ಇಡೀ ಭಾರತೀಯ ಚಿತ್ರರಂಗವನ್ನೇ ಕಂಗೆಡಿಸಿಬಿಟ್ಟ ಬಾಲಿವುಡ್ ಅಂಗಳದ ಸ್ಫುರದ್ರೂಪಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಕುರಿತಾದ ಗೊಂದಲಗಳು ಇನ್ನೂ ನಿಂತಿಲ್ಲ. ರಾ ಏಜೆಂಟ್ ಒಬ್ಬರು ಕಳೆದ ವಾರವಷ್ಟೇ ಸುಶಾಂತ್ ಸಿಂಗ್ ಸಾವಿನ ಹಿಂದೆ ಬಾಲಿವುಡನ್ನು ನಿಯಂತ್ರಿಸುತ್ತಿದ್ದ ಭೂಗತ ಲೋಕ ಕೈವಾಡವಿದೆಯೆಂದು ಆರೋಪಿಸದ್ದರು. ತಮ್ಮ ಆರೋಪದಲ್ಲಿ ಮುಂಬೈಯಲ್ಲಿರುವ ಬಾಲಿವುಡ್‌ನ್ನು ದುಬೈನಲ್ಲಿ ಕುಳಿತಿರುವ ಡಾನ್‌ಗಳು ಆಳುತ್ತಿದ್ದಾರೆ ಎಂದಿದ್ದರು.
ಅದುವರೆಗೂ ಬಾಲಿವುಡ್ ಸ್ವಜನ ಪಕ್ಷಪಾತದ ಕುರಿತು ಎದ್ದಿದ್ದ ಚರ್ಚೆ ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡಿದೆ. ಇದು ಸಿಬಿಐ ತನಿಖೆ ನಡೆಯಬೇಕೆಂಬ ಕೂಗಿಗೆ ಇನ್ನಷ್ಟು ಬಲ ಬಂದಿದೆ. ಪಪ್ಪು ಯಾದವ್ ಎಂಬವರು ಈ ಕುರಿತು ಅಮಿತ್ ಷಾಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿತ್ ಷಾ, ನಿಮ್ಮ ಕೋರಿಕೆಯನ್ನು ಸಂಬಂಧ ಪಟ್ಟ ಇಲಾಖೆಗೆ ವರ್ಗಾಯಿಸಿದ್ದೇವೆ ಎಂದಿದ್ದಾರೆ.
ಇನ್ನು ರಾಜ್ಯ ಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಈ ಕುರಿತು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ “ನನಗೆ ಲಭಿಸಿರುವ ಮೂಲಗಳ ಪ್ರಕಾರ ಬಾಲಿವುಡ್‌ನ ಕೆಲವು ಮಂದಿ, ಸುಶಾಂತ್ ಸಿಂಗ್ ರಜಪೂತ್‌ರ ಸಾವನ್ನು ಆತ್ಮಹತ್ಯೆಯೆಂದೇ ಮುಚ್ಚಿಹಾಕಲು ಪೋಲಿಸರಿಗೆ ದುಬೈಯಲ್ಲಿರುವ ಡಾನ್‌ಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ”. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಕೋರಿದ್ದಾರೆ.
These 2 letters of @AmitShah reply to @pappuyadavjapl for his CBI enquiry demand & @Swamy39 requesting @narendramodi for CBI enquiry, are big steps towards our main demand i.e CBI enquiry fr SSR.
