ಮಂಗಳೂರಿನಲ್ಲಿ ಕೆಫೇ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ ಆತ್ಮಹತ್ಯೆಗೈದು ಒಂದು ವರ್ಷ ಆಗುತ್ತಿದೆ. ಸಿದ್ಧಾರ್ಥ ಕಟ್ಟಿದ ಕಾಫಿ ಡೇ ಮತ್ತಷ್ಟು ಆರ್ಥಿಕ ಸಂಕಷ್ಟದತ್ತ ಮುಖ ಮಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ಲಾಕ್ ಡೌನ್ ಕಾಫಿ ಚೈನ್ ಆಫ್ ಕೆಫೆಟೇರಿಯ ವ್ಯವಹಾರಕ್ಕೆ ಇನ್ನಷ್ಟು ಹೊಡೆತ ನೀಡಿದೆ. ಈ ಮಧ್ಯೆ ಬಂದಿರುವ ಸುದ್ದಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ 2700 ಕೋಟಿ ರೂಪಾಯಿ ಕಂಪೆನಿ ಹಣವನ್ನು ಬೇರೆಡೆ ವರ್ಗಾಯಿಸಿದ್ದಾರೆ ಎಂಬುದು ಒಂದಾದರೆ ಮತ್ತೊಂದು ಸಿದ್ಧಾರ್ಥ ನಡೆಸಿದ ಸಾಲದ ಮೇಲೆ ಕಟ್ಟಿದ ಬಿಸಿನೆಸ್ ಮಾಡೆಲ್.
ಡೆತ್ ನೋಟ್ ಹಿನ್ನೆಲೆಯಲ್ಲಿ ಸಾವಿನ ತನಿಖಾ ವರದಿ ಪ್ರಕಾರ ಸಿದ್ಧಾರ್ಥ್ ಹಣಕಾಸು ವಹಿವಾಟಿನ ಮಾದರಿ, ಆಂತರಿಕ ಲೆಕ್ಕ ಪರಿಶೋಧನೆ, ದುಬಾರಿ ದರದ ಸಾಲು ಸಾಲು ಬಡ್ಡಿ, ಬಾರಿ ಲಾಭಾಂಶದ ಆಸೆ ತೋರಿಸಿ ತಂದು ಹಾಕಿದ ಪ್ರೈವೇಟ್ ಇಕ್ವಿಟಿ ಎಲ್ಲವೂ ದಡ ಮುಟ್ಟುವ ವ್ಯಾಪಾರದ ಮಾದರಿ ಆಗಿರಲಿಲ್ಲ ಎಂದು ಬೊಟ್ಟು ಮಾಡಿದೆ.
ಸಾಲಕ್ಕಾಗಿ ತನ್ನ ಸ್ವಂತ ಆಸ್ತಿಯನ್ನು ಅಡವಿಟ್ಟಿರುವುದಲ್ಲದೆ, ಕುಟುಂಬ ಸದಸ್ಯರ ಆಸ್ತಿ, ಸ್ನೇಹಿತರಿಂದ ಕೈ ಸಾಲ ಎಲ್ಲವನ್ನು ಪಡೆಯುತ್ತಲೇ ಒಂದು ದಶಕಗಳಿಂದ ನಡೆದ ಚಕ್ರಬಡ್ಡಿ ವ್ಯವಹಾರದಲ್ಲಿ ಬಂಡವಾಳ ಹೂಡಿಕೆದಾರರನ್ನು ಕರೆ ತರಲು ವಿಫಲರಾದ ಸಿದ್ಧಾರ್ಥಗೆ ಬೇರೆ ಅವಕಾಶಗಳೇ ಇರಲಿಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
