ಕಳೆದೆರಡು ದಿನಗಳಿಂದ ಕರ್ನಾಟಕ ವಿಧಾನಸಭಾ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಕೋವಿಡ್ ನಿರ್ವಹಣೆ ವೈಫಲ್ಯ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಹಗರಣ ಸೇರಿದಂತೆ ಹಲವಾರು ವಿಷಯಗಳನ್ನು ಎದುರಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ವಿಪಕ್ಷ ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ವೈದ್ಯಕೀಯ ಉಪಕರಣ ಖರೀದಿಯಲ್ಲಿ ಹಗರಣ ನಡೆದಿರುವ ಕುರಿತಂತೆ ತಿಂಗಳುಗಳ ಹಿಂದೆಯೇ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿತ್ತು. ಆದರೆ ಖರೀದಿಯಲ್ಲಿ ಯಾವುದೇ ಹಗರಣ ನಡೆದಿಲ್ಲವೆಂದು ಹೇಳುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ವೈದ್ಯಕೀಯ ಉಪಕರಣಗಳ ಖರೀದಿ ಕುರಿತಂತೆ ಸದನದಲ್ಲಿ ಸ್ಪಷ್ಟೀಕರಣ ನೀಡುತ್ತಿದ್ದರು. ತಾವು ಖರೀದಿಸಿದ ವೈದ್ಯಕೀಯ ಉಪಕರಣಗಳು ಅತ್ಯಂತ ಗುಣಮಟ್ಟದ್ದಾಗಿದೆ ಎಂದು ಸುಧಾಕರ್ ಸಮರ್ಥನೆ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ವೇಳೆ ಎದ್ದು ನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿದ್ದಾರೆ. ಮಾತಿನ ಭರದಲ್ಲಿ, ʼದೊಡ್ಡ ಮನುಷ್ಯರು ʼಹಲ್ಕಾ ಕೆಲಸಗಳುʼ ಮಾಡಿದರೆ ಅದು ದೊಡ್ಡ ಕೆಲಸವೇ?ʼ ಎಂದು ಪ್ರಶ್ನಿಸಿದ್ದಾರೆ.
ಇದು ಆಡಳಿತ ಪಕ್ಷದ ನಾಯಕರಿಗೆ ಕೋಲಾಹಲವೆಬ್ಬಿಸಲು ಇಂಬು ನೀಡಿದೆ. ತಕ್ಷಣವೇ ಪ್ರತಿಕ್ರಿಯಿಸಿದ ಸುಧಾಕರ್, ಬಾಯಿಗೆ ಬಂದಂತೆ ಮಾತನಾಡಬೇಡಿ, ಅವ್ಯಾಚ್ಯ ಪದ ಬಳಸಲು ನನಗೂ ಬರುತ್ತೆ, ನೀವೇನು ಬ್ರಹ್ಮಾಂಡ ಹೊತ್ತುಕೊಂಡು ಬಂದಿದ್ದೀರ? ನಿಮಗ್ಯಾವ ನೈತಿಕತೆ ಇದೆ? ಎಂದು ರಮೇಶ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಬಳಿಕ, ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಸುಧಾಕರ್, ಸಂಸತ್ತಿನ ಘನತೆ ಹೋಗಿದೆ. ರಮೇಶ್ ಕುಮಾರ್ ಅಸಂಸದೀಯ ಪದಬಳಕೆ ಮಾಡಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ನೀವು ನಮ್ಮ ರಕ್ಷಣೆಗೆ ಬರಬೇಕು ಅಧ್ಯಕ್ಷರೇ.. ಎಂದಿದ್ದಾರೆ.
