ನಿಸರ್ಗದ ಕಡುಕೋಪದ ಪರಿಣಾಮವಾಗಿ ರಾಜ್ಯದ ಅರ್ಧ ಭಾಗವನ್ನೇ ಬರಸೆಳೆದಿರುವ ನೆರೆಹಾವಳಿಯಲ್ಲಿ ಸ್ವತಃ ಸಿಲುಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂಬರುವ ದಿನಗಳಲ್ಲಿ ಮತ್ತೊಂದು ಸವಾಲನ್ನು ಎದುರಿಸುವ ಅನಿವಾರ್ಯತೆ ಎದುರಾಗಲಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವಣ ಕೃಷ್ಣಾ ಜಲವಿವಾದವು ಮುಖ್ಯಮಂತ್ರಿಗಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳಿವೆ. ಕೃಷ್ಣಾ ಜಲವಿವಾದ ಸಂಬಂಧ ನ್ಯಾ.ಮೂ.ಬ್ರಿಜೇಶಕುಮಾರ ನ್ಯಾಯಮಂಡಳಿಯು ಮಾಡಿದ ಕೃಷ್ಣಾ ನೀರು ಹಂಚಿಕೆಯ ಪ್ರಮಾಣವನ್ನು ಪ್ರಶ್ನಿಸಿ ಸಂಬಂಧಿಸಿದ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳ ವಿಚಾರಣೆಯನ್ನು ಸರ್ವೋನ್ನತ ನ್ಯಾಯಾಲಯವು ಅಕ್ಟೋಬರ್ ಮೂರನೇ ವಾರದಲ್ಲಿ ಕೈಗೆತ್ತಿಕೊಳ್ಳುವ ಸಂಭವವಿದ್ದು ಈ ಪ್ರಕರಣದ ವಿಚಾರಣೆ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.
ನ್ಯಾಯಮಂಡಳಿಯು ಅವಿಭಾಜ್ಯ ಆಂಧ್ರಪ್ರದೇಶಕ್ಕೆ ಹಂಚಿಕೆ ಮಾಡಿದ 1005 ಟಿಎಮ್ ಸಿ ನೀರಿನಲ್ಲಿಯೇ ತೆಲಂಗಾಣವು ತನ್ನ ಪಾಲಿನ ನೀರನ್ನು ಪಡೆಯಬೇಕೆಂಬುದು ಕರ್ನಾಟಕದ ಸಹಜವಾದ ವಾದವಾಗಿದೆ. ಆದರೆ ತಾನು ಆಂಧ್ರದಿಂದ ಪ್ರತ್ಯೇಕವಾಗಿದ್ದು ತನಗೆ ಪ್ರತ್ಯೇಕ ವಾಗಿಯೇ ನೀರು ಹಂಚಿಕೆ ಮಾಡಬೇಕೆಂಬುದು ತೆಲಂಗಾಣವು ಕ್ಯಾತೆ ತೆಗೆದಿದೆ. ನ್ಯಾಯಮಂಡಳಿಯು ಕರ್ನಾಟಕಕ್ಕೆ 907 ಟಿ ಎಮ್ ಸಿ ಮತ್ತು ಮಹಾರಾಷ್ಟ್ರಕ್ಕೆ 666 ಟಿ ಎಮ್ ಸಿ ನೀರನ್ನು ಹಂಚಿಕೆ ಮಾಡಿ ತೀರ್ಪು ನೀಡಿದೆ.
ತೀರ್ಪಿನ ಪ್ರಮುಖ ಅಂಶವೆಂದರೆ ಕರ್ನಾಟಕವು ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಎತ್ತರವನ್ನು ಸದ್ಯದ 519.60 ಮೀಟರ್ ದಿಂದ 524.256 ಮೀಟರ್ ಗೆ ಹೆಚ್ಚಿಸಲು ಅನುಮತಿ ನೀಡಿರುವದು. ಈ ಎತ್ತರವನ್ನು ಹೆಚ್ಚಿಸಿದಲ್ಲಿ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಸದ್ಯದ 123 ಟಿ ಎಮ್ ಸಿ ಯಿಂದ 223 ಟಿ ಎಮ್ ಸಿ ಗೆ ತಲುಪಲಿದೆ.
