ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬಂತೆ ಇದೀಗ ಒತ್ತಡ, ಭಿನ್ನಮತಗಳಿಗೆ ವಿಳಂಬವೇ ಮದ್ದು ಎಂಬ ಮಾತು ರಾಜಕೀಯ ವಲಯದಲ್ಲಿ ಉದ್ಭವವಾಗಿದೆ. ಸಮಸ್ಯೆ ಬಗೆಹರಿಸಲು ಕಷ್ಟಸಾಧ್ಯವಾಗಿರುವಾಗ ವಿಳಂಬ ಧೋರಣೆ ಅನುಸರಿಸಿ ಆಕಾಂಕ್ಷಿಗಳಲ್ಲಿ ಒಂದು ರೀತಿಯ ಹತಾಷೆಯ ಭಾವನೆ ಬರುವಂತೆ ಕಾಲಹರಣ ಮಾಡುವ ಪದ್ಧತಿಯನ್ನು ರಾಜಕೀಯ ಪಕ್ಷಗಳು ಜಾರಿಗೆ ತಂದಿವೆ. ಆ ಮೂಲಕ ಸಾಕಷ್ಟು ಪ್ರಯತ್ನಗಳ ನಡುವೆಯೂ ಶಮನಗೊಳ್ಳದ ಒತ್ತಡ, ಬಿನ್ನಮತಗಳಿಗೆ ಮದ್ದೆರೆಯುವ ಕೆಲಸಕ್ಕೆ ರಾಜಕೀಯ ಪಕ್ಷಗಳ ವರಿಷ್ಠರು ಮುಂದಾಗುತ್ತಿದ್ದಾರೆ.
ಹೌದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜ್ಯ ಕಾಂಗ್ರೆಸ್ ನಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ನೇಮಕ, ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕ ಸ್ಥಾನದ ಆಯ್ಕೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವರಿಷ್ಠರು ಅನುಸರಿಸುತ್ತಿರುವ ಈ ತಂತ್ರಗಾರಿಕೆ ಆಕಾಂಕ್ಷಿಗಳಲ್ಲಿ ಬೇಸರ ತರಿಸುತ್ತಿರುವುದಲ್ಲದೆ, ಈ ಕುರಿತಂತೆ ದಿನಕ್ಕೊಂದು ಊಹಾಪೋಹಗಳು ಸೃಷ್ಟಿಯಾಗಿ ಗೊಂದಲ ನಿರ್ಮಾಣವಾಗುತ್ತಿದೆ. ಇದರಿಂದ ಆಕಾಂಕ್ಷಿಗಳು, ಮುಖಂಡರು ರೋಸಿಹೋಗಿ ಹೈಕಮಾಂಡ್ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ವಿಧಾನಸಭೆ ಉಪ ಚುನಾವಣೆ ಮುಗಿದು, ಫಲಿತಾಂಶ ಹೊರಬಂದು ಬಿಜೆಪಿ ಸರ್ಕಾರ ಭದ್ರವಾಗಿ ಒಂದೂವರೆ ತಿಂಗಳು ಕಳೆದಿದೆ. ಫಲಿತಾಂಶ ಹೊರಬಿದ್ದು ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದ ಮಾರನೇ ದಿನವೇ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆ ಕೆಲಸ ಪೂರೈಸಲು ಈಗಲೂ ಪರದಾಡುತ್ತಿದ್ದಾರೆ. ಒಂದಲ್ಲಾ ಒಂದು ಕಾರಣದಿಂದ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಂದಕ್ಕೆ ಹೋಗುತ್ತಲೇ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ವರಿಷ್ಠರ ಮಧ್ಯೆ ನಾ ಕೊಡೆ, ನೀ ಬಿಡೆ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನದ ಪರಿಸ್ಥೀತಿಯೂ ಇದೇ ರೀತಿಯಾಗಿದೆ. ಉಪ ಚುನಾವಣೆ ಫಲಿತಾಂಶ ಹೊರಬಿದ್ದ ದಿನವೇ ಸೋಲಿನ ಹೊಣೆ ಹೊತ್ತು ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಇಲ್ಲೂ ರಾಜ್ಯ ನಾಯಕರ ಒತ್ತಡ, ಲಾಬಿ, ಪರಸ್ಪರ ಕಾಲೆಳೆಯುವ ರಾಜಕಾರಣದಿಂದಾಗಿ ಈ ಮೂರೂ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಇತ್ಯರ್ಥಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಗೆ ಸಾಧ್ಯವಾಗಿಲ್ಲ.
