ಜ. ಬಿಪಿನ್ ರಾವತ್ ಅವರು ಈ ವರ್ಷಾರಂಭದಲ್ಲಿ ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ (chief of defence staff)ರಾಗಿ ಅಧಿಕಾರ ಸ್ವೀಕರಿಸಿದರು. ಸೈನ್ಯದ ಮೂರೂ ಪಡೆಗಳನ್ನು ಒಂದೇ ಕಾರ್ಯಾಲಯದ ಅಡಿಯಲ್ಲಿ ತರುವುದಲ್ಲದೆ ಇಡೀ ಸೈನ್ಯದ ಸಂರಚನೆಯನ್ನು ಪುನರ್ ರಚಿಸಲಾಯಿತು.
ಸೈನ್ಯದ ಯಾವ ಕಾರ್ಯಾಚರಣೆಯಲ್ಲೂ CDS (chief in defence staff) ನೇರ ಪಾತ್ರ ವಹಿಸುವುದಿಲ್ಲ. ಆದರೆ ಹೊಸ ಕಾಲದ ಯುದ್ಧದಲ್ಲಿ ಗಡಿ ಮತ್ತು ಗಡಿಯ ಒಳಗೆ ಹೆಚ್ಚುತ್ತಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು CDS ರಚಿಸಲಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಕಳೆದ ಹನ್ನೊಂದು ತಿಂಗಳುಗಳು ಪ್ರತಿ ಸೈನಿಕ ಕಾರ್ಯಾಚರಣೆಯ ಕಾರ್ಯತಂತ್ರದಲ್ಲೂ CDS ಪಾತ್ರವಿದೆ. ಲಡಾಖ್ ಪ್ರಾಂತ್ಯದಲ್ಲಿ ಚೀನಾ ಸೈನಿಕರು ಅತಿಕ್ರಮ ಪ್ರವೇಶ ಮಾಡಿದಾಗಲೂ ಬಿಪಿನ್ ರಾವತ್ ಸೈನ್ಯದ ಮೂರೂ ಪಡೆಗಳನ್ನು ಸೇರಿಸಿ ಹಲವು ಬಾರಿ ಸಮಾಲೋಚನೆ ನಡೆಸಿದ್ದರು. ಪಾಂಗಾಂಗ್ ಪ್ರದೇಶದಲ್ಲಿ ಭಾರತೀಯ ವಾಯುಪಡೆ ಮತ್ತು MARCOS ನಿಯೋಜನೆ ಆಗಿರುವುದರ ಹಿಂದೆಯೂ CDS ಇದೆ ಎನ್ನಲಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ವಾರವಷ್ಟೇ CDS ಕಛೇರಿ, ಸೈನ್ಯದ ಕಾರ್ಯತಂತ್ರ, ಗುಪ್ತಚರ ಮತ್ತು ಕಾರ್ಯಾಚರಣೆಯ ರೂಪು ರೇಷೆಯನ್ನು ನಿರ್ಧರಿಸಲು ಉಪ ಮುಖ್ಯಸ್ಥರನ್ನು ನೇಮಕ ಮಾಡಲು ಅನುಮತಿ ನೀಡಿತ್ತು. ಇದರೊಂದಿಗೆ ಸೈನ್ಯದ ಉಪ ಅಧಿಕಾರಿಗೆ (vice chief of army staff) ವರದಿ ಸಲ್ಲಿಸುತ್ತಿದ್ದ ಗುಪ್ತಚರ ಮತ್ತು ಕಾರ್ಯತಂತ್ರ ಪಡೆಯ ನಿರ್ದೇಶಕರು ಇನ್ನು ಮುಂದೆ ವರದಿಯನಗನು ರಕ್ಷಣಾ ಪಡೆಗಳ ಉಪ ಮುಖ್ಯಸ್ಥರಿಗೆ ಸಲ್ಲಿಸಬೇಕಿದೆ. ಲೆ.ಜ. ಪರಮ್ಜಿತ್ ಸಿಂಗ್ ಅವರು ಈಗ ಉಪ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ಹೊಸ ಹುದ್ದೆಯ ಸೃಷ್ಟಿಯು ಸೇನೆಯ ಪುನರ್ರಚನೆಯ ಭಾಗವಾಗಿದ್ದು ಸೇನೆಯ ವಿವಿಧ ನಿರ್ದೇಶನಾಲಯಗಳನ್ನು ವಿಲೀನಗೊಳಿಸಿ, ಮರು ಹಂಚಿಕೆ ಮಾಡಿ ಎಲ್ಲವನ್ನೂ ಒಂದೇ ನಿರ್ದೇಶನಾಲಯದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲಾಗುತ್ತದೆ.
