ಉಡುಪಿ ಜಿಲ್ಲಾಡಳಿತದಿಂದ ನೆರವು ಸಿಗದೇ ಕಂಗಾಲಾಗಿ ಹೋಗಿದ್ದ ವಲಸೆ ಕಾರ್ಮಿಕರಿಗೆ ಆಶ್ರಯದಾತೆಯಾಗಿ, ಒಂದು ವಾರದಿಂದ ಬಿಡದೇ ಕೆಲಸ ನಿರ್ವಹಿಸಿದ ಸಾಯಿಶ್ರೀ ಪ್ರಯತ್ನಕ್ಕೆ ಉತ್ತಮ ಫಲಿತಾಂಶವೇ ಸಿಕ್ಕಿದೆ. ಮುಂಬೈ ಮೂಲದ ಮಣಿಪಾಲ MIT ವಿದ್ಯಾರ್ಥಿನಿಯಾಗಿದ್ದ ಸಾಯಿಶ್ರೀ, ಯಾವುದೋ ಕೆಲಸದ ನಿಮಿತ್ತ ಮಣಿಪಾಲಕ್ಕೆ ಬಂದವರು, ಉಡುಪಿ ಜಿಲ್ಲೆಯ ಮಣಿಪಾಲದ ಸಮೀಪದ ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿ ತಂಗಿದ್ದ ವಲಸೆ ಕಾರ್ಮಿಕರಿಗೆ ಅವರ ತವರು ರಾಜ್ಯ ತೆಲಂಗಾಣಕ್ಕೆ ವಾಪಾಸ್ ತೆರಳುವಂತಾಗಲು ಸಾಯಿಶ್ರೀ ಮಾಡಿದ ಅವಿರತ ಪ್ರಯತ್ನದ ಬಗ್ಗೆ ʼಪ್ರತಿಧ್ವನಿʼ ವಿಸ್ತೃತ ವರದಿ ಬಿತ್ತರಿಸಿತ್ತು.
Also Read: ಕೃಷ್ಣನೂರಿನಲ್ಲಿ ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ ನೆರವಾದ MIT ವಿದ್ಯಾರ್ಥಿನಿ
ಇಂದು (ಮೇ 19) ಎರಡು KSRTC ಬಸ್ಗಳ ಮೂಲಕ ತೆಲಂಗಾಣದ ಕಾರ್ಮಿಕರನ್ನ ಊರಿಗೆ ವಾಪಾಸ್ ಕಳುಹಿಸಿಕೊಡಲಾಯಿತು. ಈ ಸಂದರ್ಭ ಮತ್ತೆ ಊರಿಗೆ ಹೋಗುವಂತಾಗಲು ಕಾರಣೀಕರ್ತರಾದ ಸಾಯಿಶ್ರೀ ಅಕೊಂಡಿ ಅವರಿಗೆ ವಲಸೆ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ವಲಸೆ ಕಾರ್ಮಿಕರಿಗೆ ಊಟೋಪಚಾರ, ವಸತಿ ವ್ಯವಸ್ಥೆಯಲ್ಲಿ ಪರಿಶ್ರಮಪಟ್ಟಿದ್ದ ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೂ ಹಾಗೂ ನೆರವಾದ ಎಲ್ಲಾ ಸಾರ್ವಜನಿಕರಿಗೆ ಕೃತಜ್ಞತೆ ತಿಳಿಸಿ, ಬಸ್ ಮೂಲಕ ಆ 49 ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಹೊರಟಿದ್ದಾರೆ.
ಕೊನೆ ಗಳಿಗೆಯಲ್ಲಿ ಪ್ರಚಾರ ಪಡೆಯಲು ಮುಂದಾದ ಉಡುಪಿ ಶಾಸಕ!
