90ರ ದಶಕದಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಸರೋಜಿನಿ ಮಹಿಷಿ ವರದಿ ಅಥವಾ ‘ಮಣ್ಣಿನ ಮಗ’ ಎಂಬ ನೀತಿ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಜತೆಗೆ ಚರ್ಚೆಯ ಕೇಂದ್ರ ವಿಷಯವಾಗಿ ಮತ್ತೆ ಸ್ಥಾನ ಪಡೆಯುತ್ತಿದೆ. ಇದಕ್ಕೆ ಕಾರಣ ವಿವಿಧ ಕನ್ನಡ ಪರ ಸಂಘಟನೆಗಳು ಫೆಬ್ರವರಿ.13ರಂದು ಘೋಷಿಸಿರುವ ರಾಜ್ಯವ್ಯಾಪಿ ಬಂದ್ ಹಾಗೂ ದಿನೇ ದಿನೇ ಹೆಚ್ಚುತ್ತಿರುವ ಯುವಕರ ನಿರುದ್ಯೋಗ ಸಮಸ್ಯೆ.
ನಿರುದ್ಯೋಗ ಎಂಬುದು ಭಾರತದ ಮಾತ್ರವಲ್ಲ ಕರ್ನಾಟಕದ ಪಾಲಿಗೂ ಸುಮಾರು ಆರು ದಶಕಗಳ ಪಿಡುಗು. ಹೀಗಾಗಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡ ಅನ್ನದ ಪ್ರಶ್ನೆಯಾಗಬೇಕು ಎಂಬ ಕೂಗು 1983ರಿಂದಲೂ ಇದೆ. ದಿವಂಗತ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ತುಸು ಜೋರಾಗಿಯೇ ಇತ್ತು. ಹೋರಾಟಗಳೂ ಸಹ ಉಗ್ರರೂಪ ತಳೆದಿತ್ತು.
ಈ ವೇಳೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ರಾಜ್ಯದ ಮೊದಲ ಮಹಿಳಾ ಸಂಸದೆ, ಸಚಿವೆ ಹಾಗೂ ಮಹಿಳಾ ಹೋರಾಟಗಾರ್ತಿ ಸರೋಜಿನಿ ಮಹಿಷಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದ್ದರು. ಸತತ ಮೂರು ವರ್ಷ ಈ ಕುರಿತು ಪರಿಶೀಲನೆ ನಡೆಸಿದ್ದ ಸಮಿತಿ 1986ರಲ್ಲಿ ಸರ್ಕಾರಕ್ಕೆ 53 ಅಂಶಗಳ ಒಂದು ವರದಿಯನ್ನು ಸಲ್ಲಿಸಿತ್ತು. ಅದೇ “ಸರೋಜಿನಿ ಮಹಿಷಿ” ವರದಿ.
ಅಸಲಿಗೆ 1986ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ 2020ರಲ್ಲಿ ಏಕೆ ಪ್ರತಿಭಟನೆಗಳು ನಡೆಯುತ್ತಿವೆ? ಯಾರು ಈ ಸರೋಜಿನಿ ಮಹಿಷಿ? ಇವರು ನೀಡಿದ್ದ ವರದಿಯಲ್ಲಿ ಏನೇನು ಅಂಶಗಳಿವೆ? ಅದರ ಜಾರಿಗೆ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಯಾರು ಈ ಸರೋಜಿನಿ ಮಹಿಷಿ?
ಧಾರವಾಡದ ಶಿರಹಟ್ಟಿ ತಾಲೂಕಿನಲ್ಲಿ 1923 ಮಾರ್ಚ್ 3 ರಂದು ಬಿಂದುರಾವ್ ಮಹಿಷಿ ಹಾಗೂ ಕಮಲಾಬಾಯಿ ದಂಪತಿಗಳಿಗೆ ಜನಿಸಿದ ಸರೋಜಿನಿ ಮಹಿಷಿ, ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದಲ್ಲೇ ಪೂರ್ಣಗೊಳಿಸಿದರು. ನಂತರ ಸಾಂಗ್ಲಿಯ ಮಿಲಿಂಗಟನ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿ ಬಿಎ ಪದವಿ ಪಡೆದರು. ಮುಂಬೈನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.
