ಪ್ರಚಂಡ ಕೊರೋನಾ ವೈರಸ್ ವ್ಯಾಪಿಸುತ್ತಿರುವ ವೇಗಕ್ಕೆ ಇಡೀ ವಿಶ್ವವೇ ಕಂಗಾಲಾಗಿದೆ. ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಚೀನಾದಲ್ಲಿ ಇಲ್ಲೀವರೆಗೂ 425 ಜನರಿಗೂ ಹೆಚ್ಚು ಮಂದಿ ಅಸುನೀಗಿದ್ದಾರೆ. 20,400 ಜನರಲ್ಲಿ ಸೋಂಕು ಪತ್ತೆಯಾಗಿದೆ. ದಿನದಿಂದ ದಿನಕ್ಕೆ ನೂರಾರು ಜನರು ಸಾಯುತ್ತಲೇ ಇದ್ದಾರೆ. ಸಾವಿರಾರು ಜನರಿಗೆ ಕಾಯಿಲೆ ವ್ಯಾಪಿಸುತ್ತಿದೆ. ಚೀನಾ ಸರ್ಕಾರ ಅದೆಷ್ಟೇ ದಿಟ್ಟ ಕ್ರಮ ಕೈಗೊಂಡರೂ ಸಾವಿನ ಸಂಖ್ಯೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಈಗಾಗಲೇ ಪಕ್ಕದ ಕೇರಳಕ್ಕೆ ಕಾಲಿಟ್ಟಿದ್ದು, ಅಲ್ಲಿನ ಮೂವರಿಗೆ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ.
ಈ ನಡುವೆ ಥಾಯ್ಲೆಂಡ್ ಆರೋಗ್ಯ ಸಚಿವ ಸೋಮವಾರ ಕೊಟ್ಟಿರುವ ಹೇಳಿಕೆ ಅಚ್ಚರಿ ಮೂಡಿಸಿದೆ. ಹೆಚ್ ಐ ವಿ ಹಾಗು ಜ್ವರದ ಚಿಕಿತ್ಸೆ ಕೊಡುವ ಮೂಲಕ ಯಶಸ್ವಿಯಾಗಿ ಕೊರೋನಾ ವೈರಸ್ ದಾಳಿಯನ್ನು ತಡೆಯುವಲ್ಲಿ ಸಫಲರಾಗಿದ್ದೇವೆ ಎಂದಿದ್ದಾರೆ. ಆದರೆ ಹೆಚ್ ಐ ವಿ ವೈರಸ್ಗ ಇಲ್ಲೀವರೆಗೂ ಸೂಕ್ತ ಚಿಕಿತ್ಸೆಯೇ ಇಲ್ಲದಿರುವಾಗ ಯಾವ ಮೆಡಿಸಿನ್ ಬಳಸಿದರು ಎನ್ನುವ ಅನುಮಾನ ಮೂಡಿಸಿದೆ.
ಸೆಗಣಿ ಮತ್ತು ಗೋಮೂತ್ರದಿಂದ ಕೊರೊನಾ ದೂರ
ಈ ನಡುವೆ ಗೋ ಮೂತ್ರ ಮತ್ತು ಸಗಣಿ ಸೇವನೆ ಮಾಡಿದರೆ ಕೊರೊನಾ ವೈರಸ್ನಿಂದ ತಪ್ಪಿಕೊಳ್ಳಬಹುದು ಎಂದು ಹಿಂದೂ ಮಹಾಸಭಾ ಮುಖಂಡ ಹೇಳಿರುವುದು ಅಚ್ಚರಿ ಮೂಡಿಸಿದೆ. ಗೋಮೂತ್ರ ಸೇವನೆ, ಹಾಗು ಸಗಣಿಯನ್ನು ದೇಹಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಕೊರೊನಾ ವೈರಸ್ ದೇಹ ಪ್ರವೇಶ ಮಾಡದಂತೆ ತಡೆಯಬಹುದು. ಗೋವಿನ ಮೂತ್ರ ಅನೇಕ ಖಾಯಿಲೆಗಳಿಗೆ ಮದ್ದು ಎಂದು ಹಿಂದೂ ಮಹಾಸಭಾ ವೇದಿಕೆಯ ಸ್ವಾಮಿ ಚಕ್ರಪಾಣಿ ಮಹಾರಾಜ್ ಹೇಳಿದ್ದಾರೆ.
