ಬಹುಚರ್ಚಿತ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹೈಕಮಾಂಡ್ ಅಮಿತ್ ಶಾ ಅವರನ್ನು ಜೈಲಿಗೆ ಕಳಿಸಿದ್ದ ಸಿಬಿಐ ಮಾಜಿ ನಿರ್ದೇಶಕ ಅಶ್ವನಿಕುಮಾರ್ ಅಸಹಜ ಸಾವು ಕಂಡಿದ್ದಾರೆ.
ಪ್ರಾಮಾಣಿಕತೆ ಮತ್ತು ಅಷ್ಟೇ ದಿಟ್ಟ ನಿರ್ಧಾರಗಳಿಗೆ ಹೆಸರಾಗಿದ್ದ ಅಶ್ವನಿ ಕುಮಾರ್ ಅವರು ನಾಗಾಲ್ಯಾಂಡ್ ಮತ್ತು ಮಣಿಪುರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಬುಧವಾರ ರಾತ್ರಿ ಶಿಮ್ಲಾದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದ್ದು, ಡೆತ್ ನೋಟ್ ಕೂಡ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನಿಸುತ್ತಿದ್ದು, ಡೆತ್ ನೋಟ್ ನಲ್ಲಿ ಕೂಡ ‘ಈ ಜೀವನದಿಂದ ಬೇಸತ್ತಿದ್ದೇನೆ. ಹೊಸ ಪಯಣ ಆರಂಭಿಸುತ್ತಿದ್ದೇನೆ’ ಎಂದು ಬರೆದಿರುವುದು ಪತ್ತೆಯಾಗಿದೆ ಎಂದು ಹಿಮಾಚಲಪ್ರದೇಶ ಪೊಲೀಸರು ಹೇಳಿದ್ದಾರೆ.
ಅರವತ್ತೊಂಬತ್ತು ವರ್ಷದ ಹಿರಿಯ ಅಧಿಕಾರಿ ಎನ್ ಎಸ್ ಜಿ, ಸಿಬಿಐ, ಹರ್ಯಾಣ ಪೊಲೀಸ್ ಇಲಾಖೆ ಮತ್ತು ನಾಗಾಲ್ಯಾಂಡ್ ಹಾಗೂ ಮಣಿಪುರ ರಾಜ್ಯಪಾಲರ ಹುದ್ದೆ ಸೇರಿದಂತೆ ಹಲವು ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದರು. ಪ್ರಮುಖವಾಗಿ ತಮ್ಮ ಬದ್ಧತೆ ಮತ್ತು ಸವಾಲನ್ನು ಮೈಮೇಲೆ ಎಳೆದುಕೊಳ್ಳುವ ಎದೆಗಾರಿಕೆಗೆ ಹೆಸರಾಗಿದ್ದ ಅವರು, ಸಿಬಿಐ ಮುಖ್ಯಸ್ಥರಾಗಿದ್ದ ಸಮಯದಲ್ಲಿ ವಿವಾದಿತ ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಅಂದಿನ ಗುಜರಾತಿನ ಪ್ರಭಾವಿ ನಾಯಕರಾಗಿದ್ದ ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಅಲ್ಲದೆ, ದೇಶಾದ್ಯಂತ ಕುತೂಹಲ ಕೆರಳಿಸಿದ್ದ ನೋಯ್ದಾದ ಆರುಷಿ ಕೊಲೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶದ ಅತಿಗಣ್ಯರ ವಿರುದ್ಧ ದಿಟ್ಟ ತನಿಖೆ ನಡೆಸಿ, ತಪ್ಪಿತಸ್ಥರೆಂದು ಕಂಡುಬಂದಾಗ ಜೈಲಿಗೂ ಕಳಿಸಲು ಹಿಂಜರಿಯದ ದಿಟ್ಟ ಅಧಿಕಾರಿ, ಸದಾ ಲವಲವಿಕೆ ಮತ್ತು ಜೀವನೋತ್ಸಾಹದಿಂದ ಪುಟಿಯುವ ವ್ಯಕ್ತಿತ್ವ ಎಂದು ಸಹೋದ್ಯೋಗಿಗಳ ಅಭಿಮಾನಕ್ಕೆ ಪಾತ್ರರಾದವರು ಇದೀಗ ತಮ್ಮ 69 ವಯಸ್ಸಿನಲ್ಲೇ ‘ಈ ಬದುಕು ಸಾಕಾಗಿಹೋಗಿದೆ’ ಎಂದು ಪತ್ರಬರೆದಿಟ್ಟು ಸಾವಿಗೆ ಕೊರಳೊಡ್ಡಿದ್ದಾರೆ ಎಂಬುದು ತೀರಾ ಅಸಹಜವಾಗಿ ಕಾಣಿಸುತ್ತಿದೆ. ಇದು ನಿಜವಾಗಿಯೂ ಆತ್ಮಹತ್ಯೆಯೇ? ಒಂದು