ವಿಧಾನ ಪರಿಷತ್ ನ ನೂತನ ನಾಮನಿರ್ದೇಶಿತ ಸದಸ್ಯತ್ವಕ್ಕೆ ಉತ್ತರ ಕನ್ನಡದ ಯಲ್ಲಾಪುರ ಹಿತ್ಲಳ್ಳಿಯ ಶಾಂತಾರಾಮ ಸಿದ್ದಿ ಅವರು ಆಯ್ಕೆಯಾಗಿರುವ ಬೆನ್ನಲ್ಲೇ ಸಿದ್ದಿ ಜನಾಂಗ ದೇಶದ ಗಮನ ಸೆಳೆಯುತ್ತಿದೆ. ಇದುವರೆಗೆ ಈ ಜನಾಂಗದ ಯಾವೊಬ್ಬನೂ ಜಿಲ್ಲಾ ಪಂಚಾಯತಿಗೂ ಆಯ್ಕೆಯಾಗದ ಹಿನ್ನೆಲೆ ಈ ಜನಾಂಗಕ್ಕಿದೆ. ಪೂರ್ವ ಕಾಲದಲ್ಲಿ ಕಾಡು ಮೇಡುಗಳ ಸಂಸರ್ಗದಲ್ಲಿಯೇ ತಮ್ಮ ಜೀವಮಾನವನ್ನು ಕಟ್ಟಿಕೊಂಡ ಹಿನ್ನೆಲಯ ಸಿದ್ದಿಗಳು ದೈಹಿಕವಾಗಿ ಅತ್ಯಂತ ಬಲಿಷ್ಠರು ಮತ್ತು ಸಮರ್ಥರು. ಮಾನಸಿಕವಾಗಿ ಅಷ್ಟೇ ಮುಗ್ದರೂ ಕೂಡಾ. ಪೋರ್ಚುಗೀಸರ್ ಜೊತೆ ಗುಲಾಮರಾಗಿ ಭಾರತಕ್ಕೆ ಆಗಮಿಸಿ ಉತ್ತರ ಕನ್ನಡ ಧಾರವಾಡ ಬೆಳಗಾವಿ ಸೇರಿ ಹಲವೆಡೆ ಹಂಚಿಹೋಗಿರುವ ಇವರ ಮುಖ್ಯ ವಾಸದ ನೆಲೆ ಉತ್ತರ ಕನ್ನಡದ ಯಲ್ಲಾಪುರ, ಅಂಕೋಲಾ, ಶಿರಸಿ ತಾಲೂಕುಗಳೇ ಆಗಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರೊನಾದ ದುರಿತ ಕಾಲದಲ್ಲಿ ಎಲ್ಲೆಲ್ಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮಾತುಗಳು ಕೇಳಿಬರುತ್ತಿವೆ. ಆದರೆ ಜಿಲ್ಲೆಯ ಬುಡಕಟ್ಟು ಸಿದ್ದಿ ಜನಾಂಗವು ಮಳೆಗಾಲದಲ್ಲಿ ಅನಾರೋಗ್ಯದಿಂದ ರಕ್ಷಣೆ ಪಡೆಯಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸುವ ಆಹಾರ ಕುತೂಹಲಕಾರಿಯಾಗಿದೆ. ಕಾಡಿನಲ್ಲಿ ದೊರಕುವ ಕೆಂಪಿರುವೆಗಳ ಕಷಾಯ ಮತ್ತು ಚಟ್ನಿಯನ್ನು ಸೇವಿಸುವ ಸಂಪ್ರದಾಯ ಸಿದ್ದಿ ಜನಾಂಗದಲ್ಲಿದೆ. ಸೌಳಿ ಅಥವಾ ಚಗಳಿ ಎಂದೂ ಕರೆಯಲ್ಪಡುವ ಇವುಗಳು ಅಪಾರ ಪ್ರಮಾಣದ ಪೋಶಕಾಂಶಗಳನ್ನು ಹೊಂದಿರುತ್ತವೆ ಎಂದು ಕೆಳಾಸೆ ಸಮೀಪದ ರಾಮ ಸಿದ್ದಿ ಹೇಳುತ್ತಾರೆ. ವಿಶಿಷ್ಟ ಹವ್ಯಾಸಗಳು, ಕಾಡು ಅಲೆಯುವುದು, ಜೇನು ತೆಗೆಯುವುದು, ಶಿಕಾರಿ, ಮರಮುಟ್ಟುಗಳ ಕೆಲಸ.. ಹೀಗೆ ಇವರ ಕೌಶಲ ಇಲ್ಲದ ಗ್ರಾಮೀಣ ಕ್ಷೇತ್ರವೇ ಇಲ್ಲ ಎಂಬಷ್ಟರ ಮಟ್ಟಿಗೆ ಸಿದ್ದಿಗಳು ಪ್ರತಿಭಾಶಾಲಿಗಳು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮದ ಒಂದೊಮ್ಮೆ ಇದೇ ಕೆಳಾಸೆಯಲ್ಲಿ ಚಿತ್ರೀಕರಣವಾಗಿತ್ತು. ಹಳ್ಳಿ ಹೈದ ಪ್ಯಾಟೆಗೆ ಬಂದ ಕಾರ್ಯಕ್ರಮದಲ್ಲಿನ ಮಂಜುನಾಥ ಸಿದ್ದಿಯೂ ಸಮೀಪದ ಕಲ್ಲೇಶ್ವರದ ಬಳಿಯವರೇ. ಬಹುಮಾನ ಗಳಿಸಿದ ಅವರು ಆ ದುಡ್ಡಲ್ಲಿ ಜನರೇಟರ್ ಖರೀದಿಸಿದ್ದರು. ಆದರೆ ಇಂದು ಆ ಜನರೇಟರ್ ಗೆ ಹೆಚ್ಚಿನ ಕೆಲಸವಿಲ್ಲ. ಕೃಷಿ ಕೆಲಸದಲ್ಲಿ ನಿಜವಾದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.





ಕರ್ನಾಟಕದ ಸಿದ್ದಿ ಜನಾಂಗದಲ್ಲಿನ ಮತ್ತೊಂದು ವಿಶಿಷ್ಟತೆಯನ್ನು ಹೇಳಲೇಬೇಕು. ಸಿದ್ದಿಗಳು ಹಿಂದೂ- ಕ್ರೈಸ್ತ- ಇಸ್ಲಾಮ್ ಧರ್ಮಗಳಲ್ಲಿ ಹಂಚಿಹೋಗಿದ್ದಾರೆ. ಹಳಿಯಾಳ, ಮುಂಡಗೋಡಿನಂತಹ ಪಟ್ಟಣಗಳಲ್ಲಿ ವಾಸಿಸುವ ಸಿದ್ದಿಗಳು ಇಸ್ಲಾಂಗೆ ಮತಾಂತರವಾದ ಹಿನ್ನೆಲೆಯಿದೆ. ಆದರೆ ಮದುವೆಗೆ ಮಾತ್ರ ಯಾವ ಧರ್ಮದ ಗೇಟ್ ಇವರನ್ನು ತಡೆಗಟ್ಟುವುದಿಲ್ಲ. ಯಾವ ಧರ್ಮದ ಸಿದ್ದಿಯೇ ಆಗಲಿ, ಸಿದ್ದಿ ಆದರೆ ಆಯಿತು. ವರ ವಧು ಪ್ರತ್ಯೇಕ ಧರ್ಮದವರಾದರೂ ತೊಂದರೆಯಿಲ್ಲ. ಇಷ್ಟು ಮುಕ್ತವಾದ ವೈವಾಹಿಕ ಸಂಬಂಧ ಬೆಳೆಸುವ ಬಗೆಯನ್ನು ಇನ್ಯಾವ ಜನಾಂಗಗಳಲ್ಲೂ ಕಾಣಿಸುವುದು ಅಪರೂಪ.
ಸಾಮಾನ್ಯವಾಗಿ ಎಲ್ಲ ಹಬ್ಬಗಳನ್ನೂ ಆಚರಿಸುವ ಸಿದ್ದಿಗಳು ತಮ್ಮದೇ ಆದ ಹಬ್ಬವೊಂದನ್ನು ಆಚರಿಸುತ್ತಾರೆ. ಹಿರಿಯರೇ ಅವರ ಪ್ರಮುಖ ದೇವರು. ಅಂಕೋಲಾ ತಾಲೂಕಿನ ಮಳಗಾಂವ್ ನಲ್ಲಿರುವ ‘ಸಿದ್ದಿ ನಾಸ’ ಹೆಸರಿನ ಅವರ ಹಿರಿಯರ ದೇವರಿಗರ ವರ್ಷಕ್ಕೊಮ್ಮೆ ಹಬ್ಬ. ಧರ್ಮ ಬೇಧ ಮರೆತು ದಿನವಿಡೀ ಎಲ್ಲಾ ಸಿದ್ದಿಗಳೂ ಈ ಹಿರಿಯರ ಹಬ್ಬದಲ್ಲಿ ಭಾಗವಹಿಸುತ್ತಾರೆ. ಪೂಜಿಸುತ್ತಾರೆ.
