ಕರ್ನಾಟಕದಲ್ಲಿರುವ ಬೃಹತ್ ಜಲ ಕಾಮಗಾರಿಗಳಲ್ಲಿ ಅವ್ಯವಹಾರ ತಾಂಡವವಾಡುತ್ತಿದೆ. ಟೆಂಡರ್ ಪ್ರಕ್ರಿಯೆಯಿಂದ ಹಿಡಿದು ಬಿಲ್ ಮೊತ್ತದವರೆಗೆ ಗೋಲ್‌ಮಾಲ್ ನಡೆದಿದೆ. ಮುಖ್ಯವಾಗಿ ನಾಲೆ ಅಭಿವೃದ್ದಿಯಲ್ಲಿ ಕಾಮಗಾರಿಯಲ್ಲಿ ಅಕ್ರಮದ ಕೊಳಚೆ ನೀರು ಹರಿಯುತ್ತಿದೆ.
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (KBJL), ಕರ್ನಾಟಕ ನೀರಾವರಿ ನಿಗಮ ನಿಯಮಿತ (KNNL), ಕಾವೇರಿ ನೀರಾವರಿ ನಿಗಮ ನಿಯಮಿತ (CNNL) ಈ ನಿಗಮಗಳ ಅಡಿಯಲ್ಲಿ ಹಲವು ಬೃಹತ್ ಕಾಮಾಗಾರಿಗಳು ನಡೆಯುತ್ತಿವೆ. ಈ ಕಾಮಾಗಾರಿಗಳು ಪಾರದರ್ಶಕವಾಗಿ ನಡೆಯಲು ಮೊದಲಿಗೆ ಟೆಂಡರ್ ಕರೆಯಲಾಗುತ್ತದೆ. ಆದರೆ, ಇಲ್ಲಿ ಅಕ್ರಮ ಆರಂಭವಾಗುವುದೇ ಈ ಟೆಂಡರ್ ಪ್ರಕ್ರಿಯೆಯಿಂದ.
ಆಶ್ಚರ್ಯಕರ ಸಂಗತಿ ಏನೆಂದರೆ, KBJL, KNNL ಮತ್ತು CNNLಗಳ ಅಡಿಯಲ್ಲಿ ಬರುವಂತಹ ಪ್ರಮುಖ ಹಾಗೂ ಬಹುಕೋಟಿ ಟೆಂಡರ್‌ಗಳು ನಿರಂತರವಾಗಿ ರಾಜ್ಯದ ಮೂರು ಕಂಪೆನಿಗಳಿಗೇ ಸೇರುತ್ತಿವೆ. ಈ ಮೂರು ಕಂಪೆನಿಗಳ ಹೊರತಾಗಿ ಬೇರಾವ ಕಂಪೆನಿಗಳೂ ಟೆಂಡರ್‌ನಲ್ಲಿ ಭಾಗವಹಿಸದಂತೆ ನಿಯಮಗಳನ್ನು ರೂಪಿಸಲಾಗುತ್ತಿದೆ. ʼಅಡು ಇನ್ಫ್ರಾ, ಡಿ ವೈ ಉಪ್ಪಾರ್ ಮತ್ತು ಕಟ್ಟೀಮನಿ ಎಂಬ ಮೂರು ಸಂಸ್ಥೆಗಳು ಸೇರಿ ನೀರಾವರಿಗೆ ಸಂಬಂಧಪಟ್ಟ ಬಹುಕೋಟಿ ಪ್ರಾಜೆಕ್ಟ್‌ಗಳನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಿವೆ.
ಈಗ ಹೊಸದಾಗಿ ಈ ಕಂಪೆನಿಗಳ ಅವ್ಯವಹಾರ ಒಂದು ಬಯಲಾಗಿದ್ದು, ನಾರಾಯಣಪುರ ಬಲದಂಡೆ ಕಾಲುವೆ ಯೋಜನೆಯಲ್ಲಿ ಸುಮಾರು ರೂ. 400 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂಬ ಕುರಿತು ದೂರುಗಳು ಕೇಳಿ ಬಂದಿವೆ. ಕೃಷ್ಣ ಭಾಗ್ಯ ಜಲ ನಿಗಮದಡಿಯಲ್ಲಿ ಬರುವ ನಾರಾಯಣಪುರ ಬಲದಂಡೆ ಕಾಲುವೆಯ ನವೀಕರಣ ಹಾಗೂ ಆಧುನೀಕಣ ಯೋಜನೆಗೆ ಅನಾವಶ್ಯಕವಾಗಿ ರೂ. 848.52 ಕೋಟಿಯಷ್ಟು ಹಣವನ್ನು ವ್ಯಯಿಸಲಾಗಿದೆ.
