ಕರೋನಾ ಲಾಕ್ ಡೌನ್ ರಜೆಯ ಅವಧಿಯಲ್ಲಿ ಮುಚ್ಚಿದ ಶಾಲೆಗಳೊಂದಿಗೆ ಮಕ್ಕಳನ್ನು ಮಾನಸಿಕವಾಗಿಯಾದರೂ ಬೆಸೆಯುವ ನಿಟ್ಟಿನಲ್ಲಿ ಸರ್ಕಾರ ಟಿವಿ ವಾಹಿನಿಗಳ ಮೂಲಕ ಪಾಠ ಮಾಡುವ ಸೇತುಬಂಧ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಒಂದು ಕಡೆ ಶಾಲಾ ಪಠ್ಯ ಕಡಿತ ಮತ್ತೊಂದು ಕಡೆ ಟಿವಿ, ವಿದ್ಯುತ್ ಕುರಿತ ತೊಡಕುಗಳ ಕಾರಣಕ್ಕೆ ಈ ಯೋಜನೆ ಕೂಡ ವಿವಾದಕ್ಕೀಡಾಗಿದೆ.
ಪಾಠ ಕೇಳಿಸಲು ಮನೆಯಲ್ಲಿ ಟಿವಿಯೇ ಇಲ್ಲದ ಕಡುಬಡವರ ಮಕ್ಕಳಿಗೆ ಈ ಪೂರ್ವತಯಾರಿ ಪಾಠಗಳನ್ನು ಹೇಗೆ ತಲುಪಿಸುತ್ತೀರಿ ಎಂಬ ಪ್ರಶ್ನೆ ಒಂದು ಕಡೆಯಾದರೆ, ಮತ್ತೊಂದು ಕಡೆ ಟಿವಿ ಇದ್ದೂ ವಿದ್ಯುತ್ ಕಡಿತದ ಸಮಸ್ಯೆ ಇರುವ ಹಳ್ಳಿಗಾಡಿನ ಮಕ್ಕಳ ಸ್ಥಿತಿ ಏನು? ಎಂಬ ಪ್ರಶ್ನೆಯೂ ಇದೆ. ಆ ಹಿನ್ನೆಲೆಯಲ್ಲಿಯೇ ತರಗತಿಗಳು ಆರಂಭವಾಗಿ ಹತ್ತು ದಿನಗಳು ಉರುಳಿದರೂ, ಈವರೆಗೂ ಒಂದೂ ತರಗತಿ ಕೇಳಲಾರದ ಗ್ರಾಮೀಣ ಮಕ್ಕಳ ಸಂಖ್ಯೆ ಸಾಕಷ್ಟಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ, ಕೋವಿಡ್-19 ಲಾಕ್ ಡೌನ್ ನಿಂದಾಗಿ ಶಾಲಾ ದಿನಗಳಲ್ಲಿ ಶೇ.50ಕ್ಕೂ ಅಧಿಕ ಕಡಿತವಾದ ಹಿನ್ನೆಲೆಯಲ್ಲಿ ಶಾಲಾ ಪಠ್ಯದಲ್ಲಿ ಕಡಿತ ಮಾಡಲು ಹೋಗಿ ಶಿಕ್ಷಣ ಇಲಾಖೆ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದೆ. ಪ್ರಮುಖವಾಗಿ ಕಡಿತ ಮಾಡಲಾದ ಪಠ್ಯದಲ್ಲಿ ಟಿಪ್ಪು ಸುಲ್ತಾನ್, ಮಹಮ್ಮದ್ ಪೈಗಂಬರ್, ರಾಣಿ ಅಬ್ಬಕ್ಕ ದೇವಿ, ಸಂಗೊಳ್ಳಿ ರಾಯಣ್ಣ, ಜೀಸಸ್ ಕ್ರಿಸ್ತ, ಹೈದರಾಲಿ ಮುಂತಾದವರಿಗೆ ಸಂಬಂಧಿಸಿದ ಪಠ್ಯಗಳೇ ಇವೆ ಎಂಬುದು ಈ ವಿವಾದಕ್ಕೆ ಕಾರಣ. ವಿವಾದ ಭುಗಿಲೇಳುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಸಚಿವರು, ಪಠ್ಯ ಕಡಿತದ ವಿಷಯ ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ. ಆದರೆ, ಅಂತಿಮ ತೀರ್ಮಾನವೇ ಆಗದೆ, ಇಲಾಖೆಯ ವೆಬ್ ತಾಣದಲ್ಲಿ ಪಠ್ಯ ಕಡಿತವಾದ ಪಠ್ಯಕ್ರಮವನ್ನು ಪ್ರಕಟಿಸಿದ್ದು ಕೇವಲ ಅಚಾತುರ್ಯ ಎಂಬ ಸಚಿವರ ಮಾತು ಶಂಕಾಸ್ಪದವಾಗಿದೆ. ಏಕೆಂದರೆ; ಈ ಹಿಂದೆ ಕೂಡ ಸಂವಿಧಾನದ ರಚಿಸಿದ ಅಂಬೇಡ್ಕರ್ ವಿಷಯದಲ್ಲಿ ಕೂಡ ಸಚಿವರ ಇಲಾಖೆ ಇಂತಹದ್ದೇ ‘ಅಚಾತುರ್ಯ’ ಮಾಡಿತ್ತು. ಅಲ್ಲದೇ ಇನ್ನೂ ಹಲವು ಸಂದರ್ಭದಲ್ಲಿ ಇಂತಹ ‘ಅಚಾತುರ್ಯ’ಗಳ ಮೂಲಕ ಶಿಕ್ಷಣ ಇಲಾಖೆ ಸದಾ ಸುದ್ದಿಯಲ್ಲಿದೆ.
ಇಂತಹ ಅಚಾತುರ್ಯಗಳ ಸಾಲಿಗೆ ಇದೀಗ ಮತ್ತೊಂದು ಹೊಸ ಸೇರ್ಪಡೆಯಾಗಿದೆ. ಅದೂ ಕೂಡ ಇದೇ ಸೇತುಬಂಧ ಕಾರ್ಯಕ್ರಮದ ಬೋಧನೆಯ ವಿಷಯದಲ್ಲಿಯೇ ಇಂತಹದ್ದೊಂದು ಜಾಣ ಅಚಾತುರ್ಯ ನಡೆದಿದೆ ಎಂಬುದು ವಿಶೇಷ.
ಹೌದು, ಒಂದು ಕಡೆ ಪಾಠ ಮಾಡಲು ಸಮಯವಿಲ್ಲ ಎಂದು ಪಠ್ಯ ಕಡಿತದ ಮಾತನಾಡುತ್ತಿರುವ ಇಲಾಖೆ ಮತ್ತೊಂದು ಕಡೆ ಪೂರ್ವತಯಾರಿ ಬ್ರಿಜ್ ಕೋರ್ಸುಗಳೆಂದು ನಡೆಸುತ್ತಿರುವ ಸೇತುಬಂಧ ಬೋಧನಾ ತರಗತಿಗಳಲ್ಲಿ ಎಳೆಯ ಮಕ್ಕಳ ಮನಸ್ಸಿನಲ್ಲಿ ಪಠ್ಯದ ಹೊರತಾದ ಹಲವು ಸಂಗತಿಗಳನ್ನು ತುರುಕುವ ಯತ್ನ ಮಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ದಿನದ ಬೋಧನೆಯ ಅಂತ್ಯದಲ್ಲಿ ನೀಡುವ ಮನೆ ಕಲಿಕೆಯ ವಿಷಯದಲ್ಲಿ ಹಲವು ರೀತಿಯಲ್ಲಿ ಬಿಜೆಪಿಯ ಹಿಂದುತ್ವದ ಅಜೆಂಡಾವನ್ನು ತುರುಕಲಾಗುತ್ತಿದೆ. ಧಾರ್ಮಿಕ ತಾರತಮ್ಯ, ಕೋಮು ಭಾವನೆ ಹುಟ್ಟಿಸುವ ಸರಕನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪಠ್ಯ ಕಡಿತದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, “ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ, ದಾಖಲೆಯ, ಸಂಗತಿಯ ಐತಿಹ್ಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರವು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆಯೇ ವಿನಃ ಕೆಡುವುವ ಕೆಲಸ ಮಾಡುವುದಿಲ್ಲ” ಎಂದು ಹೇಳಿದ್ದರು. ಆದರೆ, ಸಚಿವರ ಈ ಮಾತು ಪ್ರಾಯೋಗಿಕವಾಗಿ ಎಷ್ಟರಮಟ್ಟಿಗೆ ವಾಸ್ತವದಲ್ಲಿ ಜಾರಿಗೆ ಬಂದಿದೆ ಎಂಬುದನ್ನು ಅರಿಯಲು ನೀವು ಸೇತುಬಂಧ ಕಾರ್ಯಕ್ರಮದ 8ನೇ ತರಗತಿ ಕನ್ನಡ ಪಠ್ಯದ ಏಳನೇ ದಿನದ ಪಾಠವನ್ನು ಕೇಳಬೇಕು
ಈ ಪಾಠದಲ್ಲಿ ಶಿಕ್ಷಕರ ಬೋಧನೆ ಗುಣಮಟ್ಟ ಮತ್ತು ಪ್ರಸ್ತುತಿಯ ವಿಷಯದಲ್ಲಿ ಯಾವುದೇ ಕೊರತೆ ಇಲ್ಲದೆ, ಅತ್ಯುತ್ತಮ ಮಾದರಿ ಬೋಧನೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ, ತರಗತಿಯ ಅಂತ್ಯದಲ್ಲಿ ನಾಡಿನ ಸಾಧಕರ ಕುರಿತ ಮಲ್ಲಿಕಾರ್ಜುನ ಟಂಕಸಾಲೆ ಎಂಬುವರ ಪರಿಕಲ್ಪನೆಯ ಹಾಡಿನ ಹಿನ್ನೆಲೆಯಲ್ಲಿ ಪರದೆ ಮೇಲೆ ಕಾಣುವ ಚಿತ್ರಗಳು ಮಕ್ಕಳಿಗೆ ಹೇಳುವ ಪಾಠ ಏನು ಎಂಬುದನ್ನು ಶಿಕ್ಷಣ ಇಲಾಖೆಗೆ ಕೇಳಲೇಬೇಕಿದೆ.
‘ಸಾಧನೆ ತೋರಿದ ನಿಮಗೆಲ್ಲಾ ಸಾವಿರ ಸಾವಿರ ಚಪ್ಪಾಳೆ’ ಎಂದು ಆರಂಭವಾಗುವ ಹಾಡಿನಲ್ಲಿ ಮೊದಲಿಗೆ ಗಾಂಧಿ ಮತ್ತು ಅಂಬೇಡ್ಕರ್ ಚಿತ್ರಪಟಗಳೊಂದಿಗೆ ವೀಡಿಯೋ ಸಂಕಲನ ಆರಂಭವಾಗುತ್ತದೆ. ಸುಭಾಶ್ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಪುಟ್ಟರಾಜ ಗವಾಯಿಗಳು,.. ಹೀಗೆ ಹಲವು ಸಾಧಕರ ಚಿತ್ರಗಳು ಬಂದುಹೋಗುತ್ತವೆ. ಆದರೆ, ಆ ನಡುವೆ ಸಾಧಕರ ಪಟ್ಟಿಯಲ್ಲಿ ಕೆಲವು ಧಾರ್ಮಿಕ ನಾಯಕರ, ಧರ್ಮಗುರುಗಳ ಚಿತ್ರಗಳೂ ಬಂದುಹೋಗುತ್ತವೆ. ಬುದ್ಧ, ಬಸವ, ಏಸು, ಗುರುನಾನಕ್ ಚಿತ್ರಗಳು ಮೂಡುತ್ತವೆ. ಆದರೆ, ಅಪ್ಪಿತಪ್ಪಿಯೂ ಈ ಪಟ್ಟಿಯಲ್ಲಿ ಮೊಹಮ್ಮದ್ ಪೈಗಂಬರ್ ಪ್ರಸ್ತಾಪ ಕಾಣಿಸುವುದಿಲ್ಲ. ಹಾಗೇ ಕವಿ-ಸಾಹಿತಿಗಳ ಪಟ್ಟಿಯಲ್ಲಿ ಒಮ್ಮೆ ಕನ್ನಡದ ಎಲ್ಲಾ ಜ್ಞಾನಪೀಠ ಪುರಸ್ಕೃತರ ಚಿತ್ರಗಳು ಒಂದು ಫ್ರೇಮಿನಲ್ಲಿದ್ದರೆ, ಬಿಜೆಪಿ ಬೆಂಬಲಿಗ ಸಾಹಿತಿ ಚಂದ್ರಶೇಖರ ಕಂಬಾರರ ಚಿತ್ರ ಪ್ರತ್ಯೇಕವಾಗಿ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ!