ಕಾಡಿನ ಮೂಲವಾಸಿಗಳಾದ ಸಿದ್ದಿಗಳಿಗೆ ಪೇಟೆಯ ಹುಚ್ಚು ಹಿಡಿಯಲು ತಡವೇನು ಆಗಲಿಲ್ಲ. ಯುವಕರು ಹೊಸ ಫ್ಯಾಶನ್ನಿನ ಹರಿದ ಜೀನ್ಸ್ ಪ್ಯಾಂಟ್ ಹಾಕಿಕೊಂಡು, ಯಾವುದೋ ಹೊಸ ಸ್ಟೈಲಿನಂತೆ ಕೇಶ ವಿನ್ಯಾಸ ಮಾಡಿಕೊಂಡು, ಸೈಲೆನ್ಸರ್ ತೆಗೆದ ಕಿವಿಗಡಚಿಕ್ಕುವ ಶಬ್ಧದ ಬೈಕ್ ನಲ್ಲಿ ಯಲ್ಲಾಪುರ ಪೇಟೆಯನ್ನು ಅನಗತ್ಯವಾಗಿ ಸುತ್ತುವುದನ್ನು ಈಗಲೂ ನೋಡಬಹುದು. ಶಾಂತಾರಾಮ ಸಿದ್ದಿಯವರು ಮೂರು ದಶಕದ ಹಿಂದೆ ಪದವಿ ಪಡೆದ ಸಿದ್ದಿ ಜನಾಂಗದ ಮೊದಲಿಗರು. ಆದರೆ ಇಂದಿಗೂ ಪದವಿ ಪಡೆದ ಸಿದ್ದಿ ಯುವಕರ ಸಂಖ್ಯೆಯೇನೂ ಹೆಚ್ಚಿಲ್ಲ. ಸಿದ್ದಿ ಜನಾಂಗದಲ್ಲಿ ಮನೆಯ ಮಕ್ಕಳು ಹೈಸ್ಕೂಲಿನ ಮೆಟ್ಟಿಲು ಹತ್ತಿದರೇ ‘ಶಾಲೆಗೆ ಹೋದವ’ ಎಂದು ಕರೆಯುವುದುಂಟು. ವನವಾಸಿ ಕಲ್ಯಾಣ ವೇದಿಕೆ, ಹಳಿಯಾಳ, ಯಲ್ಲಾಪುರಗಳಲ್ಲಿಯೂ ಕೆಲ ಸ್ಥಳೀಯ ಸಂಸ್ಥೆಗಳು ಸಿದ್ದಿ ಬುಡಕಟ್ಟು ಜನಾಂಗದ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿವೆ. ಸಿದ್ದಿಗಳ ಅಭಿವೃದ್ಧಿಯಲ್ಲಿ ಪ್ರಗತಿಯೇನಾದರೂ ಆಗಿದೆಯೇ ಎಂದು ಕೇಳಿದರೆ ಬಹುತೇಕ ಯುವಕರು ದಾರಿ ತಪ್ಪಿರುವ ಉದಾಹರಣೆಗೆಳೇ ಸಿಗುತ್ತವೆ. ತಕ್ಷಣ ಹಣ ಗಳಿಸುವ ಹುಚ್ಚಿನ ಹಿಂದೆ ಬೀಳುವ ಅಪಾಯದಲ್ಲಿ ಈ ಜನಾಂಗದ ಹದಿಹರೆಯದವರಿದ್ದಾರೆ. ಸಿದ್ದಿಗಳಿಗೆ ಇಂದಿನ ತುರ್ತು ಅನಿವಾರ್ಯ ಶೈಕ್ಷಣಿಕವಾಗಿ ಸೂಕ್ತ ಮಾರ್ಗದರ್ಶನ. ಶೈಕ್ಷಣಿಕವಾಗಿ ಅಭಿವೃದ್ಧಿಯಾಗದ ಹೊರತು ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಅಪ್ಪಟ ಕೆಲಸಗಾರ ಶಾಂತಾರಾಮ ಸಿದ್ದಿ, ಹಳಿಯಾಳದ ಡಿಯಾಗೋ ಸಿದ್ದಿ, ಕಲಾವಿದ ಪ್ರಶಾಂತ ಸಿದ್ದಿ, ಜನಾಂಗದ ಮೊದಲ ವಕೀಲ ಜಯರಾಮ ಸಿದ್ದಿ..ಹೀಗೆ ಕೆಲವು ಹೆಸರುಗಳು ಮಾತ್ರ ಕೇಳಿಬರುತ್ತವೆ.
