ಕರೋನಾ ಸೋಂಕು ದೃಢಪಟ್ಟ ಪ್ರಕರಣಗಳು ದೇಶದಲ್ಲಿ 750ರ ಗಡಿ ದಾಟಿವೆ. ರಾಜ್ಯದ ತುಮಕೂರು ಜಿಲ್ಲೆಯ ಒಂದು ಪ್ರಕರಣ ಸೇರಿದಂತೆ ಸಾವು ಕಂಡವರ ಸಂಖ್ಯೆ 20ಕ್ಕೇರಿದೆ.
ಲಾಕ್ ಡೌನ್ ನಡುವೆ ಜನಸಾಮಾನ್ಯರ ಬದುಕು ಹೈರಾಣಾಗಿರುವ ನಡುವೆ, ಇನ್ನೂ ಏಪ್ರಿಲ್ 15ರವರೆಗೆ ಜೀವನ ಹೇಗೆ ಎಂಬ ಚಿಂತೆ ಎಲ್ಲೆಲ್ಲೂ ಮನೆಮಾಡಿದೆ. ಒಂದು ಕಡೆ ಮಹಾಮಾರಿ ಕೋವಿಡ್-19ರ ಭೀತಿ, ಮತ್ತೊಂದು ನಿತ್ಯದ ಬದುಕಿನ ಸಂಕಟ. ಹಿಂದೆಂದೂ ಕಂಡುಕೇಳರಿಯದ ಭೀಕರ ವಿಪತ್ತಿನ ಹೊತ್ತಲ್ಲಿ ಇಡೀ ದೇಶ ಕ್ಷಣಕ್ಷಣವೂ ಆತಂಕದಲ್ಲೇ ಕಳೆಯುತ್ತಿರುವಾಗ, ಕರೋನಾ ಕುರಿತ ಆಸ್ಪತ್ರೆಗಳ ರಾಷ್ಟ್ರೀಯ ಟಾಸ್ಕ್ ಫೋರ್ಸ್ ಸಂಚಾಲಕ ವೈದ್ಯರು ನೀಡಿರುವ ಮಾಹಿತಿ ಬೆಚ್ಚಿಬೀಳಿಸಿದೆ.
ದಿ ಕ್ವಿಂಟ್ ಸುದ್ದಿ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಆಸ್ಪತ್ರೆಗಳ ಟಾಸ್ಕ್ ಫೋರ್ಸ್ ಸಂಚಾಲಕರಾದ ವೈದ್ಯ ಡಾ. ಗಿರ್ಧಾರ್ ಗ್ಯಾನಿ ಅವರು, ಕರೋನಾ ಸೋಂಕು ದೇಶದಲ್ಲಿ ಈಗಾಗಲೇ ಮೂರನೇ ಹಂತಕ್ಕೆ ಪ್ರವೇಶಿಸಿದೆ. ಆದರೆ, ಅದನ್ನು ನಾವಿನ್ನೂ ಅಧಿಕೃತವಾಗಿ ಹೆಸರಿಸಿಲ್ಲ. ಆದರೆ, ಸೋಂಕು ಈಗ ಸಾಮೂಹಿಕವಾಗಿ ಸಾಂಕ್ರಾಮಿಕದಂತೆ ಹರಡುವ ಹಂತವನ್ನು ತಲುಪಿದೆ. ಅದರಲ್ಲಿ ಮುಚ್ಚುಮರೆ ಏನಿಲ್ಲ ಎಂದಿದ್ದಾರೆ.
ಹಾಗೇ ಮತ್ತೊಂದು ಪ್ರಮುಖ ಅಂಶದ ಬಗ್ಗೆಯೂ ಗಮನ ಸೆಳೆದಿರುವ ಅವರು, ಈ ಹಂತವನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೇ ಹೋದರೆ, ಅನಾಹುತ ದೊಡ್ಡದಾಗಲಿದೆ. ಹಾಗಾಗಿ ಸಮುದಾಯದ ಮಟ್ಟದಲ್ಲಿ ಹರಡುತ್ತಿರುವ ಸೋಂಕು ಗುರುತಿಸುವ ನಿಟ್ಟಿನಲ್ಲಿ ಭಾರತ ಕೂಡಲೇ ವ್ಯಾಪಕ ಪ್ರಮಾಣದಲ್ಲಿ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಬೇಕಿದೆ. ಈ ವಿಷಯದಲ್ಲಿ ನಾವು ಈಗಾಗಲೇ ಬಹಳಷ್ಟು ಹಿಂದೆ ಬಿದ್ದಿದ್ದೇವೆ. ಹಾಗೇನಾದರೂ ನಾವು ಈಗಲೂ ಆ ಬಗ್ಗೆ ಗಂಭೀರ ಪ್ರಯತ್ನ ಮಾಡದೇ ಹೋದರೆ, ಅದಕ್ಕೆ ತೆರಬೇಕಾದ ಬೆಲೆ ಭೀಕರವಾಗಿರಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.
