ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರ ಮೇಲೆ ದಾಳಿ ನಡೆಸಿದ NCB ಅಧಿಕಾರಿಗಳು ಮಾದಕ ವಸ್ತು ದಂಧೆಯ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಿದ್ದರು. ಈ ನಾಲ್ವರ ಪೈಕಿ ಅನಿಕಾ ಡಿ ಎನ್ನುವಾಕೆ ಡ್ರಗ್ ಮಾಫಿಯಾದ ಕಿಂಗ್ಪಿನ್ ಎನ್ನಲಾಗಿದ್ದು, ಆಕೆಯನ್ನು ವಿಚಾರಣೆಗೊಳಪಡಿಸಲಾಗಿತ್ತು. ಬೆಂಗಳೂರಿನಲ್ಲಿ ತನಗೆ ದೊಡ್ಡ ಗ್ರಾಹಕ ಬಳಗವಿದೆ ಎಂದು ಆಕೆಯ ಹೇಳಿಕೆ ಹಿನ್ನೆಲೆಯಲ್ಲಿ ಎನ್ಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದರು. ಇದೇ ವೇಳೆ ಪತ್ರಕರ್ತ, ಚಿತ್ರನಿರ್ದೇಶಕ ಇಂದ್ರಜಿತ್ ಲಂಕೇಶ್, Sandalwoodಗೆ ದೊಡ್ಡ ಮಟ್ಟದ ಡ್ರಗ್ಸ್ ಲಿಂಕ್ ಇದೆ ಎಂದು ಹೇಳಿಕೆ ಕೊಡುತ್ತಿದ್ದಂತೆ ಸುದ್ದಿ ಬೇರೆಯದ್ದೇ ಆಯಾಮ ಪಡೆದುಕೊಂಡಿತು.
ಸ್ಯಾಂಡಲ್ವುಡ್ನಲ್ಲಿ ಹಲವಾರು ವರ್ಷಗಳಿಂದ ಡ್ರಗ್ಸ್ ಪಿಡುಗು ಇದೆ ಎಂದ ಇಂದ್ರಜಿತ್ ಲಂಕೇಶ್ ತಮಗೆ ಸೂಕ್ತ ರಕ್ಷಣೆ ಒದಗಿಸಿದರೆ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಹೇಳಿದರು. ಇದರ ಬೆನ್ನಲ್ಲೇ ಕಿರುತೆರೆ ನಟಿ ಚಿತ್ರಲ್ ರಂಗಸ್ವಾಮಿ, “ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಇರೋದು ನಿಜ. ಇಂದ್ರಜಿತ್ ಸುಮ್ಮನೇ ಆರೋಪ ಮಾಡುತ್ತಿಲ್ಲ. ತನಿಖೆ ಮೂಲಕ ಸತ್ಯಾಂಶ ಹೊರಬರಲಿ” ಎಂದರು. ನಟ-ನಟಿಯರು, ಸಂಗೀತ ನಿರ್ದೇಶಕರ ಬಗ್ಗೆ ಇಂದ್ರಜಿತ್ ಪ್ರಸ್ತಾಪಿಸುತ್ತಿದ್ದಂತೆ ಚಿತ್ರರಂಗದಲ್ಲಿ ಊಹಾಪೋಹಗಳು ಶುರುವಾದವು. ಇತ್ತೀಚೆಗೆ ನಿಧನಹೊಂದಿದ ಯುವನಟ ಚಿರಂಜೀವಿ ಸರ್ಜಾ ಬಗ್ಗೆಯೂ ಇಂದ್ರಜಿತ್ ಬೆರಳು ತೋರಿದರು. ಚಿತ್ರರಂಗದ ದೊಡ್ಡ ಹೀರೋಗಳು ಸೇರಿದಂತೆ ಹಲವರು ಈ ಬಗ್ಗೆ ಕಟುವಾಗಿ ಪ್ರಶ್ನೆ ಮಾಡಿದರು. ಆಗ ಇಂದ್ರಜಿತ್ ಅವರು ಯುವನಟನ ಕುರಿತಂತೆ ತಾವು ನೀಡಿದ ಹೇಳಿಕೆ ವಾಪಸು ಪಡೆದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮುಂದುವರಿದು ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡ ಇಂದ್ರಜಿತ್ ಡ್ರಗ್ಸ್ ನಂಟು ಹೊಂದಿರುವ ಚಿತ್ರರಂಗದ ಹದಿನೈದು ಮಂದಿಯ ಹೆಸರುಗಳನ್ನು ಸಿಸಿಬಿಗೆ ಕೊಟ್ಟರು. ಈ ಬೆಳವಣಿಗೆ ನಂತರ ಜನರಲ್ಲಿ ಗುಸುಗುಸು ಹೆಚ್ಚಾಗಿದೆ. ಆದರೆ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, “ಇಂದ್ರಜಿತ್ ಅವರ ಹೇಳಿಕೆ ದಾಖಲಿಸಲಾಗಿದೆ. ಅವರು ಘಟನೆ ಮತ್ತು ಹೆಸರುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೇಳಿಕೆ ವೇಳೆ ಯಾವುದೇ ವಸ್ತು ಅಥವಾ ಪುರಾವೆ ನೀಡಿಲ್ಲ. ಸಂಬಂಧಪಟ್ಟ ಪುರಾವೆಗಳಿದ್ದರೆ ಒದಗಿಸಲು ಮತ್ತೊಮ್ಮೆ ಅವಕಾಶ ನೀಡಲಿದ್ದೇವೆ” ಎಂದಿದ್ದಾರೆ. ಹಾಗಾಗಿ ಆರೋಪ ಮಾಡಿರುವ ಇಂದ್ರಜಿತ್ ಅವರ ಮೇಲೆ ಈಗ ಪುರಾವೆಗಳನ್ನು ಒದಗಿಸುವ ದೊಡ್ಡ ಜವಾಬ್ದಾರಿ ಹೆಗಲೇರಿದೆ.
“ಇಂದ್ರಜಿತ್ ಧೈರ್ಯವಾಗಿ ಮಾತನಾಡಿರುವುದೇನೋ ಸರಿ. ಆದರೆ ಅವರು ಸೂಕ್ತ ಪುರಾವೆಗಳೊಂದಿಗೆ ಕರಾರುವಕ್ಕಾಗಿ ಹೇಳಬೇಕು. ಮೃತನಟನೆಡೆ ಅವರು ಬೆರಳು ತೋರುವುದು, ಪೋಸ್ಟ್ ಮಾರ್ಟಂ ಯಾಕೆ ಮಾಡಲಿಲ್ಲ ಎನ್ನುವುದರಲ್ಲಿ ಅರ್ಥವಿಲ್ಲ. ಅವರು ಯಾರಿಗೆ ಪ್ರಶ್ನೆ ಮಾಡುತ್ತಿದ್ದಾರೆ? ಅವರ ಈ ಮಾತು ಕೆಳಮಟ್ಟದ ರಾಜಕಾರಣಿಗಳ ಹೇಳಿಕೆಯಂತಿದೆ” ಎನ್ನುತ್ತಾರೆ ಚಿತ್ರರಂಗದ ಹಿರಿಯ ವಿತರಕ ಮಾರ್ಸ್ ಸುರೇಶ್. ಯುವನಟ ಚಿರಂಜೀವಿ ಸರ್ಜಾ ಬಗೆಗಿನ ಇಂದ್ರಜಿತ್ರ ಹೇಳಿಕೆ ನಟ ದರ್ಶನ್ ಅವರನ್ನೂ ಕೆರಳಿಸಿತ್ತು. ನಟ ಶಿವರಾಜಕುಮಾರ್, ಸುದೀಪ್ ಸೇರಿದಂತೆ ಹಲವರು ಚಿತ್ರರಂಗಕ್ಕೆ ಡ್ರಗ್ಸ್ ಲಿಂಕ್ ಇದೆ ಎನ್ನುವ ಹೇಳಿಕೆಯನ್ನು ಅಲ್ಲಗಳೆದರು. ನಟ ಜಗ್ಗೇಶ್, “ಉಪ್ಪು ತಿಂದವರು ನೀರು ಕುಡಿಯಲೇಬೇಕು” ಎನ್ನುವ ಅರ್ಥದ ಟ್ವೀಟ್ ಮಾಡಿದರೆ, ಬಹಳಷ್ಟು ನಟ, ನಟಿಯರು ಮಾಧ್ಯಮಗಳ ಸಂಪರ್ಕಕಕ್ಕೆ ಸಿಗದೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
