ನಾಲ್ಕುವರೆ ದಶಕ ಬಿಜೆಪಿಗಾಗಿ ದುಡಿದು ನಾಲ್ಕು ಬಾರಿ ಆರಿಸಿಬಂದರೂ ಆರಗ ಜ್ಞಾನೇಂದ್ರ ಎಂಬ ಹೆಸರು ಪ್ರಭಾವಿಯಾಗಿ ರಾಜ್ಯಮಟ್ಟದಲ್ಲಿ ಕೇಳಿ ಬರದಿರುವುದಕ್ಕೆ ಕಾರಣ ಪಕ್ಷನಿಷ್ಠೆ ಹಾಗೂ ಶಿವಮೊಗ್ಗದ ಅವಳಿ ರಾಜಕಾರಣಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಕೆಎಸ್ ಈಶ್ವರಪ್ಪ. ರಾಜ್ಯ ರಾಜಕಾರಣದ ಏರಿಳಿತಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಎರವಲು ಬಂದ ಶಾಸಕರ ಹೊರತು ಮೂಲ ಬಿಜೆಪಿಗರ ಹೆಸರು ಕೇಳಿ ಬರುವುದಿಲ್ಲ, ಅಧಿಕಾರ ಅವರ ಕೊಟ್ಟ ಭಿಕ್ಷೆ ಎನ್ನುವಷ್ಟರಮಟ್ಟಿಗೆ ಬಿಜೆಪಿ ತನ್ನೆಲ್ಲಾ ಸಿದ್ಧಾಂತಗಳನ್ನ ಒಪ್ಪಿಕೊಂಡು ಉಘೇ ಎನ್ನುತ್ತಿದೆ. ಹೀಗಿರುವಾಗ ನಾಲ್ಕುವರೇ ದಶಕಗಳ ಕಾಲ ಬಿಜೆಪಿಯನ್ನ ಕಟ್ಟಿದ್ದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಮನಸ್ಸಿನ ಬೇಗುದಿಗೆ ಅರ್ಥ ಇದೆಯಾ? ತೀರಾ ಇತ್ತೀಚೆಗೆ ಮಾಧ್ಯಮದ ಮುಂದೆಯೂ ಬಂದು ತಮ್ಮ ಬಹುಕಾಲದ ನಿರೀಕ್ಷೆಗಳನ್ನ ತೋಡಿಕೊಳ್ಳುತ್ತಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯಾದ ದಿನ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಹೌದು ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಸಾಕಷ್ಟು ದುಡಿದಿದ್ದೇನೆ, ಹಾಗಾಗಿ ನನಗೂ ಸಚಿವ ಸ್ಥಾನವನ್ನ ನೀಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿಕೊಂಡಿದ್ದೇನೆ ಎಂದಿದ್ದರು. ಅದೇ ಮಾತುಗಳನ್ನ ಶಿವಮೊಗ್ಗ ಮಾಧ್ಯಮದವರ ಮುಂದೆ ಶನಿವಾರ ಹೇಳುವಾಗ ಇನ್ನಷ್ಟು ಬೇಸರ ಹಾಗೂ ಅಸಹಾಯಕತೆ ಇದ್ದಂತಿತ್ತು, ಪದೇ ಪದೇ ನಾನು ಮನವಿ ಮಾಡಿಕೊಳ್ಳಲಾಗದು, ಪಕ್ಷಕ ಹಿರಿಯರಾದಿಯಾಗಿ ಎಲ್ಲರಲ್ಲೂ ಮನವಿ ಮಾಡಿದ್ದೇನೆ, ನನಗೆ ಮಂತ್ರಿ ಪದವಿ ನೀಡಿದರೆ ಯಾರೂ ಬೇಸರ ಮಾಡಿಕೊಳ್ಳಲಾರರು ಎಂದರು.
ಆರಗ ಜ್ಞಾನೇಂದ್ರ ಅವರ ರಾಜಕಾರಣ ನೋಡುವುದಾದರೆ ತೀರ್ಥಹಳ್ಳಿ ಎಂಬ ಸಾಹಿತ್ಯ ಸಂಸ್ಕೃತಿ ನಾಡಿನವರು, ರಾಜಕಾರಣ, ಸಾಹಿತ್ಯ, ಪ್ರಕೃತಿ ಸೊಬಗು, ಸಮಾಜವಾದಿ ಹೋರಾಟಗಳಿಗೆ ಹೆಸರಾದ ತೀರ್ಥಹಳ್ಳಿಯಲ್ಲಿ ಹೊಸ ತಲೆಮಾರಿಗೆ ಚಾಚಿಕೊಂಡ ಇಬ್ಬರು ರಾಜಕಾರಣಿಗಳಲ್ಲಿ ಒಬ್ಬರು ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ಹಾಗೂ ಬಿಜೆಪಿಯ ಆರಗ ಜ್ಞಾನೇಂದ್ರ. ಇಬ್ಬರೂ ಪ್ರತಿಸ್ಪರ್ಧಿಗಳು ಹಾಗೂ ಪಕ್ಷ ನಿಷ್ಠರು. ಕಾಂಗ್ರೆಸ್ ಕಿಮ್ಮನೆ ರತ್ನಾಕರ್ ಅವರನ್ನ ಮಂತ್ರಿ ಮಾಡಿ ತನ್ನ ಘನತೆ ಉಳಿಸಿಕೊಂಡರೆ ಬಿಜೆಪಿ ಮಾತ್ರ ಜ್ಞಾನೇಂದ್ರ ಅವರನ್ನ ಗಾಣದೆತ್ತಿನ ತರಹ ದುಡಿಸಿಕೊಳ್ಳುತ್ತಿದೆ. ರಾಜಕಾರಣವನ್ನಷ್ಟೇ ಮಾತನಾಡುವುದಾದರೆ ಬಿಜೆಪಿ ಪಕ್ಷಕ್ಕೆ ಆರಗ ಅವರ ಕೊಡುಗೆ ಅಪಾರ.