ಮಾರ್ಚ್ 24ರಂದು ದೇಶದ ಕೋವಿಡ್ -19 ವಿಪತ್ತಿನ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕರೆದಿದ್ದ ತಜ್ಞ ವೈದ್ಯರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಡಾ ಗ್ಯಾನಿ ಅವರು, ಯಾವುದೇ ಸೋಂಕು ದಿಢೀರ್ ಉಲ್ಬಣಗೊಳ್ಳುವುದು ಸಮುದಾಯದ ಮಟ್ಟದ ಸಾಂಕ್ರಾಮಿಕವಾಗಿ ಅದು ಹರಡುವ ಸಂದರ್ಭದಲ್ಲಿಯೇ. ಇದು ಬಹಳ ದುಸ್ತರವಾದ ಹಂತ. ಈ ಹಂತದಲ್ಲಿ ಸೋಂಕು ಜನಸಮುದಾಯದ ನಡುವೆ ಬಹಳ ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತದೆ. ಹಾಗಾಗಿ ಸೋಂಕು ತಗಲಿರುವ ವ್ಯಕ್ತಿಯನ್ನು ಮತ್ತು ಸೋಂಕಿನ ಮೂಲವನ್ನು ಗುರುತಿಸುವುದು ದುಸ್ತರವಾದ ಕೆಲಸ. ಅದರಲ್ಲೂ ಈವರೆಗೆ ವಿದೇಶ ಪ್ರಯಾಣ ಮಾಡಿದವರು ಮತ್ತು ಅವರ ನೇರ ಸಂಪರ್ಕಕ್ಕೆ ಬಂದವರಲ್ಲಿ ಮಾತ್ರ ರೋಗ ಕಾಣಿಸಿಕೊಂಡಿತ್ತು. ಇದೀಗ ಅಂತಹ ಯಾವುದೇ ನೇರ ಸಂಪರ್ಕವಾಗಲೀ, ಪ್ರಯಾಣ ಇತಿಹಾಸವಾಗಲೀ ಇಲ್ಲದೇ ಇರುವವರಿಗೂ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಈಗ ನಿಜವಾಗಿಯೂ ದೇಶದ ಆರೋಗ್ಯ ವ್ಯವಸ್ಥೆ ಮತ್ತು ಆಡಳಿತದ ಮುಂದೆ ಸವಾಲು ದೊಡ್ಡದಿದೆ. ಈವರೆಗೆ ವೈರಾಣು ಹೊಂದಿದ್ದರೂ ಯಾವುದೇ ರೋಗ ಲಕ್ಷಣ ಕಾಣಿಸಿಕೊಳ್ಳದವರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ದಿಢೀರನೇ ರೋಗ ಲಕ್ಷಣ ಕಾಣಿಸಿಕೊಳ್ಳತೊಡಗುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.
ಡಾ ಗ್ಯಾನಿಯವರ ಈ ಅಭಿಪ್ರಾಯದ ಬೆನ್ನಲ್ಲೇ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ಮೂಲದ ವ್ಯಕ್ತಿಯೊಬ್ಬರು, ಯಾವುದೇ ವಿದೇಶಿ ಪ್ರವಾಸ ಮಾಡದ, ಅಂತಹ ವ್ಯಕ್ತಿಗಳೊಂದಿಗೆ ಸಂಪರ್ಕವನ್ನೂ ಹೊಂದಿರದೇ ಇದ್ದರೂ ಸೋಂಕು ಉಲ್ಬಣಗೊಂಡು ಶುಕ್ರವಾರ ನಿಧನರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಕರೋನಾ ಸೋಂಕು ವ್ಯಕ್ತಿಗಳ ಹಂತ ದಾಟಿ ಈಗಾಗಲೇ ಸಮುದಾಯದ ಹಂತದಲ್ಲಿ ಹರಡಿದೆಯೇ ಎಂಬ ಚರ್ಚೆಗಳು ಆರಂಭವಾಗಿರುವಾಗ, ಡಾ ಗ್ಯಾನಿ ಅವರ ಈ ಮಾತುಗಳು ಮಹತ್ವ ಪಡೆದಿವೆ.