ವೇಳೆ ಆತ್ಮಹತ್ಯೆಯೇ ಆಗಿದ್ದರೆ ಅವರು ಜೀವನದ ಇಳಿಸಂಜೆಯ ಹೊತ್ತಲ್ಲಿ ವಿಶ್ರಾಂತ ಜೀವನದ ಹೊತ್ತಲ್ಲಿ ಜೀವ ಕಳೆದುಕೊಳ್ಳುವಂತಹ ಕಾರಣವೇನಿತ್ತು? ಇದು ಕೌಟುಂಬಿಕ ಕಾರಣವೇ? ದೈಹಿಕ ಸಮಸ್ಯೆಗಳ ಕಾರಣವೇ? ಅಥವಾ ಹಿಂದಿನ ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಅವರು ತೋರಿದ ದಿಟ್ಟತನ ಮತ್ತು ಅಂತಹ ಪ್ರಕರಣಗಳಲ್ಲಿ ಭಾಗಿಯಾದವರು ಇಂದು ಹೊಂದಿರುವ ಪ್ರಭಾವ ಮತ್ತು ಅಧಿಕಾರದ ಕಾರಣವೇ?
ಹೀಗೆ ಸಾಲು ಸಾಲು ಅನುಮಾನಗಳಿಗೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಶಿಮ್ಲಾ ಪೊಲೀಸರು ಉತ್ತರ ಕಂಡುಕೊಳ್ಳಬೇಕಿದೆ. ಈ ನಡುವೆ, ಅವರಿಗೆ ಮಾನಸಿಕ ಒತ್ತಡ, ಉದ್ವಿಗ್ನತೆಯಂತಹ ಯಾವುದೇ ಸಮಸ್ಯೆಗಳಿರಲಿಲ್ಲ ಎಂದು ಕುಟುಂಬದವರು ಹೇಳಿರುವುದಾಗಿ ವರದಿಯಾಗಿದೆ. ಆ ಹಿನ್ನೆಲೆಯಲ್ಲಿ ಸಾವಿನ ಕುರಿತು ಸಹಜವಾಗೇ ಅನುಮಾನಗಳು ಎದ್ದಿವೆ.
ಅಶ್ವನಿಕುಮಾರ್ ಅವರು ಅಧಿಕಾರದಲ್ಲಿದ್ದಾಗ ನಿರ್ವಹಿಸಿದ ಹಲವು ಪ್ರಕರಣಗಳು ಮತ್ತು ಅವರು ಸದ್ಯದ ಆಡಳಿತ ವ್ಯವಸ್ಥೆಯ ವಿಷಯದಲ್ಲಿ ಆರಂಭದಿಂದಲೂ ಕಾಯ್ದುಕೊಂಡಿದ್ದ ಅಂತರ ಕೂಡ ಇಂತಹ ಅನುಮಾನಗಳಿಗೆ ಇಂಬು ನೀಡಿದೆ. 2008ರಿಂದ 2010ರವರೆಗೆ ಸಿಬಿಐ ನಿರ್ದೇಶಕರಾಗಿದ್ದಾಗ ಅವರು ಹಲವು ವರ್ಷಗಳ ಕಾಲ ನೆನಗುದಿಗೆ ಬಿದ್ದಿದ್ದ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದ್ದರು. ತನಿಖೆಗೆ ವೇಗ ನೀಡಿದ್ದ ಅವರು, ಅಮಿತ್ ಶಾ ಮತ್ತು ಗುಜರಾತ್ ಹಾಗು ರಾಜಸ್ತಾನದ 14 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಬರೋಬ್ಬರಿ 30 ಸಾವಿರ ಪುಟದ ಆರೋಪ ಪಟ್ಟಿ ಸಲ್ಲಿಸಿದ್ದರು. 2005ರಲ್ಲಿ ನಡೆದ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಗಳ ವಿರುದ್ದ ಸೊಹ್ರಾಬುದ್ದೀನ್ ಕೊಲೆ, ಅಪಹರಣ ಮತ್ತು ಒತ್ತೆಹಣಕ್ಕಾಗಿ ಬೆದರಿಕೆ ಹಾಕಿದಕ್ಕೆ ಸಂಬಂಧಿಸಿದಂತೆ ವಿವಿಧ ಆರೋಪಗಳನ್ನು ಉಲ್ಲೇಖಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಸಿಬಿಐ ನೀಡಿದ ನೋಟಿಸ್ ಗೆ ಪ್ರತಿಕ್ರಿಯೆ ನೀಡದ ಅಂದಿನ ಗುಜರಾತ್ ಗೃಹ ಸಚಿವರಾಗಿದ್ದ ಅಮಿತ್ ಶಾ, 2010ರ ಜುಲೈ 24ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಜು.25ರಂದು ಗಾಂಧಿನಗರದ ಸಿಬಿಐ ಕಚೇರಿಯಲ್ಲಿ ಶರಣಾಗಿದ್ದರು.

