ಕರೋನಾ ಸೋಂಕಿನ ಕುರಿತಾಗಿ ಜನರಲ್ಲಿನ ಭಯ ಹೋಗಲಾಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸೋತಿವೆ. 21 ದಿನಗಳ ಲಾಕ್‌ಡೌನ್‌ನಿಂದ ಕರೋನಾವನ್ನು ನಿರ್ನಾಮ ಮಾಡಲು ಹೊರಟವರು ಇಂದು ನೀವು ಬದುಕಬೇಕಾದರೆ ಮನೆಯಲ್ಲಿಯೇ ಇರಿ ಎಂದು ಹೇಳಿ ತಣ್ಣಗೆ ಕುಳಿತಿದ್ದಾರೆ. ರಾಜ್ಯ ಸರ್ಕಾರವೂ ಕರೋನಾ ವಿರುದ್ದ ಎಲ್ಲಾ ರೀತಿಯ ಜಾಗೃತೆಯನ್ನು ತೆಗೆದುಕೊಂಡಿದ್ದೇವೆ ಎಂದು ಹೇಳುತ್ತಲೇ, ಸೋಂಕಿನ ತೀವೃತೆಯನ್ನು ತಡೆಯುವಲ್ಲಿ ತಡೆಯುವಲ್ಲಿ ವಿಫಲವಾಗುತ್ತಾ ಇದೆ.
ಇದಕ್ಕೆಲ್ಲಾ ಮುಕುಟಮಣಿ ಎಂಬಂತೆ ರಾಜ್ಯದ ಸಚಿವರು ನೀಡುವ ಹೇಳಿಕೆಗಳು ಮತ್ತು ಮಾಡುವ ಅನಾಚಾರ ಜನರನ್ನು ಗೊಂದಲಕ್ಕೆ ತಳ್ಳುತ್ತಿದೆ. ಭಾನುವಾರ ಲಾಕ್‌ಡೌನ್ ಇದ್ದರೂ ಪ್ರವಾಸ ಮಾಡಿ ಪಾರ್ಟಿ ಮಾಡಿ ಮಜಾ ಮಾಡಿದ ರಾಜ್ಯದ ರಾಜಕಾರಣಿಗಳು ಕುರಿತು ಪ್ರತಿಧ್ವನಿ ವಿಸ್ತೃತವಾದ ವರದಿ ಪ್ರಕಟಿಸಿತ್ತು. ಈಗ ರಾಜ್ಯದ ಕ್ಯಾಬಿನೆಟ್ ದರ್ಜೆ ಸಚಿವರ ಹೇಳಿಕೆಗಳು ಜನರನ್ನು ಗೊಂದಲದ ಗೂಡಾಗಿಸುತ್ತಿವೆ.
ಮಂಡ್ಯದಲ್ಲಿ ಮಾತನಾಡಿರುವ ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಕೋವಿಡ್-19 ಗೆ ಉತ್ತಮವಾದ ಔಷಧಗಳು ಲಭ್ಯವಿದೆ ಹಾಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಸೋಂಕಿತರಲ್ಲಿ 90% ಜನರು ಆರಾಮವಾಗಿರುತ್ತಾರೆ. 5-6% ಸೋಂಕಿತರು ಮಾತ್ರ ಆಸ್ಪತ್ರೆಗೆ ಬರುವ ಅವಶ್ಯಕತೆ ಇರುತ್ತದೆ. ಅದರಲ್ಲೂ ಸಣ್ಣ ಪ್ರಮಾಣದಷ್ಟು ಸೋಂಕಿತರು ಮಾತ್ರ ತುಂಬಾ ಗಂಭೀರವಾಗಿ ಬಾಧೆಗೊಳಗಾಗುತ್ತಾರೆ. ಎಂದು ಹೇಳಿದ್ದಾರೆ.
