ಟಿಪ್ಪು ಸುಲ್ತಾನ್ ಹೆಸರೇ `ಹಿಂದುತ್ವವಾದಿಗಳ’ ನೆಮ್ಮದಿ ಕೆಡಿಸುತ್ತಿದೆ. ತಮಿಳುನಾಡಿನ ದಿಂಡಿಗಲ್ ಎಂಬಲ್ಲಿ ‘ಸುಲ್ತಾನ್’ ಎಂಬ ಹೆಸರಿನ ಸಿನಿಮಾ ಚಿತ್ರೀಕರಣ ಮಾಡುತ್ತಿರುವುದಕ್ಕೆ ಅಲ್ಲಿನ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಮುನ್ನಾಣಿ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಇತಿಹಾಸ ಹೊಂದಿರುವ ಸಿನಿಮಾ ಎಂದು ತಪ್ಪಾಗಿ ಅರ್ಥೈಸಿಕೊಂಡು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.
ತಮಿಳಿನ ಕಾರ್ತಿಕ್ ಮತ್ತು ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಸುಲ್ತಾನ್ ತಮಿಳು ಚಿತ್ರೀಕರಣ ಆಗುತ್ತಿರುವ ವೇಳೆ ಸ್ಥಳಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಚಿತ್ರೀಕರಣ ನಿಲ್ಲಿಸುವಂತೆ ಆಕ್ಷೇಪ ವ್ಯಕ್ತಪಡಿಸಿದರು. ಮೈಸೂರು ಸಾಮ್ರಾಜ್ಯದ ಅಧಿಪತಿಯಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ ಕುರಿತಾದ ಸಿನಿಮಾ ಇದ್ದಲ್ಲ ಎಂದು ಚಿತ್ರೀಕರಣ ತಂಡ ಹಲವು ಬಾರಿ ವಿವರಿಸಿದರೂ ಪ್ರತಿಭಟನಾಕಾರರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಗತ್ಯಂತರವಿಲ್ಲದೆ, ದುಬಾರಿ ಚಿತ್ರೀಕರಣ ಸಾಮಾಗ್ರಿಗಳನ್ನು ಚಿತ್ರ ತಂಡ ಅಲ್ಲಿಂದ ಸಾಗಿಸಿ ಚಿತ್ರೀಕರಣ ನಿಲ್ಲಿಸಿತು.
ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸ್ ಅಧಿಕಾರಿಯ ಪ್ರಕಾರ ಚಿತ್ರ ತಂಡವು ಚಿತ್ರೀಕರಣದ ಕೊನೆಯ ಹಂತದಲ್ಲಿತ್ತು. ಆ ಸಂದರ್ಭದಲ್ಲಿ ಹತ್ತಿರದ ಗ್ರಾಮದಿಂದ ಆಗಮಿಸಿದ ಪ್ರತಿಭಟನಕಾರರು ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದರು. ಚಿತ್ರನಿರ್ದೇಶಕ ಭಾಗ್ಯರಾಜ್ ಕಣ್ಣನ್ ಅವರು ದಿಂಡಿಗಲ್ ಜಿಲ್ಲೆಯ ಪಾರಂಪರಿಕ ತಾಣವೊಂದರಲ್ಲಿ ತಮ್ಮ ಸುಲ್ತಾನ್ ಸಿನಿಮಾದ ಅಂತಿಮ ಹಂತದ ದೃಶ್ಯಗಳ ಚಿತ್ರೀಕರಿಸುತ್ತಿದ್ದರು. ಚಿತ್ರೀಕರಣವು ಹಲವು ದಿವಸಗಳಿಂದ ಅದೇ ಸ್ಥಳದಲ್ಲಿ ನಡೆಯುತ್ತಿತ್ತು. ಸುಲ್ತಾನ್ ಎಂಬ ಹೆಸರೇ ಪ್ರತಿಭಟನಾಕಾರರ ಪ್ರಚೋದನೆಗೆ ಸಾಕಾಗಿತ್ತು. ಸಾಲದ್ದಕ್ಕೆ, ಸ್ಥಳೀಯ ಪತ್ರಿಕೆಯೊಂದು ಚಿತ್ರದ ಹೆಸರು ಸುಲ್ತಾನ್ ಅಲ್ಲ ಟಿಪ್ಪು ಸುಲ್ತಾನ್ ಎಂದು ಬರೆದಿತ್ತು. ಇದರಿಂದಾಗಿ ಪ್ರತಿಭಟನೆ ನಡೆಸಿ ಚಿತ್ರೀಕರಣಕ್ಕೆ ಅಡ್ಡಿಪಡಿಸಿದರು ಎನ್ನಲಾಗಿದೆ.