ಸರ್ಕಾರ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಿ ರೋಗ ನಿಯಂತ್ರಣ ಮಾಡದೆ ಇದ್ದರೆ, ಊರಿಗೆ ಊರೇ ಸ್ಮಶಾನವಾರದೂ ಅಚ್ಚರಿಯೇನಿಲ್ಲ. ಆದರೆ ಕೊರೋನಾ ವೈರಸ್ ಬರುತ್ತಿದ್ದ ಹಾಗೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಶುರುವಾಗಿದೆ. ಮಾಂಸಹಾರಿಗಳಿಗೆ ಕೊರೋನಾ ವೈರಸ್ ದಾಳಿ ಮಾಡುತ್ತದೆ. ಇದನ್ನೆಲ್ಲಾ ತಿಂದರೆ ಕೊರೋನಾ ವೈರಸ್ ಬರುವುದಿಲ್ಲವೇ ಎಂದು ಪ್ರಶ್ನಿಸುತ್ತಾ ಚೀನಾ ಮಾಂಸ ಮಾರುಕಟ್ಟೆಯ ವಿಡಿಯೋ ಹರಿಬಿಡಲಾಗಿದೆ. ಅದರ ಜೊತೆಗೆ ಭಾರತದಲ್ಲಿ ಕೊರೋನಾ ವೈರಸ್ ಓಡಿಸುವ ಔಷಧಿ ಇದೆ. ಇದನ್ನು ಬಳಸಿದ್ರೆ ಕೊರೋನಾ ವೈರಸ್ ಬರುವುದೇ ಇಲ್ಲ ಎಂದು ಕೆಲವೊಂದು ಮೆಸೇಜ್ಗಳು ಹರಿದಾಡುತ್ತಿವೆ.
ಆಯುರ್ವೇದಿಕ್, ಯೂನಾನಿ, ಹೀಗೇ ಒಂದಲ್ಲ ಒಂದು ರೀತಿಯ ಮೆಡೆಸಿನ್ ಬಗ್ಗೆ ಮಾರ್ಕೆಟಿಂಗ್ ಶುರು ಮಾಡಿಕೊಂಡಿದ್ದಾರೆ. ಅಮೃತ ಬಳ್ಳಿ ಮತ್ತು ಇನ್ನೂ ಹಣ್ಣಾಗದ ಪಪ್ಪಾಯಿ ಹೋಳುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಇದರ ನಾಲ್ಕು ಪಟ್ಟು ನೀರು ಹಾಕಿ, ನಾಲ್ಕು ಬೆಳ್ಳುಳ್ಳಿ, ಜೀರಿಗೆ, ಕಾಳುಮೆಣಸು, ಹಾಗೂ ಸ್ವಲ್ಪ ಓಂ ಕಾಳು ಹಾಕಿ ಚೆನ್ನಾಗಿ ಕುದಿಸಿ ಒಂದನೇ ನಾಲ್ಕಾಂಶಕ್ಕೆ ಬರುವ ತನಕ ಕುದಿಸಿ ಕುಡಿದರೆ ಕೊರೋನಾ ವೈರಸ್ ಬರುವುದಿಲ್ಲ ಎನ್ನುವ ಸಂದೇಶಗಳು ಹರಿದಾಡುತ್ತಾ ಇವೆ.
ಆಯುರ್ವೇದಿಕ ವಸ್ತುಗಳ ಬಳಕೆ ಮನುಷ್ಯನ ಆರೋಗ್ಯವನ್ನು ಶಕ್ತಿಯುತ ಮಾಡಬಹುದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಆದರೆ ಇದು ಕೊರೋನಾ ವೈರಸ್ ತಡೆಗಟ್ಟುವ ಬಗ್ಗೆ ಇಲ್ಲೀವರೆಗೂ ಮೈಜ್ಞಾನಿಕವಾಗಿ ಇಲ್ಲೀವರೆಗೂ ಸಾಬೀತಾಗಿಲ್ಲ. ಇಡೀ ವಿಶ್ವದ ವಿಜ್ಞಾನಿಗಳು ಕೊರೋನಾ ವೈರಸ್ ನಾಶ ಮಾಡಬಲ್ಲ ಶಕ್ತಿ ಯಾವುದು ಎಂದು ಪತ್ತೆ ಮಾಡಲು ತಿಣುಕಾಡುತ್ತಿದ್ದಾರೆ.
