ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಹಾಗೂ ತೃಣಮೂಲ ಕಾಂಗ್ರೆಸ್ ರಾಜಕೀಯ ಜಿದ್ದಾಜಿದ್ದಿ ದಶಕಗಳ ಕಾಲ ನಡೆದಿತ್ತು. ಅಂತಿಮವಾಗಿ ಇದೀಗ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಡಳಿತ ನಡೀತಿದೆ. ಆದರೀಗ ಬ್ಯಾನರ್ಜಿ ಆಡಳಿತಕ್ಕೆ ಅಂತ್ಯವಾಡಲು ಬಿಜೆಪಿ ಪಕ್ಷ ಟೊಂಕ ಕಟ್ಟಿ ನಿಂತಿದೆ. ಕಳೆದ ಲೋಕಸಭಾ ಚುನಾವಣೆಯಿಂದ ಆರಂಭವಾಗಿರುವ ಬಿಜೆಪಿ ವರ್ಸಸ್ ತೃಣಮೂಲ ಜಿದ್ದಾಜಿದ್ದಿ ಮುಂದಿನ ವಿಧಾನಸಭಾ ಚುನಾವಣೆ ಕಡೆಗೆ ಹೊರಟಿದೆ. ಕರೋನಾ ವಿಚಾರ ಸೇರಿದಂತೆ ಬಿಜೆಪಿ ನಾಯಕರು ದೀದಿ ಸರ್ಕಾರದ ಸಣ್ಣ ಪುಟ್ಟ ತಪ್ಪುಗಳನ್ನು ಜನತೆಯ ಮುಂದೆ ತೆರೆದಿಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ಮತ್ತೆ ಬಂಗಾಳಿ ಅಸ್ಮಿತೆ ಬೆನ್ನು ಹತ್ತಿ ಬಿಜೆಪಿಗೆ ಮಣ್ಣು ಮುಕ್ಕಿಸುವ ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿಯ ಟೀಕೆ ನಡುವೆ ಇದೀಗ ಸ್ವತಃ ರಾಜ್ಯಪಾಲರೇ ಮಮತಾ ಬ್ಯಾನರ್ಜಿ ವಿರುದ್ಧ ʼನಿಖರ ದಾಳಿʼ ಮಾಡಿದ್ದಾರೆ.
ಮಮತಾ ಒಳ್ಳೆಯವರು, ಸರ್ಕಾರ ನಡೆಸುತ್ತಿಲ್ಲ ಅಷ್ಟೇ..!
ʼದಿ ಪ್ರಿಂಟ್ʼ ವೆಬ್ ಸೈಟ್ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರ ಸಂದರ್ಶನ ಮಾಡಿದ್ದು, ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ತೀಕ್ಷ್ಣ ಮಾತುಗಳನ್ನು ಆಡಿದ್ದಾರೆ. ʼಕರೋನಾʼ ಹಾಗೂ ʼಅಂಫಾನ್ʼ ಚಂಡಮಾರುತ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಪಶ್ಚಿಮ ಬಂಗಾಳ ತೀರ ಹಿಂದುಳಿದೆ ಎಂದಿದ್ದಾರೆ. ಮಮತಾ ಬ್ಯಾರ್ಜಿ ಸರ್ಕಾರವನ್ನು ಹೊರ ಗುತ್ತಿಗೆಗೆ ನೀಡಲಾಗಿದೆ. ಖಾಸಗಿ ಏಜೆನ್ಸಿ ಸರ್ಕಾರ ನಡೆಸುತ್ತಿರುವುದು ಅಪಾಯಕಾರಿ ಸಂಗತಿ. ʼಅಂಫಾನ್ʼ ಚಂಡಮಾರುತದಂತಹ ನೈಸರ್ಗಿಕ ವಿಕೋಪವನ್ನು ನಿರ್ವಹಿಸಲು ಸರ್ಕಾರ ಅಸಮರ್ಥವಾಗಿತ್ತು ಎಂದು ಜಗದೀಪ್ ಧನಕರ್ ದೀದಿ ಸರ್ಕಾರಕ್ಕೆ ತಿವಿದಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ರಾಜ್ಯಪಾಲ ಜಗದೀಪ್ ಧನಕರ್, ಮಮತಾ ಸರ್ಕಾರದೊಂದಿಗೆ ಚಕಮಕಿ ನಡೆಸುತ್ತಲೇ ಇದ್ದಾರೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ತಬ್ಬಿಬ್ಬುಗೊಳ್ಳುವಂತೆ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರನ್ನು ಹೆದರಿಸುವುದು ಅಭ್ಯಾಸವಾಗಿದೆ. ಇವುಗಳನ್ನು ಮಾಡಲು ಜನರನ್ನು ನೇಮಿಸಲಾಗುತ್ತೆ. ಅವರು ರಿಮೋಟ್ ಕಂಟ್ರೋಲ್ ರೀತಿ ಕೆಲಸ ನಿರ್ವಹಿಸುತ್ತಾರೆ. ರಾಜ್ಯ ಸರ್ಕಾರವನ್ನು ಹೊರಗುತ್ತಿಗೆ ನೀಡಬಹುದೇ..? ಇದು ಅಪಾಯಕಾರಿ ಪ್ರವೃತ್ತಿ ಅಲ್ಲವೇ..? ಎಂದು ಪ್ರಶ್ನಿಸಿದ್ದಾರೆ.
ಪ್ರಶಾಂತ್ ಕಿಶೋರ್ ವಿರುದ್ಧ ಟೀಕಾಸ್ತ್ರ..!