ಮೇ 11 ರಿಂದ ನಿರಂತರವಾಗಿ ವಾರಗಳ ಕಾಲ ಸಾಯಿಶ್ರೀ ಪರಿಶ್ರಮ ಪಟ್ಟ ಕಾರಣದಿಂದಾಗಿ ದಿನಗಳ ಅಂತರದಲ್ಲೇ ಗರ್ಭಿಣಿ ಮಹಿಳೆ, ಮಕ್ಕಳ ಸಹಿತ ಒಟ್ಟು 49 ಮಂದಿಯೂ ತಮ್ಮ ತವರು ರಾಜ್ಯಕ್ಕೆ ವಾಪಾಸ್ ತೆರಳುವಂತಾಗಿದೆ. ಮಧ್ಯಾಹ್ನ ಊರಿಗೆ ತೆರಳಲು ಸಿದ್ಧರಾದವರನ್ನ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿ ಯಾರಲ್ಲೂ ಕರೋನಾ ಸೋಂಕು ಇಲ್ಲ ಎಂದು ಖಚಿತಪಡಿಸಿಕೊಳ್ಳಲಾಗಿದೆ. ಇನ್ನೇನು ಊರಿಗೆ ಹೊರಡುತ್ತಾರೆ ಅನ್ನೋ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಉಡುಪಿ ಶಾಸಕ ರಘುಪತಿ ಭಟ್ ಸಾಯಿಶ್ರೀ ನಡೆಸಿದ್ದ ಪರಿಶ್ರಮದ ʼಕ್ರೆಡಿಟ್ʼ ಪಡೆಯಲು ಮುಂದಾಗಿದ್ದಾರೆ ಅನ್ನೋ ಮಾತು ಕೇಳಿ ಬರತೊಡಗಿದೆ. ಆದರೆ ಅಲ್ಲಿ ನೆರೆದಿದ್ದವರಿಗೆಲ್ಲ ಸಾಯಿಶ್ರೀ ಪರಿಶ್ರಮ ತಿಳಿದಿದ್ದರಿಂದ ತಕ್ಷಣ ಅವರ ಸಮೀಪದಲ್ಲಿಯೇ ಇದ್ದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಸಾಯಿಶ್ರೀ ಅವರನ್ನ ಪರಿಚಯಿಸಿಕೊಟ್ಟಿದ್ದಾರೆ. ಅಷ್ಟಾಗುತ್ತಲೇ ರಘುಪತಿ ಭಟ್ ಅವರು ಅನಿವಾರ್ಯವಾಗಿ ತನ್ನ ಮಾತಿನ ದಾಟಿ ಬದಲಿಸಿ, ಆಕೆಯನ್ನ ಹೊಗಳುವ ಕೆಲಸಕ್ಕೆ ಇಳಿದಿದ್ದಾರೆ.
ʼಪ್ರತಿಧ್ವನಿʼ ವೆಬ್ ಸುದ್ದಿತಾಣವು ತೆಲಂಗಾಣ ಕಾರ್ಮಿಕರ ಸಂಕಷ್ಟ ಹಾಗೂ ಸಾಯಿಶ್ರೀ ನಡೆಸಿದ ನಿಸ್ವಾರ್ಥ ಪರಿಶ್ರಮದ ಬಗ್ಗೆ ವಿವರವಾಗಿ ಬರೆದಿತ್ತು. ಇದನ್ನರಿತ ಶಾಸಕರು ʼಸುಖಾಂತ್ಯʼದ ವೇಳೆಗೆ ಎಂಟ್ರಿ ಕೊಟ್ಟು ರಾಜಕಾರಣ ಮಾಡಲು ಮುಂದಾಗಿದ್ದಾರೆ. ಆದರೆ ಅದ್ಯಾವಾಗ ಸಾಯಿಶ್ರೀ ಅನ್ನೋ ಹೆಣ್ಣುಮಗಳು ಇದರ ಹಿಂದೆ ಅವಿರತ ಶ್ರಮವಹಿಸಿದ್ದಾರೆ ಎಂದು ಗೊತ್ತಾಯ್ತೋ ಅದಾಗಲೇ ಮಾತು ಬದಲಿಸಿದ ಶಾಸಕರು, “ ಸೇವಾಸಿಂಧು ವೆಬ್ಸೈಟ್ನಿಂದಲೂ ಅನುಮತಿ ಪಡೆಯಲು ಸಾಧ್ಯವಾಗದೇ ಹೋದಾಗ, ಸಾಯಿಶ್ರೀ ಅವರು ತೋರಿದ ಕಾಳಜಿಯಿಂದ ತೆಲಂಗಾಣದ ಸರಕಾರದ ಸಹಕಾರ ಪಡೆದು ಊರಿಗೆ ವಾಪಾಸ್ ಹೋಗುವಂತಾಗಲು ಅವರು ತೋರಿದ ಸೇವೆಗೆ ನಾನು ಉಡುಪಿ ಜನತೆ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು.
ಮಾಧ್ಯಮಗಳ ದಿಕ್ಕು ತಪ್ಪಿಸಲೆತ್ನಿಸಿದ ಶಾಸಕ ರಘುಪತಿ ಭಟ್!
ಅಚ್ಚರಿ ಅಂದ್ರೆ ಸಾಯಿಶ್ರೀ ನಡೆಸಿದ ಕೆಲಸವೆಲ್ಲವೂ ʼನಾನೇʼ ಮಾಡಿರುವುದು ಅನ್ನೋ ಹಾಗೆ ತನ್ನ ಅಧಿಕೃತ ಉಡುಪಿ ಮಾಧ್ಯಮ ಪ್ರತಿನಿಧಿಗಳ ವಾಟ್ಸಾಪ್ ಗ್ರೂಪ್ ನಲ್ಲಿ (UDUPI MLA Bhat @ Media) ಆಪ್ತ ಸಹಾಯಕರ ಮೂಲಕ ಮೆಸೇಜ್ ರವಾನಿಸಿರುವ ರಘುಪತಿ ಭಟ್ ಅವರು, ತೆಲಂಗಾಣಕ್ಕೆ ನಡೆದುಕೊಂಡು ಹೋಗುತ್ತಿದ್ದವರನ್ನ ತಾನೇ ಮನವೊಲಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸುವ ಮೂಲಕ ಅವರನ್ನ ತೆಲಂಗಾಣಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿರುವುದಾಗಿ ಮೆಸೇಜ್ ರವಾನಿಸಿದ್ದಾರೆ. ಹಾಗಿದ್ದರೆ ನಿಜಕ್ಕೂ ಇಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವಲಸೆ ಕಾರ್ಮಿಕರನ್ನ ತಡೆದು ಮನವೊಲಿಸಿ ನಿಲ್ಲುವಂತೆ ಮಾಡಿದ್ದು ಯಾರು? ಹಾಗೆ ತಂಗಿದ್ದ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿದ್ದು ಯಾರು? ಸಾಯಿಶ್ರೀ ಅವರೇ ಅಥವಾ ಶಾಸಕ ರಘುಪತಿ ಭಟ್ರೇ ಅನ್ನೋದಾಗಿ ಸಣ್ಣ ಗೊಂದಲ ಎದುರಾಯಿತು.
ಈ ಬಗ್ಗೆ ಸ್ಪಷ್ಟನೆಗಾಗಿ ʼಪ್ರತಿಧ್ವನಿʼ ಖುದ್ದು ಶಾಸಕ ರಘುಪತಿ ಭಟ್ ಅವರನ್ನೇ ಸಂಪರ್ಕಿಸಿದ್ದು, ಮಾಧ್ಯಮ ಗ್ರೂಪ್ನಲ್ಲಿ ಹಾಕಲಾದ ಮೆಸೇಜ್ಗೂ, ಸಾಯಿಶ್ರೀ ಹೇಳಿಕೆಗೂ ವ್ಯತ್ಯಾಸದ ಬಗ್ಗೆ ಕೇಳಿದ್ದೇವೆ. ಆದರೆ ಸಾಯಿಶ್ರೀ ಹೇಳಿಕೆಯಲ್ಲಿ ಇದ್ದ ಸ್ಪಷ್ಟತೆ ಮಾತ್ರ ಶಾಸಕ ರಘುಪತಿ ಭಟ್ ಮಾತಲ್ಲಿ ಕಾಣಿಸಲಿಲ್ಲ. ಬದಲಾಗಿ ಅವರ ಹೇಳಿಕೆಯಲ್ಲೇ ವ್ಯತ್ಯಾಸ ಕಾಣುವಂತಾಯಿತು. “ ನಾವು ಕೇವಲ ಊಟದ ವ್ಯವಸ್ಥೆಯನ್ನಷ್ಟೇ ಮಾಡಿರುತ್ತೇವೆ. ಬಸ್ ವ್ಯವಸ್ಥೆಯನ್ನ ನಾವು ಮಾಡಿದ್ದೀವಿ ಅಂತಾ ಹೇಳಿಲ್ಲ..” ಅನ್ನೋ ಪ್ರತಿಕ್ರಿಯೆ ನೀಡಿದರು. ಆದರೆ ಹಿಂದೆ ಗುತ್ತಿಗೆದಾರನಿಂದ ವೇತನ ವಸೂಲಿ ಮಾಡಿಕೊಡುವಲ್ಲಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನ ಕಡಿಯಾಳಿ ಗಣೇಶೋತ್ಸವ ಸಮಿತಿ ಮೂಲಕ ಮಾಡಿದ್ದೆವು ಎಂದರು. ಅಷ್ಟಾಗುತ್ತಲೇ ಅವರ ʼಮಾಧ್ಯಮ ಗ್ರೂಪ್ʼ ನಲ್ಲಿ ತಿಳಿಸಿದಂತೆ ಬಸ್ ವ್ಯವಸ್ಥೆಯನ್ನ ಮಾಡಿರಲಿಲ್ಲ ಅನ್ನೋದನ್ನ ಸ್ವತಃ ಅವರೇ ಒಪ್ಪಿಕೊಂಡರು. ಆದರೂ ಯಾಕಾಗಿ ತಪ್ಪು ಸಂದೇಶ ನೀಡುವ ಪ್ರಯತ್ನ ನಡೆಯಿತು ಅನ್ನೋದಕ್ಕೆ ಶಾಸಕರು ಉತ್ತರಿಸುವ ಗೋಜಿಗೆ ಹೋಗದೇ, “ನಾನು ಸ್ಥಳದಲ್ಲಿ (ಇಂದ್ರಾಳಿ) ನೀಡಿದ ಹೇಳಿಕೆಯೇ ಕರೆಕ್ಟ್” ಅಂತಾ ಸಮಜಾಯಿಷಿ ನೀಡಲು ಮುಂದಾದರು.
