ರಾಜ್ಯ ಕಾರ್ಯಕಾರಣಿ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಯ ಬಳಿಕ ಬಿಜೆಪಿಯ ಆಂತರಿಕ ಬೇಗುದಿ ಕೆಲಮಟ್ಟಿಗೆ ಶಮನವಾದ ಸೂಚನೆಗಳು ಸಿಗುತ್ತಿವೆ. ಆದರೆ, ಅದೇ ಹೊತ್ತಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತ ಸಮುದಾಯ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಕಾಯ್ದೆಯ ಅಪಾಯಗಳ ಬಗ್ಗೆ ಚರ್ಚಿಸಬೇಕಾದ, ಜನಜಾಗೃತಿ ಮೂಡಿಸಬೇಕಾದ ಪ್ರತಿಪಕ್ಷಗಳೆರಡು, ಅಂತಹ ಗಂಭೀರ ವಿಷಯದ ಚರ್ಚೆಯ ಬದಲಿಗೆ ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿವೆ.
ಸದ್ಯಕ್ಕೆ ವಿಧಾನಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಮಂಡಿಸಲಿರುವ ಅವಿಶ್ವಾಸ ಗೊತ್ತುವಳಿಯ ವಿಷಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಯಾರು ಹೆಚ್ಚು ಜಾತ್ಯತೀತರು, ಯಾರು ಬಿಜೆಪಿಯ ನಿಜವಾದ ವಿರೋಧ ಪಕ್ಷ ಎಂಬ ಚರ್ಚೆ ಕಾವೇರಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾಗಿ, ಒಂದೂವರೆ ವರ್ಷ ಕಳೆದರೂ, ಜೆಡಿಎಸ್ ನಾಯಕ ಎಚ್ ಡಿ ಕುಮಾರ ಸ್ವಾಮಿ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಡುವಿನ ಸರ್ಕಾರದ ಬೀಳಿಸಿದ ಕುರಿತ ಪರಸ್ಪರರತ್ತ ಬೊಟ್ಟುಮಾಡುವ ಪ್ರವೃತ್ತಿ ನಿಂತಿಲ್ಲ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹಾಗೆ ನೋಡಿದರೆ, ಕಳೆದ ವರ್ಷದ ಜುಲೈನಲ್ಲಿ ಮೈತ್ರಿ ಸರ್ಕಾರ ಕುಸಿದ ಕ್ಷಣದಿಂದಲೇ ಜೆಡಿಎಸ್ ನಾಯಕ ಕುಮಾರಸ್ವಾಮಿ ಬಿಜೆಪಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಪರ ಸದನದಲ್ಲೇ ಬೆಂಬಲ ಘೋಷಿಸಿದ್ದರು. ಆ ಬಳಿಕ ಕೂಡ ಅವರು ನೆರೆ ಪರಿಹಾರ ಕಾರ್ಯಾಚರಣೆಯ ವಿಷಯವಿರಬಹುದು, ಕೋವಿಡ್ ನಿರ್ವಹಣೆಯ ವಿಷಯವಿರಬಹುದು.., ಹಲವು ಬಾರಿ ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರದ ಪರ ಮಾತನಾಡಿದ್ದಾರೆ. ತೀರಾ ಇತ್ತೀಚೆಗೆ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮುನ್ನ ಮತ್ತು ಕಳೆದ ಕೆಲವು ದಿನಗಳ ಹಿಂದೆ ಕೂಡ ಸ್ವತಃ ಯಡಿಯೂರಪ್ಪ ಅವರನ್ನು ಖಾಸಗಿಯಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಜೊತೆಗೆ ತೀರಾ ಗ್ರಾಮ ಪಂಚಾಯ್ತಿ ಚುನಾವಣೆಯ ಅಂಗವಾಗಿ ಬಿಜೆಪಿ ರಾಜ್ಯದಲ್ಲಿ ಹಮ್ಮಿಕೊಂಡಿರುವ ಗ್ರಾಮ ಸ್ವರಾಜ್ ಆಂದೋಲನವನ್ನು ಗಾಂಧಿಯ ಗ್ರಾಮ ಸ್ವರಾಜ್ ಗೆ ಹೋಲಿಸಿ ಶ್ಲಾಘಿಸುವ ಮಟ್ಟಿಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮಾನಸಿಕವಾಗಿ ಸಮೀಕರಣ ಸಾಧಿಸಿದ್ದಾರೆ. ಇದೀಗ ವಿಧಾನಪರಿಷತ್ ಸಭಾಧ್ಯಕ್ಷರ ವಿರುದ್ದದ ಅವಿಶ್ವಾಸ ಗೊತ್ತುವಳಿ ವಿಷಯದಲ್ಲಿ ಕೂಡ ಬಿಜೆಪಿ ಪರ ನಿಲ್ಲುವ ಸೂಚನೆ ನೀಡಿದ್ದಾರೆ.
