ದೇಶದ ಷೇರು ಬಂಡವಾಳ ಮಾರುಕಟ್ಟೆಯಲ್ಲಾದ ಇತ್ತೀಚಿನ ಒಂದು ಬೆಳವಣಿಗೆ ಎಂದರೆ ಖಾಸಗಿ ವಲಯದ ಬ್ಯಾಂಕೇತರ ಹಣಕಾಸು ಸಂಸ್ಥೆಯಾದ ಬಜಾಜ್ ಫೈನಾನ್ಸ್ ಭಾರತದ ಅಗ್ರ ಹತ್ತು ಕಂಪನಿಗಳ ಪಟ್ಟಿಗೆ ಸೇರ್ಪಡೆಯಾಗಿರುವುದು. ಅದು ಸಾರ್ವಜನಿಕ ವಲಯದ ಮತ್ತು ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಹನ್ನೊಂದನೇ ಸ್ಥಾನಕ್ಕೆ ತಳ್ಳಿ ಈ ಸ್ಥಾನಕ್ಕೇರಿದೆ. ದೇಶದ ಅಗ್ರ ವಿತ್ತ ಪತ್ರಿಕೆಗಳಲ್ಲಿ ಇದೂ ಒಂದು ಪ್ರಮುಖ ಸುದ್ದಿಯಾಗಿದೆ. ಆದರೆ, ಪ್ರಮುಖ ವಿತ್ತ ಪತ್ರಿಕೆಗಳು ಗಮನಿಸದೇ ಹೋದ ಅತಿ ದೊಡ್ಡ ಅಂಶ ಎಂದರೆ, ದೇಶದ ಅಗ್ರ ಹತ್ತು ಕಂಪನಿಗಳ ಪೈಕಿ ಕೇಂದ್ರ ಸರ್ಕಾರದ ಯಾವುದೇ ಒಂದು ಉದ್ಯಮವೂ ಇಲ್ಲ ಎಂಬುದು. ಅಲ್ಲಿಗೆ ಪ್ರಧಾನಿ ಮೋದಿ ಅವರ ಅಜೆಂಡಾ ಯಶಸ್ವಿಯಾದಂತಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ದೇಶದ ಅಗ್ರ ಹತ್ತು ಕಂಪನಿಗಳ ಪೈಕಿ ಮೂರು ಕಂಪನಿಗಳು ಕೇಂದ್ರ ಸರ್ಕಾರದ ಕಂಪನಿಗಳಾಗಿದ್ದವು. ಕಂಪನಿಗಳನ್ನು ಅವುಗಳ ಮಾರುಕಟ್ಟೆ ಬಂಡವಾಳದ ಮೌಲ್ಯದ ಆಧಾರದ ಶ್ರೇಣೀಕರಿಸಲಾಗುತ್ತದೆ. 2014ರಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದ್ದ ಹತ್ತು ಕಂಪನಿಗಳ ಪೈಕಿ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಎರಡನೇ ಸ್ಥಾನದಲ್ಲಿತ್ತು. ಏಷ್ಯಾದಲ್ಲೇ ಅತಿಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಸಾರ್ವಜನಿಕ ವಲಯದ ಕಂಪನಿ ಎಂದೇ ಹೆಗ್ಗಳಿಕೆ ಪಡೆದಿರುವ ಕೋಲ್ ಇಂಡಿಯಾ (CIL) ಐದನೇ ಸ್ಥಾನದಲ್ಲಿತ್ತು ಮತ್ತು ಈಗ ಅಗ್ರ ಹತ್ತು ಕಂಪನಿಗಳ ಪಟ್ಟಿಯಿಂದ ಹೊರದೂಡಲ್ಪಟ್ಟಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆರನೇ ಸ್ಥಾನದಲ್ಲಿತ್ತು.
