ವಿವಾದಿತ ಪರಿಸರ ಪರಿಣಾಮ ಅಧ್ಯಯನ(ಇಐಎ) ಕರಡು ಅಧಿಸೂಚನೆ-2020ರ ವಿಷಯದಲ್ಲಿ ಕೇಂದ್ರ ಸರ್ಕಾರ ಎಷ್ಟು ಮೊಂಡುತನ ಪ್ರದರ್ಶಿಸುತ್ತಿದೆ ಎಂದರೆ; ಸ್ವತಃ ಕರ್ನಾಟಕ ಹೈಕೋರ್ಟಿಗೇ ಸುಳ್ಳು ಮಾಹಿತಿ ನೀಡಿ ಹೊಸ ಕಾನೂನು ಜಾರಿ ಕುರಿತ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ!
ಯಾವುದೇ ಉದ್ಯಮ, ಯೋಜನೆಗಳ ವಿಷಯದಲ್ಲಿ ಯೋಜನೆ ಆರಂಭಕ್ಕೆ ಮುನ್ನ ಅಂತಹ ಯೋಜನೆಯಿಂದಾಗಿ ಸುತ್ತಲಿನ ಪರಿಸರದ ಮೇಲೆ ಏನೆಲ್ಲಾ ಪರಿಣಾಮಗಳಾಗಬಹುದು ಎಂಬುದನ್ನು ಪರಿಣಿತರು ಮತ್ತು ಸ್ಥಳೀಯರ ಸಮಾಲೋಚನೆ ಮೂಲಕ ನಿರ್ಧರಿಸಿ, ಯೋಜನೆಗೆ ಅನುಮೋದನೆ ನೀಡುವುದೇ ಬೇಡವೇ ಎಂಬುದನ್ನು ನಿರ್ಧರಿಸಬೇಕು ಎಂಬುದು ಈವರೆಗೆ ಜಾರಿಯಲ್ಲಿದ್ದ 2006ರ ಪರಿಸರ ಪರಿಣಾಮ ಅಧ್ಯಯನ ಕಾನೂನು. ಆ ಪರಿಸರ ಸಂರಕ್ಷಣೆಯೊಂದಿಗೆ ದೇಶದ ಜನಾರೋಗ್ಯ ರಕ್ಷಣೆಯ ಸದುದ್ದೇಶದಿಂದ ಅರಣ್ಯ ಕಾಯ್ದೆಯ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ಈ ಕಾನೂನನ್ನು ಸಂಪೂರ್ಣ ತಲೆಕೆಳಗು ಮಾಡಿ, ಪರಿಸರ ಮತ್ತು ಜನಾರೋಗ್ಯದ ಹಿತವನ್ನು ಬಲಿಕೊಟ್ಟು, ಉದ್ಯಮ ಮತ್ತು ಸರ್ಕಾರಿ ಯೋಜನೆಗಳಿಗೆ ಪೂರಕವಾಗಿ ಕಾನೂನು ಬದಲಾವಣೆಗಾಗಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಈ ಹೊಸ ಇಐಎ ಕರಡು ಅಧಿಸೂಚನೆ ಹೊರಡಿಸಿದೆ.
ಕೆಲವೇ ಮಂದಿ ಕಾರ್ಪರೇಟ್ ಕುಳಗಳ ಹಿತಕ್ಕಾಗಿ ದೇಶದ ಪರಿಸರ, ನೈರ್ಮಲ್ಯ, ಜನಾರೋಗ್ಯ ಬಲಿಕೊಡಲು ಹೊರಟ ಈ ಹೊಸ ಕಾನೂನಿನ ವಿರುದ್ಧ ಸಹಜವಾಗೇ ದೇಶವ್ಯಾಪಿ ಪರಿಸರ ಸಂಘಟನೆಗಳು ಮತ್ತು ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಆನ್ ಲೈನ್ ಅಭಿಯಾನ, ಮಾಧ್ಯಮ ಹೇಳಿಕೆಗಳ ಜೊತೆಗೆ ಕಾನೂನು ಹೋರಾಟವನ್ನೂ ನಡೆಸಿದ್ದಾರೆ. ಕಳೆದ ಮಾರ್ಚನಲ್ಲಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಈ ತಿದ್ದುಪಡಿ ಅಧಿಸೂಚನೆ ಹೊರಡಿಸುತ್ತಿದ್ದಂತೆ ಆರಂಭವಾದ ಈ ಕುರಿತ ಹೋರಾಟಗಳು ಈಗಲೂ ಮುಂದುವರಿದಿವೆ.