“ಸಿನಿಮಾಮಂದಿಯನ್ನು ಗುಮಾನಿಯಿಂದ ನೋಡುವುದು ಹೊಸದೇನಲ್ಲ. ಗ್ಲಾಮರ್ ಜಗತ್ತು ಎನ್ನುವುದು ಇದಕ್ಕೆ ಕಾರಣ. ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯದು, ಕೆಟ್ಟದ್ದು ಇದ್ದೇ ಇರುತ್ತದೆ. ಅದೇ ರೀತಿ ಸಿನಿಮಾದಲ್ಲೂ ಇರಬಹುದು. ಯಾರೋ ಕೆಲವರು ಡ್ರಗ್ಸ್ ತೆಗೆದುಕೊಳ್ಳುವವರು ಇದ್ದರೂ ಇರಬಹುದೇನೋ? ಹಾಗೆಂದು ಇಡೀ ಸಿನಿಮಾರಂಗವನ್ನೇ ದೂಷಿಸುವುದರಲ್ಲಿ ಅರ್ಥವಿಲ್ಲ. ಒಂದೊಮ್ಮೆ ಡ್ರಗ್ಸ್ ತೆಗೆದುಕೊಳ್ಳುವವರಿದ್ದರೆ ಅವರಿಗೆ ಶಿಕ್ಷೆ ವಿಧಿಸುವುದೋ, ಇಲ್ಲವೇ ಸರಿದಾರಿಗೆ ತರುವುದೋ ಆಗಬೇಕು. ಸಿನಿಮಾ ಅಂತಲ್ಲ, ಯಾವುದೇ ಕ್ಷೇತ್ರದಲ್ಲಿನ ಯುವಕರು ಇಂತಹ ತಪ್ಪು ದಾರಿ ತುಳಿದರೂ ಸರಿಪಡಿಸಬೇಕಿರುವುದು ಅವಶ್ಯ” ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಚಿತ್ರನಿರ್ದೇಶಕರೊಬ್ಬರು ಪ್ರತಿಧ್ವನಿಗೆ ಹೇಳಿಕೆ ನೀಡಿದ್ದಾರೆ.
ಚಿತ್ರರಂಗದ ಹಿರಿಯ ವಿತರಕ ಮಾರ್ಸ್ ಸುರೇಶ್ ಅವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. “ಸಿನಿಮಾದವರನ್ನು ಅತೀತರಂತೆ ನೋಡುವುದು ಬೇಡ. ಸಿನಿಮಾದವರೆಲ್ಲಾ ಪಾರ್ಟಿ ಮಾಡುತ್ತಾರೆ, ಫೈವ್ಸ್ಟಾರ್ ಜೀವನ ನಡೆಸುತ್ತಾರೆ ಎನ್ನುವುದು ಭ್ರಮೆ. ನಾನು ನೋಡಿದಂತೆ ನಮ್ಮ ಸಮಕಾಲೀನರು ಅನೇಕರು ಮಧ್ಯಾಹ್ನದ ಊಟಕ್ಕೆ ಈಗಲೂ ಮನೆಯಿಂದ ಬುತ್ತಿ ತರುತ್ತಾರೆ. ಮೂರು ನಾಲ್ಕು ದಶಕಗಳ ಕಾಲ ರಿಯಲ್ ಎಸ್ಟೇಟ್ ಸೇರಿದಂತೆ ಬೇರೆ ಉದ್ಯಮ ನಡೆಸುತ್ತಿರುವವರು ಒಂದು ಸಿನಿಮಾ ಮಾಡಿ ತಾವು ನಿರ್ಮಾಪಕರು ಎಂದು ಹೇಳಿಕೊಂಡರೆ ಏನು ಹೇಳುವುದು? ಅದೇ ರೀತಿ ವೃತ್ತಿಪರರಲ್ಲದ ಯಾರೋ ಒಂದೆರೆಡು ಸಿನಿಮಾ ಮಾಡಿರುತ್ತಾರೆ. ಇಂಥವರು ಕೆಟ್ಟದ್ದೇನೋ ಮಾಡಿದರೆ ಅದೆಲ್ಲವನ್ನೂ ಸಿನಿಮಾರಂಗಕ್ಕೆ ಅಂಟಿಸುವುದು ಅದೆಷ್ಟು ಸರಿ? ಇದೊಂದು ರೀತಿ ಮಾಸ್ ಹಿಸ್ಟೀರಿಯಾ ಅಷ್ಟೆ. ಇಂತಹ ಸಂದರ್ಭಗಳು