1,700 ಕ್ಕೂ ಹೆಚ್ಚು ಕಾಪಿ ಡೇ ಔಟ್ ಲೆಟ್ ಗಳನ್ನು ನಡೆಸುತ್ತಿದ್ದ ಕಾಫಿ ಡೇ ಎಂಟರಪ್ರೈಸಸ್ ಲಿಮಿಟೆಡ್ ಸಂಸ್ಥೆಯ ಸಹಸಂಸ್ಥೆಗಳಿಗೆ ಸಿದ್ಧಾರ್ಥ ಅವರ ಸ್ವಂತ ಒಡೆತನದ ಮೈಸೂರು ಅಮಲ್ಗಮೆಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ 3,535 ಕೋಟಿ ರೂಪಾಯಿ ನೀಡಬೇಕಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಫಿ ಡೇಯ ವಹಿವಾಟಿನ ಮಾದರಿಯನ್ನು ಅವಲೋಕಿಸಿದರೆ, ಕಾಫಿ ಡೇ ಎಂಬ ರೋಮಾಂಚಕಾರಿ ಕತೆಯ ಹಿರೋ ಮತ್ತು ವಿಲನ್ ಸಿದ್ಧಾರ್ಥ್ ಅವರೇ ಆಗಿದ್ದರು. ವಿದೇಶಿ ಪ್ಪೈವೇಟ್ ಇಕ್ವಿಟಿ (ಪಿಇ) ಹೂಡಿಕೆದಾರಿಗೆ ದೊಡ್ಡ ಮೊತ್ತವನ್ನು ನೀಡುವ ಭರವಸೆಯೊಂದಿಗೆ ತಂದಿದ್ದ ಬಂಡವಾಳದಿಂದ ಲಾಭಾಂಶ ಪಡೆಯಲಾಗದೆ, ಭಾರತದ ಕಾಫಿ ವ್ಯವಹಾರದ ಉದ್ಯಮಿ ಹೆಚ್ಚೆಚ್ಚು ಸಾಲಗಳನ್ನು ಪಡೆಯುತ್ತಲೆ ಹೋದರು. ಎಲ್ಲೆಲ್ಲಿ ಸಾಲ ದೊರೆಯುತ್ತದೆಯೊ ಅಲ್ಲಿಂದೆಲ್ಲ ಸಾಲ ತಂದರು. ಅದು ದುಬಾರಿ ಬಡ್ಡಿ ದರದಲ್ಲಿ. ಮತ್ತೆ ಆ ಸಾಲಗಳ ಅಸಲು, ಬಡ್ಡಿ ಪಾವತಿಸಲು ಕುಟುಂಬದವರ ಆಸ್ತಿ ಅಡವಿಟ್ಟು ಸಾಲ ಮಾಡಿ, ಬೃಹತ್ ಸಾಲದ ಪಿರಮಿಡ್ಡಿನಂತೆ ಬೆಳೆದಿತ್ತು. ಪಿರೆಮಿಡ್ ಒಂದು ತಾರ್ಕಿಕ ಅಂತ್ಯದ ತುತ್ತತುದಿಗೆ ಬಂದು ನಿಂತಿತ್ತು.
ತಾನು ಕಾಫಿ ಪರಿಮಳದ ಮೇಲೆ ಕಟ್ಟಿರುವ, ಭಾರತಕ್ಕೆ ಹೊಸದಾದ ವ್ಯವಹಾರಕ್ಕೆ ಒಂದಲ್ಲ ಒಂದು ದಿನ ಬಂಡವಾಳ ಹೂಡಿಕೆದಾರರು ಬರಬಹುದು ಎಂಬ ಆಶಾಭಾವನೆ ಸಿದ್ಧಾರ್ಥ್ ಅವರಲ್ಲಿ ಬಲವಾಗಿತ್ತು. ಸಿಬಿಐಯ ನಿವೃತ್ತ ಡಿಐಜಿ ಅಶೋಕ್ ಮಲ್ಹೋತ್ರ ಅವರು ತನಿಖೆ ನಡೆಸಿ ಕಂಪೆನಿಗೆ ನೀಡಿರುವ ವರದಿಯಲ್ಲಿ ಕೂಡ ಇದೇ ರೀತಿ ಉಲ್ಲೇಖ ಮಾಡಿದ್ದಾರೆ. ಕಾಫಿ ಡೇ ಕಂಪೆನಿ ಆಡಳಿತ ಮಂಡಳಿ ಸಿದ್ಧಾರ್ಥ ಸಾಯುವ ಮುನ್ನ ಬರೆದಿರುವ ಡೆತ್ ನೋಟಿ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಮಲ್ಹೋತ್ರ ಅವರನ್ನು ಕೇಳಿಕೊಂಡಿತ್ತು.