ಈ ನಡುವೆ, ದೆಹಲಿ ಮತ್ತು ಬೆಂಗಳೂರು ಹೈಕೋರ್ಟುಗಳಲ್ಲಿಯೂ ಈ ತಿದ್ದುಪಡಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ವಿವಿಧ ಸ್ವಯಂಸೇವಾ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಎರಡೂ ನ್ಯಾಯಾಲಗಳು, ಮುಖ್ಯವಾಗಿ ಕರಡು ಅಧಿಸೂಚನೆಯ ಕುರಿತು ವ್ಯಾಪಕ ಪ್ರಚಾರ ನೀಡದಿರುವುದು ಮತ್ತು ಜನರ ಸ್ಥಳೀಯ ಭಾಷೆಯಲ್ಲಿ ಅದನ್ನು ತಲುಪಿಸದಿರುವುದರ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸಿವೆ. ಜೊತೆಗೆ, ದೇಶದ ಬಹುಸಂಖ್ಯಾತ ಜನರ ಬದುಕಿಗೆ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಮಹತ್ವದ ಪರಿಣಾಮ ಉಂಟುಮಾಡುವ ಇಂತಹ ಕಾನೂನು ಬಗ್ಗೆ ಜನರಿಗೆ ಅವರದೇ ಭಾಷೆಯಲ್ಲಿ ಅರ್ಥವಾಗುವಂತೆ ಹೇಳಬೇಕಾದ ಜರೂರಿನ ಬಗ್ಗೆ ಸರ್ಕಾರದ ಕಿವಿ ಹಿಂಡಿವೆ. ಜೊತೆಗೆ ಸುಪ್ರೀಂಕೋರ್ಟ್ ಕೂಡ ಈ ತಿದ್ದುಪಡಿ ಮತ್ತು ಅದನ್ನು ತರಾತುರಿಯಲ್ಲಿ ಜಾರಿಗೊಳಿಸುತ್ತಿರುವ ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ಜುಲೈ 16ರಂದು ಈ ಕುರಿತ, ಯುನೈಟೆಡ್ ಕನ್ಸರ್ವೇಷನ್ ಮೂಮೆಂಟ್ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್, ಕರಡು ತಿದ್ದುಪಡಿ ಅಧಿಸೂಚನೆಗೆ ವ್ಯಾಪಕ ಪ್ರಚಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಆ ಮುನ್ನ ಎರಡು ವಾರಗಳ ಹಿಂದೆ ದೆಹಲಿ ಹೈಕೋರ್ಟ್ ಕೂಡ ಇದೇ ಮಾತನ್ನು ಹೇಳಿತ್ತು ಮತ್ತು ಮುಖ್ಯವಾಗಿ ದೇಶದ ಎಲ್ಲಾ 22 ಸ್ಥಳೀಯ ಭಾಷೆಗಳಿಗೂ ಅಧಿಸೂಚನೆಯನ್ನು ಅನುವಾದಿಸಿ, ಜನರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವಂತೆ ಸೂಚಿಸಿತ್ತು.
ನಂತರ ಕಳೆದ ಜು.22ರಂದು ಕರ್ನಾಟಕ ಹೈಕೋರ್ಟಿಗೆ ತನ್ನ ಆಕ್ಷೇಪಣೆ ಸಲ್ಲಿಸಿದ ಕೇಂದ್ರ ಪರಿಸರ ಸಚಿವಾಲಯ, “ಈ ಕರಡು ಅಧಿಸೂಚನೆಯನ್ನು ಈಗಾಗಲೇ ಎಲ್ಲಾ ರಾಜ್ಯ ಮತ್ತು ಕೇಂದ್ರಾಳಿತ ಪ್ರದೇಶಗಳಿಗೆ ನೀಡಲಾಗಿದೆ. ಕರಡು ಇಎಐ-2019ರ ಹೆಸರಿನಲ್ಲಿ ರಾಜ್ಯ ಸರ್ಕಾರಗಳು, ರಾಜ್ಯ ಮಟ್ಟದ ಪರಿಸರ ಪರಿಣಾಮ ಅಧ್ಯಯನಕ್ಕೆ ಸಂಬಂಧಿಸಿದ ಸಂಸ್ಥೆ, ಪ್ರಾಧಿಕಾರಗಳು, ಪರಿಸರ ಮಂಡಳಿಗಳಿಗೆ ಕರಡು ಪ್ರತಿಯನ್ನು ವರ್ಷದ ಹಿಂದೆಯೇ, 2019ರ ಏಪ್ರಿಲ್ 15ರಂದೇ ಕಳಿಸಲಾಗಿದೆ” ಎಂದು ಹೇಳಿದೆ. ಆದರೆ, ಸರ್ಕಾರದ ಈ ಹೇಳಿಕೆ ಹಸೀಸುಳ್ಳು ಎಂಬುದನ್ನು ‘ಹಫಿಂಗ್ಟನ್ ಪೋಸ್ಟ್’ ವರದಿ ಬಹಿರಂಗಪಡಿಸಿದೆ. ವಾಸ್ತವವಾಗಿ ಕಳೆದ ವರ್ಷದ ಏಪ್ರಿಲ್ ನಲ್ಲಿ ರಾಜ್ಯ ಸರ್ಕಾರಗಳಿಗೆ ನೀಡಿದ್ದಾಗಿ ಕೇಂದ್ರ ಹೇಳಿರುವ ಕರಡು ಮತ್ತು ಈಗ ಕಳೆದ ಮಾರ್ಚಿನಲ್ಲಿ ಅಧಿಸೂಚನೆ ಹೊರಡಿಸಿರುವ ಕರಡು ಸಂಪೂರ್ಣ ಭಿನ್ನ. ಹಿಂದಿನ ಇಐಎ ಕರಡನ್ನು ಜೀರೋ ಡ್ರಾಫ್ಟ್ ಎಂದು ಕರೆಯಲಾಗಿತ್ತು ಮತ್ತು ಚುನಾವಣೆಯ ಹಿನ್ನೆಲೆಯಲ್ಲಿ ಮುಂದಿನ ಪ್ರಕ್ರಿಯೆ ಕಾಣದೆ ಬದಿಗೆ ಸರಿದಿತ್ತು. ಬಳಿಕ ಇಐಎ 2020 ಕರಡು ಅಧಿಸೂಚನೆಯನ್ನು ಮಾರ್ಚ್ 12ರಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಎರಡೂ ಸಂಪೂರ್ಣ ಭಿನ್ನ. 2019ರ ಕರಡುಗಿಂತ ಹೊಸ ಕರಡು ಪರಿಸರಕ್ಕೆ ಹೆಚ್ಚು ಮಾರಕ ಮತ್ತು ಅಪಾಯಕಾರಿ ಎಂದು ‘ಹಫಿಂಗ್ಟನ್’ ವರದಿ ಹೇಳಿದೆ.
ಆದರೆ, ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಆಕ್ಷೇಪಣೆಯಲ್ಲಿ ಹಳೆಯ ಕರಡನ್ನೇ ಹೊಸದೆಂದು ಹೇಳಿ, ಆ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಲಾಗಿದೆ ಎಂದು ಸುಳ್ಳು ಹೇಳಿ, ನ್ಯಾಯಾಲಯದ ದಿಕ್ಕುತಪ್ಪಿಸುವ ಯತ್ನ ಮಾಡಿದೆ. ಜೊತೆಗೆ, ಅಧಿಸೂಚನೆಯನ್ನು ಜನರ ಭಾಷೆಗೆ ಅನುವಾದಿಸುವ ವಿಷಯದಲ್ಲಿ ಕೂಡ, ಹಿಂದಿ ಮತ್ತು ಇಂಗ್ಲಿಷ್ ದೇಶದ ಆಡಳಿತ ಭಾಷೆ, ಆ ಭಾಷೆ ಹೊರತುಪಡಿಸಿ ಉಳಿದ ಭಾಷೆಗಳಿಗೆ ಕಾನೂನು ತಿದ್ದುಪಡಿಯನ್ನು ಅನುವಾದಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ, ದೇಶದ ಜನರಿಗೆ ಅವರ ಭಾಷೆಯಲ್ಲಿ ಕಾನೂನು- ಕಾಯ್ದೆಗಳನ್ನು ತಿಳಿಸಿ ಹೇಳುವ ಹೊಣೆಗಾರಿಕೆ ತನ್ನದಲ್ಲ ಎಂಬ ಮೊಂಡುತನವನ್ನೂ ಮೆರೆದಿದೆ.
ಆದರೆ, ಸರ್ಕಾರದ ಮೊಂಡು ವಾದಕ್ಕೆ ಸೊಪ್ಪು ಹಾಕದ, ಹೈಕೋರ್ಟ್, ಜನರ ಭಾಷೆಯಲ್ಲಿ ತಿದ್ದುಪಡಿ ಕರಡು ಅಧಿಸೂಚನೆಯನ್ನು ನೀಡದೇ ಹೋದಲ್ಲಿ ಮತ್ತು ಆ ಬಗ್ಗೆ ಸಮಾಲೋಚನೆಗೆ ಸಾಕಷ್ಟು ಸಮಯಾವಕಾಶ ನೀಡದೇ ಹೋದಲ್ಲಿ, ಇಐಎ ಕರಡು ಅಧಿಸೂಚನೆಗೆ ತಡೆಯಾಜ್ಞೆ ನೀಡಲಾಗುವುದು ಎಂದು ಎಚ್ಚರಿಸಿದ್ದು, ತನ್ನ ತೀರ್ಪನ್ನು ಆಗಸ್ಟ್ 5ಕ್ಕೆ ಕಾಯ್ದಿರಿಸಿದೆ.