ಕಾರ್ಪೊರೆಟ್ ಕುಳಗಳ ಅತ್ಯಂತ ಆಪ್ತರಾಗಿರುವ ಪ್ರಧಾನಿ ನರೇಂದ್ರ ಮೋದಿ ಕಳೆದ ಆರು ವರ್ಷಗಳಲ್ಲಿ ಕಾರ್ಪೊರೆಟ್ ವಲಯದ ಹಿತಾಸಕ್ತಿಯನ್ನು ಅತ್ಯಂತ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ದೇಶದ ಆರ್ಥಿಕತೆ ದಿಕ್ಕೆಟ್ಟ ಸಮಯದಲ್ಲೂ ಕಾರ್ಪೊರೆಟ್ ವಲಯಕ್ಕೆ ವಾರ್ಷಿಕ 1.40 ಲಕ್ಷ ಕೋಟಿ ರುಪಾಯಿ ತೆರಿಗೆ ವಿನಾಯಿತಿ ಘೋಷಿಸಿರುವ ಮೋದಿ ಸರ್ಕಾರ ನಿಜವಾದ ಆರ್ಥದಲ್ಲಿ ಈಗ ದಿವಾಳಿಯಾಗುವ ಹಂತಕ್ಕೆ ಬಂದಿದೆ. ಆ ಕಾರಣಕ್ಕಾಗಿಯೇ ಯಾವುದೇ ಹೊಸ ಹುದ್ದೆ ಸೃಷ್ಟಿಗೆ ತಡೆಯೊಡ್ಡಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರಿ ನೌಕರರಿಗೆ ಘೋಷಿಸಿರುವ ಬೊನಸ್ ಎಂಬುದು ಬಿಹಾರ ವಿಧಾನಸಭಾ ಚುನಾವಣೆಗಾಗಿ ಮಾಡಿರುವ ಗಿಮಿಕ್!
Also Read: ಸರ್ಕಾರ ಕೃಷಿ ವಲಯ ಬಲಪಡಿಸಿದರೆ ಮಾತ್ರ ದೇಶ ಸದೃಢಗೊಳ್ಳಬಹುದು
ಪ್ರಧಾನಿ ಮೋದಿಗೆ ಕಾರ್ಪೊರೆಟ್ ವಲಯದ ಮೇಲೆ ಇರುವ ವಿಶೇಷ ಆಸಕ್ತಿಯಿಂದಾಗಿಯೇ ಕೇಂದ್ರ ಸರ್ಕಾರದ ಉದ್ಯಮಗಳ ಮಾರುಕಟ್ಟೆ ಬಂಡವಾಳ ಕ್ಷೀಣಿಸುತ್ತಾ ಬರುತ್ತಿದೆ. ಮೋದಿ ಆಪ್ತ ಕಾರ್ಪೊರೆಟ್ ಕುಳಗಳು ಬೇಕೆಂದೇ ಸಾರ್ವಜನಿಕ ವಲಯದ ಉದ್ಯಮಗಳ ಮಾರುಕಟ್ಟೆ ಮೌಲ್ಯವನ್ನು ವ್ಯವಸ್ಥಿತವಾಗಿ ತಗ್ಗಿಸುತ್ತಿದ್ದಾರೆ. ಮೋದಿ ಸರ್ಕಾರವೂ ಪರೋಕ್ಷವಾಗಿ ಇದಕ್ಕೆ ಉತ್ತೇಜನ ನೀಡುತ್ತಿದೆ. ಈ ನಡೆಯ ಹಿಂದಿನ ಕುತಂತ್ರ ಏನೆಂದರೆ- ಮೋದಿ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದೆಯಲ್ಲಾ, ಮಾರುಕಟ್ಟೆ ಮೌಲ್ಯ ಕುಗ್ಗಿಸಿದರೆ, ಖಾಸಗಿಯವರಿಗೆ ಅತಿ ಕಡಿಮೆ ಬೆಲೆ ಕಂಪನಿಗಳು ದೊರೆಯುತ್ತವೆ. ಉದಾಹರಣೆಗೆ ONGC ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು 2014ರಲ್ಲಿ 2,94,693 ಕೋಟಿ ರುಪಾಯಿಗಳಷ್ಟಿತ್ತು. ಮೋದಿ ಸರ್ಕಾರದ ಸರ್ಕಾರಿ ಕಂಪನಿಗಳನ್ನು ಅಪಮೌಲ್ಯಗೊಳಿಸುವ ಅಜೆಂಡಾದಿಂದಾಗಿ ಪ್ರಸ್ತುತ ONGC ಮಾರುಕಟ್ಟೆ ಬಂಡವಾಳ ಮೌಲ್ಯವು 87,119 ಕೋಟಿ ರುಪಾಯಿಗೆ ಇಳಿದಿದೆ. ಅಂದರೆ, ಶೇ.75ರಷ್ಟು ONGC ಮೌಲ್ಯವು ಮೋದಿ ಸರ್ಕಾರದ ಅವಧಿಯಲ್ಲಿ ಕುಸಿದಿದೆ. ಇಲ್ಲೊಂದು ವಿಶೇಷ ಗಮನಿಸಿ, ಇದೇ ಅವಧಿಯಲ್ಲಿ ಮೋದಿ ಆಪ್ತ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು ನಾಲ್ಕೂವರೆ ಪಟ್ಟು ಅಂದರೆ, ಶೇ.450ರಷ್ಟು ಹೆಚ್ಚಳವಾಗಿದೆ. 2014ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯವು 2,86,061 ಕೋಟಿ ರುಪಾಯಿಗಳಷ್ಟಿತ್ತು. ಮೋದಿ ಅಧಿಕಾರಕ್ಕೆ ಬಂದ ಆರೇ ವರ್ಷಗಳಲ್ಲಿ ಇದರ ಮಾರುಕಟ್ಟೆ ಬಂಡವಾಳ ಮೌಲ್ಯವು 14,02,31.77 ಕೋಟಿ ರುಪಾಯಿಗೆ ಜಿಗಿದಿದೆ.
ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಆರ್ಥಿಕ ನೀತಿಯ ಪರಿಣಾಮಗಳು. ಕಾರ್ಪೊರೆಟ್ ವಲಯಕ್ಕೆ ಪೂರಕವಾದ ನಿಯಮಗಳನ್ನು ರೂಪಿಸುವುದು, ಕಾರ್ಪೊರೆಟ್ ವಲಯಗಳಿಗೆ ನಿಯಮಗಳನ್ನು ಸಡಿಲಿಸುವುದು, ಇಲ್ಲವೇ ನಿಯಮಗಳನ್ನೇ ರದ್ದು ಮಾಡುವು, ತೆರಿಗೆ ರಿಯಾಯ್ತಿ ನೀಡುವುದು ಮೋದಿ ಸರ್ಕಾರದ ಆರ್ಥಿಕ ನೀತಿಗಳ ಉದ್ದೇಶವಾಗಿದೆ. ಇದೇ ವೇಳೆ ಮೋದಿ ಸರ್ಕಾರ ಮಾಡಿದ ಅತಿದೊಡ್ಡ ವಂಚನೆ ಎಂದರೆ, ಸಾರ್ವಜನಿಕ ವಲಯದ ಉದ್ಯಮಗಳನ್ನು ನಿಧಾನವಾಗಿ ಸಾವನ್ನಪ್ಪುವಂತೆ ಅಥವಾ ಕೋಮಾ ಸ್ಥಿತಿಗೆ ತಲುಪುವಂತೆ ಮಾಡುತ್ತಿರುವುದು. ಅದಕ್ಕೆ ಜ್ವಲಂತ ನಿದರ್ಶನವಾಗಿ ದೇಶದ ಸಂಪರ್ಕಸೇತುವಾಗಿರುವ ಭಾರತ ಸಂಚಾರ ನಿಗಮ(ಬಿಎಸ್ಎನ್ಎಲ್) ಮತ್ತು ಮಹಾನಗರ ಸಂಚಾರ ನಿಗಮ (ಎಂಟಿಎನ್ಎಲ್) ನಮ್ಮ ಮುಂದಿವೆ. ಈ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 1.20 ಲಕ್ಷ ಜನರನ್ನು ಮನೆಗೆ ಕಳುಹಿಸಲಾಗಿದೆ.
