ಸಿಗಂದೂರು ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದೆ. ಜಗದ ರಕ್ಷಕಿ ಎಂದೇ ಭಕ್ತರಿಂದ ಕರೆಸಿಕೊಳ್ಳುವ ಕ್ಷೇತ್ರದಲ್ಲಿ ನಿತ್ಯ ಈಗ ಒಂದಿಲ್ಲೊಂದು ಮಾರಾಮಾರಿ, ಹೊಡೆದಾಟ, ಜಗಳ, ಆರೋಪ, ಪ್ರತ್ಯಾರೋಪಗಳು ನಿರಂತರ ಸುದ್ದಿಮಾಧ್ಯಮಗಳಿಗೆ ಆಹಾರವಾಗುತ್ತಿವೆ. ಭಕ್ತಿ ಮತ್ತು ಆರಾಧನೆಗಳು ಸದ್ದು ಮಾಡಬೇಕಾಗಿದ್ದ ಜಾಗದಲ್ಲಿ ಇಬ್ಬರು ವ್ಯಕ್ತಿಗಳ ಕೊಳಕುತನದ ದುರ್ಗಂಧ ವ್ಯಾಪಿಸಿದೆ.
ದೇವಾಲಯದ ಕಾಣಿಕೆ ಹುಂಡಿಯ ಹಕ್ಕುದಾರಿಕೆಯ ಮೂಲ ಪ್ರಶ್ನೆಯಾಗಿ ಆರಂಭವಾದ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರ ನಡುವಿನ ಕೋಳಿ ಜಗಳ ಈಗ ದೇವಿ ಮತ್ತು ಆಕೆಯ ಭಕ್ತರೆದುರೇ ಸಾರ್ವಜನಿಕವಾಗಿ ಪರಸ್ಪರ ಬಡಿದಾಡುವ ಮಟ್ಟಕ್ಕೆ ಬೆಳೆದುನಿಂತಿದೆ. ಹಾಗಾಗಿ ಸ್ಥಳೀಯ ಶಾಸಕರಿಂದ ರಾಜ್ಯದ ಸಿಎಂವರೆಗೆ ವಿವಾದ ತಲೆನೋವಾಗಿ ಪರಿಣಮಿಸಿದೆ. ರಾಜ್ಯದ ಮೂಲೆಮೂಲೆಯ ಭಕ್ತರು ಮತ್ತು ಸ್ಥಳೀಯವಾಗಿ ದೇವಸ್ಥಾನವಿರುವ ಕರೂರು ಹೋಬಳಿಯ ಜನರ ನಡುವೆ ನಿತ್ಯ ಹೊಸ ಹೊಸ ಬೆಳವಣಿಗೆಗಳು ಚರ್ಚೆಗೆ ಗ್ರಾಸವಾಗಿವೆ.
Also Read: ಸಿಗಂದೂರು ಉಸ್ತುವಾರಿಗೆ ಡಿಸಿ ಸಮಿತಿ: ಪರಿಸರ ಧ್ವಂಸಕ್ಕೂ ಬೀಳಬೇಕಿದೆ ಬ್ರೇಕ್!
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಹಳ ದಿನಗಳ ನಂತರ ತವರು ಜಿಲ್ಲೆಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಅವರ ಸಾಕಷ್ಟು ಸಮಯವನ್ನೂ ಈ ವಿವಾದ ತಿಂದುಹಾಕಿದೆ. ದೇವಾಲಯದ ಮೇಲೆ ಹಕ್ಕು ಸ್ಥಾಪಿಸಲು ಪರಸ್ಪರ ಸಮರ ಸಾರಿರುವ ಎರಡೂ ಬಣದವರು ಸಿಎಂ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿ, ತಮ್ಮ ಹಕ್ಕು ಮಂಡಿಸಿದ್ದಾರೆ. ಈ ನಡುವೆ, ಒಂದು ಕಡೆ ಜಾತಿ ಗುಂಪುಗಳು, ಸಂಘಟನೆಗಳು ಕೂಡ ಎರಡೂ ಕಡೆಯವರ ಪರ ವಕಾಲತು ವಹಿಸತೊಡಗಿವೆ. ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರು ಸಾಗರ ವಿಧಾನಸಭಾ ಕ್ಷೇತ್ರದ ಸಂಖ್ಯಾಬಲದಲ್ಲಿ ಬಹುತೇಕ ಸಮಬಲದ ಎರಡು ಪ್ರಮುಖ ಸಮುದಾಯಗಳಿಗೆ ಸೇರಿರುವ ಹಿನ್ನೆಲೆಯಲ್ಲಿ ಸಹಜವಾಗೇ ಇಂತಹದ್ದೊಂದು ಸಂಘರ್ಷವನ್ನು ರಾಜಕೀಯ ಅವಕಾಶವಾಗಿ ಬಳಸಿಕೊಳ್ಳಲು ಹಾಲಿ, ಮಾಜಿ ಹಾಗೂ ಭವಿಷ್ಯದ ಆಕಾಂಕ್ಷಿ ಜನಪ್ರತಿನಿಧಿಗಳ ನಡುವೆ ಪೈಪೋಟಿ ಆರಂಭವಾಗಿದೆ. ಆ ಪೈಕಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಂಥ ಕೆಲವರು ನೇರವಾಗಿ ಅಖಾಡಕ್ಕೆ ಇಳಿದಿದ್ದರೆ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಸಿಎಂ ಯಡಿಯೂರಪ್ಪ ಪರಮಾಪ್ತ ಗುರುಮೂರ್ತಿ ಅವರಂಥವರು ತೆರೆಮರೆಯ ತಂತ್ರಗಾರಿಕೆ ಬಿರುಸುಗೊಳಿಸಿದ್ದಾರೆ.
