ಅಗ್ನಿಶಾಮಕದಳದ ಸಿಬ್ಬಂದಿಗಳು ಇಂಗ್ಲೆಂಡಿನಾದ್ಯಂತ ಸುಮಾರು 20ಕ್ಕೂ ಹೆಚ್ಚಿನ 5G ಟವರ್‌ಗಳಿಗೆ ಹಚ್ಚಿದ್ದ ಬೆಂಕಿ ನಂದಿಸಿದ್ದಾರೆಂದು ವರದಿಯಾಗಿದೆ. ಹೊಸ ತಲೆಮಾರಿನ 5G ಟವರ್ ಗಳಿಂದಾಗಿ ಕರೋನಾ ಸೋಂಕು ಈ ಮಟ್ಟಿಗೆ ಹರಡಿದೆಯೆಂಬ ವದಂತಿ ಹರಿದಾಡುತ್ತಿರುವುದು ಈ ಘಟನೆಯ ಹಿಂದಿನ ಕಾರಣವೆಂದು ಪ್ರಾಥಮಿಕ ವರದಿಗಳು ಹೇಳಿವೆ. ಯುರೋಪಿನಾದ್ಯಂತ 5G ಟವರ್ ನಿಂದಾಗಿ ಕರೋನಾ ಸೋಂಕು ಹರಡುತ್ತದೆಯೆಂಬ ವದಂತಿ ಹರಿದಾಡುತ್ತಿದೆ. ಕೆಲವು ಸಮೀಕ್ಷೆಗಳ ಪ್ರಕಾರ ಯುರೋಪಿನಲ್ಲಿ ಕರೋನಾ ಸಂಬಂಧಿತ ಹರಡಿದ ವದಂತಿಗಳಲ್ಲಿ ಸದ್ಯ ಈ ವದಂತಿಯೇ ವ್ಯಾಪಕವಾಗಿ ಹರಿದಾಡಿದ್ದು ಈಗಾಗಲೇ ನೆದರ್ಲ್ಯಾಂಡ್, ಬೆಲ್ಜಿಯಂನಲ್ಲಿ ಕೂಡಾ ಸೆಲ್ ಟವರ್ ಗಳು ದಾಳಿಗೆ ಈಡಾಗಿದೆ. ಈ ವದಂತಿಯು ಸಂಪೂರ್ಣ ಸುಳ್ಳಾಗಿದ್ದು ಕೋವಿಡ್-19 ಕರೋನಾ ವೈರಸ್ sars-CoV-2 ನಿಂದಾಗಿ ಹರಡುತ್ತದೆ. ಸೆಲ್ ಟವರಿನಿಂದ ರೋಗ ಹರಡುವುದಾಗಿ ಜನರು ಹೇಗೆ ನಂಬಿದ್ದಾರೆ ಅನ್ನುವುದೆ ದೊಡ್ಡ ಪ್ರಶ್ನೆಯಾಗಿದೆ.
ವೈರಸ್ಸನ್ನು ಹರಡುತ್ತದೆ ಅನ್ನುವುದನ್ನು ವಿವರಿಸುವ ಹಲವಾರು ಅನಧಿಕೃತ ಸಿದ್ಧಾಂತಗಳಿವೆ. ಆದರೆ ಒಂದೇ ಒಂದು ಸಿದ್ಧಾಂತವು ಹರಡುವಿಕೆಯ ಕಾರಣ ಮತ್ತು ಪರಿಣಾಮವನ್ನು ತರ್ಕಬದ್ದವಾಗಿ ವಿವರಿಸುವುದಿಲ್ಲ. ಈ ಎಲ್ಲಾ ಸಿದ್ದಾಂತಗಳೂ ಕೇವಲ ಭಯ ಹಾಗೂ ಅಜ್ಞಾನದಿಂದ ಹುಟ್ಟಿಕೊಂಡ ಸಿದ್ದಾಂತಗಳು. ಭೂಮಿಯಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದನ್ನು ತಡೆಯಲು ಜಗತ್ತಿನ ಪ್ರಭಾವಿಗಳು ಸೇರಿ ಮಾಡಿದ ತಂತ್ರವೆಂದು ಒಂದು ಸಿದ್ದಾಂತವು ಹೇಳುತ್ತಿದೆ. 5G ಸೆಲ್ ಟವರ್ ಗಳು ಹೊರಡಿಸುವ ತರಂಗವು ಮನುಷ್ಯರ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಹಾಗಾಗಿ ಕರೋನಾ ಸೋಂಕಿಗೆ ಸುಲಭಕ್ಕೆ ತುತ್ತಾಗುತ್ತಿದ್ದಾರೆ ಎಂದು 5G ಸೆಲ್ ಟವರ್ ಗಳು ಹಾಗೂ ಸೋಂಕಿತರ ಸಾಂದ್ರತೆಯನ್ನು ಉದಾಹರಿಸಿ ಯೂಟ್ಯೂಬ್ ಲ್ಲಿ ವಿಡಿಯೊಗಳನ್ನು