ಹೋಮಿಯೋಪತಿ, ನಿಸರ್ಗ ಚಿಕಿತ್ಸೆ ಕಲಿಕೆಗಾಗಿ ಬೆಳಗಾವಿಯ ಆರ್ಎಲ್ಎಸ್ ಕಾಲೇಜಿನಲ್ಲಿ ಎಲ್.ಎಲ್.ಟಿ ಅಧ್ಯಯನ ಮಾಡಿ 1955ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಮೊದಲ ರ್ಯಾಂಕ್ ನಲ್ಲಿ ಕಾನೂನು ಪದವಿ ಪಡೆದರು. ಅಲ್ಲದೆ, ಧಾರವಾಡದ ಜನತಾ ಲಾ ಕಾಲೇಜಿನಲ್ಲಿ ಕಾನೂನು ಪ್ರಾಧ್ಯಾಪಕಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಂತರ ವಕೀಲ ವೃತ್ತಿ ಪ್ರಾರಂಭಿಸಿ ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.ನಾಲ್ಕು ಬಾರಿ ಧಾರವಾಡದ ಸಂಸದೆಯಾಗಿದ್ದ ಇವರು 2 ಅವಧಿಗೆ ರಾಜ್ಯಸಭೆಗೂ ಆಯ್ಕೆಯಾಗಿದ್ದಾರೆ. ಮಹಿಳೆಯರ ಸಬಲೀಕರಣದ ಕುರಿತಾಗಿ ಸಾಕಷ್ಟು ಕೆಲಸ ಮಾಡಿದ ಇವರು ಸದ್ದು ಮಾಡಿದ್ದು, ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ್ದು ಸ್ಥಳೀಯರಿಗೆ ಉದ್ಯೋಗ ಎಂಬ “ಮಣ್ಣಿನ ಮಗ” ನೀತಿಯನ್ನು ಪ್ರತಿಪಾದಿಸುವ ಸರೋಜಿನಿ ಮಹಿಷಿ ವರದಿ ನೀಡಿದ ನಂತರವೇ.
ಅಂತಾದ್ದೇನಿದೆ ಈ ಸರೋಜಿನಿ ಮಹಿಷಿ ವರದಿಯಲ್ಲಿ?
ಮಿಶ್ರ ಆರ್ಥಿಕ ನೀತಿಯಿಂದ ಮಾತ್ರ ಭಾರತವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಸಾಧ್ಯ ಎಂಬ ಪರ್ಯಾಯ ಆರ್ಥಿಕ ವ್ಯವಸ್ಥೆಯ ಜಾರಿಗೆ ತುದಿಗಾಲಲ್ಲಿ ನಿಂತಿದ್ದ 90ರ ದಶಕವದು. ಪಿ. ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದಿತ್ತು. ಆದರೆ, ಮಿಶ್ರ ಆರ್ಥಿಕತೆ ಇಂದು ಮೇಲ್ನೋಟಕ್ಕೆ ಒಂದೇ ರೀತಿ ಕಂಡು ಬಂದರೂ ಮುಕ್ತ ಹಾಗೂ ಮಿಶ್ರ ಆರ್ಥಿಕ ನೀತಿಯ ಮಧ್ಯೆ ಭಿನ್ನತೆ ಇದೆ.
ಸರ್ಕಾರದ ಭಾಗವಹಿಸುವಿಕೆ ಇಲ್ಲದೆ ಇಂದು ಖಾಸಗಿ ಕಂಪನಿ ದೇಶದ ಯಾವುದೇ ಮೂಲೆಯಲ್ಲಿ ತಮ್ಮ ವ್ಯವಹಾರವನ್ನು ಆರಂಭಿಸುವಷ್ಟು ಸ್ವಾತಂತ್ರ್ಯವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಲಾಗಿದೆ. ಒಂದು ಕಂಪನಿ ಯಾವುದೇ ರಾಜ್ಯದಲ್ಲಿ ತನ್ನ ಕಾರ್ಯಚಟುವಟಿಕೆ ಆರಂಭಿಸಿದರೆ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಧಿಕಾರಿಗಳ ಆಜ್ಞೆಯನ್ನು ಪಾಲಿಸಬೇಕು.