ವಿಶ್ವದ ಲಘು ಪಾನೀಯ ಮಾರುಕಟ್ಟೆಯ ದಿಗ್ಗಜ ಕೋಕ ಕೋಲ ಕಂಪೆನಿ ಕಾಫಿ ಡೇ ಕಂಪೆನಿಯಲ್ಲಿ ಬಂಡವಾಳ ಹೂಡಿಕೆಗೆ ಹಿಂಜರಿದಾಗಲೇ ಸಿದ್ಧಾರ್ಥ್ ಕನಸಿನ ಸೌಧ ಕುಸಿದು ಹೋಗಿತ್ತು. ಅಂದಾಜು ಏಳೂವರೆ ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಲು ಅರ್ಥಾತ್ ಸಿದ್ಧಾರ್ಥ ಅವರ ಶೇರುಗಳನ್ನು ಖರೀದಿಸಲು ಕೋಕ ಕೋಲ ಕಂಪೆನಿ ಸಿದ್ಧವಾಗಿತ್ತು ಎಂದು ಕಳೆದ ಜೂನ್ ತಿಂಗಳಲ್ಲಿ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಎರಡು ವರ್ಷಗಳ ಹಿಂದೆ ಕೋಕ್ ಕಂಪೆನಿ ಬ್ರಿಟನಿನ ಕಾಫಿ ಕಂಪೆನಿಯೊಂದನ್ನು ಖರೀದಿ ಮಾಡಿರುವುದು ಇದಕ್ಕೆ ಪುಷ್ಟಿ ನೀಡಿತ್ತು. ಮಾತ್ರವಲ್ಲದೆ, ಕಾಫಿ ಹೀರುವ ಟ್ರೆಂಡ್ ವಿಶ್ವದಾದ್ಯಂತ ಹಬ್ಬುತ್ತಿರುವುದನ್ನು ಪಾನೀಯ ಕಂಪೆನಿ ಗಮನಿಸಿತ್ತು. ಇಂತಹದೊಂದು ಡೀಲ್ ನಡೆದಿದ್ದರೆ ಸಿದ್ಧಾರ್ಥ್ ದೇಶದ ಮತ್ತೊಬ್ಬ ಯಶಸ್ವಿ ಉದ್ಯಮಿ ಎಂಬ ಹೆಸರು ಪಡೆಯಬಹುದಿತ್ತು.
ಇವೆಲ್ಲದರ ನಡುವೆ ಯಾವುದೇ ಏಜೆನ್ಸಿಯಾಗಲಿ, ಆಡಿಟ್ ವ್ಯವಸ್ಥೆಯಾಗಲಿ ಸುಮಾರು ಎರಡು ದಶಕಗಳಿಂದ ನಡೆಯುತ್ತಿರುವ ಸಂಪೂರ್ಣ ಸಾಲ ಅವಲಂಬಿತ ವ್ಯಾಪಾರ ಮಾದರಿಯ ಬಗ್ಗೆ ಯಾರೂ ಕೂಡ ಆಕ್ಷೇಪ ಸಲ್ಲಿಸಿರುವ ಬಗ್ಗೆ ಮಾಹಿತಿ ಇಲ್ಲ. ಇನ್ನು ಸ್ಟಾಕ್ ಎಕ್ಸ್ ಚೇಂಜ್ ನೋಂದಾಯಿತ ಕಂಪೆನಿಯ ಆಡಳಿತ ಮಂಡಳಿ ಸದಸ್ಯರು ಕೂಡ ಸಿದ್ಧಾರ್ಥ ಅವರು ದುಬಾರಿ ಸಾಲದಲ್ಲೇ ನಡೆಸುತ್ತಿರುವ ವ್ಯವಹಾರದ ಸಂಶಯ ವ್ಯಕ್ತಪಡಿಸಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ತನಿಖಾ ವರದಿ ಪ್ರಕಾರ ಕಂಪೆನಿ ಆಡಿಟರ್ಸ್ ಸಾಲದ ವಿಚಾರದಲ್ಲಿ ಎಲ್ಲೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ, ಆಡಳಿತ ಮಂಡಳಿ ಸಭೆಯಲ್ಲಿ ಹಣಕಾಸು ವ್ಯವಹಾರಗಳ ಬಗ್ಗೆ ಚರ್ಚೆ ನಡೆದಿದೆ. ಆದರೆ, ಪ್ರಭಾವಶಾಲಿ ಸಿದ್ಧಾರ್ಥ ಬೇರೆ ಕಂಪೆನಿಗಳ ಸಾಲ ವ್ಯವಹಾರದ ಉದಾಹರಣೆ ನೀಡಿ ಬಾಯಿ ಮುಚ್ಚಿಸುತ್ತಿದ್ದರು ಎನ್ನುತ್ತದೆ ವರದಿ.