Also Read: ಬಿಎಸ್‌ಎನ್‌ಎಲ್, ಒಎನ್‌ಜಿಸಿ, ಏರ್ ಇಂಡಿಯಾವನ್ನು ಪಾತಾಳಕ್ಕೆ ದೂಡಿದ ಸರ್ಕಾರ
ಇದಿನ್ನೂ ಆರಂಭ. ಮುಂದೆ ಮತ್ತೆಷ್ಟು ಸಾರ್ವಜನಿಕ ವಲಯದ ಕಂಪನಿಗಳು ಬಿಎಸ್ಎನ್ಎಲ್, ಎಂಟಿಎನ್ಎಲ್ ಹಾದಿ ಹಿಡಿಯುತ್ತವೋ? ಸಾಲ ಪಾವತಿಸಲಾಗದೇ, ತಾನು ಬಳಸುವ ಕಾರುಗಳನ್ನೇ ಮಾರಾಟ ಮಾಡಿದ್ದೇನೆಂದು ನ್ಯಾಯಾಲಯದಲ್ಲಿ ಘೋಷಿಸಿಕೊಂಡಿರುವ ಅನಿಲ್ ಅಂಬಾನಿಯ ಕಂಪನಿಗೆ ವಿಮಾನ ನಿರ್ಮಾಣದ ಗುತ್ತಿಗೆ ನೀಡಿರುವ ನರೇಂದ್ರ ಮೋದಿ ಸರ್ಕಾರವು, ದೇಶದ ಹೆಮ್ಮೆ ಮತ್ತು ಜಾಗತಿಕ ಮಟ್ಟದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅನ್ನು ಮುಗಿಸುವ ಪ್ರಯತ್ನ ಮಾಡಿದೆ. ಮೋದಿ ಸರ್ಕಾರದ ತಂತ್ರ ಏನೆಂದರೆ ಕಂಪನಿಗಳನ್ನು ನಿರ್ಲಕ್ಷಿಸುವುದು, ಸರ್ಕಾರದ ಕಾಮಗಾರಿಗಳನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿ, ಸಾರ್ವಜನಿಕ ವಲಯದ ಕಂಪನಿಗಳು ನಷ್ಟಕ್ಕೀಡಾಗುವಂತೆ ಮಾಡುವುದು, ನಂತರ ನಷ್ಟಕ್ಕೀಡಾಗಿವೆ ಎಂಬ ನೆಪ ಒಡ್ಡಿ ತಮ್ಮದೇ ಆಪ್ತ ಕಾರ್ಪೊರೆಟ್ ಕುಳಗಳಿಗೆ ಅತ್ಯಂತ ಕಡಮೆ ಬೆಲೆಗೆ ಮಾರಾಟ ಮಾಡಿ ಬಿಡುವುದು, ಕೊನೆಗೆ, ಎಲೆಕ್ಟೊರಲ್ ಬಾಂಡ್ ಮೂಲಕ ಸಾವಿರಾರು ಕೋಟಿ ರುಪಾಯಿಗಳನ್ನು ಪಡೆಯುವುದು ಮತ್ತು ಚುನಾವಣೆಯಲ್ಲಿ ಯಥೇಚ್ಛ ದುಡ್ಡು ವೆಚ್ಚ ಮಾಡುವುದು ಮತ್ತೆ ಅಧಿಕಾರ ಗದ್ದುಗೆ ಹಿಡಿಯುವುದಾಗಿದೆ.