(ಸಾಯಿಶ್ರೀ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಮಾಧ್ಯಮಗಳಿಗೆ ಮಾತನಾಡಿರುವುದು)
ತಹಶೀಲ್ದಾರ್, ಶಾಸಕರಿಗೇ ಮಾಹಿತಿ ನೀಡಿದ್ರು ಸಾಯಿಶ್ರೀ !
ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಕಿರಿಯ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಇಲ್ಲವೇ ಶಾಸಕರಿಗೆ ಸ್ಥಳಕ್ಕೆ ಬಂದಾಗ ಅನೌಪಚಾರಿಕವಾಗಿ ಮಾಹಿತಿ ನೀಡುವ ಸಂಪ್ರದಾಯವಿದ್ದರೆ, ಇಲ್ಲಿ ಅದೆಲ್ಲವನ್ನ ಸಾಯಿಶ್ರೀ ಅವರೇ ಮಾಡಿದರು. ಕಾರಣ, ಅವರು ಒಂದು ವಾರದಿಂದ ಪಟ್ಟ ಪರಿಶ್ರಮದಿಂದ ಅಲ್ಲಿದ್ದವರ ಸಂಖ್ಯೆ, ಅದರಲ್ಲಿದ್ದ ಮಕ್ಕಳ ಸಂಖ್ಯೆ, ಗರ್ಭಿಣಿಯರ ಸಂಖ್ಯೆ ಎಲ್ಲವೂ ಅವರಿಗಷ್ಟೇ ಗೊತ್ತಿದ್ದವು. ಆದ್ದರಿಂದ ತಹಶೀಲ್ದಾರ್, ಶಾಸಕರಿಗೆ ಸಾಯಿಶ್ರೀ ಅವರೇ ಮಾಹಿತಿ ನೀಡಿದ್ದು ಕಂಡುಬಂತು. ಮಾತ್ರವಲ್ಲದೇ ತೆಲಂಗಾಣ ಸರಕಾರದ ಜೊತೆಗೆ ಸಂವಹನ ನಡೆಸಿ ಬಸ್ ದರವನ್ನೂ ಭರಿಸುವಲ್ಲಿ ಸಾಯಿಶ್ರೀ ಅವರೇ ದುಡಿದಿದ್ದರು.
ಒಟ್ಟಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸಾಯಿಶ್ರೀ ನಡೆಸಿದ ಸಾಮಾಜಿಕ ಕಾಳಜಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗತೊಡಗಿದರೆ, ಇತ್ತ ಕೊನೆ ಗಳಿಗೆಯಲ್ಲಿ ವಲಸೆ ಕಾರ್ಮಿಕರ ವಿಚಾರದಲ್ಲೂ ರಾಜಕೀಯ ಮಾಡಲು ಮುಂದಾಗಿ ಉಡುಪಿ ಶಾಸಕ ರಘುಪತಿ ಭಟ್ ಪುಕ್ಸಟ್ಟೆ ಲಾಭ ಪಡೆಯಲು ಮುಂದಾದರೇ ಅನ್ನೋದು ಸಹಜವಾದ ಅನುಮಾನ.