ಭಾರತದ ಮಟ್ಟಿಗೆ ಸಿನಿಮಾ ಮತ್ತು ರಾಜಕಾರಣ ಯಾವತ್ತಿಗೂ ಡಿಮ್ಯಾಂಡ್ ಇಳಿಯದ ಆಕರ್ಷಕ ಕ್ಷೇತ್ರ. ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳುವ ಮತ್ತು ಹೆಸರು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಏನಾದರೊಂದು ವಿಶಿಷ್ಟ ಕಸರತ್ತಿಗೆ ಮುಂದಾಗುವುದು ಸರ್ವೇಸಾಮಾನ್ಯ ವಿಚಾರ. ಸತ್ಯ ಗೊತ್ತಿರುವ ಕಾರಣ ಜನರೂ ಸಹ ಇಂತವರ ಕೆಲವು ಚಿಲ್ಲರೆ ಪ್ರಚಾರಗಳನ್ನು ಹೊಟ್ಟೆಗೆ ಹಾಕಿಕೊಂಡಿದ್ದಾರೆ. ಆದರೆ, ಕೊರೋನಾ ದಾಳಿಯಂತಹ ಸಂದಿಗ್ಧ ಸಂದರ್ಭದಲ್ಲೂ ಇವರು ಪ್ರಚಾರಕ್ಕೆ ಮುಂದಾಗುತ್ತಾರೆ ಎಂದರೆ ಇಂತವರ ಮತಿಭ್ರಮಣೆಗೆ ಏನೆನ್ನುವುದು?
ಇಡೀ ವಿಶ್ವ ಇಂದು ಕೊರೋನಾ ದಾಳಿಗೆ ತುತ್ತಾಗಿ ತತ್ತರಿಸುತ್ತಿವೆ. ಕೊರೋನಾ ದಾಳಿಯಿಂದಾಗಿ ಸರ್ಕಾರಗಳು ಮಾತ್ರವಲ್ಲ ಜನ ಸಾಮಾನ್ಯರೂ ಇದೀಗ ದಿವಾಳಿಯ ಅಂಚಿಗೆ ಬಂದು ನಿಲ್ಲುವಂತಾಗಿದೆ. ಭಾರತದಲ್ಲಿ ಘೋಷಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಮಾತ್ರ ಭಾರತದಲ್ಲಿ ಸುಮಾರು 40 ಕೋಟಿ ಕಾರ್ಮಿಕರ ವರ್ಗ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತುತ್ತು ಅನ್ನಕ್ಕೂ ಪರದಾಡುವ ಜನರ ತುತ್ತಿನ ಚೀಲ ತುಂಬಿಸುವ ಸಲುವಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಾವಿರಾರು ಸಂಘ ಸಂಸ್ಥೆಗಳು ತಾವೇ ಅಡಿಗೆ ಮಾಡಿ ಊಟವನ್ನು ನೀಡುತ್ತಿವೆ. ಸಾರ್ಥಕ ಕೆಲಸ ಮಾಡುತ್ತಿವೆ. ಆದರೆ, ಕೆಲವು ರಾಜಕಾರಣಿಗಳೂ ಇಂತಹ ಪ್ರತಿಕೂಲ ಪರಿಸ್ಥಿತಿಯನ್ನೂ ತಮ್ಮ ಚಿಲ್ಲರೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದೇ ರೀತಿಯ ಒಂದು ಘಟನೆ ಕರ್ನಾಟಕದಲ್ಲೂ ನಡೆದಿರುವುದು ದುರಾದೃಷ್ಟಕರ
ಲಾಕ್‌ಡೌನ್ ಎಫೆಕ್ಟ್ ಎಲ್ಲಾ ರಾಜ್ಯಗಳಂತೆ ಕರ್ನಾಟಕದ ಮೇಲೂ ಸಾಕಷ್ಟು ಪ್ರಭಾವ ಬೀರಿದೆ. ಕೇವಲ ಬೆಂಗಳೂರಿನಲ್ಲಷ್ಟೇ ಇರುವ ಸುಮಾರು 1.5 ಲಕ್ಷ ಅಸಂಘಟಿತ ಕಾರ್ಮಿಕರು ಊಟವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 2 ಕೋಟಿಗೂ ಅಧಿಕ ಜನರ ತುತ್ತು ಅನ್ನದ ಮೇಲೆ ಈ ಲಾಕ್‌ಡೌನ್ ನೇರ ಪರಿಣಾಮ ಬೀರಿದೆ.