Also Read: ಜಾತಿಗಳ ಒಡೆಯುವಿಕೆ ಹಾಗೂ ಅನಗತ್ಯ ಓಲೈಕೆಯೇ ಸಿದ್ದರಾಮಯ್ಯ ಜಾತ್ಯಾತೀತತೆ – HDK
ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಎಂಬುದು ಯಾವಾಗಲೂ ಬಿಜೆಪಿಯ ಬಿ ಟೀಮ್, ಪಕ್ಷದ ಅಧಿನಾಯಕ ದೇವೇಗೌಡರು ಹೇಳುವುದು ಜಾತ್ಯತೀತ ಎಂಬ ಮಾತನ್ನು, ಆದರೆ, ವಾಸ್ತವವಾಗಿ ಅವರು ಎಂದೂ ಅಸಲೀ ಜಾತ್ಯತೀತ ನಿಲುವಿಗೆ ಅಂಟಿಕೊಂಡಿಲ್ಲ. ನಿರ್ಣಾಯಕ ಹೊತ್ತಿನಲ್ಲಿ ಯಾವಾಗಲೂ ಬಿಜೆಪಿಗೆ ಬೆಂಬಲವಾಗಿ ನಿಂತಿರುವುದು. ಜೆಡಿಎಸ್ ನ ರಾಜಕೀಯ ವಿರೋಧಿ ಕಾಂಗ್ರೆಸ್ ಪಕ್ಷವೇ ವಿನಃ ಬಿಜೆಪಿಯಲ್ಲ. ಅವರು ಬಿಜೆಪಿ ಬಗ್ಗೆ ಯಾವಾಗಲೂ ಮೃದು ಧೋರಣೆ ಹೊಂದಿದ್ದಾರೆ. ಹಾಗಾಗಿ ಜೆಡಿಎಸ್ ಪಕ್ಷ ಬಿಜೆಪಿಯ ‘ಬಿ ಟೀಮ್’ ಎಂದು ಹೇಳಿದ್ದಾರೆ.
“ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಆದರೆ ನಮ್ಮದು ಜಾತ್ಯಾತೀತ ಪಕ್ಷ ಎನ್ನುವ ಜೆಡಿಎಸ್ ಕೋಮುವಾದಿಗಳ ಪರವಾಗಿ ಮತ ಚಲಾಯಿಸುತ್ತದೋ, ವಿರುದ್ಧವಾಗಿ ಮತ ಚಲಾಯಿಸುತ್ತದೋ ಎಂಬುದನ್ನು ನೋಡಲು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಈಗಲೇ ರಾಜೀನಾಮೆ ನೀಡದಂತೆ ಹೇಳಿದ್ದೇನೆ” ಎಂದೂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
Also Read: ಪ್ರೀ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ ನನ್ನ ಹೆಸರು ಕೆಡಿಸಿದ್ದಾರೆ- HDK
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಸಭಾಪತಿ ಅವಿಶ್ವಾಸ ನಿರ್ಣಯದ ವೇಳೆ ಬೆಂಬಲ ನೀಡುವಂತೆ ಕಾಂಗ್ರೆಸ್ಸಿನ ಯಾವ ನಾಯಕನೂ ಸೌಜನ್ಯಕ್ಕೂ ಜೆಡಿಎಸ್ ಬಳಿ ಚರ್ಚಿಸಿಲ್ಲ. ಹೀಗಿದ್ದೂ, ಜೆಡಿಎಸ್ಸಿನ ಜಾತ್ಯತೀತತೆಯ ಪರೀಕ್ಷೆ ನಡೆಯುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆ ದುರಹಂಕಾರದ್ದು. ಬೆಂಬಲ ಕೇಳದಿದ್ದರೂ ಬೆಂಬಲಿಸಲು ನಾವೇನು ಗುಲಾಮರಲ್ಲ. ಕಾಂಗ್ರೆಸ್ಸಿನ ಇಂತಹ ದೌಲತ್ತೇ ಅದರ ಇವತ್ತಿನ ದುಃಸ್ಥಿತಿಗೆ ಕಾರಣ”ಎಂದು ಟ್ವೀಟ್ ಮಾಡಿದ್ದಾರೆ.
ಹೀಗೆ ಇಬ್ಬರೂ ನಾಯಕ ನಡುವೆ ಆನ್ ಲೈನ್, ಆಫ್ ಲೈನ್ ವಾಗ್ವಾದ ಮುಗಿಲುಮುಟ್ಟಿದೆ. ಟ್ವೀಟ್ ಸಮರ ಕಾವೇರಿದೆ.