ಕಾಫಿ ಡೇ ಕಂಪೆನಿ ಮತ್ತು ಅದರ ಸಹ ಸಂಸ್ಥೆಗಳ ಹಣಕಾಸು ವ್ಯವಹಾರ ಒಂದಕ್ಕೊಂದು ಸಂಬಂಧವಿಲ್ಲದಂತೆ ನಾಲ್ಕು ಗೋಡೆಗಳ ಮಧ್ಯೆ ನಡೆಯುವಂತೆ ಸಿದ್ಧಾರ್ಥ್ ರೂಪಿಸಿದ್ದರು ಎನ್ನುತ್ತದೆ ತನಿಖಾ ವರದಿ. ಕಾನೂನು ಪ್ರಕಾರ ಸರಿಯಾಗಿದ್ದರೂ ಹಣಕಾಸು ವ್ಯವಹಾರ ಒಬ್ಬ ಅಧಿಕಾರಿಗೆ ಗೊತ್ತಿರುವ ಮಾಹಿತಿ ಮತ್ತೊಬ್ಬ ಅಧಿಕಾರಿಗೆ ಗೊತ್ತಾಗುತ್ತಿರಲಿಲ್ಲ. ಇಂತಹ ವ್ಯವಸ್ಥೆ ಆಂತರಿಕ ಹಣಕಾಸು ನಿಯಂತ್ರಣ ಮತ್ತು ಪರಿಶೋಧನೆಗೆ ಮಾರಕವಾಗಿತ್ತು. ಎಲ್ಲ ಮಾಹಿತಿಗಳು ತನಗೊಬ್ಬನಿಗೆ ಗೊತ್ತಿರುವಂತ ವ್ಯವಸ್ಥೆ ಅಲ್ಲಿತ್ತು ಎನ್ನಲಾಗಿದೆ.
ಸಿದ್ಧಾರ್ಥ ಒಡೆತನದ ಹಲವು ಕಂಪೆನಿಗಳಿತ್ತು. ಅವುಗಳಿಗೂ ಕಾಫಿಡೇಗೂ ಸಂಬಂಧ ಇರಲಿಲ್ಲ. ಆದರೆ, ಕಾಫಿ ಡೇಯಿಂದ ಇಂತಹ ಸಹಸಂಸ್ಥೆಗಳಿಗೆ ಮತ್ತು ಸ್ವಂತ ಕಂಪೆನಿಗಳ ನಡುವ ಹಣಕಾಸು ವರ್ಗಾವಣೆ ನಡೆಯುತ್ತಿದ್ದರೂ ಆಯಾಯ ಸಹಸಂಸ್ಥೆಗಳ ಹಣಕಾಸು ಅಧಿಕಾರಿಗಳಿಗೆ ಇದರ ನಿಯಂತ್ರಣ ಇರಲಿಲ್ಲ ಎಂಬುದು ಕೂಡ ಗಮನಾರ್ಹ. ಈ ಹಿನ್ನೆಲೆಯಲ್ಲಿ, ಕೊನೆಯ ಹಂತದಲ್ಲಿ ವ್ಯವಹಾರವಾದ 2,700 ಕೋಟಿ ರೂಪಾಯಿ ಎಲ್ಲೆಲ್ಲ ಬಟವಾಡೆ ಆಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.