ಇಂತವರ ತುತ್ತಿನ ಚೀಲ ತುಂಬುದು ಸರ್ಕಾರದ ಆದ್ಯ ಕರ್ತವ್ಯ. ಇದೇ ಕಾರಣಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಮೂರು ತಿಂಗಳ ಪ್ಯಾಕೇಜ್ ಘೋಷಿಸುವ ಮೂಲಕ ಬಿಪಿಎಲ್ ಕಾರ್ಡುದಾರರಿಗೆ ಮೂರು ತಿಂಗಳ ಪಡಿತರವನ್ನು ಒಟ್ಟಿಗೆ ನೀಡುವ ಕೆಲಸಕ್ಕೆ ಮುಂದಾಗಿದೆ. ಅಲ್ಲದೆ, ನಾನಾ ಪರಿಹಾರ ಯೋಜನೆಗಳನ್ನು ಘೋಷಿಸಿದೆ.
ಈ ಯೋಜನೆಗಳನ್ನು ಜನರ ಬಳಿ ತಲುಪಿಸುವುದು ಜನ ಪ್ರತಿನಿಧಿ ಎನಿಸಿಕೊಂಡವರ ಕರ್ತವ್ಯ. ಆದರೆ, ಸರ್ಕಾರಿ ಹಣದಲ್ಲಿ ಜನರಿಗೆ ತಲುಪಿಸುವ ಈ ಆಹಾರ ಧಾನ್ಯಗಳ ಮೇಲೂ ಪ್ರತಿನಿಧಿಗಳು ತಮ್ಮ ಪೋಟೋ ಹಾಕಿ ಪ್ರಚಾರ ತೆಗೆದುಕೊಳ್ಳುತ್ತಾರೆ ಎಂದರೆ ಇಂತವರ ಚಿಲ್ಲರೆ ಬುದ್ಧಿಗೆ ಏನು ಹೇಳೋಣ? ಇತ್ತೀಚೆಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಇಂತಹದ್ದೇ ಒಂದು ಕೆಲಸಕ್ಕೆ ಮುಂದಾಗುವ ಮೂಲಕ ಇದೀಗ ಪೇಚಿಗೆ ಸಿಲುಕಿದ್ದಾರೆ.
ಅಂದಂಗೆ ಭಾರತದಲ್ಲಿ ಹೀಗೆ ಪ್ರಕೃತಿ ವಿಕೋಪ ನಡೆಯುತ್ತಿರುವುದು ಇದೇ ಮೊದಲಲ್ಲ, ಇಂತಹ ರಾಜಕಾರಣಿಗಳ ಪ್ರಚಾರಕ್ಕೂ ಬರವಿಲ್ಲ. ಆ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:
ಭಾರತದಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸುವ ಸಾವು ಎಷ್ಟು ಗೊತ್ತಾ?
ಆಧುನಿಕತೆ ಬೆಳೆದಂತೆಲ್ಲಾ ಪ್ರಕೃತಿ ವಿಕೋಪಗಳ ಸಂಖ್ಯೆ ಮತ್ತು ಅದರಿಂದಾಗುತ್ತಿರುವ ಪ್ರಾಣ ಹಾನಿಯ ಸಂಖ್ಯೆಯೂ ಅಧಿಕವಾಗುತ್ತಲೇ ಇದೆ. ಹಾಗೆ ನೋಡಿದರೆ ಕಳೆದ ಎರಡು ಶತಮಾನಗಳಗಳನ್ನು ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷ ಯುಗ ಎಂದರೇ ತಪ್ಪಾಗಲಾರದು. ಆದರೆ, ಈ ಸಂಘರ್ಷದಲ್ಲಿ ಯಾವಾಗಲೂ ಗೆಲುವು ಸಾಧಿಸುವುದು ಪ್ರಕೃತಿಯೇ ಎಂಬುದರಲ್ಲಿ ಎರಡು ಮಾತಿಲ್ಲ.