ಈ ಮೂರನೇ ಹಂತದಲ್ಲಿ ಇದ್ದಕ್ಕಿದ್ದಂತೆ ನಮ್ಮ ನಡುವೆ ರೋಗಿಗಳ ಸಂಖ್ಯೆ ಹತ್ತಾರು ಪಟ್ಟು ಹೆಚ್ಚಾಗಲಿದೆ. ಸಾಮಾನ್ಯ ಸಾಂಕ್ರಾಮಿಕದ ಹಂತದಿಂದ ಮಹಾಮಾರಿಯಾಗಿ ಬೆಳೆಯುವ ಈ ಹಂತದಲ್ಲಿ ಅಪಾರ ಪ್ರಮಾಣದ ವೈದ್ಯಕೀಯ ಸೌಲಭ್ಯ ಮತ್ತು ಸಿಬ್ಬಂದಿಯ ಅಗತ್ಯವಿರುತ್ತದೆ. ಜೊತೆಗೆ ಸಮುದಾಯದ ಮಟ್ಟದಲ್ಲಿ ವ್ಯಾಪಕ ಸೋಂಕು ಪತ್ತೆ ಕಾರ್ಯಾಚರಣೆ ಕೂಡ ನಡೆಯಬೇಕಾಗುತ್ತದೆ. ಆದರೆ, ನಾವು ಈ ವಿಷಯದಲ್ಲಿ ಬಹಳ ಹಿಂದೆ ಬಿದ್ದಿದ್ದೇವೆ. ಸರ್ಕಾರ ಈಗಲೂ ಸೋಂಕಿನ ಮೂರು ಲಕ್ಷಣ ಕಂಡುಬಂದವರನ್ನು ಮಾತ್ರ ಪರೀಕ್ಷೆಗೊಳಪಡಿಸುತ್ತಿದೆ. ರೋಗಿಯಲ್ಲಿ ಮೂರು ರೋಗ ಲಕ್ಷಣಗಳ ಪೈಕಿ ಯಾವುದಾದರು ಒಂದು ಲಕ್ಷಣವಿದ್ದರೆ ಅಂಥವರನ್ನು ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಇದು ಬಹಳ ಅಪಾಯಕಾರಿ. ಇಂತಹ ಹಳೆಯ ಪದ್ಧತಿ ಬಿಟ್ಟು, ವ್ಯಾಪಕ ಪರೀಕ್ಷೆ ನಡೆಸದೇ ಹೋದರೆ, ದೊಡ್ಡ ಅನಾಹುತಕ್ಕೆ ಕ್ಷಣಗಣನೆ ಆರಂಭವಾಗಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.
ಈ ನಡುವೆ, ಕೆಲವು ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಹಾಗೂ ಖ್ಯಾತ ಸೋಂಕು ಪ್ರಸರಣ ತಜ್ಞ ಡಾ. ರಮಣನ್ ಲಕ್ಷ್ಮೀನಾರಾಯಣ್ ಕೂಡ ಬಹುತೇಕ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈಗಾಗಲೇ ಭಾರತದಲ್ಲಿ ಸೋಂಕು ಮೂರನೇ ಹಂತ ತಲುಪಿದ್ದು ಸುಮಾರು 7-8 ಲಕ್ಷ ಮಂದಿ ಸೋಂಕಿತರಾಗಿರುವ ಅಂದಾಜಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಸಮುದಾಯದ ಮಟ್ಟದಲ್ಲಿ ವ್ಯಾಪಕ ಪರೀಕ್ಷೆಗಳನ್ನು ನಡೆಸಿ ಸೋಂಕಿತರನ್ನು ಗುರುತಿಸಿ ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ನೀಡದೇ ಹೋದರೆ, ಸೋಂಕಿನ ಟೈಂ ಬಾಂಬ್ ದಿಢೀರ್ ಸ್ಫೋಟಿಸಲಿದೆ ಎಂದು ಎಚ್ಚರಿಸಿದ್ದರು.
