ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರಿಂದ ಹಸಿರು ನಿಶಾನೆ ಸಿಕ್ಕಿದರೂ ಅರ್ಹ ಶಾಸಕರು ಮತ್ತು ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಕಷ್ಟು ಒತ್ತ, ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯೊಳಗೆ.. ಎಂಬಂತೆ ಸದ್ಯ ಪೀಡೆ ತೊಲಗಿತು ