ಬೆಂಗಳೂರು: ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರು ಹಗರಣದ ಬಗ್ಗೆ ಸಲ್ಲಿಸಿದ್ದ ಬಿ ರಿಪೋರ್ಟ್ ಪುರಸ್ಕರಿಸಿದೆ.

ಮೈಸೂರಿನ ಮುಡಾ ನಿವೇಶಗಳನ್ನ ಅಕ್ರಮವಾಗಿ ಪಡೆದಿದ್ದಾರೆ ಎಂದು ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಸೇರಿದಂತೆ ಅನೇಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸಿದ್ದ ಮೈಸೂರು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಅಂದ್ರೆ ಹಗರಣದಲ್ಲಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಜಮೀನು ಮಾಲೀಕರು ಪಾತ್ರವಿಲ್ಲ ಎಂದು ವರದಿ ಸಲ್ಲಿಸಿದ್ದರು.

ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ಆದೇಶ ಕಾಯ್ದಿರಿಸಿತ್ತು. ಅದರಂತೆ ಇಂದು ಪ್ರಕಟವಾದ ಆದೇಶದಿಂದ, ಸಿಎಂ ಸಿದ್ದರಾಮಯ್ಯ, ಪತ್ನಿ, ಭಾಮೈದ, ಜಮೀನು ಮಾಲೀಕರು ನಿರಾಳರಾಗಿದ್ದು, ಉಳಿದವರ ವಿರುದ್ಧ ತನಿಖೆಗೆ ಮುಂದುವರಿಸಲು ಆದೇಶಿಸಲಾಗಿದೆ.