ಈ ನಡುವೆ, ಹಲವು ವಿದೇಶಿ ಮಾಧ್ಯಮಗಳು ಕೂಡ ಮಾರ್ಚ್ 27ರಿಂದ ಏಪ್ರಿಲ್ 4ರ ನಡುವಿನ ಅವಧಿ ಭಾರತದ ಪಾಲಿಗೆ ನಿರ್ಣಾಯಕ. ಈ ಅವಧಿಯಲ್ಲಿ ಕರೋನಾ ಭಾರತದ ಜನಸಮುದಾಯದ ನಡುವೆ ಎಷ್ಟರಮಟ್ಟಿಗೆ ಹರಡಿದೆ ಎಂಬುದು ಬಹಿರಂಗವಾಗಲಿದೆ. ಆ ಹೊತ್ತಿಗೆ ಇನ್ ಕ್ಯುಬೇಷನ್ ಅವಧಿ ಮುಗಿದು, ಬಹುತೇಕರಲ್ಲಿ ಬಾಹ್ಯ ರೋಗ ಲಕ್ಷಣಗಳು ಕಾಣಿಸಿಕೊಳ್ಳಲಿವೆ. ಆ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಅವಧಿಯಲ್ಲಿ ಎಷ್ಟು ಸಮರೋಪಾದಿಯಲ್ಲಿ ರೋಗ ಪತ್ತೆ ಮತ್ತು ಸೋಂಕಿತರ ಪ್ರತ್ಯೇಕಿಸುವ ಕಾರ್ಯ ಮಾಡಲಿದೆ ಎಂಬುದರ ಮೇಲೆ ಭವಿಷ್ಯದ ಸಾವುನೋವಿನ ಪ್ರಮಾಣ ನಿಂತಿದೆ. ಅದರಲ್ಲೂ ಮುಖ್ಯವಾಗಿ ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಾಂಧ್ರತೆ ಹೊಂದಿರುವ, ಇಕ್ಕಟ್ಟಿನ ವಸತಿಪ್ರದೇಶಗಳನ್ನು ಹೊಂದಿರುವ, ಜಾಗತಿಕ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾಗಿರುವ, ಮತ್ತು ಅಪೌಷ್ಟಿಕತೆ, ಮಲಿನ ಕುಡಿಯುವ ನೀರು, ಅನೈರ್ಮಲ್ಯದಂತಹ ಜ್ವಲಂತ ಸಮಸ್ಯೆಗಳನ್ನು ಹಾಸಿಹೊದ್ದು ಮಲಗಿರುವ ವ್ಯವಸ್ಥೆಯಲ್ಲಿ ರೋಗ ಸೃಷ್ಟಿಸಬಹುದಾದ ಮಾರಣಹೋಮ ಜಾಗತಿಕ ಮಟ್ಟದಲ್ಲಿ ಆಘಾತಕಾರಿಯಾಗಿರಲಿದೆ. ಆ ಹಿನ್ನೆಲೆಯಲ್ಲಿ ನೋಡಿದರೆ, ಭಾರತವೇ ಜಗತ್ತಿನ ಇತಿಹಾಸದಲ್ಲೇ ಕಂಡುಕೇಳರಿಯದ ಪ್ರಮಾಣದ ಸಾವುನೋವಿಗೆ ವೇದಿಕೆಯಾಗಲಿದೆ. ಕರೋನಾ ಪರಿಣಾಮ ಅಷ್ಟೊಂದು ಭೀಕರವಾಗಿರಲಿದೆ ಎಂದು ನ್ಯೂಯಾರ್ಕ್ ಟೂಮ್ಸ್, ರಷ್ಯಾ ಟುಡೆಯಂತಹ ಪತ್ರಿಕೆಗಳು ಕೂಡ ಭವಿಷ್ಯ ನುಡಿದಿವೆ.
ಆದರೆ, ಸದ್ಯ ಜಿಲ್ಲಾ ಮಟ್ಟದಲ್ಲಿ ಆಸ್ಪತ್ರೆಗಳನ್ನು ಗುರುತಿಸುವ ಮತ್ತು ಲಾಕ್ ಡೌನ್ ನಿರ್ವಹಣೆಯಲ್ಲಿಯೇ ನಿರತವಾಗಿರುವ ಸರ್ಕಾರಿ ಆಡಳಿತ ಯಂತ್ರ, ಈವರೆಗೆ ದೇಶಾದ್ಯಂತ ಕನಿಷ್ಟ ಪ್ರಮಾಣದಲ್ಲಿ ಅಗತ್ಯವಿರುವ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ತೆಗಳನ್ನು ವ್ಯವಸ್ಥೆ ಮಾಡಿಲ್ಲ. ಅಗತ್ಯ ವೈದ್ಯಕೀಯ ಸಿಬ್ಬಂದಿ, ಅಗತ್ಯ ಪ್ರಮಾಣದ ವೆಂಟಿಲೇಟರ್, ಪಿಪಿಇ, ಟೆಸ್ಟಿಂಗ್ ಕಿಟ್ ಮುಂತಾದ ತೀರಾ ಅನಿವಾರ್ಯ ತಯಾರಿಗಳನ್ನು ಕೂಡ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಈಗಲೂ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ಲಾಕ್ ಡೌನ್ ಕಟ್ಟು ನಿಟ್ಟು ಜಾರಿಯ ಬಗ್ಗೆ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಬಗ್ಗೆಯೇ ಗಮನ ಹರಿಸುತ್ತಿದ್ದಾರೆಯೇ ವಿನಃ ದೇಶದಲ್ಲಿ ಎಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಆಸ್ಪತ್ರೆಗಳನ್ನು ಸಜ್ಜುಮಾಡಲಾಗಿದೆ. ಎಷ್ಟು ಸಿಬ್ಬಂದಿ ಸಜ್ಜಾಗಿದ್ದಾರೆ. ಅವರಿಗೆ ಯಾವೆಲ್ಲಾ ಸುರಕ್ಷಾ ಸಾಧನ- ಸಲಕರಣೆ ನೀಡಲಾಗಿದೆ ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗ ಮಾಡುತ್ತಿಲ್ಲ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಆರೋಗ್ಯ ಸಚಿವರು ಕೂಡ ಈ ವಿಷಯದಲ್ಲಿ ಬಹುತೇಕ ಮೌನ ವಹಿಸಿದ್ದಾರೆ.