Thnku both of them & @ishkarnBHANDARI too for helping us.#CBIForSSRHomicideCase pic.twitter.com/7tGPCRBJP0
— Raj GanGwar (@CONS_RAJ184) July 15, 2020
ಅದಾಗಲೇ ಹನ್ನೊಂದು ಸಿನೆಮಾಗಳಲ್ಲಿ ನಟಿಸಿ ಬಾಲಿವುಡ್ ನ ಖಾನ್, ಬಚ್ಚನ್, ಕಪೂರ್ ಗಳ ಮುಂದೆ ತನ್ನದೇ ಆದ ಹೆಸರು ಮಾಡಿಕೊಂಡ ಸುಶಾಂತ್ ಸಿಂಗ್ ರಜಪೂತ್, ತನ್ನ ವಿಭಿನ್ನ ಶೈಲಿಯ ನಟನೆ, ನೃತ್ಯದ ಮೂಲಕವೂ ಗಮನಸೆಳೆದಿದ್ದರು. ಆದರೆ ಕಳೆದ ಜೂನ್ 14 ರ ಭಾನುವಾರ ಮಧ್ಯಾಹ್ನ ಏಕಾಏಕಿ ತನ್ನ ಮುಂಬೈಯ ಬಾಂದ್ರಾದ ಮನೆಯಲ್ಲಿ ನೇಣಿಗೆ ಕೊರಳೊಡ್ಡಿರುವ ಮಾಹಿತಿ ಹೊರ ಬೀಳುವಂತೆ ಬಾಲಿವುಡ್ ಮಾತ್ರವಲ್ಲದೇ, ಭಾರತೀಯ ಚಿತ್ರರಂಗವೇ ಆಘಾತ ವ್ಯಕ್ತಪಡಿಸಿತ್ತು. ಇನ್ನೂ 34 ರ ಹರೆಯದ ನಟ ಸುಶಾಂತ್ ಯಾವ ಕಾರಣಕ್ಕಾಗಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡರು ಅನ್ನೋದು ಚರ್ಚೆಗೆ ಕಾರಣವಾಗಿತ್ತು.. ಆತನ ಮಾಜಿ ಮೆನೇಜರ್ ದಿಶಾ ಸಾಲಿಯಾನ್ ಕೂಡಾ ಕೆಲವೇ ದಿನಗಳ ಹಿಂದಷ್ಟೇ ಮುಂಬೈನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಅದಾದ ಬಳಿಕ ಸುಶಾಂತ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದಕ್ಕೊಂದು ತಾಳೆ ಹಾಕುವ, ಸಂಬಂಧ ಕಲ್ಪಿಸುವ ಕೆಲಸ ಕೂಡಾ ನಡೆದಿತ್ತು. ಆದರೆ ಅದೆಲ್ಲ ಎಷ್ಟರ ಮಟ್ಟಿಗೆ ಸರಿ ಅನ್ನೋದು ಇನ್ನೂ ತನಿಖೆಯಿಂದ ಹೊರಬೀಳಬೇಕಷ್ಟೇ.
ಆದರೆ ಸುಶಾಂತ್ ಕಳೆದ ಕೆಲವು ಸಮಯದಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ಸುಶಾಂತ್ ಸ್ನೇಹಿತರ ಕಡೆಯಿಂದ ಹೊರಗೆ ಬಿದ್ದಿತ್ತು. ಆದರೆ ಅದಕ್ಕೂ ಮೀರಿ ಬಾಲಿವುಡ್ ಅಂಗಳದಲ್ಲಿ ವಿಭಿನ್ನ ಚರ್ಚೆಗಳು ಆರಂಭವಾಗಿತ್ತು. ಮೂಲತಃ ಬಿಹಾರ ರಾಜ್ಯದಿಂದ ಮುಂಬೈಗೆ ಬಂದಿದ್ದ ಸುಶಾಂತ್ ನನ್ನು ʼಬಾಲಿವುಡ್ ಫ್ಯಾಮಿಲಿʼ ಒಪ್ಪಿಕೊಂಡಿರಲಿಲ್ಲ ಅನ್ನೋದಾಗಿ ಚರ್ಚೆಗಳು ಎದ್ದಿದ್ದವು. ಟ್ವಿಟ್ಟರ್ ನಲ್ಲಿ #boycottbollywood ಎಂಬ ಹ್ಯಾಷ್ ಟ್ಯಾಗ್ ಮೂಲಕ ಹಿಂದಿ ಚಿತ್ರರಂಗದ ಸ್ಥಾಪಿತ ಹಿತಸಕ್ತಿಯ ವಿರುದ್ಧ ಹರಿಹಾಯ್ದಿದ್ದರು. ಟಾಪ್ ಟ್ರೆಂಡಿಂಗ್ ನಲ್ಲಿ ಕಾಣಿಸಿಕೊಂಡ ಈ ಟ್ವೀಟ್, ಟ್ವಿಟ್ಟರ್ ನಲ್ಲಿ ಸುಶಾಂತ್ ಸಾವಿನ ಸುದ್ದಿ ತಿಳಿದೂ ಕೇವಲ ಟ್ವೀಟ್ ನಲ್ಲಷ್ಟೇ ಸಂತಾಪ ಸೂಚಿಸಲು ಸೀಮಿತರಾದ ಖ್ಯಾತ ನಟರ ವಿರುದ್ಧವೂ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದು ಕೇವಲ ಜನರ ಅಭಿಪ್ರಾಯಕ್ಕಷ್ಟೇ ಸೀಮಿತವಾಗಿರಲಿಲ್ಲ. ಬಾಲಿವುಡ್ ನಟಿ ಕಂಗನಾ ರಣಾವುತ್, ನಟ ಗುಲ್ಶನ್ ದೇವಯ್ಯ ಅವರ ಹೇಳಿಕೆಯಿಂದ ಇನ್ನಷ್ಟು ಮಹತ್ವ ಪಡೆದುಕೊಂಡಿತ್ತು. ಮೊದಲಿಗೆ ನಟಿ ಮೀರಾ ಚೋಪ್ರಾ, ಸುಶಾಂತ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದ ಬರಹ ಸಾಕಷ್ಟು ಚರ್ಚೆಗೆ ಬಂದಿತ್ತು. ಅವರು ಉಲ್ಲೇಖಿಸಿದ್ದ ಅಂಶಗಳು ಬಾಲಿವುಡ್ ನ ಇನ್ನೊಂದು ಮುಖವನ್ನ ಬಯಲು ಮಾಡುವಂತಿತ್ತು. ಬಾಲಿವುಡ್ ದಿಗ್ಗಜ ಕುಟುಂಬಗಳು ಅದ್ಯಾವ ಪರಿಯಾಗಿ ಸುಶಾಂತ್ ನನ್ನ ದೂರವಿಟ್ಟಿತ್ತು ಅನ್ನೋದನ್ನು ಅವರು ಟ್ವೀಟ್ ನಲ್ಲಿ ಸೂಚ್ಯವಾಗಿ ತಿಳಿಸಿದ್ದರು. ಮಾತ್ರವಲ್ಲದೇ “ಯುವ ನಟರ ಒಂದು ಸಿನೆಮಾ ಫ್ಲಾಪ್ ಆದರೂ ಅವರನ್ನ ಅಸೃಶ್ಯರಂತೆ ಕಾಣಲು ಆರಂಭಿಸುತ್ತಾರೆ” ಎಂದು ಬರೆಯುವ ಮೂಲಕ ಮೀರಾ ಚೋಪ್ರಾ ಬಾಲಿವುಡ್ ನಲ್ಲಿರುವ ಪಕ್ಷಪಾತವನ್ನ ತೆರೆದಿಟ್ಟಿದ್ದರು. ಅಲ್ಲದೇ ಇಲ್ಲಿ “ಹೊರಗಿನವರು ಹೊರಗಿನಂತೆಯೇ ಇರಬೇಕಾಗುತ್ತದೆ” ಎಂದೂ ಬರೆದಿದ್ದರು. ಕೊನೆಯದಾಗಿ ಟ್ವೀಟ್ ನಲ್ಲಿ ಪೋಸ್ಟ್ ಮಾಡುವ ಹೊತ್ತಿಗೆ ಅದಕ್ಕೊಂದು ಒಕ್ಕಣೆಯನ್ನೂ ನೀಡಿದ್ದರು. “ಇಡೀ ಸಿನೆಮಾ ಇಂಡಸ್ಟ್ರಿ ಪರವಾಗಿ ನಾನು ಕ್ಷಮೆಯಾಚಿಸುವುದಾಗಿ” ತಿಳಿಸಿದ್ದರು.