ಅಷ್ಟಕ್ಕೂ ಈ ಪರಿಸರ ಪರಿಣಾಮ ಅಧ್ಯಯನ ಕರಡು ಅಧಿಸೂಚನೆ-2020ರ ಬಗ್ಗೆ ಪರಿಸರ ತಜ್ಞರು, ಹೋರಾಟಗಾರರು ಮತ್ತು ಜನಸಾಮಾನ್ಯರು ಏಕೆ ಆತಂಕಕ್ಕೊಳಗಾಗಿದ್ದಾರೆ ಮತ್ತು ಅದೇ ಹೊತ್ತಿಗೆ ಸರ್ಕಾರ ಏಕೆ ಹೀಗೆ ನ್ಯಾಯಾಲಯಗಳನ್ನೂ ದಿಕ್ಕುತಪ್ಪಿಸಿ ಅದನ್ನು ಜಾರಿಗೊಳಿಸುವ ಹಪಾಹಪಿ ತೋರುತ್ತಿದೆ ಎಂಬುದು ಕುತೂಹಲಕಾರಿ ಸಂಗತಿ.
ವಾಸ್ತವವಾಗಿ ರಸ್ತೆ, ಸೇತುವೆ, ಕಾರ್ಖಾನೆ, ಬೃಹತ್ ಉದ್ಯಮ, ಗಣಿಗಾರಿಕೆ, ಜಲಾಶಯ ಸೇರಿದಂತೆ ವಿವಿಧ ಉದ್ಯಮ ಮತ್ತು ಅಭಿವೃದ್ಧಿ ಯೋಜನೆಗಳ ವಿಷಯದಲ್ಲಿ ಅವುಗಳ ಅನುಷ್ಠಾನದಿಂದಾಗಿ ಆಯಾ ಪ್ರದೇಶದ ಪರಿಸರ ಮತ್ತು ಜನಜೀವನದ ಮೇಲೆ ಆಗುವ ಪರಿಣಾಮಗಳೇನು ಎಂಬುದನ್ನು ಅಂದಾಜಿಸುವುದು, ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸುವುದು, ತಜ್ಞ ಸಮಿತಿ ಅಧ್ಯಯನ ನಡೆಸುವುದು ಮುಂತಾದ ಕ್ರಿಯೆಗಳ ಮೂಲಕ ಯಾವುದೇ ಯೋಜನೆ, ಉದ್ಯಮ ಪರಿಸರ ಮತ್ತು ಜನಾರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರದಂತೆ ತಡೆಯುವ ಉದ್ದೇಶದಿಂದ ಅರಣ್ಯ ಕಾಯ್ದೆಯಡಿ 2006ರ ಪರಿಸರ ಪರಿಣಾಮ ಅಧ್ಯಯನ ಕಾಯ್ದೆ ಜಾರಿಗೆ ಬಂದಿತ್ತು. ಈವರೆಗೆ ಅದೇ ಜಾರಿಯಲ್ಲಿದೆ ಕೂಡ.
ಆದರೆ, ಈಗ ಕೇಂದ್ರ ಬಿಜೆಪಿ ಸರ್ಕಾರ, ನಮಸ್ತೇ ಸದಾ ವತ್ಸಲೆ ಜಪ ಮಾಡುತ್ತಲೇ ಪರಿಸರ ಮತ್ತು ಜನಹಿತಕ್ಕೆ ಬದಲಾಗಿ, ಉದ್ಯಮಿಗಳು ಮತ್ತು ಗುತ್ತಿಗೆದಾರರ ಹಿತವನ್ನೇ ಮುಖ್ಯವಾಗಿಟ್ಟುಕೊಂಡು 2006ರ ಕಾಯ್ದೆ ಬದಲಿಗೆ, ಪ್ರಸ್ತಾವಿತ ಇಐಎ ಕರಡು ಅಧಿಸೂಚನೆ-2020ನ್ನು ಜಾರಿಗೆ ತರಲು ಮುಂದಾಗಿದೆ.
