ಬಹುಶಃ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಲವಂತವಾಗಿ ಜನರ ಮೇಲೆ ಹೇರಲು ಹೊರಟಿರುವ ಸಿಎಎ, ಎನ್ ಸಿಆರ್ ನಂತಹ ವಿವಾದಿತ ನೀತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದರ ಬದಲಾಗಿ ದೇಶದ ಆರ್ಥಿಕತೆ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ದೇಶದ ನಾಗರಿಕರು ಸುಭೀಕ್ಷವಾಗಿರುತ್ತಿದ್ದರು. ಆರ್ಥಿಕತೆ ಮತ್ತಷ್ಟು ಸದೃಢವಾಗುತ್ತಿತ್ತು. ಆದರೆ, ಬಿಜೆಪಿಯ ಹಿಡನ್ ಅಜೆಂಡಾಗಳಲ್ಲಿ ಒಂದಾಗಿರುವ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರಲೇಬೇಕು, ಮುಸ್ಲಿಂರನ್ನು ಕಡೆಗಣಿಸಲೇಬೇಕೆಂದು ಹಠಕ್ಕೆ ಬಿದ್ದು ಅದರ ಜಪವನ್ನೇ ಮಾಡಿಕೊಂಡು ಬರುತ್ತಿರುವ ಪರಿಣಾಮ ಇಂದು ದೇಶದ ರಫ್ತು ಪ್ರಮಾಣ ಸತತ ಐದನೇ ತಿಂಗಳು ಕುಸಿದಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಸತತ ಐದು ತಿಂಗಳು ದೇಶದ ರಫ್ತು ಪ್ರಮಾಣ ಕುಸಿದಿದೆ. ಇದಕ್ಕೆ ಪ್ರಮುಖ ಕಾರಣ ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಲ್ಲಿ ಇಳಿಕೆ ಆಗಿರುವುದು ಮತ್ತು ಎಲ್ಲಾ ವಿದೇಶಿ ವಿನಿಯಮ ಗಳಿಕೆಯ ಕ್ಷೇತ್ರಗಳಲ್ಲಿ ಹಿನ್ನಡೆ ಉಂಟಾಗಿರುವುದು.
2018 ರ ಡಿಸೆಂಬರ್ ಅಂತ್ಯಕ್ಕೆ ಹೋಲಿಸಿದರೆ 2019 ರ ಡಿಸೆಂಬರ್ ಅಂತ್ಯದಲ್ಲಿ ರಫ್ತು ಪ್ರಮಾಣ ಶೇ.2 ರಷ್ಟು ಕಡಿಮೆಯಾಗಿದೆ. 2019 ರ ಡಿಸೆಂಬರ್ ನಲ್ಲಿ ರಫ್ತು ಪ್ರಮಾಣ ಶೇ.1.8 ರಷ್ಟು ಕುಸಿತ ಕಂಡಿದೆ. ಇದು ನವೆಂಬರ್ ಗಿಂತ ಶೇ.0.3 ರಷ್ಟು ಕಡಿಮೆ. 2019-20 ನೇ ಹಣಕಾಸು ಸಾಲಿನ ಮೊದಲ 9 ತಿಂಗಳಲ್ಲಿ ಅಂದರೆ ಡಿಸೆಂಬರ್ ಅಂತ್ಯದ ವೇಳೆಗೆ 239 ಬಿಲಿಯನ್ ಡಾಲರ್ ಮೌಲ್ಯದಷ್ಟು ಉತ್ಪನ್ನಗಳ ರಫ್ತಾಗಿದೆ. ಆದರೆ, ಇದು 2018 ರ ಡಿಸೆಂಬರ್ ಗಿಂತ ಶೇ. 2 ರಷ್ಟು ಕಡಿಮೆ.
ಮೋದಿ, ಅಮಿತ್ ಶಾ ಮತ್ತು ವಾಣಿಜ್ಯ-ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾವು ಆಡಳಿತ ನಡೆಸುತ್ತಿದ್ದೇವೆ ಎಂಬುದನ್ನೇ ಮರೆತು ರಾಜಕಾರಣ ಮಾಡುವುದರಲ್ಲೇ ಮಗ್ನರಾಗಿದ್ದಾರೆ. ಈ ಆರ್ಥಿಕತೆ ಕುಸಿತದ ಬಗ್ಗೆ ಯಾವುದೇ ಯೋಚನೆ ಇಲ್ಲದಿರುವುದು ಅವರ ಇತ್ತೀಚಿನ ವರ್ತನೆಗಳಿಂದ ಕಾಣುತ್ತಿದೆ. ಆದರೆ, ಅಧಿಕಾರಿಗಳ ವರ್ಗಕ್ಕೆ ಮಾತ್ರ ದಿನದಿಂದ ದಿನಕ್ಕೆ ರಫ್ತು ಪ್ರಮಾಣ ಕುಸಿಯುತ್ತಿರುವುದು ಆತಂಕ ಉಂಟು ಮಾಡುತ್ತಿದೆ. 2019-20 ನೇ ಹಣಕಾಸು ಸಾಲಿನಲ್ಲಿ ಸತತ ಏಳು ತಿಂಗಳಿಂದ ಆಮದು ಪ್ರಮಾಣದಲ್ಲಿ ಶೇ.8.8 ರಷ್ಟು ಕುಸಿತ ಉಂಟಾಗಿರುವುದು ಅಧಿಕಾರಿ ವರ್ಗಕ್ಕೆ ದೇಶದ ಆರ್ಥಿಕತೆ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಚಿಂತೆಗೀಡು ಮಾಡಿದೆ. ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತ ವಿದೇಶಗಳಿಂದ 306 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತ್ತು. ಇದರ ಪ್ರಮಾಣ 2018-19 ನೇ ಸಾಲಿನ ಇದೇ ಅವಧಿಗಿಂತ ಶೇ.8.37 ರಷ್ಟು ಕಡಿಮೆಯಾಗಿದೆ.