ಮುದ್ರಣ ಮಾಧ್ಯಮ, ಡಿಜಿಟಲ್ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸೇನೆಯ , ಸೈನ್ಯದ ಕಾರ್ಯಾಚರಣೆಯ ಬಗ್ಗೆ ಪ್ರಕಟವಾಗುವ ಮಾಹಿತಿಗಳ ಮೇಲೆ ಕಣ್ಣಿಡಲು ಜನರಲ್ ಇನ್ಫಾರ್ಮೇಶನ್ ವಾರ್ಫೇರ್ನ್ನು ಸೃಷ್ಟಿಸಲಾಗಿದೆ. ಇತ್ತೀಚೆಗಷ್ಟೇ ನಡೆದ ಚೀನಾ ಗಡಿ ನಿಯಂತ್ರಣ ರೇಖೆಯ ಉಲ್ಲಂಘನೆಯಲ್ಲಿ ಮಾಧ್ಯಮಗಳ ಮೂಲಕ ಸೇನೆ ಒಂದು ರೀತಿಯಲ್ಲಿ ಮನೋವೈಜ್ಞಾನಿಕ ಯುದ್ಧ ಸಾರಿತ್ತು. ಚೀನಾದ ಸೇನೆ (people’s liberation army)ಮತ್ತು ಭಾರತೀಯ ಸೇನೆಗಳೆರಡೂ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಿರುವ ಸೈನ್ಯದ ಫೊಟೋ ಮತ್ತು ವಿಡಿಯೋಗಳನ್ನು ಇಂಟರ್ನೆಟ್ ನಲ್ಲಿ ಹರಿಯಬಿಟ್ಟಿದ್ದವು.
CDS ನಾಲ್ಕು ಸ್ಟಾರ್ ಹುದ್ದೆಯಾಗಿದ್ದು ಸೇನೆಯ ಮುಖ್ಯ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದು ರಕ್ಷಣಾ ಸಚಿವಾಲಕ್ಕೆ ಸೇನೆಯ ಮೂರೂ ತುಕಡಿಗಳ ಕುರಿತಾಗಿ ಮಾಹಿತಿ ನೀಡುತ್ತಾರೆ. ಹೀಗಾಗಿಯೇ ಇದು ದೇಶದ ಮಿಲಿಟರಿಯ ಅತ್ಯುನ್ನತ ಮಟ್ಟದ ಹುದ್ದೆಯೆಂದು ಕರೆಸಿಕೊಳ್ಳುತ್ತಿದೆ. ಸರ್ಕಾರದ ಮತ್ತು ಸೇನೆಯ ನಡುವಿನ ಏಕೈಕ ಕೊಂಡಿಯಾಗಲಿದೆ CDS.
ಆದರೆ ಇಂತಹ ಅತ್ಯುನ್ನತ ಹುದ್ದೆಗೆ ಸರ್ಕಾರವು ತನ್ನ ನಿರ್ದೇಶನವನ್ನು ಮಾತ್ರ ಅನುಸರಿಸುವವರನ್ನು ಈ ನೇಮಕ ಮಾಡುವ ಸಂಭವಗಳಿದ್ದು ಅದು ಇಡೀ ಮಿಲಿಟರಿ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ಅಪಾಯವಿದೆ. ಈಗ CDS ಆಗಿ ಆಯ್ಕೆ ಆಗಿರುವ ಬಿಪಿನ್ ರಾವತ್ ಬಗ್ಗೆಯೂ ಇಂತಹ ಆರೋಪಗಳಿವೆ. ಮಿಲಿಟರಿಯ ಸರ್ಕಾರದ ಮುಖವಾಣಿಯಾಗಬಾರದು, ಅದು ಸ್ವತಂತ್ರ ಸಂಸ್ಥೆಯಾಗಿದ್ದು ದೇಶದ ಅಗತ್ಯಗಳಿಗೆ ಸ್ಪಂದಿಸುವುದಷ್ಟೇ ಅದರ ಆದ್ಯತೆಯಾಗಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಭಾರತದಂತಹ ಜನತಂತ್ರ ರಾಷ್ಟ್ರದಲ್ಲಿ ಏಕ ವ್ಯಕ್ತಿಗೆ ಸೇನೆಯ ಪೂರ್ತಿ ಜವಾಬ್ದಾರಿ ವಹಿಸುವುದು ಎಷ್ಟು ಸರಿ? ಈಗಾಗಲೇ ಸೇನೆ ಪ್ರಶ್ನಾತೀತ ಎನ್ನುವ ಭಾವನೆ ದೇಶದೊಳಗೆ ಬೆಳೆಯುತ್ತಿದೆ. CDS ಮೂಲಕ ಪ್ರಜಾಪ್ರಭುತ್ವದ ಭಾರತ ನಿಧಾನವಾಗಿ ಮಿಲಿಟರಿ ಆಡಳಿತದತ್ತ ಸರಿಯುತ್ತಿದೆಯೇನೋ ಅನಿಸುತ್ತದೆ. ಅಧಿಕಾರ ಕೇಂದ್ರೀಕರಣ ಭಾರತದಂತಹ ರಾಷ್ಟ್ರಕ್ಕೆ ಒಳ್ಳೆಯದಲ್ಲ, ಅದು ಸಂವಿಧಾನದ ಮೂಲ ತತ್ವವನ್ನೇ ಧಿಕ್ಕರಿಸಿದಂತಾಗುತ್ತದೆ.