Also Read: ಮೋದಿ ಮಹಿಮೆ; ದೇಶದ ಕರೋನಾ ಸೋಂಕಿತರು 15 ಲಕ್ಷ, ಅಂಬಾನಿ ಕಂಪನಿ ಮಾರುಕಟ್ಟೆ ಮೌಲ್ಯ 15 ಲಕ್ಷ ಕೋಟಿ
2014ರಲ್ಲಿ ಐದನೇ ಸ್ಥಾನದಲ್ಲಿದ್ದ ಕೊಲ್ ಇಂಡಿಯಾ ಮಾರುಕಟ್ಟೆ ಬಂಡವಾಳವು ಆಗ 2,31,221 ಕೋಟಿ ರುಪಾಯಿಗಳಾಗಿತ್ತು. ಮೋದಿ ಆಡಳಿತ ಆರು ವರ್ಷಗಳ ಅವಧಿಯಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿ ಮಾರುಕಟ್ಟೆ ಬಂಡವಾಳ ಮೌಲ್ಯವು ಕೇವಲ 70,717 ಕೋಟಿಗೆ ಕುಸಿದಿದೆ. ಅಂದರೆ, ಸುಮಾರು ಶೇ.70ರಷ್ಟು ಕುಸಿತ ದಾಖಲಿಸಿದೆ. ಈಗಲೂ ದೇಶದ ಹೆಮ್ಮೆಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆ ಬಂಡವಾಳ ಮೌಲ್ಯವು 2014ರಲ್ಲಿ 2,28,338 ಕೋಟಿ ರುಪಾಯಿ ಇದ್ದದ್ದು, 1,82,106 ಕೋಟಿ ರುಪಾಯಿಗೆ ಕುಸಿದಿದೆ. ವಾಸ್ತವವಾಗಿ ಕಳೆದ ಆರು ವರ್ಷಗಳ ಪೈಕಿ ಮೊದಲ ನಾಲ್ಕು ವರ್ಷಗಳ ಅವಧಿ ಅಂದರೆ, ಜಾಗತಿಕವಾಗಿ ಹಣಕಾಸು ಮತ್ತು ಬ್ಯಾಂಕಿಂಗ್ ಕಂಪನಿಗಳ ಅತಿ ಹೆಚ್ಚು ಬೆಳವಣಿಗೆ ದಾಖಲಿಸಿವೆ. ಈಗ SBI ಅನ್ನು ಹಿಂದಿಕ್ಕಿರುವ ಬಜಾಜ್ ಫೈನಾನ್ಸ್ ಮಾರುಕಟ್ಟೆ ಬಂಡವಾಳವು ಆರು ವರ್ಷಗಳ ಹಿಂದೆ ಕೇವಲ 10,000 ಕೋಟಿ ರುಪಾಯಿ ಇತ್ತು. ಈ ಆರು ವರ್ಷಗಳಲ್ಲಿ ಅದು ಇಪ್ಪತ್ತು ಪಟ್ಟು ಹೆಚ್ಚಳ ಸಾಧಿಸಿದೆ. ಅದರ ಷೇರು ದರವು 150 ರುಪಾಯಿ ಇದ್ದದ್ದು ಈಗ 3300 ರುಪಾಯಿ ಆಜುಬಾಜಿನಲ್ಲಿದೆ. ಆ ಲೆಕ್ಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆ ಮೌಲ್ಯವು ಕನಿಷ್ಠ 10 ಲಕ್ಷ ಕೋಟಿ ರುಪಾಯಿ ದಾಟಬೇಕಿತ್ತು. ಆದರೆ, ಮೋದಿ ಸರ್ಕಾರವು ಕಾರ್ಪೊರೆಟ್ ಕುಳಗಳ ಸಾಲಗಳನ್ನು ಮನ್ನಾ ಮಾಡುತ್ತಾ, ಅದರ ನಷ್ಟದ ಹೊರೆಯನ್ನು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಮೇಲೆ ಹೇರುತ್ತಾ, ಅದನ್ನು ಅಪಮೌಲ್ಯಗೊಳಿಸುತ್ತಿದೆ.