ಹಾಗಾಗಿ ಸಿಗಂದೂರು ವಿವಾದ ಬಹುತೇಕ ಈಗಾಗಲೇ ರಾಜಕೀಯ ಆಯಾಮ ಪಡೆದುಕೊಂಡಿದ್ದು, ಕ್ಷೇತ್ರದ ಎರಡು ಪ್ರಬಲ ಸಮುದಾಯಗಳ ನಡುವಿನ ಸಂಘರ್ಷದ ಸ್ವರೂಪ ಪಡೆಯುವ ಹಾದಿಯಲ್ಲಿದೆ. ತಟ್ಟೆಕಾಸು, ಹುಂಡಿ ಕಾಣಿಕೆಗಾಗಿ ಆರಂಭವಾದ ಇಬ್ಬರು ವ್ಯಕ್ತಿಗಳ ನಡುವಿನ ಭಕ್ತರ ಹಣಕ್ಕಾಗಿನ ಪರಸ್ಪರ ಕಾದಾಟ, ಈಗ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸುವ ಸೂಚನೆ ಇದೆ.
Also Read: ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿ ತಟ್ಟೆಕಾಸಿನ ಬಿರುಗಾಳಿ!
ಆದರೆ, ಈ ಎಲ್ಲಾ ಕಾದಾಟ, ಸಂಘರ್ಷ, ರಾಜಕೀಯ ಮೇಲಾಟಗಳ ನಡುವೆ ಈ ಸಿಗಂದೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಜವಾಗಿಯೂ ಚರ್ಚೆಯಾಗಲೇಬೇಕಿದ್ದ ಗಂಭೀರ ಸಂಗತಿ ಬದಿಗೆ ಸರಿದುಹೋಗಿದೆ. ಅದು ದೇವಿಯ ಹೆಸರಲ್ಲಿ ಆಕೆಯ ವಾರಸುದಾರರು ಎಂದುಕೊಂಡಿರುವ ವ್ಯಕ್ತಿಗಳು ನಡೆಸಿರುವ ಭೂ ಅಕ್ರಮ! ದಾಖಲೆಗಳ ಪ್ರಕಾರ ಇಡೀ ಸಿಗಂದೂರು ಕ್ಷೇತ್ರವೇ ಅಕ್ರಮ ಒತ್ತುವರಿ ಜಾಗದಲ್ಲಿ ತಲೆ ಎತ್ತಿದೆ. ದೇವಾಲಯದ ಗರ್ಭಗುಡಿ ಮತ್ತು ಇತರ 2000ನೇ ವರ್ಷಕ್ಕೂ ಹಿಂದಿನ ಮೂರ್ನಾಲ್ಕು ಕಟ್ಟಡಗಳು ಕರ್ನಾಟಕ ವಿದ್ಯುತ್ ನಿಗಮಕ್ಕೆ ಸೇರಿದ ಭೂಮಿಯಲ್ಲಿದ್ದರೆ, ಉಳಿದಂತೆ ಕಳೆದ 20 ವರ್ಷಗಳಲ್ಲಿ ನಿರ್ಮಾಣ ಮಾಡಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಟ್ಟಡಗಳು ಮತ್ತು ಪಾರ್ಕಿಂಗ್ ವ್ಯವಸ್ಥೆ, ಸಂಪರ್ಕ ರಸ್ತೆಗಳು ಸೇರಿದಂತೆ ಪ್ರತಿಯೊಂದು ನಿರ್ಮಾಣವೂ ಅತಿಸೂಕ್ಷ್ಮ ಪರಿಸರದ ಶರಾವತಿ ಅಭಯಾರಣ್ಯದ ವ್ಯಾಪ್ತಿಯಲ್ಲಿವೆ! ಅದೇ ಕಾರಣಕ್ಕೆ ಇಲ್ಲಿನ ದೇವಾಲಯವೂ ಸೇರಿದಂತೆ ಯಾವುದೇ ಕಟ್ಟಡಕ್ಕೂ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಎಲ್ಲವೂ ವನ್ಯಜೀವಿ ಕಾಯ್ದೆ, ಅರಣ್ಯ ಕಾಯ್ದೆ, ಕೆಪಿಸಿ ಕಾನೂನು ಸೇರಿದಂತೆ ಎಲ್ಲಾ ಕಾನೂನು ಉಲ್ಲಂಘಿಸಿ, ಅತಿಕ್ರಮಿಸಿ ನಿರ್ಮಾಣ ಮಾಡಿರುವ ಕಟ್ಟಡಗಳೇ!
