ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೊಮ್ಮೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ಉಪ ಚುನಾವಣೆ ಫಲಿತಾಂಶದ ಬಳಿಕ ಈ ಮೈತ್ರಿಗೆ ಅವಕಾಶ ಸಿಗುತ್ತದೋ, ಇಲ್ಲವೋ, ಆದರೆ, ಈಗಲೇ ಆ ನಿಟ್ಟಿನಲ್ಲಿ ಮಾತುಕತೆ ಜೋರಾಗಿ ಕೇಳಿಬರುತ್ತಿದೆ. ಇನ್ನೇನು ಬಿಜೆಪಿ ಸರ್ಕಾರ ಉರುಳಿಯೇ ಬಿಟ್ಟಿತು. ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದೊಂದೇ ಬಾಕಿ ಎನ್ನುವಷ್ಟರ ಮಟ್ಟಿಗೆ ಈ ಚರ್ಚೆ ಕಾವೇರುತ್ತಿದೆ.
ಈ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೂರವಿಟ್ಟು ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್ ನಲ್ಲಿ ಚರ್ಚೆ ಆರಂಭವಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಮತ್ತು ಸಿದ್ದರಾಮಯ್ಯ ಮಧ್ಯೆ ಹೊಂದಾಣಿಕೆ ಸಾಧ್ಯವಾಗದ ಮಾತಾಗಿರುವುದರಿಂದ ಈ ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕವಾದ ಮಾತುಗಳು ಜೆಡಿಎಸ್ ವರಿಷ್ಠರ ಕಡೆಯಿಂದಲೂ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ ಅವರು ಮುಂಚೂಣಿಯಲ್ಲಿಲ್ಲದಿದ್ದರೆ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಆದರೆ, ಸಿದ್ದರಾಮಯ್ಯ ಅವರನ್ನು ದೂರವಿಟ್ಟು ಕಾಂಗ್ರೆಸ್ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಏಕೆಂದರೆ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಗೋ, ಸದ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರು ಇದ್ದಾರೆ. ಯಡಿಯೂರಪ್ಪ ಅವರಿಲ್ಲದ ಬಿಜೆಪಿ ರಾಜ್ಯದಲ್ಲಿ 2013ರ ವಿಧಾನಸಬೆ ಚುನಾವಣೆಯಲ್ಲಿ ಯಾವ ಸ್ಥಿತಿಗೆ ತಲುಪಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಸಿದ್ದರಾಮಯ್ಯ ಅವರನ್ನು ದೂರವಿಟ್ಟರೆ ಕಾಂಗ್ರೆಸ್ ಕೂಡ ಅದೇ ಸ್ಥಿತಿಗೆ ಇಳಿಯಲಿದೆ.
ಹೌದು, ರಾಷ್ಟ್ರ ಮಟ್ಟದಲ್ಲಿ ಆಗಲಿ, ರಾಜ್ಯ ಮಟ್ಟದಲ್ಲೇ ಆಗಲಿ, ಯಾವುದೇ ಪಕ್ಷ ಗಟ್ಟಿಯಾಗಿ ನೆಲೆಯೂರಬೇಕಾದರೆ ಅದಕ್ಕೊಂದು ಗಟ್ಟಿ ನಾಯಕತ್ವ ಬೇಕು. 1991ರಲ್ಲಿ ರಾಜೀವ್ ಗಾಂಧಿ ಅವರು ನಿಧನರಾಗಿ ನೆಹರೂ ಕುಟುಂಬದ ನಾಯಕತ್ವದಿಂದ ಆ ಪಕ್ಷ ಯಾವಾಗ ದೂರವಾಯಿತೋ ಅಂದಿನಿಂದ ಕಾಂಗ್ರೆಸ್ ಕೇಂದ್ರದಲ್ಲಿ ಕಾಂಗ್ರೆಸ್ ನಡಿಗೆ ಕುಂಟಲಾರಂಭಿಸಿತು. ಬಳಿಕ ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ಸ್ವಲ್ಪ ಮೇಲೆದ್ದಿತಾದರೂ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟ ಮೇಲೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು.