ಆದರೆ, ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರವನ್ನೇ ನಿಯಂತ್ರಿಸಬಲ್ಲಷ್ಟು ಶಕ್ತಿ ಪಡೆದಿವೆ. ಇಲ್ಲಿ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಾಗಾಗಿ ರಾಜ್ಯದ ಯುವಜನತೆ ಕೆಲಸವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಉದ್ಯೋಗ ಸೃಷ್ಠಿ ಹೊಸ ಆರ್ಥಿಕ ನೀತಿಯ ಮೊದಲ ಆದ್ಯತೆಯಾದರೂ ಸ್ಥಳೀಯರಿಗೆ ಮಣೆಹಾಕುವ ಯಾವುದೇ ನೀತಿ ಪ್ರಚಲಿತದಲ್ಲಿಲ್ಲ. ಇಂಗ್ಲೀಷ್ ಭಾಷೆ ಕಲಿತರೆ ಮಾತ್ರ ಇಲ್ಲಿನ ಐಟಿ-ಬಿಟಿ ಉದ್ಯಮಗಳಲ್ಲಿ ಕೆಲಸ ಪಡೆಯುವುದು ಸಾಧ್ಯ. ಹಾಗಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಚಿಂತೆಯಿಂದ ಶಾಲಾ ದಿನಗಳಿಂದಲೇ ಇಂಗ್ಲೀಷ್ ಮಾಧ್ಯಮಕ್ಕೆ ಆದ್ಯತೆ ನೀಡುತ್ತಿದ್ದಾರೆ.
ಹಾಗಾಗಿ ಕನ್ನಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸದಲ್ಲಿ ಶೇ.5ರಷ್ಟು ಮೀಸಲು ಸೌಲಭ್ಯ ನೀಡಿದಂತೆ , ರಾಜಧಾನಿಯಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಮೀಸಲಾತಿ ನೀಡಬೇಕು. ಕನ್ನಡ, ಯುವಕರಿಗೆ ಉದ್ಯೋಗಾವಕಾಶ ಲಭಿಸಿದರೆ ಕನ್ನಡದಿಂದ ಅನ್ನ ಲಭಿಸಿದರೆ, ಸಾಮಾನ್ಯವಾಗಿ ಕನ್ನಡದ ಉಳಿವಿನ ಪ್ರಶ್ನೆ ತೆರೆಯ ಮರೆಗೆ ಸರಿಯಲಾರಂಭಿಸುತ್ತದೆ.
ಈ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಕರ್ನಾಟಕದ ಮಟ್ಟಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆ ಇರಬೇಕು. ಸರ್ಕಾರಿ ವಲಯದಲ್ಲಿ ಶೇ.90 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಬೇಕು. ಬಹುರಾಷ್ಟ್ರೀಯ ಮತ್ತು ಖಾಸಗಿ ಉದ್ದಿಮೆಗಳಲ್ಲೂ ಮೊದಲು ಶೇ.5 ರಷ್ಟು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕೆಲಸ ನೀಡಬೇಕು.
ಆನಂತರ ಇದು ಹಂತ ಹಂತವಾಗಿ ಶೇ.100ರಷ್ಟು ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದನ್ನೂ ಸೇರಿದಂತೆ ಡಾ. ಸರೋಜಿನಿ ಮಹಿಷಿ ಆಯೋಗ 1986ರಲ್ಲೇ 58 ಶಿಫಾರಸ್ಸುಗಳನ್ನೊಳಗೊಂಡ ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು.