ಬಿಟ್ಟು ವದಂತಿಗಳು ಹರಡಲಾಗುತ್ತಿದೆ. ಆದರೆ ಸೆಲ್ ಟವರ್ ಗಳು ಹೊರಸೂಸುವ ತರಂಗಗಳಿಂದ ಮನುಷ್ಯರ ರೋಗ ನಿರೋಧಕ ಶಕ್ತಿ ಕುಗ್ಗುತ್ತವೆಂಬುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳನ್ನು ಅವರು ನೀಡುವುದಿಲ್ಲ. ಇಂಗ್ಲೆಂಡಿನ 20 ಪೌಂಡಿನ ನೋಟಿನಲ್ಲಿ 5G ಟವರ್ ಗಳು ವೈರಸ್ಸನ್ನು ಹರಡುವುದನ್ನು ಸೂಚಿಸಲಾಗಿದೆಯೆಂಬ ವದಂತಿ ಕಳೆದ ಫೆಬ್ರವರಿಯಿಂದ ಹರಿದಾಡುತ್ತಿದ್ದು ಜನರು ಅದನ್ನು ಶಕುನವೆಂದು ನಂಬಿದ್ದಾರೆ. ವೈರಾಲಜಿ ಅಧ್ಯಯನ ಕೇಂದ್ರದ ವಿವರಣೆಗಿಂತ ಸರಳವಾಗಿ ವದಂತಿ ಹರಡುವವರು ನಂಬುವಂತೆ ವಿವರಣೆಗಳು ಕೊಡುವುದರಿಂದ ಜನರು ಸುಲಭವಾಗಿ ಅದನ್ನು ನಂಬುತ್ತಿದ್ದಾರೆ.
ಕರೋನಾ ಸೋಂಕಿನ ಕುರಿತು ಜನರು ಆಧಾರರಹಿತ ವದಂತಿಗಳನ್ನು ಜನರ ನಡುವೆ ಹರಡಲಾಗುತ್ತಿದೆ. ಸೋಂಕು ಹರಡದಂತೆ ತಡೆಗಟ್ಟಲು ಎಲ್ಲಾ ಕಡೆ ಲಾಕ್ಡೌನ್ ಘೋಷಿಸಿದರಿಂದ ಕೆಲಸವಿಲ್ಲದೆ ಮನೆಯಲ್ಲಿಯೆ ಕುಳಿತು ಹತಾಷರಾದ ಜನ ಕರೋನಾದ ಕುರಿತಾದ ಉತ್ಪ್ರೇಕ್ಷೆಯ ವದಂತಿಗಳನ್ನು ನಂಬಿ ಭಯಗ್ರಸ್ಥರಾಗುತ್ತಿದ್ದಾರೆ. ಅಲ್ಲದೆ ಕೋವಿಡ್-19 ಕುರಿತು ಇನ್ನೂ ಸ್ಪಷ್ಟವಾದ ಮಾಹಿತಿಯ ಕೊರತೆಯಿದೆ. ಸರಕಾರದ ಸಲಹೆಗಳು ದಿನಗಳೆದಂತೆ ಬದಲಾಗುತ್ತಿದೆ. ಇದು ಜನರನ್ನು ಇನ್ನಷ್ಟು ಸಂದೇಹಕ್ಕೆ ದೂಡುತ್ತದೆ. ಮತ್ತೊಂದು ಕಡೆ ಚೀನಾ ಸರಕಾರವು ಅನುಮಾನಾಸ್ಪದವಾಗಿ ನಡೆದುಕೊಂಡಿತು. ಕರೋನಾ ಸೋಂಕು ಹರಡಲು ಪ್ರಾರಂಭಿಸಿದ್ದರಿಂದ ಚೀನಾವು ಸೋಂಕು ಹೇಗೆ ಹರಡಿತು. ಯಾವ ಪ್ರಾಣಿಗಳಿಂದ ಹರಡಿದೆ, ಹರಡುವಿಕೆಯ ಸರಪಳಿಗೆ ಕೊಂಡಿಯಾದ ಪ್ರಾಣಿಯ ಪ್ರಭೇಧದ ಕುರಿತು ಆರಂಭದಲ್ಲಿ ಹೆಚ್ಚಿನ ಮಾಹಿತಿ ನೀಡಲಿಲ್ಲ. ಅಲ್ಲದೆ ವುಹಾನ್ ಪ್ರಾಂತ್ಯದ ಸರಕಾರಿ ಅಧಿಕಾರಿಗಳು ಆರಂಭದಲ್ಲಿ ಸೋಂಕಿಗೆ ಒಳಗಾದವರ ಸರಿಯಾದ ಸಂಖ್ಯೆ ನೀಡಲಿಲ್ಲ. ಇದು ಮನುಷ್ಯನಿಂದ ಮನುಷ್ಯನಿಗೆ ಹರಡುವಲ್ಲಿ ಹೇಗೆ ಪಸರಿಸುತ್ತದೆ ಎಂಬುದನ್ನು ಲೆಕ್ಕ ಹಾಕಲು ಬಹಳ ಮುಖ್ಯವಾಗುತ್ತಿತ್ತು.