ಪ್ರಮುಖವಾಗಿ ಹಿಂದಿನ ಕಾನೂನಿಗೂ ಈಗ ಜಾರಿಗೆ ತರಲು ಹೊರಟಿರುವ ಬದಲಾವಣೆಗೂ ಇರುವ ವ್ಯತ್ಯಾಸಗಳನ್ನು ಒಂದೊಂದಾಗಿ ಗಮನಿಸಿದರೆ; ಬಹುಶಃ, ಈ ತಿದ್ದುಪಡಿಗೆ ಯಾಕೆ ಇಷ್ಟು ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಎಂಬುದು ಅರಿವಾಗದೇ ಇರದು.
ಪ್ರಮುಖವಾದ ಬದಲಾವಣೆ ಎಂದರೆ; ಈ ಹಿಂದಿನ ಕಾಯ್ದೆಯಲ್ಲಿ; ಯಾವುದೇ ಯೋಜನೆಗೆ ಅನುಷ್ಠಾನಕ್ಕೆ ಮುಂಚೆ ಪರಿಸರ ನಿರಾಪೇಕ್ಷಣಾ ಪತ್ರ(ಇಸಿ) ಪಡೆದುಕೊಳ್ಳುವುದು ಕಡ್ಡಾಯವಾಗಿತ್ತು. ಆ ಇಸಿ ಪಡೆಯಲು ಯೋಜನೆ ಜಾರಿಯಿಂದಾಗಿ ಆಗಬಹುದಾದ ಪರಿಣಾಮಗಳ ಕುರಿತ ಇಐಎ ನಡೆಸುವುದು; ಅಂದರೆ, ಪರಿಸರ ಹಾನಿ, ಜನಾರೋಗ್ಯದ ಮೇಲಿನ ಪರಿಣಾಮ ಅಧ್ಯಯನ, ಸ್ಥಳೀಯ ಜನಸಮುದಾಯದೊಂದಿಗೆ ಸಮಾಲೋಚನೆ ಮತ್ತು ತಜ್ಞರ ಅಭಿಪ್ರಾಯ ಪಡೆಯುವುದು ಕಾನೂನುಬದ್ಧ ಪ್ರಕ್ರಿಯೆಯಾಗಿತ್ತು. ಆದರೆ, ಈಗ ಜನನೀ ಜನ್ಮಭೂಮಿ ರಕ್ಷಣೆಯ ಮಾತುಗಳನ್ನಾಡುತ್ತಲೇ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಈ ಕಾನೂನನ್ನು ತಿರುವು ಮುರುವು ಮಾಡಿ, ಯಾವುದೇ ಯೋಜನೆಯನ್ನು ಇಸಿ ಮತ್ತು ಇಐಎಗಳ ಅಗತ್ಯವೇ ಇಲ್ಲದೆ ಅನುಷ್ಠಾನಕ್ಕೆ ತರಬಹುದು ಎಂದು ತಿದ್ದುಪಡಿ ಮಾಡಿದೆ. ಅದರಲ್ಲೂ ಹೆದ್ದಾರಿ, ರೈಲ್ವೆ, ಜಲಸಾರಿಗೆ, ವಿದ್ಯುತ್ ಮಾರ್ಗ, ನೀರಾವರಿ ಅಣೆಕಟ್ಟುಗಳು, ಕಲ್ಲಿದ್ದಲು ಗಣಿಗಾರಿಕೆ ಮುಂತಾದ ಯೋಜನೆಗಳ ವಿಷಯದಲ್ಲಿ ಇಸಿಯ ಅಗತ್ಯವೇ ಇಲ್ಲ ಎಂದೂ ಹೊಸ ತಿದ್ದುಪಡಿ ಹೇಳಿದೆ.
ಅದರಲ್ಲೂ ಮುಖ್ಯವಾಗಿ ಸರ್ಕಾರ ಅಂತಹ ಯೋಜನೆಗಳು ‘ಸ್ಟ್ರಾಟೆಜಿಕ್’ ಘೋಷಿಸಿದರೆ, ಅಂತಹ ಯೋಜನೆಗಳ ಕುರಿತ ಯಾವ ಮಾಹಿತಿಯನ್ನೂ ಬಹಿರಂಗಪಡಿಸುವ ಅಗತ್ಯವಿಲ್ಲ ಮತ್ತು ಆ ಬಗ್ಗೆ ಸ್ಥಳೀಯರೊಂದಿಗೆ ಸಮಾಲೋಚನೆ ಸೇರಿದಂತೆ ಇಐಎ ಪ್ರಕ್ರಿಯೆಗಳನ್ನು ನಡೆಸುವ ಅಗತ್ಯ ಕೂಡ ಇಲ್ಲ ಎಂದಿದೆ. ಇಐಎ ಸಮಾಲೋಚನೆಯ ಅಗತ್ಯವಿರುವ ಯೋಜನೆಗಳ ವಿಷಯದಲ್ಲಿ ಕೂಡ, ಸಮಾಲೋಚನಾ ಸಭೆ ನಡೆಸಲು ಪೂರಕ ವಾತಾವರಣ ಇಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಲ್ಲಿ ಸಂಬಂಧಿಸಿದ ಸ್ಥಳೀಯ ಅಧಿಕಾರಿ ಅಥವಾ ಪ್ರಾಧಿಕಾರ, ಏಕಪಕ್ಷೀಯವಾಗಿ ಅಂತಹ ಸಮಾಲೋಚನೆರಹಿತವಾಗಿ ಯೋಜನೆಗೆ ಅನುಮತಿ ನೀಡಬಹುದು ಎಂಬುದೂ ಹೊಸ ತಿದ್ದುಪಡಿಯಲ್ಲಿ ಸೇರಿದೆ.
