ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಯಾವಾಗಲೂ ಒಂದು ಸಾಲನ್ನ ತಮ್ಮೆಲ್ಲಾ ಭಾಷಣದಲ್ಲಿ ಸೇರಿಸಿಕೊಂಡಿರುತ್ತಾರೆ, ಎರಡು ಮೂರು ತಿಂಗಳ ಅವಧಿಯಲ್ಲಿ ಈ ಸಾಲನ್ನ ಪದೇ ಪದೇ ಹೇಳುತ್ತಲೇ ಇರುತ್ತಾರೆ, ಅದನ್ನೆಲ್ಲಾ ನಾವು ಕೇಳಿಕೊಂಡಿದ್ದೇವೆ, ಪತ್ರಿಕೆಯಲ್ಲಿ ಮೇಲಿಂದ ಮೇಲೆ ಓದೇ ಇರುತ್ತೇವೆ ಅದು ಸರ್ಕಾರಿ ಶಾಲೆ ಮುಂದೆ ಪೋಷಕರು ಕ್ಯೂ ನಿಲ್ಲಬೇಕು, ಅದೇ ನನ್ನ ಆಸೆ..!
ಈ ಹೇಳಿಕೆಯನ್ನ ಮೊದಲು ಒಂದು ನಿದರ್ಶನದ ಮೂಲಕ ನೋಡೋಣ. ಹದಿನೈದು ದಿನಗಳ ಹಿಂದೆ ರಂಗಕರ್ಮಿ ಪ್ರತಿಭಾ ಎಂಬುವರು ಶಿವಮೊಗ್ಗ ನಗರದೊಳಗಿನ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಫೋಟೋ ಹಾಕಿ ಯಾರಾದರೂ ವರದಿ ಮಾಡಿ ಎಂದು ಕೇಳಿಕೊಂಡಿದ್ದರು, ರಾಜ್ಯದೆಲ್ಲೆಡೆ ಸರ್ಕಾರಿ ಶಾಲೆಗಳ ಸ್ಥಿತಿ ಗೊತ್ತಿರೋದ್ರಿಂದ ಯಾರೂ ಆ ಕಡೆ ಸುಳಿದಂತೆ ಕಾಣಲಿಲ್ಲ. ಏನಾದರೂ ಆಗಲಿ ಅಂತ ಎರಡು ದಿನ ಬಿಟ್ಟು ಈ ಶಾಲೆ ಎಲ್ಲಿದೆ ಎಂದು ಹುಡುಕಿಕೊಂಡು ಹೋದಾಗ ಅದು ನಗರದ ಬಸ್ ನಿಲ್ದಾಣದ ಹಿಂದೆ ಎಂದು ಗೊತ್ತಾಯ್ತು. ಶಾಲೆ ಹೆಸರು ಸ್ಕ್ಯಾವೆಂಜರ್ ಶಾಲೆ.
ಹೆಸರೇ ಸೂಚಿಸುವಂತೆ ಪೌರ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲೆಂದು ಕಟ್ಟಿಸಿದ್ದ ಶಾಲೆ. ಸುಮಾರು ಮೂವತ್ತು ಮಕ್ಕಳು ನಗರದ ಹೊಲಸು ತೇಲಿ ಬರುತ್ತಿದ್ದ ಕಾಲುವೆಯ ಮೇಲೆ ಕುಳಿತು ಪಾಠ ಕೇಳುವಂತಿದೆ ಆ ದೃಶ್ಯ. ಮಲ ಮೂತ್ರಗಳು ಹರಿದು ಬರುತ್ತಿತ್ತು. ಮೂಗು ಹಿಡಿದುಕೊಂಡು ಓಡಾಡಬೇಕಾಗಿತ್ತು. ಅರ್ಧ ಗೋಡೆ ಕೂಡ ಕುಸಿದಿತ್ತು. ಇಡೀ ಶಿವಮೊಗ್ಗ ಸ್ಮಾರ್ಟ್ ಸಿಟಿ ಹೆಸರಲ್ಲಿ ಬದಲಾಗುತ್ತಿರುವ ಕಾಲದಲ್ಲಿ ನಗರದ ಹೃದಯ ಭಾಗದಲ್ಲೇ ಇಂತಹದೊಂದು ಶಾಲೆ ಇರುವುದು ನಿಜಕ್ಕೂ ಬೇಸರ ಅನಿಸುತ್ತಿತ್ತು. ಶಿವಮೊಗ್ಗದಲ್ಲಿ ಏನಿಲ್ಲ ಅಂದರೂ ಇಪ್ಪತ್ತರಿಂದ ಇಪ್ಪತ್ತೈದು ಖಾಸಗಿ ಶಾಲೆಗಳಿವೆ. ಪೈಪೋಟಿ ದರದಲ್ಲಿ ಮಕ್ಕಳನ್ನ ಕೊಳ್ಳುತ್ತಿವೆ, ಪ್ರತಿಭಾವಂತ ಶಿಕ್ಷಕರೂ ಬಹಳ ಮುಖ್ಯವಾಗಿ ಇಂಗ್ಲೀಷ್ ಕಡ್ಡಾಯವಾಗಿ ಬರುವ ಬೋಧಕ ವೃಂದವೇ ಇರುತ್ತೆ, ಮನೆ ಬಾಗಿಲಿಗೆ ವಾಹನ ವ್ಯವಸ್ಥೆ, ಪೋಷಕರಿಗೆ ಮಕ್ಕಳ ವ್ಯಾಸಂಗದ ಬಗ್ಗೆ ವರದಿ ಎಲ್ಲವೂ ಇದೆ, ಹೀಗಿದ್ದ ಮೇಲೆ ಸಾಲ ಮಾಡಿಯಾದರೂ ಖಾಸಗಿ ಶಾಲೆಗೆ ಸೇರಿಸದೇ ಇರುತ್ತಾರೆಯೇ..?
ಸುರೇಶ್ ಕುಮಾರ್ ಸಚಿವರಾದ ಮೇಲೆ ಮೂರ್ನಾಲ್ಕು ಬಾರಿ ಶಿವಮೊಗ್ಗಕ್ಕೆ ಬಂದರೂ ಜಿಲ್ಲಾ ಕೇಂದ್ರದಲ್ಲೇನೂ ಸಭೆ ನಡೆಸಿಲ್ಲ ಹಾಗಾದರೆ ಮಲೆನಾಡಿನ ಶಾಲೆಗಳ ಪರಿಸ್ಥಿತಿ ಹೇಗೆ ಗೊತ್ತಾಗುತ್ತೆ..? ಶಿವಮೊಗ್ಗ ಸಮೀಪ ಚಿಲುಮೆಜಡ್ಡು ಎಂಬಲ್ಲಿ ಗಟ್ಟಿಮುಟ್ಟಾದ ಪ್ರೈಮರಿ ಶಾಲೆಯೊಂದು ಪೊದೆಗಳ ನಡುವೆ ಹುದುಗಿ ಹೋಗಿತ್ತು, ಅದರ ಪೇಂಟ್ ಕೂಡ ಮಾಸಿರಲಿಲ್ಲ, ಶೆಟ್ಟಿಹಳ್ಳಿ ಅಭಯಾರಣ್ಯದ ಶಾಲೆಯಲ್ಲಿ ಸಾಕಷ್ಟು ಮಕ್ಕಳೂ ಇದ್ದವು. ಯಾವಾಗ ರಸ್ತೆ ಡಾಂಬಾರು ಕಂಡಿತೋ, ಖಾಸಗಿ ಶಾಲೆಗಳ ಬಸ್ ಊರಿನ ಮುಂದೆ ಹಾರ್ನ್ ಮಾಡಲು ಆರಂಭಿಸಿತು, ಅಲ್ಲಿನ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಓದಿಸುವ ಹಂಬಲ ಪೋಷಕರಿಗೆ ಇರುವುದಿಲ್ಲವೇ..? ಇಂಗ್ಲೀಷ್ ಶಿಕ್ಷಣ ಕಲಿಸಬೇಕೆಂಬ ಆಸೆ ಇರುವುದಿಲ್ಲವೇ..? ಹಾಗಾದರೆ ಶಿಕ್ಷಣ ಸಚಿವರು ಈ ಪೋಷಕರನ್ನೆಲ್ಲಾ ಖಾಸಗಿ ಶಾಲೆಗಳ ಲಾಭಿಯಿಂದ ಹೇಗೆ ತಡೆಯುತ್ತಾರೆ..?