ಅಂದಿನ ಸರ್ಕಾರ ಈ ವರದಿಯಲ್ಲಿನ 12 ಶಿಫಾರಸ್ಸುಗಳನ್ನು ತನಗೆ ಒಪ್ಪುವ ಅಧಿಕಾರವಲ್ಲವೆಂದು ಕೈಬಿಟ್ಟಿದ್ದು, ಉಳಿದ ಶಿಫಾರಸ್ಸುಗಳ ಅನುಷ್ಠಾನಕ್ಕೆ ತರಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ಬಹುರಾಷ್ಟ್ರೀಯ/ಖಾಸಗಿ ಕಂಪನಿಗಳಲ್ಲಿ ಈ ಶಿಫಾರಸ್ಸನ್ನು ಪಾಲಿಸಬೇಕು, ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಎನ್ನುವ ಪ್ರಮುಖ ಶಿಫಾರಸಿಗೆ ಈವರೆಗೆ ಸರ್ಕಾರ ಒಪ್ಪಿಗೆ ನೀಡಿಲ್ಲ.
ಪರಿಣಾಮ ಸರೋಜಿನಿ ಮಹಿಷಿ ಕನ್ನಡಿಗರಿಗೆ ಕನ್ನಡ ಅನ್ನದ ಪ್ರಶ್ನೆಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಲ್ಲಿಸಿದ ವರದಿ ಮೂರು ದಶಕಗಳಾದರೂ ಇಂದಿಗೂ ಜಾರಿಗೆ ಬರಲಿ ಎಂಬ ಕೂಗು ಕೇಳಿಬರುತ್ತಲೇ ಇದೆಯೇ ಹೊರತು, ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಪರಿಣಾಮ ರಾಜ್ಯದ ಉದ್ಯೋಗಗಳು ಕನ್ನಡಿಗರಿಗೆ ಲಭ್ಯವಾಗದೆ ಅನ್ಯ ರಾಜ್ಯದವರ ಪಾಲಾಗುತ್ತಿದೆ.
ಒಂದೆಡೆ ನೆರೆಯ ತಮಿಳುನಾಡಿನಲ್ಲಿ ದಶಕದ ಹಿಂದೆಯೇ ಸರ್ಕಾರಿ ಕೆಲಸವನ್ನು ಶೇ.90 ರಷ್ಟು ಸ್ಥಳೀಯರಿಗೆ ನೀಡಬೇಕು ಎಂಬ ಕಾಯ್ದೆ ಚಾಲ್ತಿಯಲ್ಲಿದೆ. ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರಿ ಹುದ್ದೆಗಳು ಸ್ಥಳೀಯರಿಗೆ ಮಾತ್ರ ಎಂಬ ಕಾನೂನನ್ನು ಜಾರಿಗೆ ತಂದಿದ್ದರು. ಆದರೆ, ಖಾಸಗಿ ಕಂಪೆನಿಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ಕುರಿತು ಯಾವ ರಾಜ್ಯದಲ್ಲೂ ಸ್ಪಷ್ಟ ಕಾನೂನು ಇಲ್ಲ. ಕೇಂದ್ರ ಸರ್ಕಾರ ಈ ಕುರಿತು ತಲೆ ಕೆಡಿಸಿಕೊಳ್ಳುವ ಗೋಜಿಗೂ ಹೋಗಿಲ್ಲ.
ಆದರೆ, ರಾಜ್ಯ ಮಟ್ಟದಲ್ಲಿ ಕರ್ನಾಟಕದಲ್ಲಿ ಈ ಹೋರಾಟಕ್ಕೆ ಜೀವ ತುಂಬಬೇಕಾದ ಕನ್ನಡ ಪರ ಸಂಘಟನೆಗಳೂ ಸಹ ಇದೀಗ ಹೋರಾಟದ ಕಣದಿಂದ ಹಿಂದೆ ಸರಿದಿರುವುದು ಭವಿಷ್ಯದ ಆತಂಕಕ್ಕೆ ಕಾರಣವಾಗಿದೆ. ಇವನ್ನೆಲ್ಲಾ ಗಮನಿಸಿದರೆ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಒತ್ತಾಯಿಸಿ ಇನ್ನೂ ಹತ್ತಾರು ದಶಕಗಳ ನಂತರ ಹೋರಾಟ ನಡೆದರೂ ಅಚ್ಚರಿ ಇಲ್ಲ ಎಂದೆನಿಸುತ್ತದೆ.