ಸ್ವಾವಲಂಬಿ ಭಾರತ ಅಭಿಯಾನದ ಭಾರೀ ಪ್ಯಾಕೇಜ್ ಘೋಷಣೆಯ ಪ್ರಧಾನಿ ಮೋದಿಯವರ 8 ಪಿಎಂ ಭಾಷಣದ ಬಳಿಕ, ನಿರೀಕ್ಷೆಯಂತೆ ಬುಧವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ಯಾಕೇಜಿನ ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ತೆರಿಗೆದಾರರಿಗೆ ತೆರಿಗೆ ಮರುಪಾವತಿ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆದಾರರಿಗೆ ಆರ್ಥಿಕ ಬೆಂಬಲ, ಪಿಎಫ್ ಮತ್ತು ಇಪಿಎಫ್ ನೌಕರರ ಕಂತು ಪಾವತಿ, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆದಾರರಿಗೆ ರಿಯಾಯ್ತಿ, ಕಿರು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರರ ಹಣಕಾಸು ಸಂಸ್ಥೆಗಳಿಗೆ ಕೆಲವು ಉತ್ತೇಜನಾ ಕ್ರಮಗಳನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ.
ಆದಾಯ ತೆರಿಗೆ ಪಾವತಿದಾರರು ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಈ ಹಿಂದಿನ ಜುಲೈ 31ರ ಬದಲಿಗೆ ನೆವಂಬರ್ 30ಕ್ಕೆ ವಿಸ್ತರಿಸಲಾಗಿದೆ. ಜೊತೆಗೆ ಆದಾಯ ತೆರಿಗೆ ಮರುಪಾವತಿಯ ಎಲ್ಲಾ ಬಾಕಿಯನ್ನು ಕೂಡಲೇ ಚುಕ್ತಾ ಮಾಡುವುದಾಗಿ ಸಚಿವರು ಘೋಷಿಸಿದ್ದಾರೆ. ಆ ಮೂಲಕ ಸುಮಾರು 18 ಸಾವಿರ ಕೋಟಿ ರೂ. ಮೊತ್ತದಷ್ಟು ಹಣ ತತಕ್ಷಣದಿಂದಲೇ ಮಾರುಕಟ್ಟಗೆ ಹರಿದುಬರಲಿದೆ ಎಂದು ಹೇಳಿದ್ದಾರೆ. ಜೊತೆಗೆ ಟಿಡಿಎಸ್ ದರ ಕಡಿತ ಘೋಷಣೆ ಮಾಡಿದ್ದು, ಗುರುವಾರದಿಂದಲೇ ಜಾರಿಗೆ ಬರಲಿದ್ದು, 2021ರ ಮಾರ್ಚ್ 31ರವರೆಗೆ ಟಿಡಿಎಸ್ ಮತ್ತು ಟಿಸಿಎಸ್ ದರದಲ್ಲಿ ಶೇ.25ರಷ್ಟು ಕಡಿತ ಮಾಡಲಾಗುವುದು. ಇದು ಅಂತಿಮವಾಗಿ ಆರ್ಥಿಕತೆಗೆ ಸುಮಾರು 50 ಸಾವಿರ ಕೋಟಿ ರೂ.ಗಳನ್ನು ಬೃಹತ್ ಮೊತ್ತದ ಹಣದ ಹರಿವಿಗೆ ಕಾರಣವಾಗಲಿದೆ ಎಂದು ಎಂದು ಹೇಳಿದ್ದಾರೆ.
ಮಧ್ಯಮ ಮತ್ತು ಸಣ್ಣ ಉದ್ದಿಮೆಗಳ ವಲಯದಲ್ಲಿ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಲು ಘಟಕಗಳಿಗೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲದೆ ಸಾಲಸೌಲಭ್ಯ ನೀಡಲಾಗುವುದು. ಆ ಉದ್ದೇಶಕ್ಕಾಗಿ ಸುಮಾರು 3 ಲಕ್ಷ ಕೋಟಿ ರೂ.ಗಳ ಉತ್ತೇಜನಾ ನಿಧಿ ಹಂಚಿಕೆ ಮಾಡಲಾಗುವುದು. ಅದರಿಂದಾಗಿ ದೇಶದ ಸುಮಾರು 45 ಲಕ್ಷ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ತಮ್ಮ ಚಟುವಟಿಕೆಯನ್ನು ಪುನರಾರಂಭಿಸಲು ಅನುಕೂಲವಾಗಲಿದೆ. ಆ ಹಿನ್ನೆಲೆಯಲ್ಲಿ ಈ ವಲಯದ ಉದ್ದಿಮೆಗಳ ಕುರಿತ ಈವರೆಗಿನ ವಾಣಿಜ್ಯ ವ್ಯಾಖ್ಯಾನವನ್ನು ಕೂಡ ಬದಲಾಯಿಸಿ ವಾರ್ಷಿಕ 100 ಕೋಟಿ ರೂ.ವರೆಗಿನ ವಹಿವಾಟಿನ ಘಟಕಗಳಿಗೂ ಪ್ಯಾಕೇಜ್ ನೆರವು ಸಿಗುವಂತೆ ಮಾಡಲಾಗುವುದು ಎಂದಿದ್ದಾರೆ.
ಜೊತೆಗೆ ಇಪಿಎಫ್ ವ್ಯಾಪ್ತಿಗೆ ಬರುವ ಎಲ್ಲಾ ನೌಕರರಿಗೆ ಮತ್ತೆ ಮೂರು ತಿಂಗಳ ಅವಧಿಗೆ ಸರ್ಕಾರವೇ ಕಂತು ತುಂಬಲಿದೆ. ಇದರಿಂದಾಗಿ ಸುಮಾರು 72 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. ಹಾಗೆಯೇ ಪಿಎಫ್ ವಂತಿಗೆ ಪ್ರಮಾಣವನ್ನು ನಿಯಮಾನುಸಾರ ಶೇ.12ರ ಬದಲಿಗೆ ಮುಂದಿನ ಮೂರು ತಿಂಗಳ ಅವಧಿಗೆ ಶೇ.10ಕ್ಕೆ ಇಳಿಸಲಾಗುವುದು. ಜೊತೆಗೆ ಇಪಿಎಫ್ ವಂತಿಗೆಯ ಪ್ರಮಾಣದಲ್ಲಿಯೂ ಕಡಿತ ಮಾಡಲಾಗಿದ್ದು, ಈ ಎರಡೂ ಕ್ರಮಗಳಿಂದಾಗಿ ನೌಕರರ ಕೈಗೆ ಸಿಗುವ ನಗದು ವೇತನ ಪ್ರಮಾಣ ಹೆಚ್ಚಲಿದೆ. ಅದು ಆರ್ಥಿಕ ಚಟುವಟಿಕೆಗೆ ಪೂರಕವಾಗಲಿದೆ ಎಂಬುದು ಸಚಿವರು ವಾದ.
ಸರ್ಕಾರಿ ಖರೀದಿಯಲ್ಲಿ ರೂ.200 ಕೋಟಿ ಮೊತ್ತದವರೆಗೆ ಜಾಗತಿಕ ಟೆಂಡರ್ ಗೆ ಅವಕಾಶ ರದ್ದು ಮಾಡಲಾಗುವುದು. ಇದು ಸ್ವಾವಲಂಬಿ ಭಾರತ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳಿಗೆ ನೆರವಾಗಲಿದೆ ಎಂದು ಸಚಿವೆ ಹೇಳಿದ್ದಾರೆ. ಹಾಗೆಯೇ ಗುತ್ತಿಗೆದಾರರಿಗೆ ಕೇಂದ್ರ ಸರ್ಕಾರದ ಕಾಮಗಾರಿಗಳಲ್ಲಿ ಆರು ತಿಂಗಳವರೆಗೆ ಕಾಮಗಾರಿ, ಸರಕು ಮತ್ತು ಸೇವೆ ವಿಷಯದಲ್ಲಿ ಕೆಲವು ರಿಯಾಯ್ತಿಗಳನ್ನು ಘೋಷಿಸಿದ್ದಾರೆ. ಜೊತೆಗೆ ವಿದ್ಯುತ್ ವಿತರಣಾ ಕಂಪನಿಗಳಿಗೆ ಸುಮಾರು 90 ಸಾವಿರ ಕೋಟಿ ನಗದು ಅನುದಾನ ನೀಡಲಾಗುವುದು ಎಂದೂ ಹೇಳಿದ್ಧಾರೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸುಮಾರು 45 ಸಾವಿರ ಕೋಟಿ ರೂ.ನಷ್ಟು ಭಾರೀ ಹಣಕಾಸು ಬೆಂಬಲ ಘೋಷಿಸಿದ್ದು, ಅದು ಅಂತಿಮವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಹಣಕಾಸು ನೆರವು ನೀಡಲು ಬಳಕೆಯಾಗಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕೆ ಇದಿಷ್ಟು ಮೋದಿಯವರ 20 ಲಕ್ಷ ಕೋಟಿ ಬೃಹತ್ ಪ್ಯಾಕೇಜನ್ನು ಯಾವೆಲ್ಲಾ ಕ್ಷೇತ್ರಕ್ಕೆ ಹೇಗೆಲ್ಲಾ ಬಳಸಲಾಗುತ್ತಿದೆ ಎಂಬುದನ್ನು ವಿವರಿಸುವ ಹಣಕಾಸು ಸಚಿವರ ಯೋಜನೆಯ ಮೊದಲ ಕಂತು. ಇನ್ನು ಪ್ರತಿ ದಿನ ಪ್ಯಾಕೇಜಿನ ವಿವರಗಳನ್ನು ವಲಯವಾರು/ ಕ್ಷೇತ್ರವಾರು ನೀಡಲಾಗುವುದು ಎಂದೂ ಸಚಿವೆ ಹೇಳಿದ್ದಾರೆ. ಹಾಗಾಗಿ, ಸದ್ಯಕ್ಕೆ ಇದು ಬಹುತೇಕ ತೆರಿಗೆದಾರರು, ಟಿಡಿಎಸ್ ಕಡಿತ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು, ಗುತ್ತಿಗೆದಾರರು, ಕಿರು ಹಣಕಾಸು ಸಂಸ್ಥೆಗಳು, ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಂಬಂಧಿಸಿದ ಪ್ಯಾಕೇಜ್ ಹಂಚಿಕೆ ವಿವರಗಳು ಅಷ್ಟೇ.
ಆದರೆ, ಬೀದಿಪಾಲಾಗಿ ಹಾದಿಬೀದಿ ಶವವಾಗಿ ಹೋಗುತ್ತಿರುವ ದೇಶದ ಅತ್ಯಂತ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು, ದಿನಗೂಲಿಗಳ ಸಂಕಷ್ಟದ ಬಗ್ಗೆಯಾಗಲೀ, ತೀವ್ರ ಸಂಕಷ್ಟದಲ್ಲಿರುವ ರೈತರ ಬಗ್ಗೆಯಾಗಲೀ, ಅಥವಾ ಸಣ್ಣ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು, ಪಾನ್ ಬೀಡಾ ಅಂಗಡಿ, ಕಟಿಂಗ್ ಶಾಪು, ಟೈಲರು ಮುಂತಾದ ತೀವ್ರ ಸಂಕಷ್ಟದಲ್ಲಿರುವ ವರ್ಗಗಳ ಬಗ್ಗೆ ಸಚಿವೆಯ ಮೊದಲ ಆದ್ಯತೆಯಾಗಬೇಕಿತ್ತು. ಆದರೆ, ಉದ್ದಿಮೆದಾರರು, ನೌಕರಿದಾರರು, ಗುತ್ತಿಗೆದಾರರನ್ನೇ ಮೊದಲು ಪರಿಗಣಿಸುವ ಮೂಲಕ ಬಿಜೆಪಿಯ ಮತಬ್ಯಾಂಕ್ ಆಧಾರದ ಮೇಲೆ ಪ್ಯಾಕೇಜ್ ಘೋಷಣೆಯ ಆದ್ಯತೆಯಾಗಿ ನಗರವಾಸಿ ಮಧ್ಯಮವರ್ಗವನ್ನು ಪ್ರಮುಖವಾಗಿ ಪರಿಗಣಿಸಿದ್ದಾರೆ ಎಂಬ ಟೀಕೆ ಕೂಡ ವ್ಯಕ್ತವಾಗಿದೆ.