ಈ ವಿಷಯವನ್ನು ದಾಖಲೆಗಳೂ ಸ್ಪಷ್ಟಪಡಿಸುತ್ತವೆ ಮತ್ತು ಸ್ವತಃ ದೇವಾಲಯದ ಧರ್ಮದರ್ಶಿ ರಾಮಪ್ಪ ಪುತ್ರ ರವಿ ಕುಮಾರ್ ಕೂಡ ಒಪ್ಪಿಕೊಳ್ಳುತ್ತಾರೆ. ದೇವಾಲಯದ ಹೆಸರಲ್ಲಿ ಅಭಯಾರಣ್ಯ ಮತ್ತು ಕೆಪಿಸಿ ಭೂಮಿ ಒತ್ತುವರಿ ಮಾಡಲಾಗಿದೆ ಎಂಬ ಆರೋಪವಿದೆಯಲ್ಲ ಎಂಬ ಪ್ರಶ್ನೆಗೆ ಅವರು, ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿ, “ಹೌದು, ಸಹಜವಾಗೇ ಮಲೆನಾಡಿನಲ್ಲಿ ಮನೆ- ಜಮೀನು ಅಂಚಿನ ಭೂಮಿ ಬಳಸಿಕೊಳ್ಳುವಂತೆ ನಾವೂ ಭಕ್ತಾದಿಗಳ ಅನುಕೂಲಕ್ಕಾಗಿ ದೇವಿಯ ಮೂಲ ನೆಲೆಯ ಅಂಚಿನ ಜಾಗ ಬಳಸಿಕೊಂಡಿದ್ದೇವೆ. ಅಲ್ಲದೆ, 12 ಎಕರೆ ಜಮೀನು ಮಂಜೂರಾತಿ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅದು ನಮ್ಮ ಸ್ವಂತ ಬಳಕೆಗಾಗಿ ಅಲ್ಲ; ಬದಲಾಗಿ ಭಕ್ತಾದಿಗಳ ಅನುಕೂಲಕ್ಕಾಗಿ ಮಾಡಿರುವ ಮನವಿ. ಸರ್ಕಾರ ಭಕ್ತರ ಹಿತ ಪರಿಗಣಿಸಿ ಈ ಜಾಗ ಮಂಜೂರು ಮಾಡಿಕೊಡಬೇಕು” ಎಂದರು.
ಆದರೆ, ವಾಸ್ತವವಾಗಿ ಅಲ್ಲಿ ನಡೆದಿರುವುದು ಕೇವಲ ಹನ್ನೆರಡೂವರೆ ಎಕರೆ ಅಕ್ರಮ ಒತ್ತುವರಿ ಮಾತ್ರವಲ್ಲ. ಬದಲಾಗಿ ಕನಿಷ್ಟ 50ಕ್ಕೂ ಹೆಚ್ಚು ಎಕರೆ ಪ್ರದೇಶದಷ್ಟು ವಿಶಾಲ ಪ್ರದೇಶದಲ್ಲಿ ಸಿಗಂದೂರು ದೇವಾಲಯ ಮತ್ತು ಅದಕ್ಕೆ ಹೊಂದಿಕೊಂಡಂತೆ ಭೋಜನಾಲಯ, ಸಮುದಾಯ ಭವನ, ಕಲ್ಯಾಣ ಮಂಟಪ(ಅಕ್ಷರಶಃ ಶರಾವತಿ ಕಣಿವೆ ಮುಚ್ಚಿ ನಿರ್ಮಿಸಲಾಗಿದೆ!), ವಿಶಾಲ ಸರದಿಸಾಲಿನ ಪ್ರಾಂಗಣ, ಅತಿಥಿ ಗೃಹಗಳು, ಧರ್ಮದರ್ಶಿಗಳು ಮತ್ತು ಪ್ರಧಾನ ಅರ್ಚಕರ ಪ್ರತ್ಯೇಕ ನಿವಾಸ ಮತ್ತು ಕಚೇರಿಗಳು, ಹೋಟೆಲು, ಲಾಡ್ಜ್, ಅಂಗಡಿಮುಂಗಟ್ಟುಗಳು ತಲೆ ಎತ್ತಿವೆ. ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಅರ್ಚಕರ ಹೆಸರಿನಲ್ಲಿ, ದೇವಾಲಯ ಮತ್ತು ಅದಕ್ಕೆ ಸಂಬಂಧಿಸಿದ ನಾಲ್ಕಾರು ಟ್ರಸ್ಟ್ ಗಳ ಹೆಸರಿನಲ್ಲಿ ವಿವಿಧ ಕಟ್ಟಟಗಳು ನಿರ್ಮಾಣವಾಗಿದ್ದು, ಅಧಿಕೃತವಾಗಿಯೇ ತುಮರಿ ಪಂಚಾಯ್ತಿಗೆ 14ಕ್ಕೂ ಹೆಚ್ಚು ಕಟ್ಟಡಗಳಿಗೆ ಕಂದಾಯ ಕಟ್ಟಲಾಗುತ್ತಿದೆ.
ಇನ್ನು ಸುಮಾರು ಎರಡು ಎಕರೆ ಪ್ರದೇಶಕ್ಕೂ ಹೆಚ್ಚಿನ ಪಾರ್ಕಿಂಗ್ ಜಾಗ, ಆ ಜಾಗಕ್ಕಾಗಿ ಜೆಸಿಬಿ ಬಳಸಿ ಬೃಹತ್ ಗುಡ್ಡವನ್ನು ಕೊರೆದು ನೆಲಸಮಗೊಳಿಸಿರುವುದು, ಕ್ಷೇತ್ರದಿಂದ ತುಮರಿ-ಕಳಸವಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು ನೂರು ಅಡಿ ಅಗಲ ಮತ್ತು ಎರಡು ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮತ್ತು ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸ ನಿರ್ಮಾಣಕ್ಕಾಗಿ ಎರಡು ಎಕರೆಯಷ್ಟು ಅರಣ್ಯ ನಾಶ ಮತ್ತು ಗುಡ್ಡ ಸಮತಟ್ಟು ಸೇರಿದಂತೆ ಒಟ್ಟಾರೆ ಇಡೀ ಸಿಗಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಎಕರೆಯಷ್ಟು ಶರಾವತಿ ಅಭಯಾರಣ್ಯ ಪ್ರದೇಶದ ಕಾಡು ನೆಲಸಮವಾಗಿದೆ, ಗುಡ್ಡಗಳನ್ನು ಬೋಳಿಸಲಾಗಿದೆ. ಕ್ಷೇತ್ರಕ್ಕೆ ಈಗಲೂ ಭೇಟಿ ನೀಡುವ ಯಾರಿಗಾದರೂ ಈ ವ್ಯಾಪಕ ಅಕ್ರಮಗಳು ಕಣ್ಣಿಗೆ ರಾಚುತ್ತವೆ.