ರಾಜ್ಯದಲ್ಲೂ ಅದೇ ಪರಿಸ್ಥಿತಿ ಇದೆ. 2004ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಉರುಳಿ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಿದ ಬಳಿಕ ಕಾಂಗ್ರೆಸ್ ಸಾಕಷ್ಟು ತಳಮಟ್ಟಕ್ಕೆ ಬಂತು. ನಂತರ 2013ರಲ್ಲಿ ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಕಾಂಗ್ರೆಸ್ಸನ್ನು ಮೇಲಕ್ಕೆತ್ತಿದ್ದು ಇದೇ ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರೊಬ್ಬರು ಇಲ್ಲದೇ ಇದ್ದರೆ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿರಲಿಲ್ಲ. ಅಷ್ಟೇ ಅಲ್ಲ, 2018ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಮಧ್ಯೆಯೂ ಕಾಂಗ್ರೆಸ್ 80ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದರ ಹಿಂದೆಯೂ ಸಿದ್ದರಾಮಯ್ಯ ಅವರ ಶ್ರಮ ಮತ್ತು ಶಕ್ತಿ ಇದೆ.
ಸಿದ್ದರಾಮಯ್ಯ ಹೊರತು ಪರ್ಯಾಯ ಯಾರಿದ್ದಾರೆ?
ಸದ್ಯ ರಾಜ್ಯ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕ ಎಂದರೆ ಅದು ಡಿ.ಕೆ.ಶಿವಕುಮಾರ್. ಆದರೆ, ಅವರು ಹಳೇ ಮೈಸೂರು ಭಾಗದಲ್ಲಿ ಮಾತ್ರ ಸ್ವಲ್ಪ ಶಕ್ತಿ ಹೊಂದಿದ್ದಾರೆಯೇ ಬಿಟ್ಟರೆ ಉಳಿದೆಡೆ ಅವರಿಗೆ ವಿರೋಧಿಗಳೇ ಜಾಸ್ತಿ. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯದವರು ಎಂಬ ಕಾರಣಕ್ಕೆ ಅವರನ್ನು ಪಕ್ಷದಲ್ಲಿ ಮುನ್ನಲೆಗೆ ಬರಲು ಬಿಡುವುದಿಲ್ಲ. ಉಳಿದಂತೆ ಯಾವ ನಾಯಕರೂ ರಾಜ್ಯದಲ್ಲಿ ಪಕ್ಷವನ್ನು ಬೆಳೆಸುವ ಸಾಮರ್ಥ್ಯ ಹೊಂದಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಅವರನ್ನು ದೂರವಿಟ್ಟರೆ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಶಕ್ತಿ ಬೆಳೆಸಿಕೊಳ್ಳುವದಿರಲಿ, ಉಳಿಸಿಕೊಳ್ಳಲು ಕೂಡ ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ. ಹೀಗಿರುವಾಗ ಸಿದ್ದರಾಮಯ್ಯ ಅವರನ್ನು ದೂರವಿಟ್ಟು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿಯಬಹುದು ಎಂಬುದು ಊಹಿಸುವುದು ಕೂಡ ಕಷ್ಟ.
ಏಕೆಂದರೆ, 2018ರಲ್ಲಿ ವಿಧಾನಸಭೆ ಚುನಾವಣೆ ಮುಗಿದು ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡವು. ಸಿದ್ದರಾಮಯ್ಯ ಅವರಿಗೆ ಇದು ಚೂರೂ ಇಷ್ಟವಿಲ್ಲದಿದ್ದರೂ ವರಿಷ್ಠರ ಮಾತಿಗೆ ಮಣಿದು ಒಪ್ಪಿಕೊಂಡರು. ನಂತರದಲ್ಲಿ ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರಿಗೆ ಪ್ರಾಮುಖ್ಯತೆ ಸಿಗಲಿಲ್ಲ. ಬದಲಾಗಿ ಡಿ.ಕೆ.ಶಿವಕುಮಾರ್ ಮತ್ತು ಡಾ.ಜಿ.ಪರಮೇಶ್ವರ್ ಅವರಿಗೆ ಆದ್ಯತೆ ನೀಡಲಾಯಿತು. ಪರಿಣಾಮ ಎಷ್ಟೇ ಕಸರತ್ತು ಮಾಡಿದರೂ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೈತ್ರಿ ಸರ್ಕಾರ ಉರುಳಿಸುವಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲದೇ ಇರಬಹುದು. ಆದರೆ, ರಕ್ಷಿಸಿಕೊಳ್ಳುವ ಅವಶ್ಯಕತೆ ಅವರಿಗೆ ಇರಲಿಲ್ಲ. ಹೀಗಾಗಿ ಈ ಸರ್ಕಾರ ಉರುಳುವಂತಾಯಿತು.