ತದನಂತರ ಸೋಶಿಯಲ್ ಮಿಡಿಯಾದಲ್ಲಿ ಘಟನೆ ಬಗ್ಗೆ ಮಾಹಿತಿ ನೀಡಿದ ಚಿತ್ರ ನಿರ್ಮಾಪಕರಾದ ಡ್ರೀಮ್ ವಾರಿಯರ್ ಪಿಕ್ಚರ್ಸ್ ಒಂದು ವಿಚಾರದ ಬಗ್ಗೆ ಭಿನ್ನಮತವಿದ್ದರೆ ಸಿನಿಮಾ ಚಿತ್ರೀಕರಣಕ್ಕೆ ಅಡ್ಡಿಪಡಿಸಿರುವುದು ಖಂಡನೀಯ ಎಂದಿದ್ದಾರೆ. ಸಿನಿಮಾದ ವಸ್ತು ಬಗ್ಗೆ ಅಥವ ಯಾವುದೇ ಇತರ ವಿಚಾರಗಳ ಅವಲೋಕನ ಮಾಡಿ ನಿಯಂತ್ರಣ ಹೇರಲು ಸೆನ್ಸಾರ್ ಮಂಡಳಿ ಇದೆ. ಭಿನ್ನಮತ ಇದೆ ಎಂಬ ಕಾರಣಕ್ಕಾಗಿ ಸೃಜನಶೀಲ ನಿರ್ಮಾಪಕನ ಹಕ್ಕನ್ನು ಕಸಿದುಕೊಳ್ಳುವ ಯತ್ನ ಸರಿಯಲ್ಲ ಎಂದು ಚಿತ್ರ ನಿರ್ಮಾಪಕರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಭಟನಕಾರರು ಸುಲ್ತಾನ್ ಸಿನಿಮಾ ಕುರಿತಾಗಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳದೆ ಚಿತ್ರೀಕರಣಕ್ಕೆ ಅಡ್ಡಿಪಡಿಸಿರುವುದು ಸ್ಪಷ್ಟವಾಗಿದೆ. ಪ್ರತಿಭಟನೆಯಿಂದ ಯಾವುದೇ ರೀತಿಯ ಹಾನಿ ಆಗದಿದ್ದರೂ ಶೂಟಿಂಗ್ ಶೆಡ್ಯೂಲ್ ಗೆ ತೊಂದರೆ ಆಗಿದೆ. ಇದರಿಂದಾಗಿ ನಿರ್ಮಾಪಕರಿಗೆ ಆರ್ಥಿಕ ನಷ್ಚ ಆಗಲಿದೆ.
ಇತ್ತೀಚೆಗೆ ದೆಹಲಿಯಲ್ಲಿ ಡಿಮೊನಿಟೈಸೇಷನ್ ಕುರಿತು ಕೇರಳದವರು ನಿರ್ಮಿಸಿದ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ಕೂಡ ಇದೇ ರೀತಿಯಲ್ಲಿ ಅಡ್ಡಿಪಡಿಸಲಾಗಿತ್ತು. ಚಹ ಮಾರುವ ವ್ಯಕ್ತಿಯೊಬ್ಬನ ಮೇಲೆ ನೋಟು ಅಮಾನ್ಯ ಯಾವ ರೀತಿ ದುಷ್ಪರಿಣಾಮ ಬೀರಿತು ಎಂಬ ಬಗೆಗಿನ ಡಾಕ್ಯುಮೆಂಟರಿಯನ್ನು ವೀಕ್ಷಿಸದೆ ದೆಹಲಿಯ ಕೇಸರಿ ಪಡೆ ದಾಂಧಲೆ ಮಾಡಿತ್ತು.
