….
ಏನೇನಾಗುತ್ತೇ ಇಲ್ಲಿ?
ಈಗಾಗಲೇ ಕಟ್ಟಡದಲ್ಲಿರುವ ಟೆಲ್ಲರ್ ಮಶಿನ್ ಹಾಗೂ ಟಿಕೆಟ್ ಕೌಂಟರ್ ಅನ್ನು ಪಕ್ಕದ ಹೊಸ ಕಟ್ಟಡದಲ್ಲಿ ಸ್ಥಳಾಂತರಿಸಲಾಗಿದೆ. ಇಲ್ಲಿ ಸಂಪೂರ್ಣ ನೂತನ ಕಟ್ಟಡ ಬರಲಿದ್ದು, ಇದು ವಿಮಾನ ನಿಲ್ದಾಣದ ಲಾಂಜ್ ಹಾಗೆ ಇರಲಿದೆ. ಅಧುನಿಕತೆ ಸ್ಪರ್ಶ ಇಲ್ಲಿರಲಿದ್ದು ಅನೇಕ ಅಂಗಡಿಗಳು ಬರಲಿವೆ. ಸಂಪೂರ್ಣ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಲಿದ್ದು, ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುವುದು. ಹೆಚ್ಚು ಹೆಚ್ಚು ಪ್ರಯಾಣಿಕರು ಇಲ್ಲಿಗೆ ಬರುತ್ತಿದ್ದು ಅದಕ್ಕೆ ತಕ್ಕಂತೆ ಟಿಕೆಟ್ ಕೌಂಟರ್ ಗಳು ಹಾಗೂ ಇನ್ನಿತರ ನೂತನ ವ್ಯವಸ್ಥೆಗಳು ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಿವೆ.
ಧಾರವಾಡ ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಲು – ಹೊಸ ನಿಲ್ದಾಣದ ಕಟ್ಟಡ, ರೈಲು ನಿಲ್ದಾಣದ ಪ್ಲಾಟ್ ಫಾರಂ ನೆಲಹಾಸು ಆಧುನೀಕರಣ ಕಾಮಗಾರಿ, ಸರ್ಕ್ಯುಲೇಟಿಂಗ್ ಪ್ರದೇಶ, ಪಾರ್ಕಿಂಗ್ ಪ್ರದೇಶ ಮೊದಲಾದವುಗಳ ಸುಧಾರಣೆ, ನಿಲ್ದಾಣ ಸಂಪರ್ಕಿಸುವ ರಸ್ತೆಗಳ ಕಾಮಗಾರಿ, ಎರಡನೇ ಪಾದಚಾರಿ ಮೇಲ್ಸೇತುವೆಯ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಚಾಲನೆ ನೀಡಲಾಗಿದೆ.
ಕೆ. ರಂಗನಾಥ, ನಿವೃತ್ತ ಬಿಎಸ್ ಎನ್ ಎಲ್ ಅಧಿಕಾರಿಯೊಬ್ಬರು ಹೇಳಿದ್ದು, “ಧಾರವಾಡದ ಈ ರೈಲು ನಿಲ್ದಾಣ ಹಲವರ ನೆನಪಿನ ಬುತ್ತಿ. ಇಂದು ಅದಿಲ್ಲ ಅನ್ನುವುದೇ ನಿಜಕ್ಕೂ ಬೇಸರ ಮೂಡಿಸಿದೆ. ಇರಲಿ ಬದಲಾವಣೇ ಜಗದ ನಿಯಮ. ಆದರೆ ಈ ನಿಲ್ದಾಣ ಬೇರೆ ನಿಲ್ದಾಣಗಳಿಗಿಂತ ಭಿನ್ನ. ಇಲ್ಲಿ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಬಂದು ಕಲಿತು ಹೋದವರಿದ್ದಾರೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಬರುತ್ತಲೇ ಇರುತ್ತಾರೆ. ಪ್ರತಿಯೊಬ್ಬರ ಜೀವನದಲ್ಲೂ ಈ ನಿಲ್ದಾಣ ಒಂದಿಲ್ಲೊಂದು ನೆನಪು ನೀಡುತ್ತದೆ”.
ಜಯಶ್ರೀ ಅರುಣಕುಮಾರ್ ಬೆಂಗಳೂರಿನ ಶಿಕ್ಷಕರು ಹೇಳಿದ್ದು ಹೀಗೆ, “ನಾವೆಲ್ಲ ಗೆಳತಿಯರು ವಿಶ್ವವಿದ್ಯಾಲಯ ಕ್ಲಾಸ್ ಗಳು ಮುಗಿದ ಮೇಲೆ ಸಂಜೆ ಚುರುಮರಿ ಚೂಡಾದೊಂದಿಗೆ ಧಾರವಾಡದ ನಿಲ್ದಾಣಕ್ಕೆ ಹೋಗುತ್ತಿದ್ದೆವು. ಪ್ರತಿದಿನ ಎರಡು ತಾಸು ಅಲ್ಲಿ ಹರಟುತ್ತ ಸಮಯ ಕಳೆಯುತ್ತಿದ್ದೆವು. ಆಗೆಲ್ಲ ಪ್ಲಾಟಫಾರ್ಮ್ ಟಿಕೇಟ್ ಇದ್ದರೂ ನಮಗೆಲ್ಲ ಖಾಯಂ ಗಿರಾಕಿಯಂತೆ ಟಿಸಿಗಳೂ ತಡೆಯುತ್ತಿರಲಿಲ್ಲ. ಇಂದು ರೈಲು ನಿಲ್ದಾಣದ ಪಾರಂಪರಿಕ ಕಟ್ಟಡ ಇಲ್ಲ ಎಂದು ಕೇಳಿದಾಗ ಮನದ ಮೂಲೆಯಲ್ಲಿದ್ದ ಅದೆಷ್ಟೋ ನೆನಪಿನ ಸುರಳಿಗಳು ಬಿಚ್ಚಿ ಎಕ್ಸ್ ಪ್ರೆಸ್ ರೈಲಿನಂತೆ ಕ್ಷಣಮಾತ್ರದಲ್ಲಿ ಹಾದು ಹೋದವು”.