ಒಂದು ವೇಳೆ ಇತರ ಕೈಗಾರಿಕೆ, ಉದ್ಯಮ, ವಸತಿ ಯೋಜನೆ ಮುಂತಾದವಕ್ಕೆ ಪರಿಸರ ನಿರಾಪೇಕ್ಷಣಾ ಪತ್ರದ ಅಗತ್ಯವಿದ್ದರೂ, ಯೋಜನೆ ಜಾರಿ ಬಳಿಕ ಕ್ರಮೇಣ ಪಡೆದುಕೊಳ್ಳಬಹುದು. ಒಂದು ವೇಳೇ ಹಾನಿಯಾಗಿದ್ದರೆ, ಅದಕ್ಕೆ ತಕ್ಕಂತೆ ದಂಡ ಕಟ್ಟಿ ಇಸಿ ಪಡೆಯಬಹುದು ಎಂಬುದು ಮತ್ತೊಂದು ಮಹತ್ವದ ಸಂಗತಿ. ಈ ವಿಷಯದಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಸರ ಮತ್ತು ಜನಾರೋಗ್ಯದ ಹಿತದೃಷ್ಟಿಯಿಂದ ಇಂತಹ ಕ್ರಮ ಅಪಾಯಕಾರಿ. ಒಮ್ಮೆ ಯೋಜನೆ ಜಾರಿಯಾದ ಬಳಿಕ, ಪರಿಸರ ಮತ್ತು ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ಬಳಿಕ ಅದನ್ನು ಸರಿಪಡಿಸುವುದು ಅಥವಾ ತಡೆಯುವುದು ಸಾಧ್ಯವೇ ? ಇಂತಹ ಕಾನೂನು, ಪರಿಸರದ ವಿಷಯದಲ್ಲಂತೂ ಯಾವುದೇ ರಕ್ಷಣೆ ನೀಡುವುದಿಲ್ಲ ಎಂದು ಹೇಳಿದೆ.
ಜೊತೆಗೆ ಯೋಜನೆ ಜಾರಿಗೆ ಇಐಎ ಪ್ರಕ್ರಿಯೆ ಅಗತ್ಯವಿರುವ ಯೋಜನೆಗಳ ವಿಷಯದಲ್ಲಿ ಸಾರ್ವಜನಿಕರು ತಮ್ಮ ಆಕ್ಷೇಪಣೆ ಸಲ್ಲಿಸಲು ಇರುವ ಕಾಲಾವಕಾಶವನ್ನು ಕೂಡ ಈ ಹಿಂದಿನ 30 ದಿನಗಳ ಬದಲಿಗೆ ಕೇವಲ 20 ದಿನಗಳಿಗೆ ಇಳಿಸಲು ನಿರ್ಧರಿಸಲಾಗಿದೆ. ಇದು ಕೂಡ ಪರೋಕ್ಷವಾಗಿ ಜನರ ಮತ್ತು ಪರಿಸರ ಪರ ಇರುವವರ ಹಕ್ಕುಗಳನ್ನು ಮೊಟಕು ಮಾಡಿ, ಅವರ ಕಾಲಾವಕಾಶವನ್ನು ಕಿತ್ತುಕೊಂಡು ಪರಿಸರ ಮಾರಕ ಯೋಜನೆಗಳಿಗೆ ಅನುಕೂಲಮಾಡಿಕೊಡುವ ಕ್ರಮವೇ.