ಅಲ್ಲದೆ, ಕೆಲವು ವರ್ಷಗಳಿಂದ ಕಂದಾಯ ಕಟ್ಟಲಾಗುತ್ತಿರುವ ಈ 14 ಕಟ್ಟಡಗಳೂ ಸೇರಿದಂತೆ ಯಾವುದೇ ಕಟ್ಟಡಕ್ಕೂ ನಿರ್ಮಾಣ ಪೂರ್ವಭಾವಿಯಾಗಿ ಪಂಚಾಯ್ತಿಯಿಂದಾಗಲೀ ಅಥವಾ ಅರಣ್ಯ ಇಲಾಖೆ ಮತ್ತು ಕೆಪಿಸಿಯಿಂದಾಗಲೀ ಅಧಿಕೃತವಾಗಿ ಪರವಾನಗಿ ಪಡೆದಿಲ್ಲ ಎಂಬುದು ಗಮನಾರ್ಹ. ಆದರೂ, ತನ್ನ ಜಾಗದ ಅಕ್ರಮ ಒತ್ತುವರಿಯ ಬಗ್ಗೆಯಾಗಲೀ, ಪರಿಸರಕ್ಕೆ ವಿರುದ್ಧವಾಗಿ ಅತಿ ಸೂಕ್ಷ್ಮ ಪರಿಸರ ಪ್ರದೇಶವಾದ ಶರಾವತಿ ಕಣಿವೆಯಲ್ಲಿ ಬೃಹತ್ ಕಟ್ಟಡ ನಿರ್ಮಾಣ, ವ್ಯಾಪಕ ಅರಣ್ಯ ನಾಶದ ಬಗ್ಗೆಯಾಗಲೀ, ವನ್ಯಜೀವಿ ವಿಭಾಗ, ಅರಣ್ಯ ಇಲಾಖೆ, ಕೆಪಿಸಿಯಾಗಲೀ, ಸ್ಥಳೀಯ ಪಂಚಾಯ್ತಿಯಾಗಲೀ ಈವರೆಗೆ ಯಾವುದೇ ದೂರು ದಾಖಲಿಸಿಲ್ಲ ಎಂಬುದು ಗಮನಾರ್ಹ! ಬದಲಾಗಿ, ಆ ಎಲ್ಲಾ ಅಕ್ರಮ ಕಟ್ಟಡಗಳಿಗೆ ಯಾವುದೇ ದಾಖಲೆಗಳಿಲ್ಲದೆ, ನಿರಪೇಕ್ಷಣಾ ಪತ್ರಗಳೂ ಇಲ್ಲದೆ ಮೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಿದೆ! ಸರ್ಕಾರವೇ ಮುಂದೆ ನಿಂತು ಎಲ್ಲಾ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿದೆ!
ತಮಾಷೆಯ ಸಂಗತಿಯೆಂದರೆ; 2017ರಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ದೇವಸ್ಥಾನದ ಸಮೀಪ ಯಾತ್ರಿ ನಿವಾಸ್ ನಿರ್ಮಾಣಕ್ಕಾಗಿ ಸಾಗರ ತಹಶೀಲ್ದಾರರು ಎರಡು ಎಕರೆ ಜಮೀನು ಮಂಜೂರು ಮಾಡಿದ್ದರು. ಸಿಗಂದೂರು ಕ್ಷೇತ್ರ ಇರುವ ಕಳಸವಳ್ಳಿ ಕಂದಾಯ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್ 65ಕ್ಕೆ ಸೇರಿದ ಆ ಜಮೀನು ಕೂಡ ಶರಾವತಿ ಅಭಯಾರಣ್ಯದ ಭಾಗವೇ ಆಗಿದ್ದರೂ, ಅರಣ್ಯ ಇಲಾಖೆಯಾಗಲೀ, ನಿಯಮದಂತೆ ಕೇಂದ್ರ ವನ್ಯಜೀವಿ ಮಂಡಳಿಯದ್ದಾಗಲೀ ಅನುಮತಿ ಪಡೆಯದೇ ತಹಶೀಲ್ದಾರರು ಮಾಡಿದ ಆ ಮಂಜೂರಾತಿಯ ಬಗ್ಗೆ ಕೆಲವು ಪರಿಸರಾಸಕ್ತರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಆ ಬಗ್ಗೆ ಪರಿಶೀಲನೆ ನಡೆಸಿದ ಕಾರ್ಗಲ್ ವನ್ಯಜೀವಿ ವಲಯ ಆರ್ ಎಫ್ ಒ ತಹಶೀಲ್ದಾರರಿಗೆ ಅಧಿಕೃತ ಪತ್ರ ಬರೆದು, ಮಂಜೂರಾತಿ ಅಕ್ರಮವಾಗಿದ್ದು, ಆದೇಶ ಕೈಬಿಡುವಂತೆ ಸೂಚಿಸಿದ್ದರು. ಆದರೆ, ಅದೇ ಅರಣ್ಯ ಇಲಾಖೆ ಮತ್ತು ವನ್ಯಜೀವಿ ವಿಭಾಗಗಳು ಅದೇ ಹೊತ್ತಿಗೆ ಸಿಗಂದೂರಿನಲ್ಲಿ ದೇವಸ್ಥಾನದ ವತಿಯಿಂದ ನಡೆಯುತ್ತಿದ್ದ ಭೋಜನಾಲಯ, ವಸತಿ ಗೃಹ, ಪಾರ್ಕಿಂಗ್ ಜಾಗ ಮುಂತಾದ ಪರಿಸರ ವಿರೋಧಿ ಅಕ್ರಮಗಳ ಬಗ್ಗೆ ಜಾಣ ಮೌನ ವಹಿಸಿದ್ದವು ಎಂಬುದು ವಿಪರ್ಯಾಸ!
