ಜೂನ್ 14, ಬಾಲಿವುಡ್ ಕಂಡ ಪ್ರತಿಭಾನ್ವಿತ ಯುವ ನಟ ತನ್ನ ಮುಂಬೈ ಅಪಾರ್ಟ್ಮೆಂಟ್‌ನಲ್ಲಿ ಅಸಹಜ ಮರಣಹೊಂದಿ ಎರಡು ತಿಂಗಳ ತರುವಾಯವೂ ಆತನ ಸಾವಿನ ಕುರಿತಂತೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಕಾವು ಇನ್ನೂ ತಣ್ಣಗಾಗಿಲ್ಲ. ಮುಂಬೈ ಪೊಲೀಸರು ಹಾಗೂ ಮರಣೋತ್ತರ ವರದಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದರೂ ಸಂವೇದನಾಹೀನರಾಗಿ ಒಂದು ವರ್ಗ ಕೆಲವೊಂದಿಷ್ಟು ಜನರನ್ನು ಹಣಿಯಲು ಸುಶಾಂತ್ ಪ್ರಕರಣವನ್ನು ಬಳಸಿಕೊಂಡಿತು.
ಸುಶಾಂತ್ ಸಾವಿಗೆ ಇನ್ನೊಬ್ಬರನ್ನು ಗುರಿಯಾಗಿಸುವಲ್ಲಿ ನಿರತರಾದವರ ಗುರಿಗೆ ಮೊದಲು ಬಲಿಯಾದದ್ದು ನಿರ್ದೇಶಕ ಕರಣ್ ಜೋಹರ್, ಬಳಿಕ ಸಾಲಿನಲ್ಲಿ ಬಾಲಿವುಡ್ ತಾರೆಯ ಮಕ್ಕಳು. ಆದಿಯಲ್ಲಿ ಸುಶಾಂತ್ ಮರಣಕ್ಕೆ ಬಾಲಿವುಡ್ ನೆಪೋಟಿಸಂ ಕಾರಣವೆಂದು ಬಾಲಿವುಡ್ ತಾರೆಗಳ ಮೇಲೆ ಹೀನಾಯವಾಗಿ ಮುಗಿಬಿದ್ದಿದ್ದರು. ಇದಕ್ಕೆ ಕಂಗನಾ ರಾಣಾವತ್ ಎಂಬ ನಟಿಯೂ ಸಾಥ್ ನೀಡಿ, ಸುಶಾಂತ್ ಸಾವಿನಲ್ಲಿ ತನ್ನ ಪ್ರಸಿದ್ಧಿ ಬೆಳೆಸಿಕೊಂಡಳು. ಸಾಮಾಜಿಕ ಜಾಲತಾಣದ ಸೋಕಾಲ್ಡ್ ನ್ಯಾಯಾಧೀಶರ ಪಾಲಿಗೆ ಅಕ್ಷರಶಃ ʼದೀದಿʼ ಯಾಗಿಬಿಟ್ಟಳು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಳಿಕ ಸುಶಾಂತ್ ಮರಣದ ಉತ್ತರದಾಯಿತ್ವ ಸುಶಾಂತ್ ಮಾಜಿ ಗೆಳತಿ ರಿಯಾ ಚಕ್ರವರ್ತಿಯ ಹೆಗಲಿಗೆ ಹಾಕಲಾಯಿತು. ತನಿಖೆ ಮುಗಿಯುವ ಮುನ್ನವೇ ರಿಯಾಳನ್ನು ಕೊಲೆಗಾತಿ, ಮಾಟಗಾತಿಯೆಂಬಂತೆ ಕೆಲವು ಟ್ರಾಲ್ ಪೇಜ್‌ಗಳು ವಿಕೃತವಾಗಿ ಟ್ರಾಲ್ ಮಾಡಲು ಶುರುಮಾಡಿತು. ತನಿಖೆಯಾಗಿ ಕಾನೂನು ರೀತ್ಯಾ ತೀರ್ಪು ಬರುವ ಮೊದಲೇ ಜನರು ಓರ್ವ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಬಿಂಬಿಸುತ್ತಿರುವುದು, ಮಾನಸಿಕ ಹಿಂಸೆ ನೀಡುತ್ತಿರುವುದು ಸಮಾಜ ಯಾವ ಮಟ್ಟಕ್ಕೆ ವಿಕಾರಗೊಂಡಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. ಕನಿಷ್ಠ ತೀರ್ಪು ಬರುವವರೆಗೂ ಕಾಯುವ ವಿವೇಚನೆಯಿಲ್ಲದ ಜನರ ವಿಕೃತತೆಗಳು ಯಥೇಚ್ಚವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು, ಹಾಗೂ ಮಹಿಳೆಯನ್ನು ದೇವಿಯನ್ನಾಗಿ ಪೂಜಿಸುವ ಭಾರತದ ʼಸೋಕಾಲ್ಡ್ ಸುಸಂಸ್ಕೃತ ಸಮಾಜʼ, ವಿಚಾರಣೆ ಎದುರಿಸುತ್ತಿರುವ ಓರ್ವ ಹೆಣ್ಣನ್ನುಅನಧಿಕೃತವಾಗಿ ಅಪರಾಧಿಯೆಂದೇ ಷರಾ ಬರೆದಿರುವುದನ್ನು ಅರಗಿಸಿಕೊಂಡು ಮಗುಮ್ಮಾಗಿ ಬಿದ್ದಿದೆ. ಕನಿಷ್ಟ ವಿಚಾರಣೆ ಮುಗಿಯುವ ತನಕ ಸಹನೆ ಪಾಲಿಸುವ ಜವಾಬ್ದಾರಿ ಯಾರಿಗೂ ಇದ್ದಂತಿಲ್ಲ. ಹೆಣಗಳ ಮೇಲೆ ಮುಗಿಬೀಳುವ ರಣಹದ್ದುಗಳಂತೆ ರೀಯಾಳ ಮೇಲೆ ಟ್ರಾಲ್ ಪೇಜ್‌ಗಳು, ಸುದ್ದಿ ಚಾನೆಲ್‌ಗಳು ಮುಗಿಬೀಳುತ್ತಿವೆ.
ರಾಜಕೀಯ ಪಕ್ಷಗಳು ಈ ಎಲ್ಲದಕ್ಕೂ ಒಂದು ಹೆಜ್ಜೆ ಮುಂದಿಟ್ಟಿದೆ. ರಾಜ್ಯ- ರಾಜ್ಯದ ನಡುವಿನ ಸಂಘರ್ಷದಂತೆ ಪ್ರಕರಣ ತಿರುವು ಪಡೆದುಕೊಳ್ಳುವವರೆಗೆ ಮೌನವಾಗಿ ನೋಡಿವೆ. ತಾನೇ ಪ್ರಕರಣವನ್ನು ಈ ಆಯಾಮಕ್ಕೆ ತಿರುಚಲು ಅನುವು ಮಾಡಿಕೊಟ್ಟಿದೆ.