ಹಾಗಾಗಿ, ಜನಸಮೂಹ ಮಟ್ಟದಲ್ಲಿ ಶಂಕಾಸ್ಪದವರು ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದ ಮೂರನೇ ಹಂತದ ಜನರ ತಪಾಸಣೆ ಮತ್ತು ವೈರಾಣು ಪರೀಕ್ಷೆಯ ನಿಟ್ಟಿನಲ್ಲಿ ಸರ್ಕಾರ ಇನ್ನೂ ಯಾವುದೇ ತಯಾರಿ ಮಾಡಿಕೊಂಡಿಲ್ಲ. ವಾರ್ಡ್ ಮಟ್ಟದಲ್ಲಿ ತಪಾಸಣೆ ನಡೆಸಲಾಗುವುದು ಎಂದು ಕೆಲವು ರಾಜ್ಯ ಸರ್ಕಾರಗಳು ಹೇಳಿದ್ದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಮುಖ್ಯವಾಗಿ ಇಂತಹ ಪರೀಕ್ಷೆಗೆ ಬೇಕಾಗುವ ಅಪಾರ ಪ್ರಮಾಣದ ಪರೀಕ್ಷಾ ಕಿಟ್ ಗಳ ಬೇಡಿಕೆ ಮತ್ತು ಪೂರೈಕೆಯ ವಿಷಯದಲ್ಲಿಯೇ ಕೇಂದ್ರ ಸರ್ಕಾರಕ್ಕೆ ಈವರೆಗೆ ಸ್ಪಷ್ಟ ಮಾಹಿತಿ ಇಲ್ಲ ಎನ್ನಲಾಗುತ್ತಿದೆ. ಅದಕ್ಕೆ ಬದಲಾಗಿ, ಕೇಂದ್ರ ಸರ್ಕಾರ ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಬಂಧಿಯಾಗಿರುವ ಭಾರತೀಯರ ಮನರಂಜನೆಗಾಗಿ ರಾಮಾಯಣ ಟಿವಿ ಧಾರವಾಹಿಯನ್ನು ಮರು ಪ್ರಸಾರ ಮಾಡುವುದಾಗಿ ಘೋಷಿಸಿದೆ. ಸಾವಿನ ಕ್ಷಣಗಣನೆಯ ಹೊತ್ತಲ್ಲಿ ಜನರನ್ನು ಮೈಮರೆಸುವ ಯಕ್ಷಣಿ ತಂತ್ರಗಾಗಿ ಈ ಪ್ರಯತ್ನ ಕಾಣತೊಡಗಿದೆ!
ಹಾಗಾಗಿ, ಕನಿಷ್ಟ ತಯಾರಿ ಇಲ್ಲದ, ಕನಿಷ್ಠ ಅಗತ್ಯ ಸೌಲಭ್ಯ ಮತ್ತು ಸಿಬ್ಬಂದಿಯನ್ನೂ ಸಜ್ಜು ಮಾಡದ ಸರ್ಕಾರದ ಉದಾಸೀನ ಧೋರಣೆಯ ಪರಿಣಾಮವಾಗಿ ಕರೋನಾ ವೈರಾಣು ಸೋಂಕು ಸುನಾಮಿಯೋಪಾದಿಯಲ್ಲಿ ಅಪ್ಪಳಿಸಲು ಕ್ಷಣಗಣನೆ ಆರಂಭವಾಗಿದೆ.