ಈ ವೈಫಲ್ಯಗಳನ್ನೇ ಡೊನಾಲ್ಡ್ ಟ್ರಂಪ್ ತನ್ನ ವೈಫಲ್ಯವನ್ನು ಮರೆಮಾಚಿಕೊಳ್ಳಲು ಬಳಸಿಕೊಂಡರು. ಎಲ್ಲಾ ಆರೋಪವನ್ನು ಚೈನಾದ ಮೇಲೆ ಹಾಕಿದ ಟ್ರಂಪ್ ಜನರು ಚೈನಾವನ್ನು ದ್ವೇಷಿಸುವಂತೆ ಮಾಡಿದರು. ಅಮೇರಿಕ ಮಾತ್ರವಲ್ಲದೆ ಭಾರತದಲ್ಲಿ ಕೂಡ ಚೀನಾದ ಮೇಲಿನ ದ್ವೇಷ ಹೆಚ್ಚುತ್ತಿದೆ. (ಅಲ್ಲದೆ ಭಾರತದಲ್ಲಿ ರೋಗ ಹರಡುವಿಕೆಗೆ ಅಲ್ಪಸಂಖ್ಯಾತ ಮುಸ್ಲಿಮರನ್ನು ಹೊಣೆಯಾಗಿಸಲಾಗುತ್ತಿದೆ.)
ವುಹಾನ್ ಪ್ರಾಂತ್ಯವು ಬರೀ ಸೋಂಕು ಹರಡಲು ಪ್ರಾರಂಭಗೊಂಡ ಪ್ರದೇಶ ಮಾತ್ರವಲ್ಲದೆ ಅಲ್ಲಿ ಉನ್ನತ ಮಟ್ಟದ ವೈರಾಣು ಸಂಶೋಧನಾಲಯಗಳಿವೆ. ಇದು ಇನ್ನಷ್ಟು ವದಂತಿಗಳಿಗೆ ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಗೆ ಆರ್ಥಿಕ ಹೊಡೆತ ನೀಡಲು ತನ್ನ ಲ್ಯಾಬ್ ಗಳಿಂದ ಚೀನ ಉದ್ದೇಶಪೂರ್ವಕವಾಗಿ ವೈರಸನ್ನು ಬಿಟ್ಟಿದೆ ಎಂಬ ವಾದವಿದೆ. ಆದರೆ ಅದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲಾಗುವುದಿಲ್ಲ. ಚೈನಾ ತನ್ನ ದೇಶದಲ್ಲಿಯೇ ಈ ವೈರಸ್ಸನ್ನು ಹರಡುವ ಬದಲು ಏಜೆಂಟರನ್ನು ವಿಮಾನದಲ್ಲಿ ಬೇರೆ ದೇಶಗಳಿಗೆ ಕಳುಹಿಸಬಹುದಿತ್ತು ಎಂಬ ವಾದವೂ ಏಳುತ್ತವೆ. ಇದೇ ಕಾರಣಕ್ಕೆ ಏಷಿಯನ್ನರ ಮೇಲೆ ಜನಾಂಗೀಯ ಹಲ್ಲೆಗಳಾಗುತ್ತಿವೆ. ಚೀನದ ಹಲವರು ಅಮೇರಿಕಾವು ವುವಾನ್ನಲ್ಲಿ ನಡೆದ ಮಿಲಿಟರಿ ವಲ್ಡ್ ಗೇಮ್ಸ್ ಸಂದರ್ಭ ಈ ವೈರಸ್ಸನ್ನು ಉದ್ದೇಶಪೂರ್ವಕವಾಗಿ ಹರಡಿದೆಯೆಂದು ನಂಬುತ್ತಾರೆ. ಆದರೆ ಈ ವಾದಗಳೆಲ್ಲವೂ ರಾಜಕೀಯ ಕೆಸರೆರಚಾಟದ ವ್ಯಾಖ್ಯೆಗಳಾಗಿದ್ದು ಯಾವುದಕ್ಕೂ ಪುರಾವೆಗಳಿಲ್ಲ.
ಬರೀ ಮೇಲಂಚಿನಲ್ಲಿ ನಿಂತು ಇದನ್ನು ಬಯೋ ವಾರ್ ಎಂದು ಬಿಂಬಿಸುವುದು ದೊಡ್ಡ ತಪ್ಪು. ಈ ಕುರಿತು ಅಮೇರಿಕಾದ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್ ಅವರು ಕರೋನ ಸೋಂಕು ಹರಡುವಿಕೆ ಉದ್ದೇಶಪೂರ್ವಕವಾಗಿ ಮಾಡಿದ ಕ್ರಿಯೆಯೆಂದು ನನಗನ್ನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.