ಸಚಿವರ ಮಹದಾಸೆ ಪೋಷಕರನ್ನ ಸಾಲುಗಟ್ಟುವಂತೆ ಮಾಡುವುದಿರಬಹುದು ಆದರೆ ರಾಜಕಾರಣದಲ್ಲಿ ಒತ್ತಡಕ್ಕೆ ಒಗ್ಗಿಕೊಳ್ಳಲೇ ಬೇಕಲ್ಲ..! ತಮ್ಮದೇ ಪಕ್ಷದಲ್ಲಿ ಕಾರ್ಯಕರ್ತರಿಂದ, ಮಂತ್ರಿಗಳವರೆಗೆ ಸಾವಿರಾರು ಶಾಲೆಗಳ ಮಾಲೀಕತ್ವ ಹೊಂದಿದ್ದಾರೆ, ಕನ್ನಡ ಶಾಲೆಗಳನ್ನ ಹಾಳುಗೆಡವಿದ್ದಾರೆ, ಇಂಥವರನ್ನೆಲ್ಲಾ ನಷ್ಟಕ್ಕೆ ತಳ್ಳುವ ಹಾಗೆ ಸರ್ಕಾರಿ ಶಾಲೆಗಳನ್ನ ಕಟ್ಟಿ ಬೆಳೆಸುವ ಸಾಹಸ ಸಚಿವರು ತೆಗೆದುಕೊಳ್ಳುತ್ತಾರೆಂದು ಭರವಸೆ ಇಟ್ಟುಕೊಳ್ಳೋಣ, ಆದರೆ ಬಹಳ ಮುಖ್ಯವಾಗಿ ಉತ್ಕೃಷ್ಟ ಶಿಕ್ಷಕರ ಕೊರತೆ ಇದೆಯಲ್ಲಾ ಅದನ್ನ ಹೇಗೆ ನಿಭಾಯಿಸುತ್ತೀರಾ..?
ದೆಹಲಿ ಪಬ್ಲಿಕ್ ಶಾಲೆ ಮಾದರಿಯಲ್ಲಿ ರಾಜ್ಯದಲ್ಲಿನ ಶಾಲೆಗಳನ್ನ ಸಿದ್ಧಪಡಿಸುವ ಯೋಜನೆಗಳೇನಾದರೂ ರೂಪಿಸಿಕೊಂಡಿರಬಹುದಾ..? ದೆಹಲಿಯಲ್ಲಿ ಮುಖ್ಯಮಂತ್ರಿಗಳೇ ಮಕ್ಕಳ ಭವಿಷ್ಯ ನಿರ್ಮಾಣದ ಕನಸು ಹೊತ್ತಿದ್ದರು, ಆ ಕಾರಣದಿಂದಲೇ ಮಧ್ಯಮ ಹಾಗೂ ಕೆಳ ವರ್ಗದ ಜನರು ಅವರನ್ನ ಕೈ ಬಿಡದೇ ಮುಂದುವರಿಸಿಕೊಂಡು ಬಂದಿದ್ದಾರೆ, ಈ ಮಾದರಿಯಲ್ಲಿ ಶಾಲೆ ನಿರ್ಮಾಣ ಮಾಡಬೇಕೆಂದರೆ ಪ್ರತೀ ಹೋಬಳಿಯಲ್ಲಿ ಕನಿಷ್ಟ ನೂರು ಶಿಕ್ಷಕರನ್ನ ಅಮಾನತು ಮಾಡಬೇಕು ಅಥವಾ ಶಿಕ್ಷೆಯ ಭಾಗವಾಗಿ ವರ್ಗಾವಣೆ ಮಾಡಬೇಕಾಗುತ್ತೆ, ಇದೆಲ್ಲಾ ಸಚಿವರಿಂದ ಸಾಧ್ಯನಾ..? ನಾನೇ ಸಾಕಷ್ಟು ಶಾಲೆಗಳ ಅವಾಂತರ ವರದಿ ಮಾಡಿದ್ದೇನೆ, ಪೋಷಕರನ್ನ ಮಾತನಾಡಿಸಿದ್ದೇನೆ ಪ್ರೈಮರಿ ಹಾಗೂ ಪೌಢ ಶಾಲೆಯಲ್ಲಿ ಅರ್ಧದಷ್ಟು ಶಿಕ್ಷಕರಿಗೆ ಬೇಸಿಕ್ ಇಂಗ್ಲೀಷ್ ಬರುವುದಿಲ್ಲ, ಹಾಗಾದರೆ ಶಿಕ್ಷಣ ಸಚಿವರ ಕ್ರಾಂತಿ ಹೇಗೆ..? ಪೋಷಕರು ಹೇಗೆ ಸಾಲುಗಟ್ಟುತ್ತಾರೆ..?