ಬಳಿಕ ಸಿಬಿಐ ಅಧಿಕಾರಿಗಳು ಅವರನ್ನು ಸಿಬಿಐ ವಿಶೇಷ ನ್ಯಾಯಾಧೀಶ ಎ ವೈ ದವೆ ಅವರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಶಾ ಅವರನ್ನು 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಅವರನ್ನು ಸಾಬರಮತಿ ಜೈಲಿನಲ್ಲಿ ಇಡಲಾಗಿತ್ತು.
ಸಿಬಿಐ ಕಚೇರಿಗೆ ಭೇಟಿ ನೀಡುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅಮಿತ್ ಶಾ, “ಕಾಂಗ್ರೆಸ್ ಆಣತಿಯಂತೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಅದು ಸಂಪೂರ್ಣ ಕಟ್ಟುಕತೆ. ದೇಶಾದ್ಯಂತ 1700ಕ್ಕೂ ಹೆಚ್ಚು ಎನ್ಕೌಂಟರುಗಳಾಗಿವೆ. ಆ ಯಾವುದರ ಬಗ್ಗೆಯೂ ನಡೆದು ತನಿಖೆ ಗುಜರಾತ್ ನಲ್ಲಿ ನಡೆದ ಪ್ರಕರಣಗಳ ವಿಷಯದಲ್ಲಿ ಮಾತ್ರ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ರಾಜಕೀಯ ಷಢ್ಯಂತ್ರ ಈ ಪ್ರಕರಣ ಎಂಬುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ” ಎಂದು ಹೇಳಿದ್ದರು.
ಈ ನಡುವೆ, ಸುಮಾರು ಮೂರು ತಿಂಗಳ ಕಾಲ ಜೈಲಿನಲ್ಲಿದ್ದ ಅಮಿತ್ ಶಾ, ಆ ಬಳಿಕ 2010ರಿಂದ 2012ರವರೆಗೆ ಗುಜರಾತಿನಿಂದ ಗಡೀಪಾರು ಶಿಕ್ಷೆಗೂ ಒಳಗಾಗಿದ್ದರು. ಆ ಅವಧಿಯಲ್ಲಿ ದೆಹಲಿಯ ಗುಜರಾತ್ ಭವನದಲ್ಲಿ ತಮ್ಮ ಪತ್ನಿಯೊಂದಿಗೆ ಇದ್ದ ಶಾ ಅವರಿಗೆ 2012ರ ಸೆಪ್ಟೆಂಬರಿನಲ್ಲಿ ಜಾಮೀನು ಮಂಜೂರು ಮಾಡಿ, ಗುಜರಾತಿಗೆ ಮರಳಲು ಕಾನೂನುಬದ್ಧ ಅವಕಾಶ ನೀಡಿತ್ತು. ಬಳಿಕ 2014ರ ಮೇನಲ್ಲಿ ಪ್ರಧಾನಿ ಮೋದಿಯವರ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಲೇ, ಜೂನ್ ನಲ್ಲಿ ಇದೇ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿಂತೆ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಜೆ ಟಿ ಉತ್ಪತ್ ಎಂಬುವರನ್ನು ದಿಢೀರ್ ವರ್ಗಾವಣೆ ಮಾಡಲಾಗಿತ್ತು.