ಇದೇ ಟ್ವೀಟ್ ಅನ್ನು ಉಲ್ಲೇಖಿಸಿ ಬೆಂಗಳೂರು ಮೂಲದ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಕೂಡಾ ಟ್ವೀಟ್ ಮಾಡಿದ್ದು ಭಾರೀ ಗಮನಸೆಳೆದಿತ್ತು. “ಬಾಲಿವುಡ್ ಅನ್ನೋದು ಒಂದು ಕುಟುಂಬವೇ ಅಲ್ಲ. ಹಾಗೇನಾದರೂ ಅಂದುಕೊಂಡರೆ ಅದೇ ಒಂದು ಸಮಸ್ಯೆ. ʼಬಾಲಿವುಡ್ʼ ಅನ್ನೋದು ಕೇವಲ ನಮ್ಮ ಕರ್ಮಭೂಮಿಯಷ್ಟೇ” ಎಂದು ಬರೆದುಕೊಂಡಿದ್ದರು. #boycottbollywood ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ ಈ ಟ್ವೀಟ್ ನೂರಾರು ಬಾರಿ ರೀಟ್ವೀಟ್ ಆಗಿತ್ತು.
ಇನ್ನು ವೀಡಿಯೋ ಮೂಲಕ ಸುಶಾಂತ್ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಾಲಿವುಡ್ ನಟಿ ಕಂಗನಾ ರಣಾವುತ್, ಇದೊಂದು ಪೂರ್ವನಿಯೋಜಿತ ಕೊಲೆ ಎಂದೇ ಆರೋಪಿಸಿದ್ದರು. ಸುಶಾಂತ್ ತನ್ನ ಚಿತ್ರದ ಪ್ರಚಾರ ಸಮಯದಲ್ಲಿ ನೀಡಿದ್ದ ಹೇಳಿಕೆಯನ್ನೇ ಉಲ್ಲೇಖಿಸಿ ಮಾತನಾಡಿದ್ದ ಕಂಗನಾ, “ಅವರ ಸಿನೆಮಾಗಳು ಪ್ರಶಸ್ತಿ ಪಡೆದಿದ್ದರೂ, ಅವರಿಗೆ ಹೆಚ್ಚಿನ ಮನ್ನಣೆ ನೀಡಲಿಲ್ಲ. ಸಿನೆಮಾ ಇಂಡಸ್ಟ್ರಿ ಅವರನ್ನ ಎಂದೂ ನಮ್ಮವರು ಅನ್ನೋ ಹಾಗೆ ಸ್ವೀಕರಿಸಿದ್ದಿಲ್ಲ” ಎಂದಿದ್ದರು. “ಅಲ್ಲದೇ ಪತ್ರಕರ್ತರೂ ಆತನನ್ನು ತುಚ್ಛವಾಗಿ ಬರೆದು, ಆತನನ್ನು ಮಾನಸಿಕ ರೋಗಿ, ವ್ಯಸನಿ ಎಂದೆಲ್ಲಾ ಬರೆದಿತ್ತು. ಆದರೆ ಸಂಜಯ್ ದತ್ ವ್ಯಸನಗಳು ನಿಮಗೆ ಇಷ್ಟವಾಗುವುದೇಕೆ?” ಎಂದು ನೇರವಾಗಿ ಪ್ರಶ್ನಿಸಿದ್ದರು.