“ಸರ್ಕಾರ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಮಾಡಿದೆ. ಹಾಗಾಗಿ ಜನರು ಈ ಕುರಿತಾಗಿ ಭಯಪಡಬೇಕಾದ ಅಗತ್ಯವಿಲ್ಲ. ಸರ್ಕಾರದ ಬಳಿ ಸಾಕಷ್ಟು ಹಣ ಇದೆ. ಯಾವುದೇ ಕೊರತೆ ಇಲ್ಲ. ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುವುದು,” ಎಂಬುದು ಡಿಸಿಎಂ ಮಾತುಗಳು.
ಇವರು ಜನರ ಬಳಿ ಸತ್ಯವನ್ನು ಮರೆಮಾಚಿ ಧೈರ್ಯ ತುಂಬಲು ಪ್ರಯತ್ನಿಸಿದರೋ ಇಲ್ಲ, ನಿಜವಾಗಿಯೂ ಕರೋನಾವನ್ನು ಎದುರಿಸಲು ಸರ್ಕಾರ ಸಜ್ಜಾಗಿದೆಯೋ ಎಂಬ ಕುರಿತು ಸಂಶಯ ಮೂಡು ಬರುತ್ತಿದೆ. ಈ ರೀತಿಯ ಸಂಶಯ ಮೂಡ ಬರಲು ಪ್ರಮುಖ ಕಾರಣ ಡಿಸಿಎಂ ಅವರ ಸಹೋದ್ಯೋಗಿ ಹಾಗೂ ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಜೆ ಸಿ ಮಾಧುಸ್ವಾಮಿ ಅವರ ಹೇಳಿಕೆ.
“ದುರ್ದೈವ, ನಮ್ಮ ಜಿಲ್ಲೆಯಲ್ಲಿ ಕೂಡಾ ಕೋವಿಡ್ ಪ್ರಕರಣಗಳು ಶೀಘ್ರವಾಗಿ ಬೆಳೆಯುತ್ತಾ ಇವೆ. ಜಿಲ್ಲಾಡಳಿತ ಎಷ್ಟೇ ಶ್ರಮ ಪಟ್ಟರೂ, ಇದನ್ನು ನಿಗ್ರಹ ಮಾಡುವುದು ಕಷ್ಟ ಎನ್ನುವ ಸ್ಥಿತಿಗೆ ನಾವು ತಲುಪಿದ್ದೀವಿ,” ಎಂಬ ಮಾತುಗಳನ್ನು ತುಮಕೂರಿನಲ್ಲಿ ಮಾಧುಸ್ವಾಮಿ ಹೇಳಿದ್ದಾರೆ.

ಇನ್ನೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ ಸಚಿವ ಮಾಧುಸ್ವಾಮಿ ಅವರು, ತುಮಕೂರಿನಲ್ಲಿ ಕರೋನಾ ಸೋಂಕಿನ ಸಮುದಾಯ ಪ್ರಸರಣ ಆರಂಭವಾಗಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳ, ತಜ್ಞರ ಸಲಹೆಯ ಮೇರೆಗೆ ಈ ವಿಚಾರವನ್ನು ಮಾಧಸ್ವಾಮಿ ಬಹಿರಂಗಪಡಿಸಿದರೋ ಇಲ್ಲ ತಮ್ಮ ಸ್ವಂತ ವಿಚಾರವನ್ನು ಹೇಳಿದರೋ ಗೊತ್ತಿಲ್ಲ, ಆದರೆ ಅವರು ಬಹಿರಂಗ ಪಡಿಸಿದ ವಿಚಾರ ನಿಜಕ್ಕೂ ಗಂಭಿರವಾದದ್ದು.
ಹೀಗೆ ಒಂದು ಕಡೆ ಸೋಂಕನ್ನು ನಿಯಂತ್ರಿಸಲು ನಾವು ವಿಫಲರಾಗುತ್ತಿದ್ದೇವೆ ಎಂದು ಮಾಧುಸ್ವಾಮಿ ಹೇಳಿದರೆ ಸೋಂಕನ್ನು ಖಂಡಿತ ತಡೆಯಬಹುದು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ. ಹಾಗಾದರೆ ಇವರಿಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ?