ಅಲ್ಲದೆ, 2017-18ರಲ್ಲಿ ಇದೇ ಅಭಯಾರಣ್ಯದ ಮೂಲಕವೇ ಹಾದುಹೋಗುವ ಸುಮಾರು 2 ಕಿ.ಮೀ ಉದ್ದದ ಮತ್ತು ನೂರು ಅಡಿ ಅಗಲದ ವಿಸ್ತಾರ ಸಿಮೆಂಟ್ ರಸ್ತೆ ನಿರ್ಮಾಣವೂ ನಡೆಯಿತು. ಆಗಲೂ ವನ್ಯಜೀವಿ ಇಲಾಖೆಯಾಗಲೀ, ಅರಣ್ಯ ಇಲಾಖೆಯಾಗಲೀ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ! ಜೊತೆಗೆ, ಸೂಕ್ಷ್ಮ ಪರಿಸರ ವಲಯದಲ್ಲಿ ನಡೆದ ಭಾರೀ ಕಾಮಗಾರಿಗಳ ಬಗ್ಗೆ ಪರಿಸರವಾದಿಗಳು ನೀಡಿದ ದೂರುಗಳಿಗೂ ಇಲಾಖೆ ಸೊಪ್ಪುಹಾಕಲಿಲ್ಲ!
ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಐ ಎಂ ನಾಗರಾಜ್ ಪ್ರಕಾರ, “ಕಳಸವಳ್ಳಿ ಸರ್ವೆ ನಂಬರ್ 65 ಸೇರಿದಂತೆ ತುಮರಿ ಭಾಗದ ಅರಣ್ಯ ಪ್ರದೇಶ 1974ರಲ್ಲೇ ಶರಾವತಿ ಅಭಯಾರಣ್ಯ ಎಂದು ಅಧಿಸೂಚನೆ ಹೊರಡಿಸಿದ್ದರೂ, ಅದು ಇಲಾಖೆಯ ಸಾಮಾನ್ಯ ವಿಭಾಗದ ಉಸ್ತುವಾರಿಯಲ್ಲಿಯೇ ಇತ್ತು. 2016ರಲ್ಲಿಯಷ್ಟೇ ಅದು ವನ್ಯಜೀವಿ ವಲಯದ ನಿರ್ವಹಣೆಗೆ ಹಸ್ತಾಂತರವಾಗಿದೆ”. ಆದರೆ, ವಾಸ್ತವವಾಗಿ ನಿರ್ವಹಣೆ ಯಾರದೇ ಹೊಣೆಯಾಗಿದ್ದರೂ, ಅಧಿಸೂಚನೆ ಹೊರಬಿದ್ದ ಕ್ಷಣದಿಂದಲೇ ಆ ಜಾಗ ವನ್ಯಜೀವಿ ಕಾಯ್ದೆಯಡಿ ಬಂದಿದೆ ಮತ್ತು ಅಲ್ಲಿನ ಎಲ್ಲಾ ಚಟುವಟಿಕೆಗಳೂ ಅಭಯಾರಣ್ಯ ಕಾನೂನು ವ್ಯಾಪ್ತಿಗೆ ಒಳಪಡುತ್ತವೆ. ಹಾಗಾಗಿ 1993-94ರಿಂದ ದೇವಾಲಯದ ಹೆಸರಲ್ಲಿ ಇಡೀ ಪ್ರದೇಶದಲ್ಲಿ ನಡೆದಿರುವ ಎಲ್ಲಾ ಮಾನವ ಹಸ್ತಕ್ಷೇಪಗಳೂ(2003-04ರಿಂದ ಈವರೆಗಿನ ನಿರ್ಮಾಣ ಚಟುವಟಿಕೆಗಳನ್ನು ‘ಗೂಗಲ್ ಅರ್ಥ್’ ಸರಣಿ ಚಿತ್ರಗಳಲ್ಲಿ ಗಮನಿಸಬಹುದು!) ಸ್ಪಷ್ಟವಾಗಿ ವನ್ಯಜೀವಿ ಕಾಯ್ದೆ ಮತ್ತು ಅರಣ್ಯ ಕಾಯ್ದೆಗಳ ಉಲ್ಲಂಘನೆಯೇ ಎಂಬುದು ಪರಿಸರವಾದಿಗಳ ವಾದ.