ನವೆಂಬರ್ 10ರಂದು ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು 2015ರಲ್ಲಿ ಅಂದಿನ ಸಿದ್ದರಾಮಯ್ಯ ಸರಕಾರ ಘೋಷಿಸಿದ ಅನಂತರ ಟಿಪ್ಪು ಸುಲ್ತಾನ್ ವಿರುದ್ಧದ ದ್ವೇಷ ರಾಜಕಾರಣದ ತೀವ್ರತೆ ಹೆಚ್ಚಾಗ ತೊಡಗಿತು. ಇತ್ತೀಚೆಗೆ ಬಿಜೆಪಿ ಅಧಿಕಾರಕ್ಕೆ ಬಂದೊಡನೆ ವಿವಾದಿತ ಟಿಪ್ಪು ಜಯಂತಿ ಆಚರಿಸುವುದಿಲ್ಲ ಎಂದು ಪ್ರಕಟಿಸಿದೆ.
ಟಿಪ್ಪು ಜಯಂತಿ ಆಚರಿಸಿದರೂ, ಆಚರಿಸದೇ ಇದ್ದರೂ ಮೈಸೂರು ಹುಲಿ ನಾಡಿಗೆ ನೀಡಿದ ಕೊಡುಗೆಯಾಗಲಿ ಆತ ಬೆಳಿಸಿದ ತಾಂತ್ರಿಕತೆಗಾಗಲಿ ಯಾವುದೇ ಚ್ಯುತಿ ಆಗುವುದಿಲ್ಲ. ಟಿಪ್ಪು ಸುಲ್ತಾನ್ ಕುರಿತು ಅದಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಿನಿಮಾ, ಟಿವಿ ಧಾರವಾಹಿ, ಡಾಕ್ಯುಮೆಂಟರಿಗಳು ಬಂದಿವೆ. ಟಿಪ್ಪು ಸುಲ್ತಾನ್ ಇಂದಿನ ಪ್ರಚಾರ ಪ್ರಿಯರಿಗಿಂತಲೂ ನೂರು ವರ್ಷಗಳ ಹಿಂದೆಯೇ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದು, ಭಾರತವನ್ನು ಆಕ್ರಮಿಸಿದ್ದ ಬ್ರಿಟಿಷರು ಅದೊಂದು ಹೆಸರಿಗೆ ಮಾತ್ರ ಬೆದರುತ್ತಿದ್ದರು.
ಶೃಂಗೇರಿ ಮಠ, ಶ್ರೀರಂಗಪಟ್ಟಣ ದೇವಸ್ಥಾನ, ನಂಜನಗೂಡು ದೇವಸ್ಥಾನ ಸೇರಿದಂತೆ ಹಲವರು ಹಿಂದೂ ಧಾರ್ಮಿಕ ಕೇಂದ್ರಗಳ ಆರಾಧಕನಾಗಿದ್ದ, ಪೋಷಕನಾಗಿದ್ದ. ಇಂದು ಹಿಂದೂಗಳ ಮಹಾನ್ ವೀರನಾಗಿ ಕೊಂಡಾಡಲಾಗುತ್ತಿರುವ ಶಿವಾಜಿಯ ಮರಾಠ ಪಡೆ ಶೃಂಗೇರಿ ಬಳಿ ದಾಳಿ ನಡೆಸಿದಾಗ ಸಹಾಯಕ್ಕೆ ಧಾವಿಸಿದ್ದು ಇದೇ ಟಿಪ್ಪು ಸುಲ್ತಾನ್. ಶೃಂಗೇರಿ ಪೀಠಾಧಿಪತಿಯನ್ನು ಜಗದ್ಗುರು ಎಂದು ಟಿಪ್ಪು ಸಂಬೋಧಿಸುತ್ತಿದ್ದ. ಕೇರಳದಲ್ಲಿ ಹಿಂದೂ ಸಮಾಜದ ಅಸಮಾನತೆಯನ್ನು ಹೋಗಲಾಡಿಸಲು ಕೈಗೊಂಡಿರುವ ಕ್ರಮಗಳನ್ನು ಈಗಲೂ ನೆನಪಿಸಲಾಗುತ್ತಿದೆ. ಹೀಗಿರುವ ವಿಚಾರಗಳನ್ನು ಮರೆ ಮಾಚಿ ಇತಿಹಾಸದ ಪುಟಗಳನ್ನು ಇಂದಿನ ಸಾಮಾಜಿಕ ಪರಿಸ್ಥಿತಿಗೆ ಹೋಲಿಸಿ ರಾಜಕೀಯ ನಡೆಸುವುದು ಯಾವುದೇ ದೇಶ ಭಕ್ತಿಯ ಕೆಲಸವಲ್ಲ ಎಂಬುದು ಸ್ಪಷ್ಟ.