ಅಲ್ಲೆಲ್ಲೋ ಅಂರ್ಜೆಟೈನಾದಲ್ಲಿ ಜ್ವಾಲಾಮುಖಿ ಸ್ಪೋಟ, ಅಮೆರಿಕದಲ್ಲಿ ಬೀಸಿದ ಕತ್ರಿನಾ ಚಂಡಮಾರುತ, ಆಸ್ಟ್ರೇಲಿಯಾ, ಕ್ಯಾಲಿಪೋರ್ನಿಯಾ ಮತ್ತು ಬ್ರೆಜಿಲ್ನ ಕಾಡುಗಳನ್ನು, ವನ್ಯ ಜೀವಿಗಳನ್ನು ಸುಟ್ಟ ಭಸ್ಮ ಮಾಡಿದ ಕಾಡ್ಗಿಚ್ಚು, ಪಪುವಾ-ನ್ಯೂಗಿನಿ ಭೂಕಂಪ ಹೀಗೆ ಪ್ರಕೃತಿ ವಿಕೋಪಗಳು ಸಾಲು ಸಾಲು…
ಇದು ಬರೀ ವಿದೇಶದ ಲೆಕ್ಕ, ಬಾರತದಲ್ಲೇನಾಯ್ತು? ಎಂದು ಪ್ರಶ್ನೆ ಮಾಡುವವರಿಗೂ ದೊಡ್ಡ ಪಟ್ಟಿಯೇ ಇದೆ. 2017 ರಲ್ಲಿ ಚೆನ್ನೈ ಕಡಲತೀರಕ್ಕೆ ಅಪ್ಪಳಿಸಿದ ’ವರ್ದಾ’ ಚಂಡ ಮಾರುತ ಅಕ್ಷರಶಃ ಇಡೀ ಮಹಾನಗರದ ಜನ ಜೀವನವನ್ನೇ ಕಸಿದಿತ್ತು. ಈ ಚಂಡ ಮಾರುತದಿಂದ ಸುಧಾರಿಸಿಕೊಳ್ಳುವುದರ ಒಳಗಾಗಿ 2018 ರಲ್ಲಿ ಬೀಸಿದ ’ಗಜಾ’ ಚೆನ್ನೈ ಮಾತ್ರವಲ್ಲ ಚೆನ್ನೈಯಿಂದ-ನಾಗಪಟ್ಟಣಂವರೆಗಿನ ಎಲ್ಲಾ ಕರಾವಳಿ ಭಾಗದಲ್ಲೂ ರುದ್ರ ನರ್ತನಕ್ಕೆ ಸಾಕ್ಷಿಯಾಗಿತ್ತು.
ಚಂಡಮಾರುತದ ಹೊಡೆತಕ್ಕೆ ಸುಮಾರು 1 ಲಕ್ಷ ಮರಗಳು ನೆಲಕ್ಕೆ ಅಪ್ಪಳಿಸಿದ್ದವು ಎಂದರೆ ಚಂಡಮಾರುತದ ತೀವ್ರತೆಯನ್ನು ಊಹಿಸಬಹುದು.

ಇನ್ನೂ 2018 ಮತ್ತು 2019ರಲ್ಲಿ ಕರ್ನಾಟಕ ಮತ್ತು ಕೇರಳ ಇತಿಹಾಸ ಕಾಣದ ಪ್ರವಾಹಕ್ಕೆ ತುತ್ತಾಗಿತ್ತು. 2019 ರಲ್ಲಿ ಈ ಪ್ರವಾಹ ಪರಿಸ್ಥಿತಿ ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಓರಿಸ್ಸಾ ಮತ್ತು ಉತ್ತರ ಪ್ರದೇಶಕ್ಕೂ ವ್ಯಾಪಿಸಿತ್ತು. ಇನ್ನೂ ಇದೇ ವರ್ಷ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಧೂಳಿನ ಬಿರುಗಾಳಿಯೇ ಬೀಸಿತ್ತು. ಈ ಎಲ್ಲಾ ಪ್ರಕೃತಿ ವಿಕೋಪಗಳಲ್ಲಿ ನೂರಾರು-ಸಾವಿರಾರು ಜನ ಜೀವ ಕಳೆದುಕೊಂಡಿದ್ದಾರೆ. ಬದುಕಿದ್ದವರು ಜೀವನವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಈಶಾನ್ಯ ರಾಜ್ಯಗಳಲ್ಲಿ ಪ್ರಕೃತಿ ವಿಕೋಪಗಳಿಗೆ ಪ್ರತಿ ವರ್ಷ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಏನಲ್ಲ!
