ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಸಾವಿರಾರು ಆಕಾಂಕ್ಷಿಗಳು ಅರ್ಜಿ ಹಾಕಿಕೊಂಡು ಪೊಲೀಸ್ ಇಲಾಖೆ ಸೇರಿಕೊಳ್ಳಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಪೊಲೀಸ್ ಆಗಬೇಕು ಎಂದು ಕಾಯುತ್ತಿದ್ದ ಆಕಾಂಕ್ಷಿಗಳಿಗೆ ಸಣ್ಣದೊಂದು ಸಮಸ್ಯೆ ಎದುರಾಗಿದೆ ಅದುವೇ ವಯೋಮಿತಿ ವಿಚಾರ.
ದೇಶದ ಹಲವು ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ವಯೋಮಿತಿಯನ್ನು ಹೆಚ್ಚಳ ಮಾಡಿ ನೂತನ ಅಧಿಸೂಚನೆ ಹೊರಡಿಸಲಾಗಿದೆ. ಇದು ಕರೋನಾ ಸಂಕಷ್ಟದಲ್ಲಿ ಸಿಲುಕಿರುವ ಅಭ್ಯರ್ಥಿಗಳಿಗೆ ಸಂತಸವನ್ನುಂಟು ಮಾಡಿದೆ. ಈ ಬಗ್ಗೆ ಪ್ರತಿಧ್ವನಿ ಕೂಡ ವರದಿ ಮಾಡಿತ್ತು. ರಾಜ್ಯ ಸರ್ಕಾರ ಕೂಡ ಈ ಕುರಿತು ಗಮನ ಹರಿಸಬೇಕು. ವಯೋಮಿತಿ ಹೆಚ್ಚಳ ಮಾಡುವ ಮೂಲಕ ನಮಗೂ ಅವಕಾಶ ಸಿಗುವಂತೆ ಮಾಡಬೇಕು ಎಂದು ಆಕಾಂಕ್ಷಿಗಳು ಆಗ್ರಹ ಮಾಡಿದ್ದರು.
Also Read: ದೇಶಕ್ಕೆಲ್ಲಾ ಒಂದು ನ್ಯಾಯ..! ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು..!!
ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ. ಅನ್ಯ ರಾಜ್ಯಗಳಲ್ಲಿ ವಯೋಮಿತಿ ಏರಿಕೆ ಮಾಡಿರುವಂತೆ ನಮ್ಮ ರಾಜ್ಯದಲ್ಲೂ ವಯೋಮಿತಿ ಏರಿಕೆ ಮಾಡುವ ಮೂಲಕ ಸಾವಿರಾರು ಜನರಿಗೆ ಅನುಕೂಲ ಮಾಡಿಕೊಂಡುವಂತೆ ಮನವಿ ಮಾಡಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾನ್ಸ್‌ಟೇಬಲ್ ಹುದ್ದೆಗೆ ಕನಿಷ್ಠ 19 ಹಾಗೂ ಗರಿಷ್ಠ 25 ಮತ್ತು ಎಸ್‌ಸಿ ಎಸ್‌ಎಸ್ಟಿ ಅಭ್ಯರ್ಥಿಗಳಿಗೆ 27 ವರ್ಷಗಳೆಂದು ನಿಗದಿ ಮಾಡಲಾಗಿದೆ. ಇದೀಗ ಬೇರೆ ರಾಜ್ಯಗಳಲ್ಲಿ ಹೆಚ್ಚಳ ಮಾಡಿರುವಂತೆ ಹೆಚ್ಚಳ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ರಾಜ್ಯದ ನಾನಾ ಮೂಲೆಗಳಿಂದ ಸ್ವತಃ ಗೃಹ ಸಚಿವರಿಗೆ ಆಕಾಂಕ್ಷಿತರು ಕರೆ ಮಾಡಿ ಮಾತನಾಡಿದ್ದು, ವಯೋಮಿತಿ ಹೆಚ್ಚಳಕ್ಕೆ ಮನವಿ ಮಾಡಿಕೊಂಡಿದ್ದಾರೆ. ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದು ಅಭ್ಯರ್ಥಿಗಳೆಗೆ ಭರವಸೆ ಕೊಟ್ಟಿದ್ದಾರೆ.
Also Read: ರಾಜ್ಯ ಆರ್ಥಿಕ ಬಿಕ್ಕಟ್ಟು: ಗೃಹ ರಕ್ಷಕ ಇಲಾಖೆಯಲ್ಲಿ ಭಾರೀ ಉದ್ಯೋಗ ಕಡಿತ
ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳುವ ನಿರೀಕ್ಷೆಯಲ್ಲಿ ಇದ್ದಾರೆ ಸಾವಿರಾರು ಆಕಾಂಕ್ಷಿಗಳು. ಬಸವರಾಜ ಬೊಮ್ಮಾಯಿ ಕರೋನಾ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಕಾನ್ಸ್‌ಟೇಬಲ್ ಹುದ್ದೆಯ ಆಕಾಂಕ್ಷಿಗಳ ಮನವಿಗೆ ಸ್ಪಂದಿಸುತ್ತಾರಾ ಎನ್ನುವ ಪ್ರಶ್ನಾರ್ಥಕ ಚಿನ್ಹೆಗೆ ಉತ್ತರ ಸಿಗಲಿದೆ. ಬಹುತೇಕ ವಯೋಮಿತಿ ಹೆಚ್ಚಳದ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ ಎನ್ನಲಾಗಿದೆ.