ಶಿವಮೊಗ್ಗದ ಖ್ಯಾತ ವಕೀಲ ಶ್ರೀಪಾಲ್ ಈ ಬಗ್ಗೆ ಮಾತನಾಡುತ್ತಾ.., ಶಾಲಾ ಶಿಕ್ಷಕರು ಬಹಳಷ್ಟು ಮಂದಿ ಬೋಧನೆಯನ್ನ ಪಾರ್ಟ್ ಟೈಂ ಮಾಡಿಕೊಂಡು ಫುಲ್ ಟೈಂ ರಾಜಕಾರಣ ಹಾಗೂ ಬಡ್ಡಿ ವ್ಯವಹಾರ ಮಾಡುತ್ತಾರೆ, ವಾರಕ್ಕೆ ಹತ್ತಾರು ಮಂದಿ ಕೋರ್ಟ್‌ಗೆ ಅಲೆಯುವುದನ್ನೂ ಕಾಣಬಹುದು ಎನ್ನುತ್ತಾರೆ, ಇದೆಲ್ಲಾ ಸುಳ್ಳಾ..? ವರ್ಗಾವಣೆ ದಂಧೆಯೊಂದನ್ನ ಸರಿಪಡಿಸಿ ಹೇಳಿದ ಶಾಲೆಯಲ್ಲಿ ಪಾಠ ಮಾಡುವಂತಾಗಲಿ ಆಗಲಾದರೂ ಕ್ರಾಂತಿಯ ಕನಸು ಕಾಣಬಹುದು. ಸಚಿವ ಸುರೇಶ್ ಕುಮಾರ್ ಇತ್ತೀಚೆಗೆ ಟಿವಿ ವರದಿಗಳ ಮೇಲೆ ಕ್ರಮ ತೆಗೆದುಕೊಂಡಿರುವುದು ಬಿಟ್ಟರೆ, ಕಣ್ಣಿಗೆ ಕಾಣುವಂತಹ ಕೆಲಸ ಜಿಲ್ಲಾಮಟ್ಟದವರೆಗಂತೂ ರಾಚಲಿಲ್ಲ. ಆದರೂ ಶಿವಮೊಗ್ಗಕ್ಕೆ ಬಂದಾಗಲೆಲ್ಲಾ ಸರ್ಕಾರಿ ಶಾಲೆಗಳ ಮುಂದೆ ಪೋಷಕರನ್ನ ಸಾಲುಗಟ್ಟಿಸುತ್ತೇನೆಂದರು, ಸರ್ಕಾರಿ ಶಾಲೆಗಳ ಶತಮಾನೋತ್ಸವದಲ್ಲಿ ಭಾಷಣ ಮಾಡಿ ಹೊರಟರು. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳು ಶಾಲು ಹೊದ್ದು ಮಲಗಿದ್ದರೂ ಮಹೊನ್ನತ ಗುರಿ ಸಾಧನೆಗೆ ತುಡಿಯುತ್ತಿರುವಂತೆ ಕಾಣುತ್ತದೆ.