ಜ್ಞಾನೇಂದ್ರ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪನವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು ೧೯೮೩ರಲ್ಲಿ, ಅಂದು ತೀರ್ಥಹಳ್ಳಿಯಲ್ಲಿ ನಾಲ್ಕು ಸಾವಿರ ಮತಗಳಿಂದ ಸೋತರು ಆದರೆ ಯಡಿಯೂರಪ್ಪನವರು ಮಾತ್ರ ಶಿಕಾರಿಪುರದಿಂದ ಆರಿಸಿಬಂದು ರಾಜ್ಯರಾಜಕಾರಣದಲ್ಲಿ ಉತ್ತುಂಗಕ್ಕೇರಿದರು, ಮುಂದೆ ೧೯೮೯ರಲ್ಲಿ ಶಿವಮೊಗ್ಗ ಎಂದರೆ ಬಂಗಾರಪ್ಪನವರದ್ದೇ ಹವಾ ಎಂಬಂತಾಗಿತ್ತು, ಬಂಗಾರಪ್ಪನವರನ್ನ ಕಾಂಗ್ರೆಸ್ ಕೂಡ ಪ್ರಶ್ನೆ ಮಾಡುವ ಗೋಜಿಗೆ ಹೋಗದಂತಹ ಕಾಲ ಅದು, ವಿಧಾನಸಭಾ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಯಡಿಯೂರಪ್ಪನವರೂ ಸೋತಿದ್ದರು ಆದರೆ ಆರಗ ಮಾತ್ರ ತೀರ್ಥಹಳ್ಳಿಯಲ್ಲಿ ಕಮಲ ಹಿಡಿದು ತಮ್ಮ ಖದರ್ ತೋರಿಸಿದರು. ಮುಂದೆ ಅವರು ಸೋಲು ಗೆಲುವಿನ ನಡುವೆ ಬಿಜೆಪಿ ಹಿಂದುತ್ವವನ್ನ ಜಾತಿಗೂ ಮಿಗಿಲಾಗಿ ತೀರ್ಥಹಳ್ಳಿಯಲ್ಲಿ ತಳವೂರಿಸಿದರು, ಏಳು ಬೀಳುಗಳ ನಡುವೆ ನಾಲ್ಕೂವರೆ ದಶಕದಲ್ಲಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದಾರೆ.
ಆರಗ ಅವರಿಗೆ ಬಿಜೆಪಿ ಹಿರಿಯ ನಾಯಕರ ಬೆಂಬಲವಿದೆ, ಸಂಘಪರಿವಾರದಿಂದಲೂ ಬೆನ್ನುತಟ್ಟುತ್ತಾರೆ ಆದರೆ ಅದರಿಂದ ಅವರ ರಾಜಕಾರಣಕ್ಕೇನು ಲಾಭವಾಗಿಲ್ಲ, ಬಿಜೆಪಿ ಸಮ್ಮಿಶ್ರ ಸರ್ಕಾರವಿರಲಿ ಅಥವಾ ಸ್ವತಂತ್ರ ಸರ್ಕಾರವಿರಲಿ ಶಿವಮೊಗ್ಗದಿಂದ ಎರಡು ಮೂರು ಸಚಿವ ಸ್ಥಾನಗಳು ಮೀಸಲಾಗಿರುತ್ತಿದ್ದವು, ಬಿಎಸ್ ಯಡಿಯೂರಪ್ಪ ಜತೆ, ಕೆಎಸ್ ಈಶ್ವರಪ್ಪ ಹಾಗೂ ಒಮ್ಮೆ ಡಿಎಚ್ ಶಂಕರಮೂರ್ತಿಯವರಿಗೆ ಸಚಿವ ಸ್ಥಾನಗಳನ್ನ ನೀಡಿ ಇವರನ್ನ ಹಿಂದೆ ತಳ್ಳಲಾಯಿತು. ಈಗಲೂ ಸಹ ಸಿಎಂ ಇಲ್ಲಿನವರೇ ಇದರ ಜೊತೆ ಈಶ್ವರಪ್ಪನವರೂ ಸಹ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ ಹಾಗಾಗಿ ಮೂವರನ್ನ ಒಂದೇ ಜಿಲ್ಲೆಯಿಂದ ಪರಿಗಣಿಸಲು ತೊಡಕಾಗಿದೆ. ಒಟ್ಟಿನಲ್ಲಿ ಆರಗ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನ ಮರೀಚೆಕೆಯಾಗಿಯೇ ಉಳಿಯಲಿದೆ.