ಕರೋನಾ ಸೋಂಕಿನ ಕುರಿತಾದ ಅಂಕಿ ಅಂಶಗಳನ್ನು ಸರ್ಕಾರ ಸರಿಯಾಗಿ ಬಿಡುಗಡೆಗೊಳಿಸುತ್ತಿಲ್ಲ ಎಂಬ ಅಪವಾದ ಹಿಂದಿನಿಂದಲೂ ಕೇಳಿ ಬರುತ್ತಿದೆ. ಪ್ರತಿಧ್ವನಿಯಲ್ಲೂ ಈ ಕುರಿತಾದ ಲೇಖನಗಳು ಪ್ರಕಟವಾಗಿದೆ. ಸಾರ್ವಜನಿಕರಲ್ಲಿ ಭಯ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ನಿಜವಾದ ವಿಚಾರವನ್ನು ಬಹಿರಂಗಪಡಿಸಲು ಸರ್ಕಾರ ಇಚ್ಚಿಸುತ್ತಿಲ್ಲವೋ ಅಥವಾ ಎಲ್ಲಿ ತಮ್ಮ ವೈಫಲ್ಯತೆಯು ಜನರೆದುರು ಬೆತ್ತಲಾಗುವುದೋ ಎಂಬ ವಿಚಾರಕ್ಕೆ ಸರ್ಕಾರ ಸತ್ಯ ಹೇಳುತ್ತಿಲ್ಲವೋ?
ರಾಜಕೀಯ ಜಂಗೀಕುಸ್ತಿ ಮಾಡಿ ಅಧಿಕಾರ ಹಿಡಿದರಷ್ಟೇ ಸಾಲದು, ಯಾವ ಜನರಿಂದ ಮತಗಳನ್ನು ಪಡೆದು ಅಧಿಕಾರಕ್ಕೆ ಏರಿದರೋ, ಅವರಿಗೆ ದ್ರೋಹವಾಗದ ರೀತಿಯಲ್ಲಿ ಆಡಳಿತವನ್ನೂ ನಡೆಸಬೇಕು. ಜನರಿಗೆ ನಿಜ ವಿಚಾರ ಏನು ಎಂಬುದು ಅರಿವಾಗಬೇಕು. ಅದು ಬಿಟ್ಟು, ರಾಜ್ಯವನ್ನು ಆಳುವ ನಾಯಕರು ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಾ ಬಂದರೆ, ಜನರಲ್ಲಿ ಗೊಂದಲವು ಹೆಚ್ಚಾಗುತ್ತದೆ. ಈಗಾಗಲೇ ಸುದ್ದಿ ಮಾಧ್ಯಮಗಳು ಜನರ ಮನಸ್ಸಿನಲ್ಲಿ ಕರೋನಾ ಕುರಿತು ಬಿತ್ತಿರುವ ಭಯ ಇನ್ನಷ್ಟು ಹೆಚ್ಚಾಗುತ್ತದೆ.
ಇನ್ನದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಜನರ ಬಳಿ ಸತ್ಯ ಹೇಳುವುದನ್ನು ಕಲಿಯಲಿ. ಕರೋನಾ ಸೋಂಕಿತರ ಅಂಕಿ ಅಂಶಗಳಿಂದ ಹಿಡಿದು ಸಮುದಾಯ ಪ್ರಸರಣದ ಕುರಿತಾದ ವಿಚಾರಗಳು ಜನಸಾಮಾನ್ಯರಿಗೂ ತಿಳಿಯಲಿ. ಕಟ್ಟುನಿಟ್ಟಿನ ಲಾಕ್‌ಡೌನ್ ಹೇರಲು ಹಿಂದೆ ಮುಂದೆ ನೋಡುವ ರಾಜಕಾರಣಿಗಳು, ಜನರಿಗೆ ಸತ್ಯ ವಿಚಾರವನ್ನು ತಿಳಿಸಿ ಕನಿಷ್ಟ ಅವರಾದರೂ ತಮ್ಮ ಸುರಕ್ಷತೆಯ ಕುರಿತು ಗಮನ ಹರಿಸುವಂತೆ ತಿಳಿಸಲಿ.