ಕೊರೋನಾ ವೈರಸ್ಗೆ ಚಿಕಿತ್ಸೆ ಯಾವುದು ಎನ್ನುವುದನ್ನು ಆ ನಂತರ ಯೋಚನೆ ಮಾಡಬಹುದು. ಆದರೆ ಕೇರಳದ ಕಾಸರಗೋಡು ಮಂಗಳೂರಿಗೆ ತುಂಬಾ ಸನಿಹದಲ್ಲಿದೆ. ಎಲ್ಲಾ ವ್ಯವಹಾರಗಳು ಮಂಗಳೂರು ಬಂದರಿನಲ್ಲೇ ಮಾಡುತ್ತಾರೆ. ಹೀಗಾಗಿ ಕಾಯಿಲೆ ಬಹು ಬೇಗ ಹರಡಲಿದೆ. ಇತ್ತ ಚಾಮರಾಜನಗರ, ಮಡಿಕೇರಿಗೂ ಕಾಯಿಲೆ ಹರಡುವ ಭೀತಿ ಹೆಚ್ಚಾಗಿದೆ. ಮತ್ತೊಂದು ಕಡೆ ಹುಬ್ಬಳ್ಳಿಯಲ್ಲಿ ಚೀನಾದಲ್ಲಿ ಕೆಲಸ ಮಾಡುವ ಎಂಜಿನಿಯರ್ ಒಬ್ಬರು ಕೊರೋನಾದಿಂದ ಬಳಲುತ್ತಿರುವ ಶಂಕಿತನಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಮಂಡ್ಯಕ್ಕೆ ಓರ್ವ ವಿದ್ಯಾರ್ಥಿನಿ ಚೀನಾದಿಂದ ವಾಪಸ್ ಆಗಿದ್ದು. ತೀವ್ರ ನಿಗಾ ವಹಿಸಲಾಗಿದೆ ಎನ್ನಲಾಗಿದೆ.
ಒಟ್ಟಾರೆ, ದಿನದಿಂದ ದಿನಕ್ಕೆ ಕೊರೋನಾ ವೈರಸ್ ದಾಳಿಗೆ ಇಲ್ಲಿ ಸಾವು ಆಯಿತು, ಅಲ್ಲಿ ಸಾವು ಆಯಿತು ಎನ್ನುವ ವರದಿಗಳು ಸರ್ವೇ ಸಾಮಾನ್ಯ ಆಗಲಿದೆ. ಯಾವುದಕ್ಕೂ ನೀವು ಹುಷಾರ್ ಆಗಿರಿ. ಸಾರ್ವಜನಿಕ ಸಮಾರಂಭಗಳಿಂದ ದೂರವಿರಿ, ಅನಾಮಿಕ ವ್ಯಕ್ತಿಗಳ ಜೊತೆ ಸಂಭಾಷಣೆ ಮಾಡದಿರಿ. ಹೆಚ್ಚು ಸಮಯ ಮನೆಯಲ್ಲೇ ಇರುವುದು ಸೂಕ್ತ. ಹೊರ ಪ್ರಪಂಚಕ್ಕೆ ಹೋಗುವಾಗ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡಿದರೆ ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿ ಇರಲಿದೆ. ವಾಟ್ಸಪ್ನಲ್ಲಿ ಬರುವ ಸಂದೇಶಗಳೆಲ್ಲವೂ ಸತ್ಯವಲ್ಲ. ಆರೋಗ್ಯ ರಕ್ಷಣೆಗೆ ಬೇಕಾದ ಕ್ರಮ ತೆಗೆದುಕೊಳ್ಳುವ ಅಗತ್ಯತೆ ಇದೆ.