ಆದರೆ ಆಲಮಟ್ಟಿಯ ಎತ್ತರವನ್ನು ಹೆಚ್ಚಿಸದಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಈಗಾಗಲೇ ತಂತ್ರಗಳನ್ನು ರೂಪಿಸುತ್ತಿದ್ದು ಕರ್ನಾಟಕ ಸರಕಾರ ಈ ಬಗ್ಗೆ ಯಾವದೇ ಭೂಮಿಕೆಯನ್ನು ಸಿದ್ಧಪಡಿಸಿಕೊಂಡಿರುವದು ಕಂಡು ಬರುತ್ತಿಲ್ಲ. ಅಷ್ಟೇ ಅಲ್ಲ, ಈ ಮಾಸಾಂತ್ಯದಲ್ಲಿ ಸರ್ವೋನ್ನತ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿರುವ ಪ್ರಕರಣದ ಸಂಬಂಧ ಕರ್ನಾಟಕದ ಪರ ಕಾನೂನು ತಂಡದೊಂದಿಗೆ ಚರ್ಚೆಯನ್ನೂ ನಡೆಸಿಲ್ಲ! ದಿಲ್ಲಿಯಿಂದ ವರದಿಗಳು ಇದನ್ನು ಪುಷ್ಠೀಕರಿಸುತ್ತಿವೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೆಟ್ಟಿ ನೀಡಲು ಬೆಳಗಾವಿ,ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಭೆಟ್ಟಿ ನೀಡಿದ್ದ ಮುಖ್ಯಮಂತ್ರಿಗಳು ಕಳೆದ ಶನಿವಾರ ಆಲಮಟ್ಟಿಯಲ್ಲಿ ಒಂದು ಹೇಳಿಕೆ ನೀಡಿದ್ದಾರೆ.” ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸುತ್ತೇನೆ. ಮೇಲ್ಮನವಿಗಳನ್ನು ವಾಪಸ್ ಪಡೆಯಲು ಮನವೊಲಿಸುತ್ತೇನೆ” ಎಂಬ ಅವರ ಹೇಳಿಕೆಯಂತೆ ಆ ರಾಜ್ಯಗಳು ನಡೆದುಕೊಂಡರೆ ಅದೊಂದು ಜಗತ್ತಿನ ಹನ್ನೊಂದನೇ ಅಚ್ಚರಿಯೇ ಸರಿ! ಈ ಸಂಬಂಧ ಪ್ರಧಾನಿ ಮೋದಿಯವರೇ ಮಧ್ಯಸ್ಥಿಕೆ ವಹಿಸಬೇಕೆಂದು ಯಡಿಯೂರಪ್ಪ ಅವರು ಹೇಳಿರುವದು ಅವರ ” ಆಶಾವಾದ” ಮೆಚ್ಚುವಂಥದ್ದೇ!
ಆಂಧ್ರದಲ್ಲಿ ವೈ ಆರ್ ಎಸ್ ಕಾಂಗ್ರೆಸ್ ಅಧಿಕಾರದಲ್ಲಿದೆ, ತೆಲಂಗಾಣದಲ್ಲಿ ಟಿ ಆರ್ ಎಸ್ ಗದ್ದುಗೆಯನ್ನು ಹಿಡಿದಿದೆ. ಈ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮೋದಿಯವರಿಗೆ ” ಹಿತಾನುಭವ” ಕೊಡುತ್ತಿರುವದು ಸುಳ್ಳೇನಲ್ಲ! ಕಳೆದ ಶುಕ್ರವಾರವಷ್ಟೆ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು,ಪ್ರಧಾನಿ ನಿವಾಸದಲ್ಲೇ, ಭೆಟ್ಟಿಯಾಗಿ 50 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಗೋದಾವರಿ ನದಿಯ ನೀರನ್ನು ಕೃಷ್ಣೆಗೆ ತಿರುಗಿಸುವ ಆಂಧ್ರಪ್ರದೇಶ ಮತ್ತು ತೆಲಂಗಾಣ ಜಂಟೀ ಯೋಜನೆಯ ಬಗ್ಗೆ ಇಬ್ಬರೂ ಸುದೀರ್ಘ ಆಗಿ ಚರ್ಚಿಸಿದರಲ್ಲದೇ ಕಾಳೇಶ್ವರಮ್ ನೀರಾವರಿ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡುವ ಕುರಿತೂ ಸಹ ಕೆಸಿಆರ್ ಆಗ್ರಹಿಸಿದ್ದಾರೆ.