ಆದರೆ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು, ಕಳೆದ ವಾರ ತಾವು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲು ಸಿದ್ದರಾಮಯ್ಯನವೇ ಕಾರಣ, ಅವರು ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದೇ ತಮ್ಮ ಇಮೇಜ್ ಹಾಳು ಮಾಡಿ ಜೆಡಿಎಸ್ ಪಕ್ಷವನ್ನು ನಾಶಮಾಡುವ ಕುತಂತ್ರದಿಂದ. ಆದರೆ, ಅಂತಹ ಕುತಂತ್ರ ತಮಗೆ ತಡವಾಗಿ ಅರ್ಥವಾಯಿತು. ತಮ್ಮ ತಂದೆ ದೇವೇಗೌಡರ ಮಾತು ಕೇಳಿ ತಾನು ಹಾಳಾದೆ ಎಂದು ಗೋಳಿಟ್ಟಿದ್ದರು.
ಹಾಗೆ ನೋಡಿದರೆ, ಕುಮಾರಸ್ವಾಮಿ ಅವರ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರೋಧಿ ಈ ಧೋರಣೆ ಹೊಸದೇನಲ್ಲ. ಕಳೆದ ವಿಧಾನಸಭೆಯ ಸಿದ್ದರಾಮಯ್ಯ ಸಿಎಂ ಅವಧಿಯುದ್ದಕ್ಕೂ ವೈಯಕ್ತಿಕವಾಗಿ ಅವರ ವಿರುದ್ಧ ಮತ್ತು ಅವರ ಆಡಳಿತದ ವಿರುದ್ಧ ಪ್ರಬಲ ದನಿಯಾಗಿದ್ದದ್ದೇ ಅಧಿಕೃತ ಪ್ರತಿಪಕ್ಷ ಬಿಜೆಪಿಗಿಂತ ಜೆಡಿಎಸ್ ಮತ್ತು ಕುಮಾರಸ್ವಾಮಿಯವರೇ. ಆ ಬಳಿಕ ಕೂಡ ಕಾಂಗ್ರೆಸ್ ಮೈತ್ರಿಯೊಂದಿಗೆ ಸಿಎಂ ಸ್ಥಾನದಲ್ಲಿದ್ದಾಗಲೂ ಬಹುತೇಕ ಆರಂಭದ ಮೂರ್ನಾಲ್ಕು ತಿಂಗಳು ಹೊರತುಪಡಿಸಿ ಉಳಿದಂತೆ ವಾಗ್ವಾದ, ಹೇಳಿಕೆ-ಪ್ರತಿ ಹೇಳಿಕೆಗಳ ಸಮರ ನಡೆಯುತ್ತಿದ್ದದ್ದು ಕೂಡ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆಯೇ.
ಆದರೆ, ಇತ್ತೀಚಿನ ಒಂದೂವರೆ ವರ್ಷದಲ್ಲಿ ಕುಮಾರಸ್ವಾಮಿಯವರ ಮಾತಿನ ಧಾಟಿ ಇನ್ನಷ್ಟು ಸ್ಪಷ್ಟವಾಗಿದ್ದು, ಕೇವಲ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧದ ಟೀಕೆಗೆ ಮಾತ್ರ ಸೀಮಿತವಾಗಿರದೆ, ಬಿಜೆಪಿ ಮತ್ತು ಯಡಿಯೂರಪ್ಪ ಅವರ ಹೊಗಳಿಕೆ ಮತ್ತು ಉಪಚುನಾವಣೆ ಸೇರಿದಂತೆ ಸದನದ ಒಳಹೊರಗೆ ನಿರ್ಣಾಯಕ ಸಂದರ್ಭದಲ್ಲಿ ಅವರಿಗೆ ಪರೋಕ್ಷ- ಪ್ರತ್ಯಕ್ಷ ಬೆಂಬಲ ನೀಡುವವರೆಗೂ ವಿಸ್ತರಿಸಿದೆ. ಜೆಡಿಎಸ್ ನಾಯಕರ ಈ ವರಸೆಯ ಕಾರಣಕ್ಕೇ ಆ ಪಕ್ಷದ ಹಲವು ನೈಜ ಜಾತ್ಯತೀತ ನಿಲುವಿನ ನಾಯಕರು ಪಕ್ಷದ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದಾರೆ. ಕೆಲವರಂತೂ ಸಕ್ರಿಯ ರಾಜಕಾರಣದಿಂದಲೇ ನಿವೃತ್ತರಾಗುವ ಮಾತುಗಳನ್ನಾಡುತ್ತಿದ್ದಾರೆ. ಒಂದು