ಜೊತೆಗೆ ಬೃಹತ್ ಸಿಮೆಂಟ್ ರಸ್ತೆ, ಶರಾವತಿ ಕಣಿವೆ ಮುಚ್ಚಿ ನಿರ್ಮಿಸಿರುವ ಹಲವು ಬೃಹತ್ ಕಟ್ಟಡಗಳು, ಪಾರ್ಕಿಂಗ್ ಜಾಗ ವಿಸ್ತರಣೆ ಮತ್ತು ವನ್ಯಜೀವಿ ವಲಯಾಧಿಕಾರಿಗಳ ಆಕ್ಷೇಪವನ್ನೂ ಧಿಕ್ಕರಿಸಿ ಇತ್ತೀಚಿಗೆ ತಾನೆ ನಿರ್ಮಾಣ ಪೂರ್ಣಗೊಂಡಿರುವ ಯಾತ್ರಿ ನಿವಾಸ ಮುಂತಾದ ಚಟುವಟಿಕೆಗಳು ಕಳೆದ ಮೂರ್ನಾಲ್ಕು ವರ್ಷಗಳಿಂದ ಈಚೆಗೆ ನಡೆದಿವೆ ಎಂಬುದು ಗಮನಾರ್ಹ!
ಈ ನಡುವೆ, ಅರಣ್ಯ ಅತಿಕ್ರಮಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸಾಗರ ಉಪ ವಿಭಾಗಾಧಿಕಾರಿಗಳು 2015ರ ಅಕ್ಟೋಬರ್ 16ರಂದು ಸಾಗರ ತಹಶೀಲ್ದಾರರಿಗೆ ಆದೇಶ ನೀಡಿ, “ಸಿಗಂದೂರು ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರು ದೇವಾಲಯದ ಹೆಸರಲ್ಲಿ 12.20 ಎಕರೆ ಅರಣ್ಯ ಒತ್ತುವರಿ ಮಾಡಿದ್ದು, ಅವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ ಅಧಿನಿಯಮ 192(ಎ) ಮತ್ತು ಕರ್ನಾಟಕ ಮರ ಸಂರಕ್ಷಣೆ ಕಾಯ್ದೆ-1976 ಅಡಿ ಪ್ರತ್ಯೇಕ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು”. ಜೊತೆಗೆ ಅತಿಕ್ರಮಣ ಮಾಡಿರುವ ಪ್ರದೇಶವನ್ನು ಕೂಡಲೇ ತೆರವು ಮಾಡುವಂತೆಯೂ ಆದೇಶಿಸಿದ್ದರು(ಆದೇಶಪ್ರತಿ ಗಮನಿಸಿ). ಆದರೆ, ಈ ವರೆಗೆ ಯಾವುದೇ ಅಧಿಕಾರಿ ಅಂತಹ ಕ್ರಮ ಜರುಗಿಸಿಲ್ಲ. ಬದಲಾಗಿ 2015ರ ಬಳಿಕ ಆ ಹಿಂದಿನ ದುಪ್ಪಟ್ಟು ಅರಣ್ಯ ನಾಶವಾಗಿದೆ ಮತ್ತು ಅಕ್ರಮ ನಿರ್ಮಾಣ ಚಟುವಟಿಕೆಗಳು ಈಗಲೂ ಮುಂದುವರಿದಿವೆ ಎಂಬುದನ್ನು ‘ಪ್ರತಿಧ್ವನಿ’ ಭಾನುವಾರ ಕ್ಷೇತ್ರಕ್ಕೆ ಭೇಟಿ ಖಚಿತಪಡಿಸಿಕೊಂಡಿದೆ.
ಪರಿಸರವಾದಿ ಅಖಿಲೇಶ್ ಚಿಪ್ಪಳಿ ಅವರ ಪ್ರಕಾರ, “ಜಗತ್ತಿನ ಅತಿಸೂಕ್ಷ್ಮ ಜೀವವೈವಿಧ್ಯದ ಘೋಷಿತ ಶರಾವತಿ ಕೊಳ್ಳ ಅಭಯಾರಣ್ಯದಲ್ಲಿ ನಡೆದಿರುವ ನೂರಾರು ಎಕರೆ ಅರಣ್ಯನಾಶ, ಅಕ್ರಮ ನಿರ್ಮಾಣಗಳು ದೇವಿಯ ಹೆಸರಲ್ಲಿ ನಡೆಯುತ್ತಿರುವ ಅನಾಚಾರಗಳು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗೆ ನೋಡಿದರೆ, ಒಂದು ವನದೇವತೆಯಾಗಿದ್ದು ಆ ದೇವಿಯ ಹೆಸರಲ್ಲಿ ದಂಧೆ ಮಾಡುತ್ತಿರುವ ಮಂದಿಯ ಭೂ ಮತ್ತು ಧನ ದಾಹ ಮತ್ತು ಇಂದು ಅಲ್ಲಿ ನಡೆಯುತ್ತಿರುವ ಎಲ್ಲಾ ಅಪಸವ್ಯಗಳಿಗೆ ವನ್ಯಜೀವಿ ಮತ್ತು ಅರಣ್ಯ ಇಲಾಖೆಗಳ ಜಾಣಕುರುಡುತನವೇ ಮೂಲ ಕಾರಣ. ಅವರು ತಮ್ಮ ಹೊಣೆಗಾರಿಕೆ ಅರಿತು ಕಾನೂನು ಕ್ರಮಕೈಗೊಂಡಿದ್ದರೆ ಅಲ್ಲಿ ಇಂದು ಇಷ್ಟೊಂದು ಅಕ್ರಮ, ದಂಧೆ, ಭೂ ಮಾಫಿಯಾ ಮತ್ತು ಅದರಿಂದಾಗಿ ಆಗುತ್ತಿರುವ ಅಸಹ್ಯಕರ ಕಿತ್ತಾಟಗಳಿಗೆ ಅವಕಾಶವೇ ಇರುತ್ತಿರಲಿಲ್ಲ. ಹಾಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು” ಎನ್ನುತ್ತಾರೆ.
