ಸದಾ ನ್ಯಾಯಾಂಗದಲ್ಲಿರುವ ಹುಳುಕನ್ನು ಎತ್ತಿ ತೋರಿಸುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಈ ಬಾರಿ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಎಸ್ ಬೊಬ್ಡೆಯನ್ನು ಟ್ವೀಟ್ ಮೂಲಕ ಟೀಕಿಸಿದ್ದಾರೆ.
CJI ಎಸ್ ಎ ಬೊಬ್ಡೆ ಅವರ ಪ್ರವಾಸಕ್ಕೆ ಮಧ್ಯಪ್ರದೇಶ ಸರ್ಕಾರವು ಚಾಪರ್ ಒದಗಿಸಿರುವುದು ಈಗಿನ ಟೀಕೆಗೆ ಕಾರಣ. ಮಧ್ಯಪ್ರದೇಶದಲ್ಲಿರುವ ಕಾನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಜಬಲ್ಪುರದಿಂದ ಕಾನ್ಹಾ ಉದ್ಯಾನವನದ ವರೆಗೂ ಹಾಗೂ ಅಲ್ಲಿಂದ ತಮ್ಮ ಹುಟ್ಟೂರಾದ ನಾಗ್ಪುರಕ್ಕೆ ಭೇಟಿ ನೀಡಲು ಮಧ್ಯಪ್ರದೇಶ ಸರ್ಕಾರವು ಚಾಪರ್ ವ್ಯವಸ್ಥೆಯನ್ನು ಮಾಡುವಂತೆ ಆದೇಶ ಹೊರಡಿಸಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಫ್ಯಾಕ್ಸ್ ಮುಖಾಂತರ ಹೊರಡಿಸಿದ್ದ ಆದೇಶದಲ್ಲಿ ಸಿಜೆಐ ಬಿಬ್ಡೆ ಅವರ ಪ್ರವಾಸ ವಿವರನ್ನು ಉಲ್ಲೇಖಿಸಲಾಗಿದ್ದು, ಅವರು ರಾಜ್ಯದಲ್ಲಿ ಇರುವ ವರೆಗೂ ಅವರನ್ನು ರಾಜ್ಯದ ಅತಿಥಿಯಾಗಿ ನೋಡಿಕೊಳ್ಳಲು ಆದೇಶಿಸಲಾಗಿದೆ. ಅಪರಾಹ್ನ 12 ಗಂಟೆಗೆ ಚಾಪರ್‌ನಲ್ಲಿ ಜಬಲ್ಪುದಿಂದ ಹೊರಟು, 12.30ಕ್ಕೆ ಕಾನ್ಹಾ ರಾಷ್ಟ್ರೀಯ ಉದ್ಯಾನವನ ತಲುಪುತ್ತಾರೆ. ಅಲ್ಲಿಂದ ಸಂಜೆ 3.30ರ ವೇಳೆಗೆ ನಾಗ್ಪುರಕ್ಕೆ ಚಾಪರ್‌ನಲ್ಲಿ ಹೋಗಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ, ಮಧ್ಯಪ್ರದೇಶದ ಉಪ ಕಾರ್ಯದರ್ಶಿ ಹಾಗೂ ಶಿಷ್ಟಾಚಾರ ವಿಭಾಗದ ಅಧಿಕಾರಿಯಾದ ಡಿ ಕೆ ನಾಗೇಂದ್ರ ಅವರು ಆದೇಶ ನೀಡಿದ್ದರು.

The CJI avails a special chopper provided by the MP Govt (authorised by the CM) for a visit to Kanha National Park& then to his home town in Nagpur, while an important case of disqualification of defecting MLAs of MP is pending before him. Survival of MP govt depends on this case pic.twitter.com/XWkYVjHkvH
— Prashant Bhushan (@pbhushan1) October 21, 2020
ಇಷ್ಟು ಮಾತ್ರ ವಿಷಯವಾಗಿದ್ದರೆ, ಸಿಜೆಐ ಅವರನ್ನು ಟೀಕಿಸುವ ಅಗತ್ಯವಿರಲಿಲ್ಲ. ಆದರೆ, ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದ ಶಾಸಕರ ಹಾಗೂ ಸಂಸದರನ್ನು ಅಮಾನತುಗೊಳಿಸಿದ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ. ಈ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರ ನೇತೃತ್ವದ ಪೀಠವು ನಡೆಸುತ್ತಿದೆ.

ಮಧ್ಯಪ್ರದೇಶ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಇರುವಂತಹ ಈ ಪ್ರಕರಣ ಇತ್ಯರ್ಥವಾಗದೇ, ಅದೇ ರಾಜ್ಯದ ಅತಿಥಿ ಸತ್ಕಾರವನ್ನು ಸ್ವೀಕರಿಸುವುದು ಎಷ್ಟು ಸರಿ ಎಂಬುದು ಪ್ರಶಾಂತ್ ಭೂಷಣ್ ಅವರ ಟೀಕೆ.
ಈಗಾಗಲೇ ಸಿಜೆಐ ಬೊಬ್ಡೆ ಅವರು, ಬಿಜೆಪಿ ನಾಯಕನೋರ್ವನ ಐಶಾರಾಮಿ ಬೈಕ್ ಚಲಾಯಿಸಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅದರ ಕುರಿತು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಶಾಂತ್ ಭೂಷಣ್ ವಿರುದ್ದ ನ್ಯಾಯಂಗ ನಿಂದನೆಯ ಪ್ರಕರಣವನ್ನೂ ದಾಖಲಿಸಲಾಗಿತ್ತು.