ಈ ಹಿಂದೆಯೇ ಅಸ್ಥಿತ್ವದಲ್ಲಿ ಇದ್ದಂತಹ ನಾಲೆಯ ಆಧುನೀಕರಣಕ್ಕೆ ಅಪಾರ ಮೌಲ್ಯದ ಜಲ್ಲಿ ಕಲ್ಲು ಮತ್ತು Cohesive Non-Swelling Soil (CNS) ಅಗತ್ಯವಿದೆ ಎಂದು ಹೇಳಿ ಬಿಲ್ ಪಾಸ್ ಮಾಡಲಾಗಿದೆ. ಒಂದು ಲಕ್ಷದ ಎಪ್ಪತ್ತೈದು ಸಾವಿರ ಟನ್‌ಗಳಷ್ಟು ಮಣ್ಣನ್ನು ಬಳಸಿಕೊಳ್ಳಲಾಗಿದೆ ಎಂದು ಬಿಲ್‌ನಲ್ಲಿ ತಿಳಿಸಿಲಾಗಿದೆ. ಆದರೆ, ಇಷ್ಟು ಮಣ್ಣನ್ನು ಪಡೆದ ಮೂಲ ಜಾಗ ಯಾವುದು ಎಂಬುದು ನಿಜಕ್ಕೂ ಯಕ್ಷ ಪ್ರಶ್ನೆ. ಏಕೆಂದರೆ, ಕೇವಲ ನಾಲೆಯ ಆಧುನೀಕರಣಕ್ಕೆ ಬಳಸಿರುವ ಮಣ್ಣಿಂದ ಸುಮಾರು 3-4 ಚಾಮುಂಡಿ ಬೆಟ್ಟವನ್ನು ಸೃಷ್ಟಿಸಬಹುದಾಗಿದೆ. ಇದು ಅತಿರೇಕ ಎಂದನಿಸಿದರೂ ಸತ್ಯ.
ಈ ಅವ್ಯವಹಾರಗಳಿಗೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಇಲ್ಲಿ ನಿಜವಾಗಿಯೂ ಗೋಲ್‌ಮಾಲ್ ನಡೆದಿರುವುದು ಟೆಂಡರ್ ಪ್ರಕ್ರಿಯೆಯಲ್ಲಿ. ನಿರ್ದಿಷ್ಟ ಕಂಪೆನಿಗಳ ಹೊರತಾಗಿ ಬೇರೆ ಯಾವುದೇ ಕಂಪೆನಿಗಳು ಈ ಟೆಂಡರ್ ಪಡೆಯದಂತೆ ಸಾಕಷ್ಟು ಮುತುವರ್ಜಿ ವಹಿಸಿ ನಿಯಮಗಳನ್ನು ರೂಪಿಸಲಾಗಿದೆ. ಅಥವಾ, ಖುದ್ದು ಟೆಂಡರ್ ಪಡೆದ ಕಂಪೆನಿಗಳೇ ಈ ಟೆಂಡರ್ ನಿಯಮಗಳನ್ನು ರೂಪಿಸಿದ್ದಾರೆ.
ಈ ಕಾಮಗಾರಿಯ ಟೆಂಡರ್ ಪಡೆಯಲು ನೀಡಿದ ನಿಯಮಗಳು ಈ ಕೆಳಗಿನಂತಿವೆ
1. ಈವರೆಗೆ 26,29,000 ಕ್ಯೂಬಿಕ್ ಮೀಟರ್‌ಗಳಷ್ಟು ಭೂಮಿಯನ್ನು ಅಗೆದ ಅನುಭವ ಇರಬೇಕು.
2. 97,800 ಕ್ಯೂಬಿಕ್ ಮೀಟರ್‌ಗಳಷ್ಟು ನಿಯಂತ್ರಿತ ಸ್ಪೋಟ (Controlled blastin) ನಡೆಸಿದ ಅನುಭವವಿರಬೇಕು.
3. ಈವರೆಗೆ 33,98,800 ಕ್ಯೂಬಿಕ್ ಮೀಟರ್‌ಗಳಷ್ಟು ದಂಡೆಯನ್ನು ನಿರ್ಮಿಸಿದ ಅನುಭವಿರಬೇಕು.
4. 2313 ಮೆಟ್ರಿಕ್ ಟನ್‌ಗಳಷ್ಟು ಸ್ಟೀಲ್ ಉಪಯೋಗಿಸುವ ಅರ್ಹತೆಯಿರಬೇಕು.
ಈ ಎಲ್ಲಾ ನಿಯಮಗಳು ಹೊಸತಾಗಿ ದಂಡೆಯನ್ನು ನಿರ್ಮಿಸುವಾಗ ನೀಡಿದ್ದರೆ ಈಗ ಅದನ್ನು ನವೀಕರಿಸಿ ಆಧುನಿಕರಣಗೊಳಿಸಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಅಗತ್ಯವಿರುತ್ತಿರಲಿಲ್ಲ. ಆದರೆ, ಇಲ್ಲಾಗಿದ್ದು ಮಾತ್ರ ಅಪ್ಪಟ ಅವ್ಯವಹಾರ.
ಈ ಕುರಿತಾಗಿ ಪ್ರತಿಧ್ವನಿಯು KBJLನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಭಾಕರ್ ಚೀನಿ ಅವರ ಪ್ರತಿಕ್ರಿಯೆ ಕೇಳಿದಾಗ, ಈ ವಿಚಾರವು ಈಗಾಗಲೇ ಲೋಕಾಯುಕ್ತ ಅಂಗಳದಲ್ಲಿದೆ. ಅವರು ತನಿಖೆ ನಡೆಸುತ್ತಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಅವ್ಯವಹಾರದ ಕುರಿತು ಕೂಲಂಕುಷವಾದ ತನಿಖೆ ನಡೆಯುವ ಅಗತ್ಯವಿದೆ. ಈಗಾಗಲೇ ಎಂ ಬಿ ಶ್ರೀನಿವಾಸ್ ಎಂಬವರು ಈ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತಹ ಎಲ್ಲಾ ದಾಖಲೆಗಳನ್ನು ಕೂಡಾ ಒದಗಸಲಾಗಿದೆ.
ಒಟ್ಟಿನಲ್ಲಿ, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ನಡೆಸುತ್ತಿರುವವರಿಗೆ ಬಿಸಿ ಮುಟ್ಟಬೇಕಾದ ಅಗತ್ಯವಿದೆ.