ಇದರ ಪರಿಣಾಮ ಸಚಿವ ಸಂಪುಟ ವಿಸ್ತರಣೆ ಮೊದಲೋ ಅಥವಾ ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಮೊದಲೋ ಎಂಬ ಪ್ರಶ್ವೆ ಉದ್ಭವವಾಗಿದ್ದು, ಉತ್ತರವಂತೂ ಇದುವರೆಗೆ ಸಿಕ್ಕಿಲ್ಲ. ಇನ್ನೇನು ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ ಎನ್ನುವಷ್ಟರಲ್ಲಿ ಮತ್ತೆ ಮುಹೂರ್ತ ಮುಂದಕ್ಕೆ ಹೋಗುತ್ತದೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಂತಿಮಗೊಂಡಿದೆ. ಘೋಷಣೆಯೊಂದೇ ಬಾಕಿ. ಇದರೊಂದಿಗೆ ಕಾರ್ಯಾಧ್ಯಕ್ಷರ ನೇಮಕ, ಶಾಸಕಾಂಗ ಪಕ್ಷದ ನಾಯಕ, ಪ್ರತಿಪಕ್ಷ ನಾಯಕನ ಕುರಿತೂ ನಿರ್ಧಾರವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಇನ್ನೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದ ಗೊಂದಲವೇ ಬಗೆಹರಿದಂತೆ ಕಾಣುತ್ತಿಲ್ಲ.
ಸಂಪುಟ ವಿಸ್ತರಣೆ ಪಟ್ಟಿ ಸಿದ್ಧವಾದರೂ ಒಪ್ಪಿಗೆ ಸಿಗುತ್ತಿಲ್ಲ
ವಿದೇಶ ಪ್ರವಾಸದಿಂದ ಜ. 24ರಂದು ವಾಪಸಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ. ಈ ವಿಚಾರದಲ್ಲಿ ಮತ್ತೆ ದೆಹಲಿಗೆ ಹೋಗುವುದಿಲ್ಲ ಎಂದು ಹೇಳಿದ್ದರು. ಈ ಮಧ್ಯೆ ಬುಧವಾರ ಅಥವಾ ಗುರುವಾರ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ ಎಂದೂ ಹೇಳಲಾಗಿತ್ತು. ಆದರೆ, ಅದು ಮತ್ತೆ ಮುಂದೂಡಿಕೆಯಾಗಿದ್ದು, ವರಿಷ್ಠರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ದೆಹಲಿಗೆ ಹೋಗುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿಗಳು ಗುರುವಾರ ದೆಹಲಿಗೆ ಹೋಗುವ ಸಾಧ್ಯತೆ ಇದ್ದು, ಅದಾದ ಬಳಿಕವೇ ದಿನಾಂಕ ಪಕ್ಕಾ ಆಗಲಿದೆ.
ಸಂಪುಟಕ್ಕೆ ಯಾರನ್ನೆಲ್ಲಾ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಯಡಿಯೂರಪ್ಪ ಅವರು ಈಗಾಗಲೇ ಒಂದು ಪಟ್ಟಿ ಸಿದ್ಧಪಡಿಸಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಮೂಲಕ ದೆಹಲಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತೊಡಗಿಕೊಂಡಿರುವ ವರಿಷ್ಠರು ಇನ್ನೂ ಈ ಬಗ್ಗೆ ಗಮನಹರಿಸಿಲ್ಲ.
ಉಪಮುಖ್ಯಮಂತ್ರಿ ಹುದ್ದೆಯ ಲಾಬಿ ಮತ್ತು ಸಚಿವಾಕಾಂಕ್ಷಿಗಳ ಲಾಬಿ ಮತ್ತೆ ದೆಹಲಿವರೆಗೆ ತಲುಪಿದ್ದರಿಂದಲೇ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ಈ ವಿಚಾರದಲ್ಲಿ ತಮ್ಮ ನಿಲುವನ್ನು ಈಗಾಗಲೇ ವರಿಷ್ಠರಿಗೆ ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮುಂದೆ ನೀವು ಹೇಳಿದಂತೆ ಆಗಲಿ. ಅದರಿಂದ ಸಮಸ್ಯೆಗಳು ಉದ್ಭವವಾಗದಂತೆ ನೀವೇ ನೋಡಿಕೊಳ್ಳಬೇಕಾಗುತ್ತದೆ ಎಂಬ ಸಂದೇಶವನ್ನೂ ತಲುಪಿಸಿದ್ದಾರೆ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ವರಿಷ್ಠರು, ಅಂತಿಮ ನಿರ್ಧಾರ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ.
ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿಗೆ ಬಂದು ಗೆದ್ದಿರುವ 11 ಶಾಸಕರ ಪೈಕಿ 11 ಮಂದಿಗೂ ಸಚಿವ ಸ್ಥಾನ ನೀಡಬೇಕು. ಅದು ಸಾಧ್ಯವಾಗದೇ ಇದ್ದರೆ 8ರಿಂದ 9 ಮಂದಿಗೆ ಸಚಿವ ಸ್ಥಾನ ನೀಡಲೇ ಬೇಕು. ಉಳಿದಂತೆ ಬಿಜೆಪಿಯ ಹಿರಿಯ ಶಾಸಕರ ಪೈಕಿ ಮೂರು ಅಥವಾ ನಾಲ್ಕು ಮಂದಿಯನ್ನು ಸಚಿವರಾಗಿ ಮಾಡಬೇಕು ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ, ಯಡಿಯೂರಪ್ಪನವರ ಪಟ್ಟಿಗೆ ಹೈಕಮಾಂಡ್ ನಾಯಕರು ಸಹಮತ ವ್ಯಕ್ತಪಡಿಸುತ್ತಿಲ್ಲ. ಒಟ್ಟಾರೆ ಖಾಲಿ ಇರುವ 17 ಸ್ಥಾನಗಳ ಪೈಕಿ ನಾಲ್ಕು ಅಥವಾ ಐದು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಬೇಕು. ಸರ್ಕಾರಕ್ಕೆ ಯಾರಿಂದಲಾದರೂ ಅಪಾಯವಾಗುತ್ತದೆ ಎಂದಾದರೆ ಅಂಥವರಿಗೆ ಒಂದೆರಡು ಸ್ಥಾನಗಳನ್ನು ಮೀಸಲಿಡಬೇಕು ಎಂದು ಹೇಳುತ್ತಿದ್ದಾರೆ. ಈ ಹಗ್ಗಜಗ್ಗಾಟವೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ.
ಕಾಂಗ್ರೆಸ್ ಪಟ್ಟಿ ಸಿದ್ಧವಾದರೂ ಬದಲಿಸಲು ಒತ್ತಡ
ಇತ್ತ ಕಾಂಗ್ರೆಸ್ ನಲ್ಲೂ ಇದೇ ಗೊಂದಲ ಮುಂದುವರಿದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ವರಿಷ್ಠರು ಬಹುತೇಕ ಅಂತಿಮಗೊಳಿಸಿದ್ದರು. ಕಾರ್ಯಾಧ್ಯಕ್ಷರ ಆಯ್ಕೆ ಬಳಿಕ ಎಲ್ಲವನ್ನೂ ಒಟ್ಟಾಗಿ ಪ್ರಕಟಿಸಲು ನಿರ್ಧರಿಸಿದ್ದರು. ಆದರೆ, ಕಾರ್ಯಾಧ್ಯಕ್ಷರ ನೇಮಕ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕನ ಸ್ಥಾನವನ್ನು ವಿಭಜಿಸುವ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಹಿರಿಯ ಕಾಂಗ್ರೆಸ್ಸಿಗರಲ್ಲಿ ಉಂಟಾಗಿರುವ ಭಿನ್ನಮತ ಈ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಮಾಡಿದೆ. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ತೇಲಿಬಿಟ್ಟು ಗೊಂದಲ ಸೃಷ್ಟಿಸಲಾಗುತ್ತಿದೆ.
ಇದರ ಪರಿಣಾಮ ಕಾಂಗ್ರೆಸ್ ವರಿಷ್ಠರು ಕೂಡ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅತ್ತ ಸಿದ್ದರಾಮಯ್ಯ ಅವರ ಮಾತನ್ನೂ ತಳ್ಳಿ ಹಾಕುವಂತಿಲ್ಲ, ಇತ್ತ ಹಿರಿಯ ನಾಯಕರನ್ನೂ ನಿರ್ಲಕ್ಷಿಸುವಂತಿಲ್ಲ. ಇವರಿಬ್ಬರ ಹಗ್ಗ ಜಗ್ಗಾಟದಲ್ಲಿ ಯಾರ ಪರ ನಿಲ್ಲಬೇಕು ಎಂಬ ಗೊಂದಲದಲ್ಲಿ ಅವರು ಸಿಲುಕಿದ್ದಾರೆ. ಯಾರ ಪರ ನಿಂತರೂ ಪಕ್ಷಕ್ಕೆ ರಾಜ್ಯದಲ್ಲಿ ಹಿನ್ನಡೆಯಾಗುವುದು ಖಚಿತ. ಅಂತಹ ಅಪಾಯ ಮೈಮೇಲೆ ಎಳೆದುಕೊಳ್ಳದೆ ಸಮಸ್ಯೆ ಬಗೆಹರಿಸುವ ತಂತ್ರಗಳನ್ನು ಹುಡುಕುತ್ತಿದ್ದು, ಇದರಿಂದ ನಾಯಕತ್ವ ಬದಲಾವಣೆ ವಿಳಂಬವಾಗುತ್ತಿದೆ.