ತಾನು ಬಳಸಿದ ಪದ ಅಸಾಂವಿಧಾನಿಕವಾಗಿದ್ದರೆ, ಸ್ಥಳದಲ್ಲೇ ಕ್ಷಮೆ ಕೇಳುವುದಾಗಿ ರಮೇಶ್ ಕುಮಾರ್ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಈಶ್ವರಪ್ಪ, ಸಂಸತ್ತಿನ ಘನತೆ ಹಾಗೂ ನಿಮ್ಮ ಘನತೆ ಉಳಿಸಿಕೊಳ್ಳಲು ಎದ್ದು ನಿಂತು ಕ್ಷಮೆ ಕೇಳಿ, ಮಾತನ್ನು ಹಿಂಪಡೆಯಿರಿ ಎಂದು ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನು ಒಪ್ಪದ ರಮೇಶ್ ಕುಮಾರ್, ತಾನು ಬಳಸಿದ ಪದ ಅಸಂಸದೀಯವಾಗಿದ್ದರೆ ಸಭಾಧ್ಯಕ್ಷ ಕ್ರಮ ಕೈಗೊಳ್ಳಲಿ, ಸಭಾಪತಿಯವರಲ್ಲಿ ಸಂಸದೀಯ ಹಾಗೂ ಅಸಂಸದೀಯ ಪದಗಳ ಪಟ್ಟಿ ಇದೆ. ಸದನದ ಸದಸ್ಯರು ಬಳಸಿದ ಪದಗಳು ಸಂಸದೀಯವೋ, ಅಸಂದೀಯವೋ ಎಂದು ನಿರ್ಣಯಿಸಬೇಕಾದ ವಿವೇಚನೆ ಸಭಾಧ್ಯಕ್ಷರದ್ದು, ಅಸಂಸದೀಯವಾಗಿದ್ದರೆ ಅವರು ತೀರ್ಮಾನ ಮಾಡಲಿ, ಹಲ್ಕಾ ಪದ ಅಸಂಸದೀಯವಾಗಿದ್ದರೆ ತಾನು ಕ್ಷಮೆ ಕೇಳುವುದಾಗಿ ಪುನರುಚ್ಛಿಸಿದ್ದಾರೆ.
Also Read: ವಿಧಾನ ಮಂಡಲ ಅಧಿವೇಶನ: ಕರೊನಾ ನೆಪದಲ್ಲಿ ಪಲಾಯನ ಮಾಡಲು ಯತ್ನಿಸುತ್ತಿರುವ BSY, ಬಿಡಲೊಲ್ಲದ ಸಿದ್ದರಾಮಯ್ಯ
ಬಳಿಕ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ರಮೇಶ್ ಕುಮಾರ್ ಬಳಸಿದ ಭಾಷೆ ಅಸಂಸದೀಯವೋ, ಸಂಸದೀಯವೋ ಎಂದು ನಾನು ಪರಿಶೀಲಿಸಲು ಸೂಚಿಸಿದ್ದೇನೆ. ಆದರೆ ಅವರು ಬಳಸಿದ ಭಾಷೆ ಸೌಜನ್ಯದ ಭಾಷೆಯಲ್ಲ ಎಂದು ವೈಯಕ್ತಿಕವಾಗಿ ನಾನು ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.
ರಮೇಶ್ ಕುಮಾರ್ ಅವರ ಮಾತನ್ನು ಆಡಳಿತ ಪಕ್ಷದ ನಾಯಕರಾದ ಕೆ ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಮೊದಲಾದವರು ತೀವ್ರವಾಗಿ ಖಂಡಿಸಿದ್ದಾರೆ.
ಆದರೆ ತಮ್ಮ ಮಾತನ್ನು ಸಮರ್ಥಿಸಿದ ರಮೇಶ್ ಕುಮಾರ್, ನಮ್ಮ ತಾಳ್ಮೆಗೂ ಒಂದು ಮಿತಿಯಿದೆ, (ವೈದ್ಯಕೀಯ ಉಪಕರಣ) ಖರೀದಿ ಮಾಡಿದ ಬೆಲೆಯಲ್ಲಿ ಬಹಳ ದೊಡ್ಡ ವ್ಯತ್ಯಾಸ ಆಗಿದೆ. ಅದಕ್ಕೆ ಅವರು ಸಮರ್ಥನೆ ಮಾಡುತ್ತಿದ್ದಾರೆಯೇ ಹೊರತು ಆಪಾದನೆಯನ್ನು ನಿರಾಕರಣೆ ಮಾಡಿಲ್ಲ. ಇದನ್ನು ನಿಲ್ಲಿಸಿ ಎಂದು ಕೇಳುತ್ತಿದ್ದೇನೆ ಎಂದಿದ್ದಾರೆ.