ಈ ಮಧ್ಯೆ ಆಂಧ್ರ ಮತ್ತು ತೆಲಂಗಾಣ ರಾಜ್ಯ ಸರಕಾರಗಳ ಹಿರಿಯ ಅಧಿಕಾರಿಗಳು ದಿಲ್ಲಿಯಲ್ಲೇ ಬೀಡುಬಿಟ್ಟಿದ್ದು ತಮ್ಮ ರಾಜ್ಯಗಳ ಪರವಾದ ಕಾನೂನು ತಂಡದೊಂದಿಗೆ ಸತತ ಚರ್ಚೆ ನಡೆಸಿದ್ದಾರೆ. ಸರ್ವೋನ್ನತ ನ್ಯಾಯಾಲಯದ ಮುಂದೆ ಸಮರ್ಥ ವಾದ ಮಂಡಿಸಲು ಸರ್ವ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳಿದ್ದರೂ ನ್ಯಾಯಾಲಯದ ಹೊರಗೆ ಮಾತುಕತೆ ನಡೆಸುವದು ಸಾಧ್ಯವಾಗದಿರುವಾಗ ಕೃಷ್ಣಾ ಜಲವಿವಾದ ಸಂಬಂಧ ಇಂಥ ಮಾತುಕತೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಸ್ವತಃ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರೇ ಮುಂದಾಗಿ ಮಹಾದಾಯಿ ಜಲವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಮಂಡಿಸಿದ ಪ್ರಸ್ತಾವನೆಯನ್ನು ಗೋವೆಯ ಮುಖ್ಯಮಂತ್ರಿ ಪ್ರಮೋದ ಸಾವಂತ ತಿರಸ್ಕರಿಸಿಬಿಟ್ಟರು. ಆ ನಂತರ ಪ್ರಧಾನಿಯವರೇ ಸ್ವತಃ ಮಧ್ಯಸ್ಥಿಕೆ ವಹಿಸಬೇಕೆಂಬ ನೀರಾವರಿ ಹೋರಾಟಗಾರರ ಒತ್ತಾಯಕ್ಕೆ ಕೇಂದ್ರದಿಂದ ಅಥವಾ ಕೇಂದ್ರದಲ್ಲಿರುವ ಕರ್ನಾಟಕದ ಸಚಿವರಿಂದ ಈವರೆಗೆ ಯಾವದೇ ಪ್ರತಿಕ್ರಿಯೆ ಬಂದಿಲ್ಲ.
ಆಲಮಟ್ಟಿಯ ಎತ್ತರವನ್ನು ಹೆಚ್ಚಿಸಲು ಮೊದಲು ಸರ್ವೋನ್ನತ ನ್ಯಾಯಾಲಯದಿಂದ ಗ್ರೀನ್ ಸಿಗ್ನಲ್ ಸಿಗಬೇಕು. ಆ ನಂತರ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆಯ ಅನುಷ್ಠಾನ ಸಾಧ್ಯ. 524 ಮೀಟರ್ ಗೆ ಎತ್ತರ ಹೆಚ್ಚಿಸಿದಾಗ 22 ಹಳ್ಳಿಗಳು ಮುಳುಗಡೆಯಾಗಿ ಸುಮಾರು 88 ಸಾವಿರ ಕುಟುಂಬಳಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಸದ್ಯದ ಅಂದಾಜಿನ ಪ್ರಕಾರವೇ ಮೂರನೇ ಹಂತದ ಅನುಷ್ಠಾನಕ್ಕೆ 48 ಸಾವಿರ ಕೋಟಿ ಬೇಕು. ಇದರಲ್ಲಿ ಭೂಸ್ವಾಧೀನಕ್ಕೆ 28 ಸಾವಿರ ಕೋಟಿಯೂ ಸೇರಿದೆ. ಅನುಷ್ಠಾನವು ವಿಳಂಬವಾಗುತ್ತ ಹೋದರೆ ಅಂದಾಜು ವೆಚ್ಚವೂ ಹೆಚ್ಚುತ್ತಲೇ ಹೋಗುವದು. ಐದು ವರ್ಷಗಳಲ್ಲಿ 48 ಸಾವಿರ ಕೋಟಿಗಳಲ್ಲಿ ಆಗುವ ಕೆಲಸವು ಹತ್ತು ವರ್ಷಕ್ಕೆ ಒಂದು ಲಕ್ಷ ಕೋಟಿಗೆ ತಲುಪಬಹುದು.
ಮುಂಬರುವ ಬಜೆಟ್ ನಲ್ಲಿ ಮೂರನೇ ಹಂತದ ಯೋಜನೆಯ ಜಾರಿಗೆ 20 ಸಾವಿರ ಕೋಟಿ ಮೀಸಲಿಡುವದಾಗಿ ಮುಖ್ಯಮಂತ್ರಿಗಳು ಆಲಮಟ್ಟಿಯಲ್ಲೇ ಪ್ರಕಟಿಸುವ ಮೂಲಕ ಈ ಯೋಜನೆಯ ಬಗ್ಗೆ ತಮಗಿರುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.