ಬಳಿಕ ಆ ಸ್ಥಾನಕ್ಕೆ ನೇಮಕವಾದ ನ್ಯಾಯಮೂರ್ತಿ ಬ್ರಿಜಗೋಪಲ್ ಹರಿಕಿಶನ್ ಲೋಯಾ ಅವರು ವಿಚಾರಣೆ ಕೈಗೆತ್ತಿಕೊಂಡ ಆರು ತಿಂಗಳಲ್ಲೇ, ಅದೇ ವರ್ಷದ ಡಿಸೆಂಬರಿನಲ್ಲಿ ನಿಗೂಢ ಸಾವಿಗೀಡಾಗಿದ್ದರು. ಆ ನ್ಯಾಯಾಧೀಶರ ಸಾವಿನ ಸುತ್ತ ಹಲವು ಅನುಮಾನಗಳು ಎದ್ದಿದ್ದವು. ಅವರ ಶವ ಪರೀಕ್ಷೆ ವರದಿ, ಪೊಲೀಸ್ ತನಿಖೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳಿದ್ದವು. ಆ ನಿಗೂಢ ಸಾವಿನ ಕುರಿತು ಸುಪ್ರೀಂಕೋರ್ಟಿನಲ್ಲಿ ಹಲವು ಅರ್ಜಿಗಳೂ ಸಲ್ಲಿಕೆಯಾಗಿದ್ದವು. ಸ್ವತಃ ನ್ಯಾಯಧೀಶರ ಕುಟುಂಬ ಆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೊಕ್ಕದ್ದಮೆ ಹೂಡಿತ್ತು ಮತ್ತು ಪ್ರಕರಣ ವಾಪಸು ತೆಗೆದುಕೊಳ್ಳುವಂತೆ ತಮಗೆ ಅನಾಮಧೇಯ ಬೆದರಿಕೆ ಕರೆಗಳೂ ಬರುತ್ತಿವೆ ಎಂದೂ ಹೇಳಿತ್ತು. ನಂತರ ಈ ಪ್ರಕರಣದ ವಿಚಾರಣೆಯ ವಿಷಯದಲ್ಲಿ ಸುಪ್ರೀಂಕೋರ್ಟ್ ಕೂಡ ನಿಷ್ಪಕ್ಷಪಾತವಾಗಿಲ್ಲ ಎಂಬ ಕಾರಣಕ್ಕೇ ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಬಂದಿದೆ. ದೇಶದ ಸರ್ವೋಚ್ಛ ನ್ಯಾಯಾಲಯ ಕೂಡ ಸ್ವಾಯತ್ತವಾಗಿ ಕೆಲಸ ಮಾಡಲು ಬಿಡದಂತೆ ಆಡಳಿತ ವ್ಯವಸ್ಥೆ ಹಸ್ತಕ್ಷೇಪ ನಡೆಸುತ್ತಿದೆ ಎಂದು ದೇಶದ ಜನತೆಯ ಎದುರು ಅಸಹಾಯಕರಾಗಿ ಕಣ್ಣೀರಿಟ್ಟಿದ್ದರು. ನಂತರ ಸುಪ್ರೀಂಕೋರ್ಟ್ ನ್ಯಾಯಾಧೀಶ ಲೋಯಾ ಸಾವು ಸಹಜ. ಯಾವುದೇ ಅನುಮಾನಗಳಿಗೆ ಸಾಕ್ಷ್ಯಾಧಾರವಿಲ್ಲ ಎಂದು ತೀರ್ಪು ನೀಡಿತ್ತು.
ಸೊಹ್ರಾಬುದ್ದೀನ್ ಪ್ರಕರಣದ ವಿಚಾರಣೆಯ ನಡುವೆಯೇ ನ್ಯಾಯಾಧೀಶ ಲೋಯಾ ಅನುಮಾನಾಸ್ಪದ ಸಾವಿಗೀಡಾದ ಹದಿನೈದೇ ದಿನದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರನ್ನು ಕೈಬಿಡಲಾಗಿತ್ತು. ನ್ಯಾ. ಲೋಯಾ ನಿಧನದ ಬಳಿಕ ವಿಶೇಷ ಸಿಬಿಐ ನ್ಯಾಯಾಧೀಶರಾಗಿ ನೇಮಕವಾಗಿದ್ದ ನ್ಯಾ. ಎಂ ಬಿ ಗೋಸಾವಿ ಅವರು, ತಮ್ಮನ್ನು ಪ್ರಕರಣದಿಂದ ಕೈಬಿಡುವಂತೆ ಕೋರಿ ಅಮಿತ್ ಶಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿ ಕೇವಲ ಹದಿನೈದು ದಿನದಲ್ಲೇ ಅವರನ್ನು ಪ್ರಕರಣದಿಂದ ಕೈಬಿಟ್ಟಿದ್ದರು! ಸಿಬಿಐ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ನೈಜ ವಿಚಾರಣೆ ಆರಂಭವಾಗುವ ಮುನ್ನವೇ, ಸಾಕ್ಷಿಗಳ ವಿಚಾರಣೆಗೆ ಮುನ್ನವೇ ಅಮಿತ್ ಶಾ ಅವರನ್ನು ಪ್ರಕರಣದಿಂದ ಕೈಬಿಡಲಾಗಿತ್ತು! ಇದನ್ನೇ ಬಾಂಬೆ ಹೈಕೋರ್ಟ್ ಮಾಜಿ ನ್ಯಾಯಾಧೀಶ ಅಭಯ್ ಎಂ ತಿಪ್ಸೆ “ಅಸಂಗತ ಅನಿಶ್ಚಿತತೆ” ಎಂದು ಕರೆದು, ಈ ‘ಎನ್ ಕೌಂಟರ್ ಉದ್ದೇಶಪೂರ್ವಕ ಮತ್ತು ಪ್ರಚೋದನಕಾರಿ’ ಎಂದು ಹೇಳಿದ್ದ ನ್ಯಾಯಾಲಯವೇ, ಅಮಿತ್ ಶಾ ಸೇರಿದಂತೆ ಒಟ್ಟು 38 ಆರೋಪಿಗಳ ಪೈಕಿ 15 ಮಂದಿಯನ್ನು ಸಾಕ್ಷ್ಯಾಧಾರಗಳ ವಿಚಾರಣೆಗೆ ಮುನ್ನವೇ ಪ್ರಕರಣದಿಂದ ಕೈಬಿಟ್ಟಿರುವುದು ವಿಪರ್ಯಾಸಕರ ಎಂದು ಹೇಳಿದ್ದರು.

ಹೀಗೆ ನ್ಯಾಯಾಧೀಶರೊಬ್ಬರ ಅನುಮಾನಾಸ್ಪದ ಸಾವು, ಮತ್ತೊಬ್ಬ ನ್ಯಾಯಾಧೀಶರ ದಿಢೀರ್ ವರ್ಗಾವಣೆ, ದೇಶದ ಅತಿಗಣ್ಯ ನಾಯಕ ಅಮಿತ್ ಶಾ ಸೇರಿದಂತೆ ಸಾಲು ಸಾಲು ಮಂದಿ ಆರೋಪಿಗಳನ್ನು ವಿಚಾರಣೆಗೆ ಮುಂಚೆಯೇ ಕೈಬಿಟ್ಟದ್ದು, ಬರೋಬ್ಬರಿ 30 ಮಂದಿ ಸಾಕ್ಷಿಗಳು ಇದ್ದಕ್ಕಿದ್ದಂತೆ ತಮ್ಮ ಮೂಲ ಹೇಳಿಕೆಗಳಿಗೆ ಪ್ರತಿಯಾಗಿ ಸಾಕ್ಷ್ಯ ಹೇಳಿ, ಪ್ರತೀಕೂಲ ಸಾಕ್ಷಿಗಳಾಗಿ ಬದಲಾಗಿದ್ದು, ಮುಂತಾದ ಆಘಾತಕಾರಿ ಬೆಳವಣಿಗೆಗಳನ್ನು ಕಂಡ ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ನಿರ್ಣಾಯಕವಾದ ಸಿಬಿಐ ಆರೋಪ ಪಟ್ಟಿ ಸಲ್ಲಿಸುವಲ್ಲಿ ಮತ್ತು ಪ್ರಮುಖರಾದ ಶಾ ಅವರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಬಿಐ ಮಾಜಿ ನಿರ್ದೇಶಕ ಈಗ ದಿಢೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ!
ಆ ಎಲ್ಲಾ ಹಿನ್ನೆಲೆಯಲ್ಲಿಯೇ ಸಿಬಿಐ ಮಾಜಿ ನಿರ್ದೇಶಕ ಅಶ್ವನಿಕುಮಾರ್ ಅವರ ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಹಲವರ ಬದುಕಿಗೆ ‘ಅಸಂಗತ ಮತ್ತು ಅನಿಶ್ಚಿತತೆ’ಯ ತಿರುವುಗಳನ್ನು ನೀಡಿದ ಕಾಣದ ಕೈಗಳೇ ಈ ಸಾವಿನ ಹಿಂದೆಯೂ ಇವೆಯೇ ಎಂಬುದು ಸದ್ಯಕ್ಕಿರುವ ಅನುಮಾನ. ಆ ಅನುಮಾನಗಳು ಕೇವಲ ಅನುಮಾನವೇ? ಅಥವಾ ವಾಸ್ತವದ ಕರಿಛಾಯೆ ಇದೆಯೇ ಎಂಬುದನ್ನು ತನಿಖೆ ನಡೆಸಬೇಕಾದುದು ಹಿಮಾಚಲಪ್ರದೇಶ ಸರ್ಕಾರದ ಹೊಣೆ!