ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಜೆಡಿಎಸ್ ಬೆಂಬಲ ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರು ಪತ್ರಿಕಾಗೋಷ್ಟಿಯಲ್ಲಿ ಸಿದ್ದರಾಮಯ್ಯ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು ಏಕವಚನದಲ್ಲಿ ಪದಬಳಕೆ ಮಾಡಿದ್ದನ್ನು ತೀವ್ರವಾಗಿ ಖಂಡಿಸಿರುವ ಕುಮಾರಸ್ವಾಮಿ ಅವರು, ತಾನೂ ಏಕೆ ಏಕವಚನದಲ್ಲಿ ಅವರನ್ನು ಮಾತನಾಡಿಸಬಾರದು ಎಂದು ಪ್ರಶ್ನಿಸಿದ್ದಾರೆ.
“ಸಿದ್ದರಾಮಯ್ಯನವರು ಏನು ಏಕವಚನದಲ್ಲಿ ಪದಬಳಕೆ ಮಾಡಿದ್ದಾರೆ, ಅದರ ದುಪ್ಪಟ್ಟು ನಾನು ಮಾಡಬಲ್ಲೆ. ನಾಣು ಬೇನಾಮಿ ಆಸ್ತಿ ಮಾಡಿದ್ದೇನೆ ಅಂತ ಬಹಿರಂಗವಾಗಿ ಆರೋಪ ಹೊರಿಸಿದ್ದಾರೆ. ಅವರಿಗೆ ತಾಕತ್ತಿದ್ದರೆ ನನ್ನ ವಿರುದ್ದ ಒಂದೇ ಒಂದು ಬೇನಾಮಿ ಆಸ್ತಿ ಪ್ರಕರಣವನ್ನು ಸಾಬೀತು ಮಾಡಿ ತೋರಿಸಲಿ. ಒಂದು ವೇಳೆ ಅವರು ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯಲು ತಯಾರಾಗಿದ್ದೇನೆ,” ಎಂದು ಸವಾಲು ಹಾಕಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ದೇವೇಗೌಡರ ವಿರುದ್ದ ಸಿದ್ದರಾಮಯ್ಯನವರು ಆಡಿದ ಮಾತುಗಳ ಕುರಿತಾಗಿಯೂ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಹೆಚ್ಡಿಕೆ, ದೇವೇಗೌಡರು ಶಾಸಕರಾಗಿದ್ದಾಗ ರಾತ್ರಿಯವರೆಗೆ ಕಲಾಪ ಮುಗಿಸಿ ಮಧ್ಯರಾತ್ರಿ ಹೇಮಾವತಿ ಹೊಳೆ ಈಜಿ ಮನೆಗೆ ಬರುತ್ತಿದ್ದರು. ಮರುದಿನ ಬೆಳಿಗ್ಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಕುರಿತು ಯಾರೂ ಮಾತನಾಡುವ ಅಗತ್ಯವಿಲ್ಲ ಅವರೇನೆಂದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಜೆಡಿಎಸ್ ಬೆಂಬಲ ನೀಡಿದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ಹಳೆಯ ಭೂ ಸುಧಾರಣಾ ಕಾಯ್ದೆಯನ್ನೇ ಮುಂದುವರೆಸಲಾಗಿದೆ. ಕೇವಲ 79A ಮತ್ತು 79Bಯನ್ನು ಮಾತ್ರ ಬದಲಾಯಿಸಲಾಗಿದೆ. ನಾವು ನಮ್ಮ ನಿಲುವಿನಲ್ಲಿ ಬದ್ದರಾಗಿದ್ದೇವೆ. ಯಾರು ಏನೇ ಹೇಳಿದರೂ, ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.