ಭಾರತ ಹೇಳಿ ಕೇಳಿ ಪ್ರಾಕೃತಿಕ ವಿಕೋಪಗಳ ದೇಶ. 2019 ರ ಜಾಗತಿಕ ಹವಾಮಾನ ಅಪಾಯ ಸೂಚ್ಯಂಕ ವರದಿ ಪ್ರಕಾರ ಪ್ರಕೃತಿಯಿಂದ ಅತಿಹೆಚ್ಚು ಅಪಾಯ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 14ನೇ ಸ್ಥಾನವಿದೆ, ಬರ-ನೆರೆ-ಭೂಕಂಪ-ಚಂಡಮಾರುತ-ಕಾಡ್ಗಿಚ್ಚು-ಹಿಮ ಕುಸಿತ-ಭೂ ಕುಸಿತ ಹೀಗೆ ಎಲ್ಲಾ ರೀತಿಯ ಪ್ರಕೃತಿ ವಿಕೋಪಗಳೂ ಭಾರತದಲ್ಲಿ ಜರುಗುತ್ತವೆ ಮತ್ತು ಪ್ರತಿ ವರ್ಷ ಸಾಲು ಸಾಲು ಹೆಣ ಉರುಳುತ್ತವೇ.
ಅಂಕಿ ಅಂಶಗಳ ಪ್ರಕಾರ 2017 ರಲ್ಲಿ ಪ್ರಕೃತಿ ವಿಕೋಪದಿಂದಾಗಿ ಭಾರತದಲ್ಲಿ ಸುಮಾರು 2736 ಜೀವಗಳು ಬಲಿಯಾಗಿವೆ ಇದಲ್ಲದೆ ಇದೇ ವರ್ಷ ಪ್ರಕೃತಿ ವಿಕೋಪದಿಂದಾಗಿ ಭಾರತದ ಆರ್ಥಿಕ ನಷ್ಟ ಸುಮಾರು 7,13,789 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಇಂತಹ ಸಂದರ್ಭದಲ್ಲಿ ಆತ ಎಷ್ಟೇ ಶ್ರೀಮಂತನಾಗಿದ್ದರೂ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಮತ್ತು ಇಂತಹ ಪರಿಸ್ಥಿತಿ ಭಾರತದಲ್ಲಿ ಕೆಲವು ರಾಜಕಾರಣಿಗಳ ಪಾಲಿಗೆ ಪ್ರಚಾರದ ಸರಕೂ ಹೌದು ಎಂಬುದು ಅರಗಿಸಿಕೊಳ್ಳಲು ಕಷ್ಟವಾದರೂ ಒಪ್ಪಿಕೊಳ್ಳಲೇಬೇಕಾದ ಸತ್ಯ!
ಬಡವರ ಸಾವು ಮತ್ತು ರಾಜಕಾರಣಿಗಳ ಪ್ರಚಾರ
ಅದು 2019 ರ ಜುಲೈ-ಆಗಸ್ಟ್. ಮಹಾರಾಷ್ಟ್ರ ಚುನಾವಣೆಗೆ ದಿನಗಣೆಗೆ ಆರಂಭವಾಗಿತ್ತು. ಪ್ರಮುಖ ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗುತ್ತಿದ್ದಂತೆ ಬಂದೆರಗಿದ ಮಳೆ ಮಹಾ ಪ್ರಳಯವನ್ನೇ ಸೃಷ್ಟಿಸಿತ್ತು. ಪರಿಣಾಮ ನೂರಾರು ಜನ ಪ್ರಾಣ ಕಳೆದುಕೊಂಡರೆ ಸಾವಿರಾರು ಜನ ತಮ್ಮ ನೆಲೆಯನ್ನೇ ಕಳೆದುಕೊಂಡಿದ್ದರು. ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದದ್ದರು. ಬೇರೆ ವಿಧಿ ಇಲ್ಲದೆ ಗಂಜಿ ಕೇಂದ್ರ ಹೊಕ್ಕಿದ್ದರು.
