ರೈಲ್ವೆ ಇಲಾಖೆ ಕೇಂದ್ರ ಸರ್ಕಾರದ ಒಡೆತನದಲ್ಲಿದ್ದು, ಕೇಂದ್ರ ಸರ್ಕಾರ ರೈಲ್ವೆಗಾಗಿಯೇ ಪ್ರತ್ಯೇಕ ಇಲಾಖೆ ಹಾಗೂ ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಹಂತಕ್ಕೆ ಬೆಳೆದು ನಿಂತಿದ್ದ ಇಲಾಖೆ. ಆದರೆ, ಇದೀಗ ರೈಲ್ವೆ ಇಲಾಖೆ ತನ್ನ ಮಹತ್ವವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಯಾಕಂದರೆ ಹಳಿ ಮೇಲೆ ಖಾಸಗಿ ರೈಲುಗಳ ಸಂಚಾರ ಶುರುವಾಗಲಿದೆ.
ಈ ಬಗ್ಗೆ ಮಾಹಿತಿ ಕೊಟ್ಟಿರುವ ರೈಲ್ವೆ ಬೋರ್ಡ್ ಅಧ್ಯಕ್ಷ ವಿನೋದ್ ಕುಮಾರ್ ಯಾದವ್, 2023ರ ಫೆಬ್ರವರಿ, ಮಾರ್ಚ್ ವೇಳೆಗೆ ಬಿಡ್ಡಿಂಗ್ ಮುಕ್ತಾಯವಾಗಲಿದ್ದು, ಏಪ್ರಿಲ್ ವೇಳೆಗೆ ಭಾರತೀಯ ರೈಲ್ವೆಯಲ್ಲಿ ಖಾಸಗಿ ಪ್ಯಾಸೆಂಜರ್ ರೈಲುಗಳ ಸಂಚಾರ ಶುರುವಾಗಲಿದೆ ಎಂದು ಘೋಷಣೆ ಮಾಡಿದ್ದಾರೆ. ಪ್ರಾರಂಭಿಕ ಹಂತದಲ್ಲಿ 30 ಸಾವಿರ ಕೋಟಿ ಹಣ ಹೂಡಿಕೆ ಮಾಡುತ್ತಿದ್ದು, ದೇಶದ 109 ಮಾರ್ಗಗಳಲ್ಲಿ 150 ಖಾಸಗಿ ರೈಲುಗಳ ಓಡಾಟಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ರೈಲುಗಳ ಕೋಚ್‌ಗಳು ತಯಾರಾಗಲಿದ್ದು, ಗರಿಷ್ಠ 160 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡಲು ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗಿರುತ್ತದೆ. 35 ವರ್ಷದ ಅವಧಿಗೆ ಗುತ್ತಿಗೆ ನೀಡಲಾಗ್ತಿದ್ದು, ಅಲ್ಲೀವರೆಗೂ ನಿರ್ವಹಣೆ ಸೇರಿದಂತೆ ಎಲ್ಲಾ ಉಸ್ತುವಾರಿಯನ್ನು ಖಾಸಗಿ ರೈಲುಗಳ ಸಂಸ್ಥೆಗಳೇ ನೋಡಿಕೊಳ್ಳಬೇಕು. ವಿದ್ಯುತ್ ಬಳಕೆ ಸೇರಿದಂತೆ ಸರ್ಕಾರದ ಸ್ವತ್ತು ಬಳಕೆಗೆ ಹಣ ಪಾವತಿ ಮಾಡಬೇಕು. ಅಂತಿಮವಾಗಿ ಬರುವ ಆದಾಯದಲ್ಲಿ ಸರ್ಕಾರಕ್ಕೂ ಪಾಲು ಕೊಡಬೇಕು ಎನ್ನುವುದು.
ಗ್ರಾಹಕನಿಗೆ ಏನು ಅನುಕೂಲ..? ಅನಾನುಕೂಲ..?
ಭಾರತೀಯ ರೈಲ್ವೆ ಇಲಾಖೆ ಖಾಸಗೀಕರಣ ಆಗುವತ್ತ ಸಾಗುತ್ತಿದೆ. ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್ ಮೂಲಕ ರೈಲ್ವೆ ಇಲಾಖೆಯನ್ನು ಅಭಿವೃದ್ಧಿ ಮಾಡುತ್ತೇವೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಗ್ರಾಹಕರಿಗೆ ಅನುಕೂಲವಾಗಲಿದೆ ಎನ್ನುವ ಉದ್ದೇಶದಿಂದ ಖಾಸಗಿ ಪ್ಯಾಸೆಂಜರ್ ರೈಲಿಗೆ ಅನುಮತಿ ಕೊಟ್ಟಿದ್ದಾರೆ. ಇದರಿಂದ ಗ್ರಾಹಕರಿಗೆ ಏನು ಲಾಭ ಎನ್ನುವ ಪ್ರಶ್ನೆ ಉದ್ಬವ ಆಗಿದೆ. ಲಾಭವಿಷ್ಟೆ, ಐಶಾರಾಮಿ ರೈಲುಗಳಲ್ಲಿ ಕುಳಿತು ಸಂಚಾರ ಮಾಡಬಹುದು. ಜೊತೆಗೆ ಸ್ವಲ್ಪ ಭಾರತೀಯ ರೈಲುಗಳಿಗೆ ಹೋಲಿಕೆ ಮಾಡಿದ್ರೆ ತುಸು ಬೇಗೆ ಗುರಿ ಮುಟ್ಟಬಹುದು.