ಮುಂಬೈಯನ್ನು ಕೇಂದ್ರೀಕರಿಸುವ ಬಾಲಿವಡ್ ಜಗತ್ತಿನಲ್ಲಿ ಬಿಹಾರ ಮೂಲದ ನಟ ಸುಶಾಂತ್ ತನ್ನ ದಾರುಣ ಅಂತ್ಯ ಕಡುಕೊಂಡದ್ದು ಬಿಹಾರಿಗಳಿಗೆ ತಮ್ಮ ಮನೆ ಮಗನನ್ನೇ ಕಳೆದುಕೊಂಡಂತಹ ನೋವನ್ನುಂಟು ಮಾಡಿತ್ತು. ಮಹಾರಾಷ್ಟ್ರ- ಬಿಹಾರ ಪೊಲೀಸರ ನಡುವಿನ ನಸುಕಿನ ಗುದ್ದಾಟಕ್ಕೂ ಈ ಪ್ರಕರಣ ಕಾರಣವಾಯಿತು. ಇದರ ಜೊತೆ ಜೊತೆಗೇ ಪಶ್ಚಿಮ ಬಂಗಾಳದ ಮೇಲೆಯೂ ಧ್ವೇಷ ಕಾರಲು ಆನ್‌ಲೈನ್ ಟ್ರಾಲ್ ಪೇಜ್‌ಗಳು ಶುರು ಮಾಡಿದವು. ಸುಶಾಂತ್ ಮಾಜಿ ಗೆಳತಿ ರೀಹಾ, ಪಶ್ಚಿಮ ಬಂಗಾಳದ ಮೂಲದವಳಾದ್ದರಿಂದ ಪಶ್ಚಿಮ ಬಂಗಾಳದ ಹೆಣ್ಣುಮಕ್ಕಳಿಂದ ದೂರವಿರಿ ಎಂಬಂತಹ ವಿಕೃತ ಟ್ರಾಲ್‌ಗಳು ಹಾಸ್ಯದ ರೂಪದಲ್ಲಿ ಹರಿದಾಡಿದವು.
ಮಮತಾ ಬ್ಯಾನರ್ಜಿ ಹಾಗೂ ರಿಯಾಳ ಫೋಟೋ ಕಲೇಜ್ ಮಾಡಿ ʼಪಶ್ಚಿಮ ಬಂಗಾಳದ ಹೆಣ್ಣುಗಳಿಂದ ಯಾಕೆ ದೂರವಿರಬೇಕು ಎನ್ನುವುದಕ್ಕೆ ಕಾರಣʼ ಎಂಬ ಒಕ್ಕಣೆಯೊಂದಿಗೆ ಮೀಮ್‌ಗಳು ಹರಿದಾಡಿದವು. ಸಂಬಂಧಗಳಲ್ಲಿ ಮೋಸ ಮಾಡುವುದು ಹೆಣ್ಣು ಎಂಬ ಸ್ಟೀರಿಯೋ ಟೈಪ್ ಮನೋಭಾವನೆ ಇಲ್ಲೂ ಕೆಲಸ ಮಾಡಿತು. ಮಾತ್ರವಲ್ಲದೆ, ಮಹಿಳೆಯರನ್ನು ಕೆಟ್ಟದಾಗಿ ಚಿತ್ರಿಸಲು ಸುಶಾಂತ್ ಸಾವು ಬಳಕೆಯಾಯಿತು. ಸಮಾಜದಲ್ಲಿ ಅಸಹನೆ, ವಿಕೃತ ರೀತಿಯ ಹಾಸ್ಯಗಳಿಗೆ, ಧ್ವೇಷ ಹರಡುವಿಕೆಗೆ ಓರ್ವ ಸೃಜನಶೀಲ ನಟನ ಸಾವು ಯಥೇಚ್ಛ ಬಳಕೆಯಾದದ್ದು ಮಾತ್ರ ವಿಷಾದ.