ದೇವಾಲಯದ ಹೆಸರಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಅಧಿಕೃತ ದೂರು ದಾಖಲಿಸುವ ಮೂಲಕ ಪರಿಸರ ಮತ್ತು ಕಾನೂನು ಪರ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ದೂಗೂರು ಪರಮೇಶ್ವರ್ ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿ, “ಕಳೆದ ಒಂದು ದಶಕದಿಂದ ಸಿಗಂದೂರು ದೇವಿ ಹೆಸರಲ್ಲಿ ಕೆಲವರು ನಡೆಸುತ್ತಿರುವ ಅಕ್ರಮಗಳ ಬಗ್ಗೆ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಅಭಯಾರಣ್ಯದ ಒಳಗೇ ವ್ಯಾಪಕ ಕಾಡು ನಾಶ ಮಾಡಿ, ಅಕ್ರಮ ಕಟ್ಟಡಗಳ ನಿರ್ಮಾಣ ಕಾರ್ಯ ನಿರಂತರವಾಗಿ ಮುಂದುವರಿದೆ. ಆದರೂ ಅರಣ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳೂ ಕಾನೂನು ಕ್ರಮ ಕೈಗೊಳ್ಳದೇ ಹೊಣೆಗೇಡಿತನ ತೋರುತ್ತಿವೆ. ಅಲ್ಲಿನ ಹಣಕಾಸು, ವ್ಯವಹಾರಗಳಷ್ಟೇ ಪರಿಸರ ನಾಶದ ಚಟುವಟಿಕೆಗಳಿಗೂ ಬ್ರೇಕ್ ಬೀಳಬೇಕಿದೆ ಮತ್ತು ಅಕ್ರಮಗಳಿಗೆ ತಕ್ಕ ಶಿಕ್ಷೆಯಾಗಬೇಕಿದೆ. ಆದರೆ ಪ್ರಭಾವಿ ರಾಜಕಾರಣಿಗಳ ಆಶೀರ್ವಾದ ಬಲದಿಂದ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ” ಎಂದು ಹೇಳಿದರು.
ಅರಣ್ಯ ಭೂಮಿ ಒತ್ತುವರಿ ಮತ್ತು ಅಕ್ರಮ ನಿರ್ಮಾಣಗಳಿಗೆ ಸಂಬಂಧಿಸಿದಂತೆ ಪ್ರಧಾನ ಅರ್ಚಕ ಶೇಷಗಿರಿ ಭಟ್ ಅಭಿಪ್ರಾಯ ಪಡೆಯಲು ‘ಪ್ರತಿಧ್ವನಿ’ ನಡೆಸಿದ ಯತ್ನ ಫಲಿಸಲಿಲ್ಲ. ಮುಂಚಿತವಾಗಿ ಮಾಹಿತಿ ನೀಡಿ, ಭೇಟಿಗೆ ಒಪ್ಪಿದ ಅವರೇ ನೀಡಿದ ಸಮಯಕ್ಕೆ ಭೇಟಿ ಮಾಡಲು ಹೋದರೂ ಪ್ರಧಾನ ‘ಅರ್ಚಕರು ಮನೆಯಲ್ಲಿ ಇಲ್ಲ. ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಿದ್ದಾರೆ’ ಎಂದು ಅವರ ಕುಟುಂಬದವರು ತಿಳಿಸಿದರು. ದೂರವಾಣಿ ಮೂಲಕ ಸಂಪರ್ಕಿಸುವ ಯತ್ನ ಕೂಡ ಫಲ ಕೊಡಲಿಲ್ಲ!
ಈ ನಡುವೆ ವನ್ಯಜೀವಿ ಮತ್ತು ಅರಣ್ಯ ಕಾಯ್ದೆಗಳನ್ನು ಗಾಳಿಗೆ ತೂರಿ, ಸಿಗಂದೂರಿನಲ್ಲಿ ನಡೆದಿರುವ ಎಲ್ಲಾ ಅರಣ್ಯ ಭೂಮಿ ಅಕ್ರಮಗಳಿಗೆ ಅಧಿಕೃತತೆಯ ಮುದ್ರೆ ಒತ್ತಲು, ಇಡೀ ಕಳಸವಳ್ಳಿ ಸರ್ವೆ ನಂಬರ್ 65ನ್ನು ಅಭಯಾರಣ್ಯ ವ್ಯಾಪ್ತಿಯಿಂದ ಹೊರಗಿಡಲು ಡಿನೋಟಿಫೈ ಮಾಡುವ ಯತ್ನಗಳೂ ರಾಜಧಾನಿ ಮಟ್ಟದಲ್ಲಿ ನಡೆಯುತ್ತಿವೆ ಎಂದು ಮಾಹಿತಿ ಇದೆ.