ಇನ್ನೂ ಸೆಲೆಬ್ರಿಟಿಗಳ ಹೇರ್ ಸ್ಟೈಲಿಸ್ಟ್ ಸಪ್ನಾ ಭವಾನಿ ಕೂಡಾ ಸಾಮಾಜಿಕ ಜಾಲತಾಣದ ಮೂಲಕ ಸುಶಾಂತ್ ಸಿಂಗ್ ಜೊತೆ ಬಾಲಿವುಡ್ ಇಂಡಸ್ಟ್ರಿ ನಿಲ್ಲದೇ ಇರೋ ಕುರಿತು ಪ್ರಶ್ನಿಸಿ, “ಇಲ್ಲಿ ಯಾರೊಬ್ಬರೂ ನಿನ್ನ ಗೆಳೆಯರಿಲ್ಲ.. ಸುಶಾಂತ್” ಅಂತಾ ಬರೆದುಕೊಂಡಿದ್ದರು. ನಟ ಅನುಭವ್ ಸಿನ್ಹಾ, ನಿರ್ಮಾಪಕ ನಿಖಿಲ್ ದ್ವಿವೇದಿ ಕೂಡಾ ಬಾಲಿವುಡ್ ನೊಳಗೆ ನಡೆಯುತ್ತಿರುವ ತಾರತಮ್ಯದ ಕುರಿತು ಟಾರ್ಗೆಟ್ ಮಾಡಿ ಟ್ವೀಟ್ ಮಾಡಿದ್ದರು.
ಇನ್ನು ಸಿನೆಮಾ ಸೆಟ್ ನಲ್ಲಿ ಸುಶಾಂತ್ ಸಿಟ್ಟಿಗೇರುತ್ತಿದ್ದರು ಹಾಗೂ ದುರ್ವರ್ತನೆ ಬಗ್ಗೆ ಸಲ್ಮಾನ್ ಖಾನ್ ನಂತಹ ನಾಯಕ ನಟರೂ ದೂರಿದ್ದರು. ಆದ್ದರಿಂದ ಬಾಲಿವುಡ್ ನ್ನು ಆಳುವ ದೊಡ್ಡ ದೊಡ್ಡ ಬ್ಯಾನರ್ ಗಳಡಿ ಸುಶಾಂತ್ ಗೆ ಅವಕಾಶವಿಲ್ಲ ಅನ್ನೋ ಸುದ್ದಿಯೂ ಈ ವರುಷದಾರಂಭದಲ್ಲಿ ಹರಿದಾಡಿತ್ತು. ಆದರೆ ಜನಸಾಮಾನ್ಯರ ಹಾಗು ಅಭಿಮಾನಿಗಳ ಜೊತೆ ಬೇರೆ ನಟರಂತೆ ಭಾರೀ ಅಂತರ ಕಾಯ್ದುಕೊಳ್ಳದೆ, ತುಂಬಾ ಆತ್ಮೀಯತೆಯಿಂದ ವರ್ತಿಸುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ನಿಜಕ್ಕೂ ಸಿನೆಮಾ ಇಂಡಸ್ಟ್ರಿಯಲ್ಲಿ ಹಾಗೆ ಇದ್ದರೇ ಅನ್ನೋದು ಇನ್ನೂ ಗೊತ್ತಾಗಿಲ್ಲ. ಈ ಮಧ್ಯೆ ಸಾವಿನ ಕುರಿತು ಸುಶಾಂತ್ ಹುಟ್ಟೂರು ನಿವಾಸಿಗಳಾದ ಬಿಹಾರ ರಾಜ್ಯದ ಮಂದಿ ತನಿಖೆಯನ್ನ ಸಿಬಿಐ ಗೆ ವಹಿಸುವಂತೆ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ʼಎಂಎಸ್ ಧೋನಿ: ದಿ ಅನ್ ಟೋಲ್ಡ್ ಸ್ಟೋರಿʼ, ʼಪಿಕೆʼ ಸಿನೆಮಾಗಳಲ್ಲಿನ ಅವರ ನಟನೆ ಯಾವತ್ತೂ ಮರೆಯುವಂತದ್ದಲ್ಲ. ʼಧೋನಿ…ʼ ಸಿನೆಮಾವಂತೂ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿತ್ತು. ಈ ಮೂಲಕ ಭರವಸೆಯ ಹಾಗೂ ಭವಿಷ್ಯದ ನಾಯಕನಾಗಿ ಬೆಳೆಯುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ಸಾವು ಬಾಲಿವುಡ್ ‘ಮಾಫಿಯಾ’ ಪ್ರೇರಿತವೇ ಅನ್ನೋದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ ಅಷ್ಟೇ..