ಆಶ್ಚರ್ಯಕರವಾದ ಘಟನೆಯೊಂದರಲ್ಲಿ, ಚೆನ್ನೈ ಸಿಬಿಐ ವಶದಲ್ಲಿದ್ದ ಬರೋಬ್ಬರಿ 103 ಕೆಜಿ ಚಿನ್ನ ʼನಾಪತ್ತೆʼಯಾಗಿದೆ. ಈ ಪ್ರಕರಣದ ತನಿಖೆ ಮಾಡುವಂತೆ ಎಫ್ಐಆರ್ ದಾಖಲಿಸಲು ಮದ್ರಾಸ್ ಹೈಕೋರ್ಟ್ ಸಿಬಿ-ಸಿಐಡಿಗೆ ನಿರ್ದೇಶನ ನೀಡಿದೆ.
ಸುಮಾರು 2012ರ ನಂತರ ಸಿಬಿಐ ವಶಪಡಿಸಿಕೊಂಡಿದ್ದ ಚಿನ್ನದಲ್ಲಿ 43 ಕೋಟಿ ರೂ. ಬೆಳೆ ಬಾಳುವ ಚಿನ್ನವು ಈಗ ನಾಪತ್ತೆಯಾಗಿದೆ. ಈ ಪ್ರಕರಣದ ತನಿಖೆಗೆ ಆದೇಶಿಸುವಾಗ ಹೈಕೋರ್ಟ್ “ಸಿಬಿಐಗೆ ಇದೊಂದು ಅಗ್ನಿ ಪರೀಕ್ಷೆ. ಇದರಲ್ಲಿ ನಾವೇನು ಸಹಾಯ ಮಾಡಲಾಗುವುದಿಲ್ಲ. ಅವರು ಪರಿಶುದ್ದರಾಗಿದ್ದರೆ ಈ ಪರೀಕ್ಷೆಯಲ್ಲಿ ಅವರು ಗೆಲ್ಲುತ್ತಾರೆ. ಇಲ್ಲವಾದರೆ, ಇದರ ಪರಿಣಾಮವನ್ನು ಅವರು ಅನುಭವಿಸಬೇಕಾಗುತ್ತದೆ,” ಎಂದು ಹೇಳಿದೆ.
ಈ ಪ್ರಕರಣವನ್ನು ರಾಜ್ಯ ಪೊಲೀಸ್ಗೆ ನೀಡಬಾರದು, ಇದು ಸಿಬಿಐನ ಘನತೆಗೆ ಧಕ್ಕೆ ಉಂಟು ಮಾಡುತ್ತದೆ. ಇಷ್ಟು ಮಾತ್ರವಲ್ಲದೇ, ಎನ್ಐಗೆ ವಿಚಾರಣೆಯನ್ನು ಒಪ್ಪಿಸಬೇಕು ಎಂದು ಎಂದು ಸಿಬಿಐ ಪರ ವಕೀಲರು ಹೇಳಿದ್ದರು. ಆದರೆ, ಈ ವಾದವನ್ನು ಅಲ್ಲಗೆಳೆದಿರುವ ಹೈಕೋರ್ಟ್ ಸ್ಥಳೀಯ ಪೊಲೀಸರಿಗೆ ವಿಚಾರಣೆ ನಡೆಸಲು ಆದೇಶ ನೀಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು, ಚಿನ್ನ ನಾಪತ್ತೆಯಾಗಿರುವ ಕುರಿತು ವಾದ ಮಂಡಿಸುವಾಗ 2012ರ ಸುರಾನಾ ಪ್ರಕರಣವನ್ನು ಮುಂದಿಟ್ಟ ಸಿಬಿಐ ಪರ ವಕೀಲರು, ಸಿಬಿಐ ದಾಳಿ ನಡೆಸಿದ ಸ್ಥಳದಲ್ಲಿ ಚಿನ್ನವನ್ನು ತೂಕ ಮಾಡುವಾಗ 400.47 ಕೆಜಿ ಚಿನ್ನ ಇತ್ತೆಂದು ದಾಖಲಿಸಲಾಗಿದೆ. ಅದರ, ದಾಖಲೆಗಳೊಂದಿಗೆ ಚಿನ್ನವನ್ನು ಸೀಲ್ ಮಾಡಿ ಸಿಬಿಐ ಕಚೇರಿಯಲ್ಲಿ ಇಡಲಾಗಿತ್ತು. ಈ ಸೀಲ್ ಇನ್ನೂ ಹಾಳಾಗದೇ ಇರುವುದರಿಂದ, ಚಿನ್ನ ನಾಪತ್ತೆಯಾಗಲು ಸಿಬಿಐ ಅನ್ನು ಹೊಣೆಗಾರರನ್ನಾಗಿಸುವುದು ಸರಿಯಲ್ಲ, ಎಂದು ಹೇಳಿದ್ದರು.
ಈ ವಾದವನ್ನೂ ತಿರಸ್ಕರಿಸಿರುವ ನ್ಯಾಯಾಧೀಶರು, ಹಾಗಾದರೆ 103 ಕೆಜಿಯಷ್ಟು ಚಿನ್ನ ಹೇಗೆ ಮಾಯವಾಯಿತು ಎಂದು ಪ್ರಶ್ನೆ ಹಾಕಿದ್ದಾರೆ. ಗಾಂಗಾ ರೀತಿಯಲ್ಲಿ ಚಿನ್ನ ತನ್ನ ತೂಕವನ್ನು ಕಳೆದುಕೊಳ್ಳುವುದಿಲ್ಲ, ಹೇಳಿದ್ದಾರೆ.
ಒಟ್ಟಿನಲ್ಲಿ ಈ ಪ್ರಕರಣವು ಸಿಬಿಐಗೆ ತೀವ್ರ ಮುಜುಗರವನ್ನು ಉಂಟು ಮಾಡಿದ್ದು, ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಎನ್ನುವ ವಿಚಾರ ತನಿಖೆಯ ನಂತರವೇ ತಿಳಿಯಬೇಕಿದೆ.