ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿದ 8 ದಿನಗಳ ನಂತರ ರಾಮೇಶ್ವರಂ ಕೆಫೆ ಪುನರಾರಂಭಗೊಂಡಿದೆ. ಕಳೆದ ಮಾರ್ಚ್ 1 ರಂದು ಮಧ್ಯಾನ 1.09ರ ಸುಮಾರಿಗೆ ಇದೇ ಸ್ಥಳದಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 10 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು.. ಇಡೀ ಬೆಂಗಳೂರು ಈ ಬ್ಲಾಸ್ಟ್ ನಿಂದ ಬೆಚ್ಚಿಬಿದ್ದಿತ್ತು.
ಈ ಘಟನೆಗೆ ಸಂಬಂಧಪಟ್ಟಂತೆ ಕೆಫೆ ಮಾಲೀಕರು ಕೂಡ ತೀವ್ರ ಕಳವಳ ವ್ಯಕ್ತಪಡಿಸಿದ್ರು. ಬಹಳ ಕಷ್ಟ ಪಟ್ಟು ಇದನ್ನ ಆರಂಭಿಸಿದ್ದೇವೆ. ಇಂತಹ ಘಟನೆಗಳಿಂದ ನಮ್ಮ ಕೆಫೆಗೆ ಕಳಂಕ ಬರಬಾರದು. ಘಟನೆ ನಮಗೆ ಬಹಳ ನೋವು ತಂದಿದ್ದು, ತನಿಖೆಯ ಪ್ರಕ್ರಿಯಗಳು ಮುಗಿದ ನಂತರ ಮತ್ತೆ ಕೆಫೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ರು. ಅದ್ರಂತೆ ಈಗ ಕೆಫೆ ಮತ್ತೆ ಕಾರ್ಯಾರಂಭ ಮಾಡಿದೆ.
ಸಾಕಷ್ಟು ಪೂಜೆ-ಹೋಮ-ಹವನದ ಜೊತೆಗೆ ಹೆಚ್ಚಿನ ಭದ್ರತೆಯೊಂದಿಗೆ ರಾಮೇಶ್ವರಂ ಕೆಫೆ ಪುನರಾರಂಭಗೊಂಡಿದೆ. ಕೆಫೆ ಎಂಟ್ರನ್ಸ್ ನಲ್ಲೇ ಚೆಕ್ಕಿಂಗ್ ಯಂತ್ರ ಇರಿಸಲಾಗಿದೆ. ಮೆಟಲ್ ಡಿಟೆಕ್ಟರ್ಗಳನ್ನ ಅಳವಡಿಸಲಾಗಿದೆ. ಜೊತೆಗೆ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಸಂಪೂರ್ಣ ಮುನ್ನೆಚರಿಕಾ ಕ್ರಮ ಕೈಗೊಂಡು ಮತ್ತೆ ರಾಮೇಶ್ವರಂ ಕೆಫೆ ಚೇತರಿಸಿಕೊಳ್ಳುವ ಉತ್ಸಾಹದಲ್ಲಿದೆ.
ಆದ್ರೆ ಗ್ರಾಹಕರಲ್ಲಿ ಭಯ ಹಾಗೇ ಇದ್ದಲ್ಲಿ ವ್ಯಾಪಾರಕ್ಕೆ ತೊಂದರೆಯಾಗಬಹುದು ಎಂಬ ಭಯ ಮಾಲೀಕರಿಗಿದೆ. ಬೆಂಗಳೂರಿಗರು ಈ ಕಹಿ ಘಟನೆಯನ್ನ ಮರೆತು ಮೊದಿಲಹಾಗೆ ಕೆಫೆಗೆ ಲಗ್ಗೆ ಇಡ್ತಾರಾ ಅಥವಾ ಇನ್ನೂ ಸಮಯಾವಕಾಶ ಬೇಕಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.