ದೈಹಿಕ ಸಾಮರ್ಥ್ಯದಲ್ಲಿ ದೈತ್ಯರಾದ ಸಿದ್ದಿಗಳ ಪ್ರತಿಭೆ ಗುರುತಿಸಿದ ಕೇಂದ್ರ ಸರ್ಕಾರ ಬಹು ಹಿಂದಿನಿಂದಲೇ ಒಂದೆರಡು ಯೋಜನೆಗಳನ್ನು ಜಾರಿಗೆ ತಂದಿತ್ತು. ಹಳಿಯಾಳದ ಸಿದ್ದಿಯೋರ್ವರು ಕ್ರೀಡಾ ಕೋಟದಲ್ಲಿ ಆಯ್ಕೆಯಾಗಿ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇತ್ತೀಚಿನ ಒಂದು ಯೋಜನೆ 2016 ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ದೇಶದ ಎಂಟು ಕಡೆ ನಿರ್ಮಿಸ ಹೊರಟಿದ್ದ ಕ್ರೀಡಾ ವಲಯಗಳನ್ನು ಗುರುತಿಸಿ ಕ್ರೀಡಾ ತರಬೇತಿಗಾಗಿಯೇ ಹಾಸ್ಟೇಲ್ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದು. ಈ ಯೋಜನೆಯಡಿ ಉತ್ತರ ಕನ್ನಡದ ದಾಂಡೇಲಿಯಲ್ಲಿ 10 ಎಕರೆ ಜಾಗವನ್ನೂ ಗುರುತಿಸಲಾಗಿತ್ತು. ದಾಂಡೇಲಿ ನಗರ ಸಭೆಯ ಆಡಳಿತದಲ್ಲಿರುವ 200 ಮೀಟರ್ ಟ್ರ್ಯಾಕ್, ಕುಸ್ತಿ ಅಂಗಣ, ವಾಲಿಬಾಲ್ ಕೋರ್ಟ್ ಗಳನ್ನು ನೀಡಲು ಅನುಮತಿ ನೀಡಲಾಗಿತ್ತು. ಆದರೆ ಆನಂತರ ಈ ಯೋಜನೆ ಮುಂದುವರೆಯಲೇ ಇಲ್ಲ ಎಂದು ಹಳಿಯಾಳದ ಶಾಸಕ, ಆರ್ ವಿ ದೇಶಪಾಂಡೆಯವರು ಹೇಳುತ್ತಾರೆ.
ಮೂಲತಃ ನಾಚಿಕೆ ಸ್ವಭಾವದ ಸಿದ್ದಿ ಜನಾಂಗಕ್ಕೆ ಹಲವಾರು ಯೋಜನೆಗಳೇನೋ ಇವೆ. ಮಳೆಗಾಲದಲ್ಲಿ ಕಾಡುತ್ಪನ್ನಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆರು ತಿಂಗಳ ಕಾಲ ಕೇಂದ್ರ ಸರ್ಕಾರವೇ ವಿಶೇಷ ಯೋಜನೆಯಡಿ ಆಹಾರ ಸಾಮಾಗ್ರಿಗಳನ್ನು ಪೂರೈಸುತ್ತಿದೆ. ಆದರೆ ಸಾಧನೆಗೆ ಅಗತ್ಯವಾದ ದೈಹಿಕ ಸಾಮರ್ಥ್ಯಕ್ಕೆ ತಕ್ಕುದಾದ ತರಬೇತಿ ಮತ್ತು ಸದ್ಬಳಕೆ ದೊರಕುತ್ತಿಲ್ಲ. ಸಾಮರ್ಥ್ಯವಿರುವ ಯಾವುದೇ ಜನಾಂಗವಾಗಲಿ ಕೇವಲ ಬದುಕು ನಡೆಸುವುದಕ್ಕಷ್ಟೇ ಸೀಮಿತವಾಗದೇ, ಸಾಮರ್ಥ್ಯಾಧಾರಿತ ಸಾಧನೆಗಳತ್ತವೂ ಮುಖಮಾಡಬೇಕು. ಅಂತಹ ಯೋಜನೆಗಳ ಘೋಷಣೆಯೊಂದೇ ಅಲ್ಲ. ಅನುಷ್ಠಾನ ಈ ಹೊತ್ತಿನ ತುರ್ತು. ಸಿದ್ದಿಗಳ ಚುರುಕು,ಶಕ್ತಿ,ಮುಗ್ಧತೆ,ಬಲ ಮತ್ತು ಚಾಣಾಕ್ಷತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೆ ಅನುವು ಮಾಡಿಕೊಡುವುದು ನಿಜವಾದ ಆತ್ಮ ನಿರ್ಭರ ಭಾರತ