ಒಟ್ಟಾರೆ, ಸಿಗಂದೂರು ಕ್ಷೇತ್ರದ ಸದ್ಯದ ವಿವಾದದ ಜೊತೆಗೆ ನಿಜವಾಗಿಯೂ ಚರ್ಚೆಯಾಗಬೇಕಿರುವುದು ಅಲ್ಲಿನ ಈ ಸಾಲುಸಾಲು ಅಕ್ರಮಗಳು ಮತ್ತು ದೇಶದ ಅರಣ್ಯ ಕಾಯ್ದೆ, ವನ್ಯಜೀವಿ ಕಾಯ್ದೆ ಸೇರಿದಂತೆ ಎಲ್ಲಾ ಕಾಯ್ದೆ-ಕಾನೂನುಗಳನ್ನು ಬಡಬಗ್ಗರಿಗೆ ಒಂದು ಬಗೆಯಲ್ಲಿ ಮತ್ತು ಪ್ರಭಾವಿಗಳಿಗೆ ಒಂದು ಬಗೆಯಲ್ಲಿ ಅನ್ವಯ ಮಾಡುವ ಅರಣ್ಯ ಇಲಾಖೆಯ ಧೋರಣೆ ಬಗ್ಗೆ. ಇದೇ ಸಿಗಂದೂರು ಕ್ಷೇತ್ರದ ಸಮೀಪದ ಆವಿನಹಳ್ಳಿ ಗ್ರಾಮದಲ್ಲಿ ಕೇವಲ ಒಂದು, ಒಂದೂವರೆ ಎಕರೆ ಸರ್ಕಾರಿ ಜಮೀನು(ಅಭಯಾರಣ್ಯವೇನಲ್ಲ!) ಒತ್ತವರಿ ಸಾಗುವಳಿ ಮಾಡಿದ ಆರೋಪದ ಮೇಲೆ ವರ್ಷದ ಹಿಂದೆ ಇಬ್ಬರು ಕಡುಬಡ ರೈತರಿಗೆ ತಲಾ ಹತ್ತು ಸಾವಿರ ರೂ. ದಂಡ ಮತ್ತು ಎರಡು ವರ್ಷ ಜೈಲು ಶಿಕ್ಷೆಗೆ ಗುರಿ ಮಾಡಲಾಗಿತ್ತು. ಹೊಟ್ಟೆಪಾಡಿಗಾಗಿ ತುಂಡು ಭೂಮಿ ಸಾಗುವಳಿ ಮಾಡುವ ಬಡವನ ಮೇಲೆ ಝಳಪಿಸುವ ಕಾನೂನಿನ ಖಡ್ಗವನ್ನು ದಂಧೆಗಾಗಿ ನೂರಾರು ಎಕರೆ ಅಭಯಾರಣ್ಯವನ್ನು ನಾಶ ಮಾಡುವವರ ಮೇಲೆ ಯಾಕೆ ಪ್ರಯೋಗಿಸಲಾಗುವುದಿಲ್ಲ ಎಂಬುದು ಪ್ರಶ್ನೆ.
ಹಾಗೇ ಇದೇ ಶರಾವತಿ ಅಭಯಾರಣ್ಯದ ಸಾಲ್ಕೋಡು, ಚೀಕನಹಳ್ಳಿ, ಹೆಬ್ಬನಕೆರೆ, ಉರುಳುಗಲ್ಲು, ಮೆಘಾನೆ ಮುಂತಾದ ಕುಗ್ರಾಮಗಳಲ್ಲಿ ಅಭಯಾರಣ್ಯ ಘೋಷಣೆಗೂ ದಶಕಗಳ ಹಿಂದಿನಿಂದ ಜೀವನ ನಡೆಸುತ್ತಿರುವ ಗುಡ್ಡಗಾಡು ಜನರಿಗೆ ಯಾವ ನಾಗರಿಕ ಸೌಕರ್ಯವೂ ತಲುಪದಂತೆ ವನ್ಯಜೀವಿ ಕಾಯ್ದೆಗಳು ಅಡ್ಡಿಯಾಗಿವೆ. ಆ ಜನಗಳಿಗೆ ಕನಿಷ್ಟ ಕಾಲುದಾರಿ, ವಿದ್ಯುತ್, ಶಾಲೆಯಂತಹ ಸೌಕರ್ಯ ನೀಡಲು ಕೂಡ ಅಡ್ಡಿಪಡಿಸುತ್ತಿರುವ ವನ್ಯಜೀವಿ ವಿಭಾಗದ ಖಡಕ್ ಕಾನೂನುಬದ್ಧತೆ, ಸಿಗಂದೂರು ಬ್ರಹ್ಮಾಂಡ ಅಕ್ರಮಗಳ ವಿಷಯದಲ್ಲಿ ಕಣ್ಣು ಕಳೆದುಕೊಂಡಿರುವುದು ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ!
ಅಭಯಾರಣ್ಯ ಕಾಯ್ದೆಯ ಕಠಿಣ ಕಾನೂನಿನಿಂದಾಗಿ ಅಂಗನವಾಡಿಗೆ ಹೋಗಲು ಕನಿಷ್ಟ ಹತ್ತು ಕಿಮೀ ದುರ್ಗಮ ಕಾಡಿನ ಹಾದಿಯಲ್ಲಿ ಯಾವ ಸಾರಿಗೆ ಸೌಕರ್ಯವೂ ಇಲ್ಲದೆ(ಬೈಕ್- ಸೈಕಲ್ ಹೊರತುಪಡಿಸಿ) ನಿತ್ಯ ಓಡಾಡಬೇಕಾದ ಅಭಯಾರಣ್ಯದ ನಡುವಿನ ಉರುಳುಗಲ್ಲು ಗ್ರಾಮದ ಮೂರೂವರೆ ವರ್ಷದ ಮಗುವೊಂದಕ್ಕೆ ಸಿಗಂದೂರಿನ ಈ ಸಾಲುಸಾಲು ಅಕ್ರಮಗಳು ಹೇಗೆ ಕಾಣಿಸಬಹುದು ಎಂಬುದು ಸರ್ಕಾರ ಕೇಳಿಕೊಳ್ಳಲೇಬೇಕಾದ ಪ್ರಶ್ನೆ! ಸರ್ಕಾರ ಕೇಳಿಕೊಳ್ಳುವುದೇ ಅಂತಹ ಪ್ರಶ್ನೆ?!