ಎಷ್ಟೇ ಕಷ್ಟವಾದರೂ ಯೋಜನೆಯ ಅನುಷ್ಠಾನಕ್ಕೆ ಪ್ರತಿವರ್ಷದ ಬಜೆಟ್ ನಲ್ಲಿ ಹಣ ಮೀಸಲಿರಿಸುವದಾಗಿ ಅವರು ಹೇಳಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ಸರ್ವೋನ್ನತ ನ್ಯಾಯಾಲಯದಲ್ಲಿ ಪ್ರಕರಣವನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವದು ಅಥವಾ ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ಮನವೊಲಿಸಿ ನ್ಯಾಯಾಲಯದ ಹೊರಗೆ ವಿವಾದವನ್ನು ಬಗೆಹರಿಸಿಕೊಳ್ಖುವದು. ಈ ಸವಾಲನ್ನು ಯಡಿಯೂರಪ್ಪ ಎದುರಿಸಿ ಗೆಲುವು ಸಾಧಿಸಿದರೆ ಅವರಿಗೆ ಉತ್ತರ ಕರ್ನಾಟಕದ ಜನರು ಸದಾಕಾಲ ಆಭಾರಿಯಾಗಿರುತ್ತಾರೆ.
ಗಡಿವಿವಾದಕ್ಕೆ ಸಂಬಂಧಿಸಿದ ಗಡಿ ಸಂರಕ್ಷಣಾ ಆಯೋಗದ ವ್ಯಾಪ್ತಿಗೆ ಜಲವಿವಾದಗಳನ್ನು ಸೇರಿಸಿರುವ ಹಿಂದಿನ ಕುಮಾರಸ್ವಾಮಿ ಸರಕಾರ ಪ್ರಮಾದವನ್ನೇ ಎಸಗಿದೆ. ಅದನ್ನು ಆಯೋಗದಿಂದ ಬೇರ್ಪಡಿಸಬೇಕು. ನೀರಾವರಿ ವಿಷಯದಲ್ಲಿ ಕಳಕಳಿ ಹೊಂದಿರುವ ವ್ಯಕ್ತಿಯೊಬ್ಬರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಪ್ರಾಧಿಕಾರ ಅಥವಾ ಆಯೋಗವನ್ನು ರಚಿಸಬೇಕು. ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ಇಂಥ ಸಂಸ್ಥೆಗಳು ನಿರುದ್ಯೋಗಿ ರಾಜಕೀಯ ಮುಖಂಡರ ಪುನರ್ವಸತಿ ಕೇಂದ್ರಗಳಾಗದಂತೆ ಮುಖ್ಯಮಂತ್ರಿಗಳು ನೋಡಿಕೊಳ್ಳಬೇಕು.
ಮೂರನೇ ಹಂತದ ಯೋಜನೆ ಅನುಷ್ಠಾನದಿಂದ ಸುಮಾರು ಆರು ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೆ ಒಳಗಾಗಲಿದ್ದು ಇದು ರಾಷ್ಟ್ರೀಯ ಯೋಜನೆಯ ಸ್ಥಾನಮಾನ ಪಡೆಯಲು ಅರ್ಹತೆ ಹೊಂದಿದೆ. ಯಡಿಯೂರಪ್ಪ ಅವರು ಒಬ್ಬಂಟಿಯಾಗಿಯೇ ಕೇಂದ್ರದ ಜೊತೆಗೆ ಗುದ್ದಾಡುವ ಬದಲಾಗಿ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಯ 25 ಸಂಸದರು ಸಹಿತ, ಎಲ್ಲ 28 ಸಂಸದರನ್ನೂ ಪ್ರಧಾನಿಯವರ ಬಳಿ ಕರೆದೊಯ್ಯುವದು ಅವಶ್ಯಕವಾಗಿದೆ. ಎದುರಾಗಲಿರುವ ಸವಾಲಿನಲ್ಲಿ ಯಡಿಯೂರಪ್ಪ ಗೆದ್ದರೆ ಅವರ ಬೇರುಗಳು ಉತ್ತರ ಕರ್ನಾಟಕದಲ್ಲಿ ಮತ್ತಷ್ಟು ಗಟ್ಟಿಯಾಗುವಲ್ಲಿ ಸಂದೇಹವಿಲ್ಲ.