ಇದರ ಜತೆಗೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲಲ್ಲೂ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರ ಜತೆ ನಿಂತು ಅವರ ಅಭ್ಯರ್ಥಿಗೆ ಸಮೀಪದಲ್ಲಿ ನಿಲ್ಲಬಹುದಾದ ಅಭ್ಯರ್ಥಿಯನ್ನು ಗುರುತಿಸಲು ಅವರ ವಿರೋಧಿ ಬಣಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಬಹುತೇಕ ಸಿದ್ದರಾಮಯ್ಯ ಅವರು ಹೇಳಿದವರಿಗೇ ಟಿಕೆಟ್ ಸಿಕ್ಕಿತು. ಇದಕ್ಕೆ ಅಸಮಾಧಾನಗೊಂಡು ಹಿರಿಯ ನಾಯಕರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿಲ್ಲ ಎಂಬುದು ಹೌದಾದರೂ, ಪಕ್ಷದಲ್ಲಿ ಸೂಕ್ತ ಅಭ್ಯರ್ಥಿ ಹುಡುಕಲು ಕೂಡ ಅವರಿಂದ ಸಾಧ್ಯವಾಗದೇ ಇರುವುದು ಕೂಡ ಸತ್ಯ.
ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸಲೂ ಆಗಲಿಲ್ಲ
ಸಿದ್ದರಾಮಯ್ಯ ಅವರ ನೆರವಿಲ್ಲದೆ ಕಾಂಗ್ರೆಸ್ ಪ್ರಮುಖ ಘಟ್ಟದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಸ್ಪಷ್ಟವಾಗುತ್ತದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಾಧಾನಗೊಂಡು ಹಿರಿಯ ನಾಯಕರು ವಿಧಾನಸಭೆ ಚುನಾವಣೆಯಿಂದ ದೂರ ಉಳಿದ ಪರಿಣಾಮ ಸಿದ್ದರಾಮಯ್ಯ ಅವರು ಉಪ ಚುನಾವಣೆಯತ್ತ ಗಮನಹರಿಸಿ ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದರ ಪರಿಣಾಮ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳನ್ನು ನಿಲ್ಲಿಸಲು ಕಾಂಗ್ರೆಸ್ ಹಿರಿಯ ನಾಯಕರು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಏಕೆಂದರೆ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಇದರಿಂದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವಂತಾಯಿತು. ಚುನಾವಣೆಯಲ್ಲಿ ಸೋಲೋ, ಗೆಲುವೋ ನಂತರದ ಮಾತು. ಆದರೆ, ಅಭ್ಯರ್ಥಿಯೇ ಇಲ್ಲ ಎಂದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ಗೊತ್ತಾಗುತ್ತದೆ.
ಇಷ್ಟೆಲ್ಲಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ದೂರವಿಟ್ಟು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್ ಕೂಡ ಒಡೆದು ಹೋಳಾಗುತ್ತದೆ. ಹೇಗೂ ಸಿದ್ದರಾಮಯ್ಯ ತಮ್ಮ ಕನಸಾಗಿದ್ದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿ ಆಗಿದೆ. ಹೀಗಿರುವಾಗ ಅವರನ್ನು ನಿರ್ಲಕ್ಷಿಸಿದರೆ ತಮ್ಮ ಪಾಡಿಗೆ ತಾವು ಎಂಬಂತೆ ಅವರು ಇರಬಹುದು. ಆಗ ಅವರ ಬೆಂಬಲಿಗರು ನಾಯಕನಿಲ್ಲದೆ, ಇದುವರೆಗೆ ಸಿದ್ದರಾಮಯ್ಯ ಕಾರಣದಿಂದ ತಾವು ವಿರೋಧಿಸುತ್ತಾ ಬಂದಿರುವ ಕಾಂಗ್ರೆಸ್ಸಿನ ಇತರೆ ನಾಯಕರೊಂದಿಗೆ ಹೋಗಲೂ ಇಷ್ಟವಿಲ್ಲದೆ ಪರ್ಯಾಯ ದಾರಿ ಕಂಡುಕೊಳ್ಳಬಹುದು. ಸದ್ಯಕ್ಕೆ ಅಧಿಕಾರದ ರಾಜಕಾರಣದಲ್ಲಿ ಅವರಿಗೆ ಮೊದಲು ಕಾಣಿಸಿಕೊಳ್ಳುವುದು ಅಧಿಕಾರದಲ್ಲಿರುವ ಬಿಜೆಪಿ.