ಹಾಗೇ ಮತ್ತೊಂದು ಆಘಾತಕಾರಿ ಸಂಗತಿ ಎಂದರೆ, ನಾದದ ಸುಧೆ ಹರಿಸಿದ ನಾಯಕರೇ ಅನ್ನೋ ಕಡೆ, ಕನ್ನಡ ನಾಡಿನ ಖ್ಯಾತ ಶಾಸ್ತ್ರೀಯ ಹಾಡುಗಾರರಲ್ಲಿ ಯಾರೊಬ್ಬರ ಚಿತ್ರವೂ ಕಾಣಿಸದು. ಹಾಗೇ ಇದೇ ಸಾಧಕರ ಹಾಡಿನ ಕೊನೆಯ ಭಾಗದ ಹೊತ್ತಿಗೆ ಅಮಿತಾಬ್ ಬಚ್ಚನ್, ರಜನಿಕಾಂತ್, ಲಕ್ಷ್ಮಿ ಮಿತ್ತಲ್, ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿ ಮುಂತಾದವರ ಚಿತ್ರಗಳು ಬಂದುಹೋಗುತ್ತವೆ. ಆ ಸಾಲಿನಲ್ಲಿ ಡಾ ಎಸ್ ರಾಧಾಕೃಷ್ಣನ್ ಮತ್ತು ಮದರ್ ಥೆರೇಸಾ ಅವರ ಚಿತ್ರಗಳಿಗೆ ಮುನ್ನ ಕಾಣಿಸಿಕೊಳ್ಳುವ ಐಎಎಸ್ ಅಧಿಕಾರಿ ಡಾ ಹರ್ಷ ಗುಪ್ತಾ ಚಿತ್ರ ಕುತೂಹಲಕಾರಿಯಾಗಿದೆ. ಹಿರಿಯ ಅಧಿಕಾರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸದಭಿಪ್ರಾಯವಿದ್ದರೂ, ಅವರು ಮಕ್ಕಳ ಪಠ್ಯದಲ್ಲಿ ಸೇರುವ ಮಟ್ಟಿಗೆ ಸಾಧಕರಾಗಿ ಈಗಾಗಲೇ ಗುರುತಿಸಲ್ಪಟ್ಟಿದ್ದಾರೆಯೇ ಎಂಬುದು ಪ್ರಶ್ನೆ.
ಮುಖ್ಯವಾಗಿ ಈಗಾಗಲೇ ಯಾವುದೇ ವಿವಾದಗಳಿಲ್ಲದ, ಸಚ್ಛಾರಿತ್ರ್ಯದ, ಆಕ್ಷೇಪರಹಿತ ಉನ್ನತ ತತ್ವಾದರ್ಶದ ನೂರಾರು ಮಾದರಿಗಳಿರುವಾಗ, ತಮ್ಮ ಬದುಕು- ಸಾಧನೆಯ ದಾರಿಯಲ್ಲಿ ಇನ್ನೂ ಸಾಗಬೇಕಿರುವುದು ಸಾಕಷ್ಟಿರುವ ವ್ಯಕ್ತಿಗಳನ್ನು ಮಕ್ಕಳ ಮುಂದೆ ಸಾಧನೆಯ ಮಾದರಿಗಳಾಗಿ ಇಡುವುದು ತರವೇ? ಯಾರನ್ನು ಸಂಪ್ರೀತಗೊಳಿಸಲು? ಯಾರ ಮೆಚ್ಚುಗೆಗಾಗಿ ಇಂತಹದ್ದನ್ನು ಮಾಡಲಾಗುತ್ತಿದೆ? ಮತ್ತು ಇಂತಹ ಕೆಲಸಗಳಿಂದಾಗಿ ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮಗಳೇನು ಎಂಬುದನ್ನು ಶಿಕ್ಷಣ ಇಲಾಖೆ ಗ್ರಹಿಸಿದೆಯೇ ಎಂಬುದು ಪ್ರಶ್ನೆ.
ಇದೇ ಸೇತುಬಂಧ ಬೋಧನೆಯ 9ನೇ ತರಗತಿಯ 5ನೇ ದಿನದ ತರಗತಿಯ ಪಾಠ ಮಾಡುವ ಶಿಕ್ಷಕರೊಬ್ಬರ ಉಚ್ಛಾರಣೆಯ ದೋಷಗಳು, ಅಪಭ್ರಂಶಗಳನ್ನು ಕೇಳಿದರೆ, ಈ ತರಗತಿಗಳ ಗುಣಮಟ್ಟದ ಮತ್ತೊಂದು ಮುಖ ಅನಾವರಣಗೊಳ್ಳದೇ ಇರದು. ‘ಶಾಲಾ ಶಿದ್ಧತಾ(ಸಿದ್ಧತೆ ಬದಲಿಗೆ)’ ಎಂದೇ ಆರಂಭವಾಗುವ ಆ ಪಾಠದಲ್ಲಿ ಉದ್ದಕ್ಕೂ ಹಲವು ಗೊಂದಲದ ಪದ ಪುಂಜಗಳು (ನಾವಿಂದು ನಾಗರಿಕ, ಶೈಕ್ಷಣಿಕ ಹಾಗೂ ಜಾಗತಿಕ ಮೇಲಾಟದಲ್ಲಿದ್ದೇವೆ), ಅಪಭ್ರಂಶಗಳು (ದುರ್ಗಶಿಂವ) ಕಾಣಿಸಿಕೊಳ್ಳುತ್ತವೆ.
ಇಂತಹ ಪಾಠ-ಪ್ರವಚನಕ್ಕಾಗಿ ನರಗುಂದದ ರಡ್ಡೇರ ನಾಗನೂರಿನಂತಹ ಊರಿನ ಕಸ್ತೂರಿ ಎಂಬ ತಾಯಿ ತನ್ನ ತಾಳಿ ಸರವನ್ನೇ ಮಾರಿ ಮಕ್ಕಳಿಗೆ ಟಿವಿ ಕೊಡಿಸಬೇಕಿತ್ತೆ? ಎಂಬುದನ್ನು ಶಿಕ್ಷಣ ಸಚಿವರು ಕೇಳಿಕೊಳ್ಳಬೇಕಿದೆ.
ಬಹುಶಃ ಡಿಡಿ ಚಂದನದ ಈ ಬ್ರಿಜ್ ಕೋರ್ಸಿನ ಇಂತಹ ಗೊಂದಲ, ಯಡವಟ್ಟುಗಳ ಕಾರಣಕ್ಕಾಗಿಯೇ ಇದೀಗ ಇಂತಹ ಕೆಲವೇ ಮಕ್ಕಳಿಗೆ ಮತ್ತು ಅದರಲ್ಲೂ ನಿರೀಕ್ಷಿತ ಗುಣಮಟ್ಟವಿಲ್ಲದ ಕಲಿಕೆಯ ಕ್ರಮಗಳ ಬದಲಾಗಿ, ನೇರವಾಗಿ ಶಾಲೆಗಳನ್ನು ಪುನರಾರಂಭಿಸುವುದು ಸೂಕ್ತ ಎಂಬ ಮಾತುಗಳು ಗಟ್ಟಿಯಾಗತೊಡಗಿವೆ. ಮಕ್ಕಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿಗಳನ್ನು ನಡೆಸುವುದರಿಂದ ಎಲ್ಲಾ ಮಕ್ಕಳಿಗೆ ಸಮಾನ ಕಲಿಕೆಗೆ ಅವಕಾಶ ಒದಗಿಸಬಹುದು ಎಂಬ ಅಭಿಪ್ರಾಯವೂ ಇದೆ. ಸೇತುಬಂಧ ಕಲಿಕೆಯ ಇಂತಹ ಅವಾಂತರಗಳನ್ನು ಗಮನಿಸಿದರೆ, ಅಂತಹ ವಾದಗಳಲ್ಲಿ ಹುರುಳಿದೆ ಎನಿಸದೇ ಇರದು.ಮಕ್ಕಳ ಆನ್‌ಲೈನ್ ಪಾಠಕ್ಕಾಗಿ ಮಾಂಗಲ್ಯ ಅಡವಿಟ್ಟ ತಾಯಿ