ಇದೆಲ್ಲಕ್ಕಿಂತ ಆಘಾತಕಾರಿಯಾದ ಮತ್ತೊಂದು ಪ್ರಮುಖ ಅಂಶ; ಒಂದು ವೇಳೆ ಯಾವುದೇ ಯೋಜನೆ, ಉದ್ಯಮ, ಕೈಗಾರಿಕೆ ಚಟುವಟಿಕೆಯಿಂದ ಸ್ಥಳೀಯ ಪರಿಸರ ಮತ್ತು ಜನಜೀವನದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾದರೆ, ಆ ಬಗ್ಗೆ ಸ್ಥಳೀಯರು ಯಾರು ಬೇಕಾದರೂ ಸಂಬಂಧಪಟ್ಟ ಪರಿಸರ ಮಂಡಳಿ, ಸ್ಥಳೀಯ ಆಡಳಿತ, ಅರಣ್ಯ ಮತ್ತು ಪರಿಸರ ಇಲಾಖೆಗಳಿಗೆ ದೂರು ನೀಡಲು ಅವಕಾಶವಿತ್ತು. ಆದರೆ, ಹೊಸ ತಿದ್ದುಪಡಿ ಪ್ರಕಾರ, ಅಂತಹ ಯಾವುದೇ ಹಾನಿಯಾದರೂ, ಅನಾಹುತವಾದರೂ ಆ ಬಗ್ಗೆ ದೂರು ನೀಡುವ, ವ್ಯವಸ್ಥೆಯ ಗಮನ ಸೆಳೆಯುವ ಹಕ್ಕು ಜನರಿಗಾಗಲೀ, ಪರಿಸರ ಸಂಘಟನೆಗಳಿಗಾಗಲೀ ಇಲ್ಲ. ಅಂತಹ ಯಾವುದೇ ಕಾನೂನು ಉಲ್ಲಂಘನೆ, ಪರಿಸರ ಹಾನಿಯ ಬಗ್ಗೆ ಸ್ವತಃ ಆ ಕೃತ್ಯ ಎಸಗಿದ ಉದ್ಯಮ, ಯೋಜನೆಗಳ ಮುಖ್ಯಸ್ಥರೇ ಮಾಹಿತಿ ನೀಡಿ, ದಂಡ ತೆತ್ತು ಸರಿಪಡಿಸಿಕೊಳ್ಳಬಹುದು; ಇಲ್ಲವೇ ಸಂಬಂಧಪಟ್ಟ ಸರ್ಕಾರಿ ಇಲಾಖೆ, ಸಂಸ್ಥೆಗಳು ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬಹುದು.
ಅಂದರೆ, ಹೀಗೆ ಕಳ್ಳನೇ ತನ್ನ ಕಳ್ಳತನವನ್ನು ಒಪ್ಪಿ, ಶಿಕ್ಷೆಗೆ ಗುರಿಯಾಗುವಂತಹ ನಗೆಪಾಟಲಿನ ತಿದ್ದುಪಡಿಯ ಮೂಲಕ ಸ್ಥಳೀಯರಿಗೆ ತಮ್ಮ ಪರಿಸರ ಮತ್ತು ಜನಾರೋಗ್ಯದ ಹಿತ ಕಾಯ್ದುಕೊಳ್ಳುವ ಹಕ್ಕನ್ನೇ ಕಿತ್ತುಕೊಳ್ಳುವ ಹುನ್ನಾರ ಮಾಡಲಾಗಿದೆ.
ಒಟ್ಟಾರೆ, ಇಡೀ ತಿದ್ದುಪಡಿಯ ಪರಮ ಉದ್ದೇಶ, ಪರಿಸರ ರಕ್ಷಣೆಯ ಕಾಯ್ದೆ-ಕಾನೂನುಗಳನ್ನು ಗಾಳಿಗೆ ತೂರಿ, ಉದ್ಯಮಿಗಳಿಗೆ, ರಿಯಲ್ ಎಸ್ಟೇಟ್, ಗಣಿ, ಗುತ್ತಿಗೆ ಮಾಫಿಯಾಕ್ಕೆ ರತ್ನಗಂಬಳಿ ಹಾಸಿ ಪರಿಸರ ಲೂಟಿಗೆ, ಪರಿಸರದ ಮೇಲಿನ ಅಹ್ಯಾಹತ ದಾಳಿಗೆ ಅವಕಾಶ ನೀಡುವುದೇ ಆಗಿದೆ. ಆ ಮೂಲಕ ಸ್ಥಳೀಯ ಪರಿಸರ ಮತ್ತು ಜನಜೀವನವನ್ನು ಬಲಿಕೊಟ್ಟು ಕಾರ್ಪೊರೇಟ್ ಕುಳಗಳನ್ನು ಪೊರೆಯುವುದು ಬಿಜೆಪಿ ಸರ್ಕಾರದ ಈ ಹೊಸ ತಿದ್ದುಪಡಿಯ ಗುರಿ ಎಂಬುದು ಯಾರು ಬೇಕಾದರೂ ಊಹಿಸಬಹುದಾದ ಸಂಗತಿ. ಅಷ್ಟೇ ಅಲ್ಲ; ಸ್ಥಳೀಯ ಕೃಷಿ, ಸಾಂಪ್ರದಾಯಿಕ ಬದುಕು, ಸ್ಥಳೀಯ ಆಡಳಿತ ಮತ್ತು ಜನರ ಹಕ್ಕುಗಳನ್ನು ಕೂಡ ಈ ಪ್ರಸ್ತಾವಿತ ಬದಲಾವಣೆಗಳು ಬಲಿ ತೆಗೆದುಕೊಳ್ಳಲಿವೆ. ಯಾವುದೇ ಅಡೆತಡೆ ಇಲ್ಲದ, ಕಣ್ಗಾವಲು ಇಲ್ಲದ ಒಂದು ಅಂದಾದುಂದಿ ವ್ಯವಸ್ಥೆ ಜಾರಿ ಮಾಡುವ ಮೂಲಕ, ಪರಿಸರವನ್ನು ಹುಲುಸು ಹುಲ್ಲುಗಾವಲಿನಂತೆ ಬೃಹತ್ ಉದ್ಯಮಗಳಿಗೆ ಕಬಳಿಸಲು ಮುಕ್ತ ಅವಕಾಶ ಒದಗಿಸುವ ಈ ತಿದ್ದುಪಡಿಗೆ ಸಹಜವಾಗೇ ಜನ ವಿರೋಧ ವ್ಯಕ್ತವಾಗುತ್ತಿದೆ.
Also Read: ಇಐಎ ತಿದ್ದುಪಡಿ ವಿರೊಧಿಸಿದ ಸಂಘಟನೆಗಳ ವೆಬ್ ಸ್ಥಗಿತಗೊಳಿಸಿದ ಸರ್ಕಾರ!
ಆದರೆ, ಜನ ವಿರೋಧ, ನ್ಯಾಯಾಲಯಗಳ ಕಣ್ಗಾವಲುಗಳನ್ನು ಮೀರಿ, ತಾನು ಅಂದುಕೊಂಡಂತೆ ಅಧಿಸೂಚನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಇನ್ನಿಲ್ಲದ ಯತ್ನ ಮಾಡುತ್ತಲೇ ಇದೆ. ಅದರ ಭಾಗವಾಗಿ ಈಗಾಗಲೇ ಈ ತಿದ್ದುಪಡಿ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಪರಿಸರ ಸಂಘಟನೆಗಳ ವೆಬ್ ತಾಣಗಳ ಸ್ಥಗಿತ, ಬೆದರಿಕೆಯಂತಹ ಪ್ರಯತ್ನಗಳು ನಡೆದಿವೆ. ನ್ಯಾಯಾಲಯಗಳಿಗೆ ಸುಳ್ಳು ಮಾಹಿತಿ ನೀಡಿ ದಿಕ್ಕುತಪ್ಪಿಸುವ ಯತ್ನಗಳೂ ನಡೆಯುತ್ತಿವೆ. ಈ ನಡುವೆ, ಆಗಸ್ಟ್ 11ರವರೆಗೆ ತಿದ್ದುಪಡಿಗೆ ಅಕ್ಷೇಪ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಸಿಕ್ಕಿದೆ. ಇನ್ನಷ್ಟು ಕಾಲಾವಕಾಶ ನೀಡಲು ಸರ್ಕಾರ ನಿರಾಕರಿಸುತ್ತಿದ್ದು, ನ್ಯಾಯಾಲಯಗಳ ಆದೇಶಗಳಷ್ಟೇ ಈ ವಿಷಯದಲ್ಲಿ ಉಳಿದಿರುವ ಭರವಸೆ.
ಒಟ್ಟಾರೆ, ಈ ಇಐಎ ತಿದ್ದುಪಡಿ ಕರಡು ಅಧಿಸೂಚನೆ ವಿರೋಧಿ ಹೋರಾಟ, ಈಗ ‘ಸದಾವತ್ಸಲೆ’ಯ ಜಪ ಮಾಡುವ ಮಂದಿಯಿಂದ ದೇಶದ ಪರಿಸರವನ್ನು, ಜನಜೀವನವನ್ನು ಉಳಿಸಲು ನೈಜ ದೇಶಪ್ರೇಮಿಗಳು ಶತಾಯಗತಾಯ ಪ್ರಯತ್ನಿಸುವ ವಿಪರ್ಯಾಸದ ಸನ್ನಿವೇಶ ಸೃಷ್ಟಿಸಿದೆ.