ಚಿತ್ರರಂಗದಲ್ಲಿ ಒಡಕು ಮೂಡಿಸುತ್ತವೆ” ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಡ್ರಗ್ಸ್ ನಂಟನ್ನು ಚಿತ್ರರಂಗದ ಬಹುಪಾಲು ಹಿರಿಯರು ಅಲ್ಲಗಳೆಯುತ್ತಾರೆ. ಒಂದೊಮ್ಮೆ ಇದ್ದರೂ ಅವರನ್ನು ಗುರುತಿಸಿ ಶಿಕ್ಷಿಸಬೇಕು ಎನ್ನುವ ಅವರ ಸಲಹೆ ಸರಿಯೂ ಹೌದು. ಯಾರೋ ಕೆಲವರ ತಪ್ಪು ಹಾದಿ ಇಡೀ ಉದ್ಯಮದ ಬೆಳವಣಿಗೆಗೆ ತೊಡಕಾಗಬಾರದು ಎನ್ನುವುದು ಇದರ ಹಿಂದಿನ ಅವರ ಕಾಳಜಿ. ಈ ಕುರಿತಂತೆ ರಾಜಕೀಯ ನಂಟಿರುವ ಚಿತ್ರರಂಗ ಕೆಲವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರಿಗೂ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಅಪಘಾತಗಳ ಹಿಂದೆ ಅನುಮಾನ
ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಇರಬಹುದು ಎನ್ನುವ ಗುಮಾನಿ ಎದ್ದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೆಲವು ಸಂದರ್ಭಗಳಲ್ಲಿ ಡ್ರಗ್ಸ್ ವಿಚಾರ ಪ್ರಸ್ತಾಪವಾಗಿತ್ತು. ಯುವ ನಟ-ನಟಿಯರು ಕಾರುಗಳಲ್ಲಿ ಸಂಚರಿಸುವಾಗ ಮಾಡಿಕೊಂಡ ಅಪಘಾತಗಳ ಸಂದರ್ಭಗಳನ್ನು ಡ್ರಗ್ಸ್ ಹಿನ್ನೆಲೆಯಲ್ಲಿ ಚರ್ಚಿಸಲಾಗಿತ್ತು. ಆದರೆ ಈ ಪ್ರಕರಣಗಳು ಹೆಚ್ಚು ಸದ್ದಿಲ್ಲದೆ ಖುಲಾಸೆಯಾಗಿದ್ದವು. ಇದರ ಹಿಂದೆ ರಾಜಕಾರಣದ ನಂಟು ಹೊಂದಿರುವ ಚಿತ್ರರಂಗದ ಪ್ರಭಾವಿಗಳ ಕೈವಾಡವಿದೆ ಎಂದು ಜನರು ಮಾತನಾಡಿಕೊಂಡಿದ್ದು ದಿಟ. ಆದರೆ ಈ ಬಾರಿ ಚಿತ್ರರಂಗದೊಳಗೇ ಇರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನೆ ಮಾಡಿ ಒಂದಷ್ಟು ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ. ಹಾಗಾಗಿ ಈ ಬಾರಿ ವಿಷಯ ಸಂಕೀರ್ಣವಾಗಿದೆ. ಸದ್ಯ ಇಂದ್ರಜಿತ್ ಲಂಕೇಶ್ ಮತ್ತು ಸಿಸಿಬಿಯ ಮುಂದಿನ ನಡೆಗಳ ಬಗ್ಗೆ ಜನರು ದೃಷ್ಟಿ ನೆಟ್ಟಿದ್ದಾರೆ. ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ನೋಡಬೇಕು.