ಮಾಜಿ ಮುಖ್ಯಮಂತ್ರಿಗಳಿಬ್ಬರ ನಡುವಿನ ವಾಕ್ಸಮರ ಮತ್ತೆ ಮುಂದುವರೆದಿದೆ. ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರ ನಡುವಿನ ಬಹಿರಂಗ ವಾಗ್ಯುದ್ದದ ಮುಂದುವರಿಕೆಯಾಗಿ ಸಿದ್ದರಾಮಯ್ಯ ಅವರನ್ನು ʼಶತಮಾನದ ಸುಳ್ಳುಗಾರʼ ಎಂದು ಹೆಚ್‌ಡಿಕೆ ಜರೆದಿದ್ದಾರೆ.
“ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಸಂಬಂಧ ಜೆಡಿಎಸ್ ಜೊತೆ ಚರ್ಚೆ ನಡೆಸಿದ್ದೆವು. ಆದರೆ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರಿಂದ ಬೆಂಬಲ ಸಿಗಲಿಲ್ಲ ಎಂದು ಹಸಿಸುಳ್ಳು ಹೇಳುವ ಮೂಲಕ ಈ ‘ಶತಮಾನದ ಮಹಾ ಸುಳ್ಳುಗಾರ’ ಎಂದು ಸಿದ್ದರಾಮಯ್ಯ ಸ್ವಯಂ ಘೋಷಿಸಿಕೊಂಡಿದ್ದಾರೆ. ಕಳೆದ ಶತಮಾನದಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಒಬ್ಬರಿಗೆ ಅಂಟಿದ್ದ ‘ಮಹಾನ್ ಸುಳ್ಳುಗಾರ’ ಎಂಬ ಕಳಂಕವನ್ನು ತಾನಾಗಿಯೇ ಕಸಿದುಕೊಂಡಿರುವ ಸಿದ್ದರಾಮಯ್ಯ ಈ ಶತಮಾನದ ಮಹಾನ್ ಸುಳ್ಳುಗಾರರಾಗಿ ಹೊರಹೊಮ್ಮಿದ್ದಾರೆ,” ಎಂದು ಸರಣಿ ಟ್ವೀಟ್‌ಗಳ ಮೂಲಕ ಸಿದ್ದರಾಮಯ್ಯ ವಿರುದ್ದ ಕೆಂಡಕಾರಿದ್ದಾರೆ.
ಶನಿವಾರ ನಡೆದ ರೈತ ಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯನವರು, ಮಣ್ಣಿನ ಮಕ್ಕಳು ಅನ್ನಿಸಿಕೊಂಡವರು ಬೀದಿಗಿಳಿದು ಹೋರಾಟ ಮಾಡಬೇಕು, ಮನೆಯಲ್ಲಿ ಕೂರುವುದಲ್ಲ ಎಂದು ಹೆಚ್‌ಡಿಕೆ ವಿರುದ್ದ ಪರೋಕ್ಷವಾಗಿ ಟೀಕೆ ಮಾಡಿದ್ದರು. ಇದಕ್ಕುತ್ತರವಾಗಿ ಕುಮಾರಸ್ವಾಮಿ ಅವರು, ಮಂಡ್ಯದ ಮೂಲಕ ಇಂಡಿಯಾ ಹಿಡಿಯುವ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸಿಗರು ಅನ್ನದಾತನ ಅಸ್ತ್ರ ಬಳಸಿದರೆ ಮಂಡ್ಯದ ಮಣ್ಣಿನ ಮಕ್ಕಳು ತಕ್ಕ ಪಾಠ ಕಲಿಸಲಿದ್ದಾರೆ. ಅನ್ನದಾತರ ಬಗೆಗಿನ ಬದ್ಧತೆ ಬಗ್ಗೆ ನಿಮ್ಮೆಲ್ಲರಿಗಿಂತ ಹೆಚ್ಚಿನ ಕರುಳಬಳ್ಳಿಯ ಸಂಬಂಧ ಜೆಡಿಎಸ್ ಗಿದೆ, ಎಂದು ಹೇಳಿದ್ದಾರೆ.
Also Read: ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರು ಬೀದಿಗಿಳಿದು ಪ್ರತಿಭಟಿಸಬೇಕು – ಸಿದ್ದರಾಮಯ್ಯ
“ಜೆಡಿಎಸ್ ನೊಂದಿಗೆ ಯಾವುದೇ ಮಾತುಕತೆ ನಡೆಸದೆ ಸಿದ್ದರಾಮಯ್ಯ ಹಸಿ ಸುಳ್ಳು ಹೇಳುವ ಮೂಲಕ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಟ್ಟು ನಗೆಪಾಟಲಿಗೆ ಈಡಾಗಿದ್ದಾರೆ. ಬಾಯಿ ಚಪಲಕ್ಕೆ ಸುಳ್ಳುಗಳನ್ನು ಹೇಳುವ ಚಾಳಿಯನ್ನು ಸಿದ್ದರಾಮಯ್ಯ ಇನ್ನಾದರೂ ಬಿಡಬೇಕು. ರೈತರ ಪರ ಕಾಳಜಿ, ಬದ್ಧತೆಯನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಜೆಡಿಎಸ್ ಕಲಿಯಬೇಕಾದದ್ದು ಏನೂ ಇಲ್ಲ. ಸಂತೆ ಭಾಷಣ ಮಾಡುವ ಸಿದ್ದರಾಮಯ್ಯ ವಿದೂಷಕನಂತೆ ಜೆಡಿಎಸ್ ವಿರುದ್ಧ ಹರಿಹಾಯುತ್ತಿರುವುದು ಪ್ರತಿ ಪಕ್ಷದ ನಾಯಕನಿಗೆ ಭೂಷಣವಲ್ಲ,” ಎಂದು ಟೀಕಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಒನ್ನು ಸಿದ್ದರಾಮಯ್ಯ ಅಹಿಂದ ರಾಜಕಾರಣದ ಕುರಿತು ಮಾತನಾಡಿರುವ ಕುಮಾರಸ್ವಾಮಿ, “ನಾನು ಚುನಾವಣೆ ಬಂದಾಗ ಜಾತಿ ಕಾರ್ಡ್ ಪ್ಲೇ ಮಾಡುತ್ತೇನೆ ಎಂದು ಮೂದಲಿಸುವ ಸಿದ್ದರಾಮಯ್ಯ ‘ಅಹಿಂದ’ ರಾಮಯ್ಯ ಆಗಿದ್ದು ಏಕೆ? ನಕಲಿ ಸಮಾಜವಾದಿಯ ‘ಅಹಿಂದ ‘ಮುಖವಾಡ ಇಡೀ ನಾಡಿಗೆ ಗೊತ್ತಿದೆ,” ಎಂದಿದ್ದಾರೆ.