ಕಡೆ ಪಕ್ಷದ ಮೇಲೆ ಹಿರಿಯರ ಹಿಡಿತ ಸಡಿಲವಾಗುತ್ತಿದ್ದರೆ, ಮತ್ತೊಂದು ಕಡೆ ಕುಮಾರಸ್ವಾಮಿಯವರ ಡೋಲಾಯಮಾನ ನಿಲುವುಗಳು, ಅವಕಾಶವಾದಿ ಧೋರಣೆಗಳು ಪಕ್ಷದ ಅಳಿದುಳಿದ ವರ್ಚಸ್ಸಿಗೂ ಮಂಕುಕವಿಸಿದೆ. ಜೊತೆಗೆ ಕುಟುಂಬ ರಾಜಕಾರಣದ ಮೋಹಕ್ಕೆ ಬಿದ್ದು ಕುಮಾರಸ್ವಾಮಿ ಇಡೀ ಪಕ್ಷವನ್ನು ದಶಕಗಳಿಂದ ಕಟ್ಟಿಬೆಳೆಸಿದ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ. ಹಾಗಾಗಿ ಪಕ್ಷ ರಾಜಕೀಯವಾಗಿ ದಿನದಿಂದ ದಿನಕ್ಕೆ ಕುಗ್ಗತೊಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ನಡುವೆ, ಬಿಜೆಪಿ ತನ್ನ ಯೋಜಿತ ತಂತ್ರಗಾರಿಕೆಯ ಮೂಲಕ ಒಕ್ಕಲಿಗ ಸಮುದಾಯಕ್ಕೆ ಆಯಕಟ್ಟಿನ ಸ್ಥಾನಗಳನ್ನು ನೀಡುವ ಮೂಲಕ ತಾನು ಕೇವಲ ಲಿಂಗಾಯತ, ಬ್ರಾಹ್ಮಣ ಪಕ್ಷವಲ್ಲ; ಒಕ್ಕಲಿಗರ ಪಕ್ಷ ಕೂಡ ಎಂಬುದನ್ನು ಬಿಂಬಿಸುತ್ತಿದೆ ಮತ್ತು ಜೆಡಿಎಸ್ ಭದ್ರಕೋಟೆ ಹಳೇಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಯ ಬಲಪಡಿಸುವ ಮೂಲಕ ರಾಜಕೀಯವಾಗಿ ಪ್ರಬಲವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಸದ್ಯಕ್ಕೆ ಜೆಡಿಎಸ್ ಗೆ ನಿಜವಾಗಿಯೂ ರಾಜಕೀಯವಾಗಿ ಅಪಾಯವಿರುವುದು ಬಿಜೆಪಿಯಿಂದಲೇ ವಿನಃ ಕಾಂಗ್ರೆಸ್ಸಿನಿಂದಲ್ಲ. ಈ ಸೂಕ್ಷ್ಮವನ್ನೂ ಅರಿತೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಬಿಜೆಪಿ ಮತ್ತು ಯಡಿಯೂರಪ್ಪ ಪರ ಬಿಡುಬೀಸಿನ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರೆ; ಅದರರ್ಥ ಸಿದ್ದರಾಮಯ್ಯ ಹೇಳುವಂತೆ ಬಿಜೆಪಿಗೆ ಅವರು ಹೆಚ್ಚು ಹತ್ತಿರವಾಗುತ್ತಿದ್ದಾರೆ ಎಂದೇ.
ಆದರೆ, ಹೀಗೆ ಕುಮಾರಸ್ವಾಮಿಯವರು ಕಮಲವನ್ನು ಅಪ್ಪಿಕೊಳ್ಳುತ್ತಿರುವುದು ಕೇವಲ ತಮ್ಮ ವೈಯಕ್ತಿಕ ಕುಟುಂಬ ಹಿತ ಕಾಯುವ ಉದ್ದೇಶಕ್ಕೋ ಅಥವಾ ಅದು ಬಿಜೆಪಿಯಲ್ಲಿ ರಾಜಕೀಯ ಭವಿಷ್ಯ ಅರಸುವ ಯೋಜಿತ ನಡೆಯೋ ಎಂಬುದು ಸದ್ಯಕ್ಕೆ ಇರುವ ಕುತೂಹಲ! ಅದೇನೇ ಇರಲಿ; ಸದ್ಯಕ್ಕಂತೂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರುವ ತಮ್ಮ ಸೇಡಿನ ನಡೆಯಲ್ಲಿ ಕುಮಾರಸ್ವಾಮಿಯವರು ಕಮಲಮೋಹಿತರಾಗಿರುವುದಂತೂ ನಿಜ!