ಸದ್ಯ ಪ್ರಕರಣ ಸಿಬಿಐ ಮೆಟ್ಟಿಲೇರಿದೆ. ರೀಯಾಳ ವಿರುದ್ಧ ಖಾಸಗೀ ನ್ಯೂಸ್ ಚಾನೆಲ್‌ಗಳು ಪುಂಖಾನುಪುಂಖವಾಗಿ ಆರೋಪಗಳನ್ನು ಹೊರಿಸುತ್ತಿದೆ. ಅರ್ನಾಬ್‌ರಂತಹ ಕೂಗುಮಾರಿ ಪತ್ರಕರ್ತರು ತೀರ್ಪನ್ನೇ ನೀಡಿಯೇ ಬಿಟ್ಟಿದ್ದಾರೆ. ಲೈವ್ ಟೆಲಿಕಾಸ್ಟ್‌ಗೆ ಕರೆದು ಅವಮಾನ ಮಾಡಿ ಕಳಿಸಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡದ್ದೇ ಹೌದಾದರೇ, ಯಾವ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡನೋ ಅದಕ್ಕಿಂತಲೂ ಹೆಚ್ಚು ನೋವು ಆತನ ಸಾವಿನ ಪ್ರತಿಕ್ರಿಯೆಯ ಹೆಸರಿನಲ್ಲಿ ಸಮಾಜ ಕೊಡುತ್ತಿದೆ. ಆತ ಸತ್ತ ಬಳಿಕವೂ ಆತನಿಗೆ ನೆಮ್ಮದಿ ನೀಡದೆ, ಆತನ ಸಾವಿನಿಂದ ಕಂಗನಾರಂತವರು ಹೆಸರು ವೃಧ್ಧಿಸಿದರೆ, ಅರ್ನಾಬ್ ನಂತವರು ತಮ್ಮ ವೀಕ್ಷಕರನ್ನು ಹೆಚ್ಚಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸುಶಾಂತ್ ಕುರಿತಾದ ಕಾರ್ಯಕರ್ಮಗಳಿಗೆ ಹೆಚ್ಚಿನ ಟಿಆರ್‌ಪಿ ಸಿಗುತ್ತಿದೆ. ಈ ವಿಚಾರ ಗೊತ್ತಿದ್ದೇ, ಲಾಭ ಮಾಡಿಕೊಳ್ಳುವ ಏಕೈಕ ಉದ್ದೇಶದಿಂದ ಸುದ್ದಿ ಕೋಣೆಗಳನ್ನು ನಿರ್ಮಿಸಿ ಕೂತಿರುವ ಚಾನೆಲ್‌ಗಳು ಸುಶಾಂತ್ ಸಾವನ್ನು ಹರಿದು ಮುಕ್ಕುತ್ತಿದೆ.
ಸದ್ಯ ಸುಶಾಂತ್ ಅಸಹಜ ಪ್ರಕರಣ ಸಿಬಿಐ ತನಿಖೆಯಲ್ಲಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ 10 ಗಂಟೆಗಳಿಗಿಂತ ಹೆಚ್ಚು ಕಾಲ ರಿಯಾ ಚಕ್ರವರ್ತಿಯನ್ನು ಸಿಬಿಐ ವಿಚಾರಣೆ ನಡೆಸಿದೆ. ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ಸಿಬಿಐ ತಂಡವು ರಿಯಾ ಸಹೋದರ ಶೋಯಿಕ್ ಚಕ್ರವರ್ತಿಯ ಹೇಳಿಕೆಯನ್ನು ದಾಖಲಿಸಿದೆ. ಸುಶಾಂತ್ ರಜಪೂತ್‌ನ ಫ್ಲಾಟ್‌ಮೇಟ್ ಸಿದ್ಧಾರ್ಥ್ ಪಿಥಾನಿ, ಅಡುಗೆ ನೀರಜ್ ಸಿಂಗ್ ಮತ್ತು ಸಹಾಯಕ ದೀಪೇಶ್ ಸಾವಂತ್ ಇತರರನ್ನು ಉನ್ನತ ಮಟ್ಟದ ಪ್ರಕರಣದ ತನಿಖೆಯ ಭಾಗವಾಗಿ ಪ್ರಶ್ನಿಸಿದೆ. ರಜಪೂತ ಚಾರ್ಟರ್ಡ್ ಅಕೌಂಟೆಂಟ್ ಸಂದೀಪ್ ಶ್ರೀಧರ್ ಮತ್ತು ಅಕೌಂಟೆಂಟ್ ರಜತ್ ಮೇವತಿ ಅವರ ಹೇಳಿಕೆಗಳನ್ನು ಈಗಾಗಲೇ ಸಿಬಿಐ ತನಿಖಾ ತಂಡ ದಾಖಲಿಸಿದೆ. ಈ ಪ್ರಕರಣದ ʼತೀರ್ಪುʼ ನ್ಯಾಯಾಲಯವು ವಿಚಾರಣೆಯ ನಂತರ ನೀಡಲಿದೆ.