ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕುರಿತಂತೆ ಚರ್ಚೆ ಸದನದಲ್ಲಿ ನಡೆಯುತ್ತಿದ್ದು, ಸದನದ ವಾತಾವರಣ ಕಾವೇರಿದೆ. ಕಾಂಗ್ರೆಸ್ ಪಕ್ಷದ ಒಳಜಗಳಿಂದ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ದಾಳಿ ನಡೆದಿದೆ ಎಂದು ಆಡಳಿತರೂಢ ಬಿಜೆಪಿ ಪಕ್ಷ ಆರೋಪಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪೊಲೀಸರು ತಡವಾಗಿ ಎಫ್ಐಆರ್ ದಾಖಲಿಸಿರುವುದೇ ಗಲಭೆಗೆ ಕಾರಣ ಎಂದು ಆರೋಪಿಸಿದ ಸಿದ್ದರಾಮಯ್ಯ, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗಲಭೆಯಲ್ಲಿ ಎಸ್ಡಿಪಿಐ ಕೈವಾಡವಿದೆಯೆಂದು ಆರೋಪಿಸಿದ ಬಿಜೆಪಿ ನಾಯಕರು, ಬಳಿಕ ಕಾಂಗ್ರೆಸ್ ಕಾರಣವೆಂದು ಆರೋಪಿಸಿದರು. ಮೊದಲಿಗೆ ಎಸ್ಡಿಪಿಐ ನಿಷೇಧ ಮಾಡುತ್ತೇವೆಂದು ಹೇಳಿಕೆ ನೀಡಿದ ನಾಯಕರೆಲ್ಲಾ ಈಗ ಸುಮ್ಮನಿದ್ದಾರೆ. ಎಸ್ಡಿಪಿಐ ಗಲಭೆಯಲ್ಲಿ ಭಾಗಿಯಾಗಿದ್ದರೆ ಆ ಪಕ್ಷವನ್ನು ನಿಷೇಧಿಸಿ, ಚುನಾವಣಾ ಆಯೋಗಕ್ಕೆ ಪತ್ರ ಬರೆಯಿರಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಈ ಬಗ್ಗೆ ಸದನದಲ್ಲಿ ಆಡಳಿತ ಪಕ್ಷ ಬಿಜೆಪಿ ನಾಯಕರು ಕೋಲಾಹಲವೆಬ್ಬಿಸಿದ್ದು, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯರ ಮೇಲೆ ಮುಗಿಬಿದ್ದು, ಅವರ ಮಾತು ಮುಂದುವರೆಸಲು ಅನುವು ಮಾಡಲಿಲ್ಲ. ಸದನದಲ್ಲಿ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಎದ್ದು ನಿಂತ ಮುಖ್ಯಮಂತ್ರಿ ಯಡಿಯೂರಪ್ಪ, ಸಿದ್ದರಾಮಯ್ಯರಿಗೆ ಮಾತನಾಡಲು ಅವಕಾಶ ಕೊಡಬೇಕು. ಅವರ ಸಂಪೂರ್ಣ ಮಾತು ಮುಗಿಸಲಿ, ಬಳಿಕ ನಮ್ಮ ಉತ್ತರವನ್ನು ನೀಡೋಣ, ಅವರ ಪ್ರಶ್ನೆಗಳಿಗೆ ಉತ್ತರ ನೀಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಉತ್ತರಿಸುವ ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿದರೂ, ಬಿಜೆಪಿ ಶಾಸಕರು ಗದ್ದಲು ಮುಂದುವರೆಸಿದ್ದಾರೆ. ಬಳಿಕ ಎದ್ದು ನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಯಡಿಯೂರಪ್ಪರ ವಿಶ್ವಾಸವನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ಇಂತಹ ಸೂಕ್ಷ್ಮ ವಿಚಾರಗಳನ್ನು ಸದನದಲ್ಲಿ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಬೇಕು. ನಮ್ಮ ಮಾತುಗಳಿಂದ ಶಾಂತವಾಗಿರುವ ಸಮಾಜದ ಸ್ವಾಸ್ಥ್ಯ ಹಾಳಾಗಬಾರದೆಂದು ಎಲ್ಲಾ ಶಾಸಕರಿಗೂ ಸಲಹೆ ನೀಡಿದರು.
ಈ ಇಬ್ಬರು ನಾಯಕರ ಸಮಯೋಚಿತ ಮಾತುಗಳಿಂದ ಸದನದ ಗದ್ದಲ ತಣ್ಣಗಾಗಿ ಸಿದ್ದರಾಮಯ್ಯ ತನ್ನ ಮಾತು ಪುನರಾರಂಭಿಸಿದರು.
ಬೆಂಗಳೂರು ಗಲಭೆ ಸರ್ಕಾರದ ವೈಫಲ್ಯವೆಂದ ಸಿದ್ದರಾಮಯ್ಯ, ಪೂರ್ವಯೋಜಿತ ಗಲಭೆಯಾಗಿದ್ದರೆ, ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಗುಪ್ತಚರ ದಳಕ್ಕೆ ಮೊದಲೇ ಮಾಹಿತಿ ಯಾಕೆ ಲಭ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಗಲಭೆ ಸಂಬಂಧಿಸಿ ಬಂಧನಕ್ಕೊಳಗಾಗಿರುವವರಲ್ಲಿ ಅಮಾಯಕರು ಸೇರಿದ್ದರೆ, ಅವರನ್ನು ಬಿಡುಗಡೆಗೊಳಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.