ಆದರೆ, ಇವರಿಗೆ ಅಗತ್ಯ ಆಹಾರ ವಸ್ತುಗಳನ್ನು ಒದಗಿಸಬೇಕಿದ್ದ ಅಂದಿನ ಮಹಾರಾಷ್ಟ್ರದ ಸರ್ಕಾರ ಎಲ್ಲಾ ಪರಿಹಾರ ಸಾಮಗ್ರಿಗಳ ಮೇಲೂ ಸಿಎಂ ದೇವೇಂದ್ರ ಫಡ್ನವೀಸ್ ಚಿತ್ರವನ್ನು ಮುದ್ರಿಸಿ ಅಮಾನವೀಯತೆ ಮೆರೆದಿತ್ತು. ಚುನಾವಣೆ ನಿಮಿತ್ತ ದೇವೇಂದ್ರ ಫಡ್ನವೀಸ್ ಸರ್ಕಾರ ಇಂತಹ ನೀಚ ಗಿಮಿಕ್‌ಗೆ ಮುಂದಾಗಿದೆ ಎಂದು ರಾಷ್ಟ್ರದಾದ್ಯಂತ ಅನೇಕ ಮಾಧ್ಯಮಗಳು ಟೀಕಾ ಪ್ರಹಾರವನ್ನೇ ನಡೆಸಿದ್ದವು.

ಇದೇ ವರ್ಷ ಉತ್ತರಪ್ರದೇಶದಲ್ಲೂ ಸಹ ನೆರೆ ಪ್ರವಾಹ ಸಂಭವಿಸಿತ್ತು. ಈ ವೇಳೆ ಅಲ್ಲೂ ಸಹ ಎಲ್ಲಾ ಪರಿಹಾರದ ಪ್ಯಾಕೆಟ್‌ಗಳ ಮೇಲೆ ಸಿಎಂ ಯೋಗಿ ಆದಿತ್ಯನಾಥ್ ಫೋಟೋ ರಾರಾಜಿಸುತ್ತಿತ್ತು. ಇದೂ ಸಹ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಇನ್ನೂ ತಮಿಳುನಾಡಿನಲ್ಲಿ ಅಮ್ಮ ಖ್ಯಾತಿಯ ದಿವಂಗತ ಜಯಲಲಿತ ಮತ್ತು ಅವರ ಶಿಷ್ಯಂದಿರಾದ ಇಂದಿನ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಡಿಸಿಎಂ ಓ ಪನ್ನೀರ್ ಸೆಲ್ವಂ ಫೊಟೋ ಇಲ್ಲದ ಯಾವುದೇ ಪರಿಹಾರದ ಪ್ಯಾಕೇಟ್ ನೋಡಿದರೆ ನೀವೆ ಧನ್ಯರು. ಏಕೆಂದರೆ ಅಲ್ಲಿನ ಜನ ಸಹ ಇದನ್ನು ಜೀರ್ಣಿಸಿಕೊಂಡು ಪರಿಸ್ಥಿತಿಗೆ ಒಗಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ತಮಿಳುನಾಡಿನ ವಿಚಾರ ಅಷ್ಟಾಗಿ ಸದ್ದಾಗುವುದೇ ಇಲ್ಲ.
ಒಟ್ಟಾರೆ ಇಡೀ ವಿಶ್ವದಲ್ಲಿ ತನ್ನದೇ ನೆಲದ ಜನರ ಸಾವು ಮತ್ತು ಅಸಹಾಯಕತೆಯೂ ಮತ್ತೋರ್ವನ ಪ್ರಚಾರ ಸಾಮಗ್ರಿಯಾಗಿ ಪರಿವರ್ತನೆಯಾಗುವುದು ಮತ್ತು ಸಮಾಜದಲ್ಲಿ ಅದು ಸಲ್ಲುವುದು ಭಾಗಶಃ ಭಾರತದಲ್ಲಿ ಮಾತ್ರವೇ ಇರಬೇಕು.