ಗ್ರಾಹಕರಿಗೆ ಲಾಭಕ್ಕಿಂತ ಸ್ವಲ್ಪ ನಷ್ಟವೇ ಹೆಚ್ಚು. ಕಾರಣವೆಂದರೆ, ಖಾಸಗಿ ರೈಲುಗಳ ಟಿಕೆಟ್ ದರವನ್ನು ಖಾಸಗಿ ರೈಲು ಸಂಸ್ಥೆಗಳೇ ನಿಗದಿ ಮಾಡುವುದರಿಂದ ವಿಮಾನಯಾನ ಸಂಸ್ಥೆಗಳಂತೆ ತಮಗೆ ಬೇಕಾದಂತೆ ಟಿಕೆಟ್ ದರ ನಿಗದಿ ಮಾಡಲು ಅವಕಾಶವಿದೆ. ದೇಶದ 12 ಕ್ಲಸ್ಟರ್‌ಗಳು 109 ಜೋಡಿ ಮಾರ್ಗದಲ್ಲಿ ಈ ರೈಲುಗಳು ಸಂಚಾರ ಮಾಡುತ್ತವೆ. ಬೆಂಗಳೂರು, ಚೆನ್ನೈ ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳನ್ನು ಈ ರೈಲು ಮಾರ್ಗ ಸಂಪರ್ಕ ಮಾಡಲಿದೆ.
ಕೇಂದ್ರ ಕ್ರಮದ ವಿರುದ್ಧ ರಾಹುಲ್ ಗಾಂಧಿ ಟೀಕೆ..!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಖಾಸಗಿ ರೈಲುಗಳ ಸಂಚಾರದ ಬಗ್ಗೆಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಲಕ್ಷಾಂತರ ಜನರ ಜೀವಸೆಲೆ ಆಗಿರುವ ರೈಲಿನಲ್ಲಿ ಖಾಸಗಿಯವರನ್ನು ತಂದು ಖಾಸಗೀಕರಣ ಮಾಡಲು ಮುಂದಾಗಿದ್ದೀರಿ. ಆದರೆ ನೆನಪಿನಲ್ಲಿ ಇಟ್ಟುಕೊಳ್ಳಿ ಜನರು ಈ ಕ್ರಮಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಿದ್ದಾರೆ ಎಂದಿದ್ದಾರೆ.
ವಿಶ್ವದಲ್ಲೇ ಅತೀ ಉದ್ದದ ರೈಲ್ವೆ ಹಳಿ ಮಾರ್ಗ ಹೊಂದಿರುವ ಭಾರತೀಯ ರೈಲ್ವೆ 13 ಸಾವಿರ ರೈಲುಗಳ ಸಂಚಾರ ಮಾಡುತ್ತಿದ್ದು 12 ಲಕ್ಷ ರೈಲ್ವೆ ಸಿಬ್ಬಂದಿ ಜೀವನ ರೂಪಿಸಿಕೊಂಡಿದ್ದಾರೆ. ಇದೀಗ ಖಾಸಗಿ ರೈಲುಗಳ ಸಂಚಾರದಿಂದ 12 ಲಕ್ಷ ನೌಕರರ ಜೀವನ ಬೀದಿಗೆ ಬೀಳುವ ಸಾಧ್ಯತೆ ಎದುರಾಗಿದೆ. ಇನ್ನೂ ಖಾಸಗಿ ಪ್ಯಾಸೆಂಜರ್ ರೈಲು ಓಡುವುದರಿಂದ ಮಾಸಿಕ ಪಾಸ್ ಸೇರಿದಂತೆ ಸರ್ಕಾರ ನೀಡುತ್ತಿದ್ದ ರಿಯಾಯ್ತಿ ಟಿಕೆಟ್‌ಗಳು ಈ ರೈಲುಗಳಲ್ಲಿ ಮಾಯವಾಗಲಿದೆ.
ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಜುಲೈ 1 ಐತಿಹಾಸಿಕ ದಿನ ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದರೆ, ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಭಾರತ ಸರ್ಕಾರ ರೈಲುಗಳನ್ನು ಖಾಸಗಿಗೆ ವಹಿಸಲು ಮುಂದಾಗಿದೆ. ಬಡ ಜನರಿಗೆ ಸಹಕಾರಿ ಆಗಿದ್ದ ಸಾರಿಗೆ ವ್ಯವಸ್ಥೆಗೆ ಬೈ ಬೈ ಎಂದು ಟೀಕಿಸಿದ್ದಾರೆ.
ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಆರಂಭವಾಗಲಿರುವ ಖಾಸಗಿ ರೈಲು ಸಂಚಾರ, ತದನಂತರ ರೈಲ್ವೆ ಇಲಾಖೆಯ ರೂಲುಗಳ ಅಲಭ್ಯತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗಲಿದ್ದು, ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ರೈಲುಗಳಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಬಹುತೇಕ ಮಾರ್ಗಗಳಿಗೆ ಕೇವಲ ಖಾಸಗಿ ರೈಲುಗಳನ್ನು ಬಿಡುವ ಮೂಲಕವೂ ಪ್ರಯಾಣಿಕರಿಗೆ ಹೊರೆಯಾದರೂ ಖಾಸಗಿ ಬಂಡವಾಳದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಬಂದರೂ ಬರಬಹುದು. ಟಿಕೆಟ್ ದರ ನಿಗದಿ ಮಾಡಲು ಸರ್ವ ಸ್ವತಂತ್ರರು ಎಂದು ಈಗಾಗಲೇ ತಿಳಿಸಲಾಗಿದೆ. ಅಂದರೆ ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಒಮ್ಮೆ ಜ್ಞಾಪಕ ಮಾಡಿಕೊಂಡರೆ ಮುಂದಿನ ದಿನಗಳ ಪರಿಸ್ಥಿತಿ ಹೇಗಿರಲಿದೆ ಎನ್ನುವ ಲೆಕ್ಕಾಚಾರ ಕಣ್ಣ ಮುಂದೆ ಹಾದು ಹೋಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅತ್ಯಾಪ್ತ ಬಳಗದ ಉದ್ಯಮಿಗಳೇ ಈ ಬಿಡ್ಡಿಂಗ್ ಪಡೆಯುವ ಎಲ್ಲಾ ಸಾಧ್ಯತೆಗಳಿವೆ ಅಥವಾ ಆ ಬಿಡ್ಡಿಂಗ್‌ನಲ್ಲಿ ಬಿಜೆಪಿಗೆ ಆಪ್ತರಾಗಿರುವ ಉದ್ಯಮಿಗಳು ಷೇರು ಪಡೆಯುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ನಾನು ರೈಲ್ವೆ ನಿಲ್ದಾಣದಲ್ಲಿ ಟೀ ಮಾರುತ್ತಿದ್ದೆ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ, ರೈಲ್ವೆಯನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ವಿಶ್ವದರ್ಜೆ ರೈಲಿನಲ್ಲಿ ಸಂಚಾರ ಮಾಡಬಹುದು ಎಂದು ಬೀಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ವಿಮಾನ ಕೂಡ ವಿಶ್ವದರ್ಜೆ ಸಂಚಾರವೇ ಸರಿ. ಆದರೆ, ಬಡ-ಬಗ್ಗರು ವಿಮಾನದಲ್ಲಿ ಸಂಚಾರ ಮಾಡಲು ಸಾಧ್ಯವೇ..?
ರೈಲು ಬಡವರ ಸಂಚಾರಕ್ಕೆ ಹೇಳಿ ಮಾಡಿಸಿದ್ದ ಸಂಚಾರ ವ್ಯವಸ್ಥೆ. ಆದರೆ ಇದೀಗ ಮೋದಿ ಸರ್ಕಾರದ ಕಣ್ಣು ರೈಲಿನ ಮೇಲೆ ಬಿದ್ದು ಆಗಿದೆ. ಮುಂದಿನ ದಿನಗಳಲ್ಲಿ ಮಾಸಿಕ ಪಾಸ್ ಅಷ್ಟೇ ಅಲ್ಲ, ಬೇರೆ ಎಲ್ಲಾ ಸೌಲಭ್ಯಗಳಿಗೂ ಕತ್ತರಿ ಬೀಳಲಿದೆ. ಜೊತೆಗ ಖಾಸಗಿ ಬಸ್ ಲಾಬಿ ನಡೆಯುವ ರೀತಿಯಲ್ಲೇ ಮುಂದಿನ ದಿನಗಳಲ್ಲಿ ಖಾಸಗಿ ರೈಲು ಕಂಪನಿಗಳ ಲಾಬಿ ನಡೆಯಲಿದೆ. 30 ವರ್ಷದ ತನಕ ಹೆದ್ದಾರಿಯನ್ನು ನಿರ್ವಹಣೆ ಮಾಡಬೇಕು ಎಂದು ಒಪ್ಪಂದ ಮಾಡಿಕೊಂಡು ಜೀವನ ಪರ್ಯಂತ ಟೋಲ್ ಸಂಗ್ರಹಿಸುವ ಖಾಸಗಿ ಕಂಪನಿಗಳಂತೆಯೇ ಸುಲಿಗೆ ಮಾಡುವುದು ಶತಸಿದ್ಧ ಎನ್ನಬಹುದು.