ಇದರ ಪರಿಣಾಮ ಡಿಸೆಂಬರ್ ತಿಂಗಳಲ್ಲಿ 11.2 ಬಿಲಿಯನ್ ನಷ್ಟು ವಹಿವಾಟು ನಡೆಸಲಾಗಿದೆ. ಆದರೆ, ಇದು ನವೆಂಬರ್ ನಲ್ಲಿ 12.1 ಬಿಲಿಯನ್ ಡಾಲರ್ ನಷ್ಟಿತ್ತು. ಈ ಎಲ್ಲದರ ಒಟ್ಟಾರೆ ಫಲಿತಾಂಶವೆಂದರೆ ಡಿಸೆಂಬರ್ ವರೆಗೆ ಸಮಗ್ರ ವಾಣಿಜ್ಯ ಕೊರತೆ ಪ್ರಮಾಣ 118 ಬಿಲಿಯನ್ ಡಾಲರ್ ತಲುಪಿರುವುದು ಆತಂಕದ ವಿಚಾರವಾಗಿದೆ.
ಐಸಿಆರ್ ಎ ದ ಪ್ರಮುಖ ಆರ್ಥಿಕ ತಜ್ಞರಾದ ಅದಿತಿ ನಾಯರ್ ಅವರ ಪ್ರಕಾರ, ಕಲ್ಲಿದ್ದಲು, ರಾಸಾಯನಿಕಗಳು, ಉಕ್ಕು ಮತ್ತು ಕಬ್ಬಿಣ ಹಾಗೂ ಇನ್ನಿತರೆ ಲೋಹಗಳು, ಸಾರಿಗೆ ಯಂತ್ರೋಪಕರಣಗಳು ಸೇರಿದಂತೆ ಮತ್ತಿತರೆ ಉತ್ಪನ್ನಗಳ ಆಮದು ಪ್ರಮಾಣ ಇಳಿಕೆಯಾಗಿರುವುದರಿಂದ ಹಿನ್ನಡೆ ಉಂಟಾಗಿದೆ.
ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳುವಂತೆ ಡಿಸೆಂಬರ್ ನಲ್ಲಿ 27.36 ಬಿಲಿಯನ್ ಡಾಲರ್ ಮೌಲ್ಯದ ರಫ್ತಾಗಿದೆ. ರಫ್ತು ಮಾಡುವ 30 ಪ್ರಮುಖ ಕ್ಷೇತ್ರಗಳ ಪೈಕಿ 19 ರಲ್ಲಿ ಗಣನೀಯವಾದ ಇಳಿಕೆ ಕಂಡುಬಂದಿದೆ. ಸಂಸ್ಕರಿತ ತೈಲೋತ್ಪನ್ನಗಳ ಶೇ.8.3 ಬಿಲಿಯನ್ ರಷ್ಟಿದ್ದ ರಫ್ತು ಡಿಸೆಂಬರ್ ನಲ್ಲಿ ಶೇ.4,2 ರಷ್ಟಕ್ಕೆ ಇಳಿದಿದೆ. ಇದು ನವೆಂಬರ್ ನಲ್ಲಿ ಶೇ.13 ರಷ್ಟಿತ್ತು.
ಇನ್ನು ಜೆಮ್ಸ್ ಮತ್ತು ಜ್ಯುವೆಲ್ಲರಿ ರಫ್ತಿನಲ್ಲಿಯೂ ಇಳಿಕೆ ಕಂಡು ಬಂದಿದ್ದು, ಶೇ.8 ರಷ್ಟು ಕಡಿಮೆಯಾಗಿದೆ. ಡಿಸೆಂಬರ್ ನಲ್ಲಿ ಕೇವಲ 2.8 ಬಿಲಿಯನ್ ಡಾಲರ್ ನಷ್ಟು ರಫ್ತಾಗಿದೆ. ಕಳೆದ ವರ್ಷದಿಂದ ಈ ಕ್ಷೇತ್ರ ಕುಸಿತ ಕಾಣುತ್ತಿದೆ. ಆದರೆ, ಅಕ್ಟೋಬರ್ ನಲ್ಲಿ ಮಾತ್ರ ಶೇ.6 ರಷ್ಟು ರಫ್ತು ಹೆಚ್ಚಳವಾಗಿದ್ದುದು ಆಶಾದಾಯಕ ಬೆಳವಣಿಗೆಯಂತೆ ಕಂಡುಬಂದಿತ್ತಾದರೂ ನಂತರದ ತಿಂಗಳುಗಳಲ್ಲಿ ಮತ್ತೆ ಕುಸಿತ ಕಂಡುಬಂದಿದೆ.