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಆ ಬಳಿಕ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣಾ ಕಾರ್ಯತಂತ್ರ ರೂಪಿಸಿದ್ದರು. ಸಚಿವ ಸಂಪುಟ ಸ್ಥಾನಮಾನವನ್ನೂ ಪಡೆದಿದ್ದ ಪ್ರಶಾಂತ್ ಕಿಶೋರ್ ಕೆಲವು ದಿನಗಳ ಹಿಂದಷ್ಟೇ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧ ತಿರುಗಿ ಬಿದ್ದಿದ್ದರು. ಇದೀಗ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಚುನಾವಣಾ ತಂತ್ರಗಾರಿಕೆ ಮಾಡುವಲ್ಲಿ ನಿರತವಾಗಿರುವ ಪ್ರಶಾಂತ್ ಕಿಶೋರ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಳ್ಳೆಯ ವ್ಯಕ್ತಿ. ಅವರು ಸಾಮಾನ್ಯ ಸೈನಿಕರಂತೆ ವರ್ತಿಸದೆ ತಂಡದ ನಾಯಕರಂತೆ ವರ್ತಿಸಬೇಕು. ಮಮತಾ ಪರಿಸ್ಥಿತಿ ನೋಡಿದ್ರೆ ಅಯ್ಯೋ ಎನಿಸುತ್ತದೆ ಎಂದು ಮರುಕಪಟ್ಟುಕೊಂಡಿದ್ದಾರೆ.
ಖಾಸಗಿ ಏಜೆನ್ಸಿಗಳಿಂದ ಸೋಷಿಯಲ್ ಮೀಡಿಯಾ..!
ನನ್ನ ಜೊತೆ ತೃಣಮೂಲ ಕಾಂಗ್ರೆಸ್ ನ ಹಲವಾರು ನಾಯಕರು ಸಂಪರ್ಕದಲ್ಲಿದ್ದಾರೆ. ಅವರು ಹೇಳಿದಂತೆಯೇ ಸಾಮಾಜಿಕ ಮಾಧ್ಯಮ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳು ನೋಡಿಕೊಳ್ಳುತ್ತಿವೆ. ಇದು ತೆರೆದಿಟ್ಟ ರಹಸ್ಯ ಆಗಿದೆ. ಈ ಏಜೆನ್ಸಿಗಳು ಹಿರಿಯ ರಾಜಕಾರಣಿಗಳ ಬೆನ್ನು ಮೂಳೆಯನ್ನು ಮುರಿಯುತ್ತಿವೆ. ಹಣ ತೆಗೆದುಕೊಂಡು ಕೆಲಸ ಮಾಡುವ ಜನರು ಸಂವಿಧಾನದ ಮುಖ್ಯಸ್ಥರನ್ನು ಟೀಕಿಸುತ್ತಿವೆ. ಈ ರೀತಿಯ ಏಜೆನ್ಸಿಗಳಿಂದ ಭಾರತೀಯ ಪ್ರಜಾಪ್ರಭುತ್ವ ಕಲುಷಿತಗೊಳ್ಳುತ್ತಿದೆ ಎಂದು ಪ್ರಶಾಂತ್ ಕಿಶೋರ್ ಅವರ ಕಾರ್ಯತಂತ್ರವನ್ನು ಟೀಕಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಂದರೆ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕಾಗಿ ಸೋಷಿಯಲ್ ಮೀಡಿಯಾ ಬಳಕೆ ಮಾಡಲು ಶುರು ಮಾಡಿದ ಮೇಲೆಯೇ ಸಾಮಾಜಿಕ ಜಾಲತಾಣದಲ್ಲಿ ಅಬ್ಬರದ ಪ್ರಚಾರ ಶುರುವಾಗಿದ್ದು. ಸೋಷಿಯಲ್ ಮೀಡಿಯಾದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪಬಹುದು ಎನ್ನುವುದನ್ನು ಬಿಜೆಪಿಯಲ್ಲಿ ಮೊದಲು ಶುರು ಮಾಡಿದ್ದೇ ಈ ಪ್ರಶಾಂತ್ ಕಿಶೋರ್. ಇದೀಗ ಬಿಜೆಪಿ ಜೊತೆಗಿನ ಸಂಬಂಧ ಹಳಸಿದೆ. ನಿತೀಶ್ ಕುಮಾರ್ ಜೊತೆಗಿನ ಸ್ನೇಹವೂ ಕಮರಿದೆ. ಇದೀಗ ಮಮತಾ ಬ್ಯಾನರ್ಜಿ ಗೆಲುವಿಗೆ ತಂತ್ರಗಾರಿಕೆ ಮಾಡುತ್ತಿದ್ದಾರೆ.
ಆದರೆ ಪ್ರಶಾಂತ್ ಕಿಶೋರ್ ವಿರುದ್ಧ ಎಲ್ಲರಿಗೂ ಕಣ್ಣು ಬಿದ್ದಿದೆ. ಸ್ವತಃ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರೇ ಓರ್ವ ಖಾಸಗಿ ವ್ಯಕ್ತಿ ಬಗ್ಗೆ ಈ ಬಗ್ಗೆ ಟೀಕೆ ಮಾಡಿರುವುದು ಸರೀನಾ..? ಗೊತ್ತಿಲ್ಲ. ಪಶ್ಚಿಮ ಬಂಗಾಳ ಜನರೇ ಈ ಬಗ್ಗೆ ನಿರ್ಧಾರ ಮಾಡಬೇಕಿದೆ.