ಇದೇ ವೇಳೆ, ಇಂಜಿನಿಯರಿಂಗ್ ರಫ್ತಿನಲ್ಲಿಯೂ ಕುಸಿತ ಮೇಳೈಸಿದೆ. ಈ ಕ್ಷೇತ್ರದಲ್ಲಿ ನವೆಂಬರ್ ನಲ್ಲಿ ಶೇ.6 ರಷ್ಟು ಹೆಚ್ಚಳವಾಗಿತ್ತಾದರೂ, ಡಿಸೆಂಬರ್ ನಲ್ಲಿ ಶೇ.1.2 ರಷ್ಟು ಕುಸಿತ ಕಂಡುಬಂದಿದೆ.
ಜವಳಿ ಕ್ಷೇತ್ರದಲ್ಲಿ ಸ್ವಲ್ಪ ಆಶಾದಾಯಕವಾದ ಪ್ರಗತಿ ಕಂಡುಬಂದಿದೆ. ಇಲ್ಲಿ ರಫ್ತಿನ ಪ್ರಮಾಣ ಶೇ.2.4 ರಷ್ಟು ಹೆಚ್ಚಳವಾಗಿದ್ದರೆ, ಎಲೆಕ್ಟ್ರಾನಿಕ್ಸ್ (ಶೇ.30) ಮತ್ತು ಫಾರ್ಮಾಸಿಟಿಕಲ್ಸ್ (ಶೇ.13) ರಷ್ಟು ಪ್ರಗತಿಯಾಗಿದೆ. ಇದರ ಹೊರತಾಗಿಯೂ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡಿದ್ದ ನಾನ್ ಆಯಿಲ್ ಮತ್ತು ನಾನ್ ಜೆಮ್ಸ್ ಹಾಗೂ ಜ್ಯುವೆಲ್ಲರಿ ಉತ್ಪನ್ನಗಳ ರಫ್ತಿನಲ್ಲಿ ಒಟ್ಟಾರೆ ಶೇ.0.5 ರಷ್ಟು ಇಳಿಕೆಯಾಗಿದೆ.
ಮರ್ಚೈಂಡೈಸ್ ಎಕ್ಸ್ ಪೋರ್ಟ್ಸ್ ಫ್ರಂ ಇಂಡಿಯಾ ಸ್ಕೀಂ(ಎಂಇಐಎಸ್) ಕಳೆದ ಐದು ತಿಂಗಳಿಂದ ಸೊರಗಿವೆ. ಇದು ರಫ್ತುದಾರರಿಗೆ ಕಳವಳವನ್ನುಂಟು ಮಾಡಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಅಸ್ಥಿರತೆ ಉಂಟಾಗುತ್ತಿದೆ ಎನ್ನುತ್ತಾರೆ ಫೆಡರೇಷನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಷನ್ಸ್ ನ ಅಧ್ಯಕ್ಷ ಶರದ್ ಕುಮಾರ್ ಸರಾಫ್.
ಈ ಹಿಂದೆ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪ್ರತಿಪಕ್ಷದಲ್ಲಿದ್ದ ಬಿಜೆಪಿ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಬಂದು ತಲುಪಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶವನ್ನು ಹರಾಜಾಕುತ್ತಿದೆ ಎಂದೆಲ್ಲಾ ಬಿಜೆಪಿ ನಾಯಕರು ಹಾದಿ ಬೀದಿಯಲ್ಲಿ ಟೀಕಿಸುತ್ತಾ ಬಂದಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದು ಆರು ವರ್ಷದಲ್ಲಿ ದೇಶದ ಆರ್ಥಿಕತೆ ಕುಸಿಯುತ್ತಿದ್ದರೆ, ನಿರುದ್ಯೋಗ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಜಿಡಿಪಿ ಪಾತಾಳಕ್ಕೆ ಇಳಿದಿದ್ದರೆ, ಹತ್ತು ಹಲವಾರು ಸಮಸ್ಯೆಗಳು ಬಿಗಡಾಯಿಸತೊಡಗಿವೆ. ಆದರೆ, ಇದಕ್ಕೂ ತನಗೂ ಸಂಬಂಧವಿಲ್ಲವೆಂಬಂತೆ ಮೋದಿ ಸರ್ಕಾರ ಕಳೆದ ಆರು ವರ್ಷಗಳಿಂದಲೂ ತನ್ನದೇ ಆದ ಅಜೆಂಡಾದ ಕಾರ್ಯಕ್ರಮಗಳು, ನೀತಿಗಳನ್ನು ಜಾರಿಗೆ ತರುವಲ್ಲಿ ಬ್ಯುಸಿಯಾಗಿರುವುದು ವಿಪರ್ಯಾಸ.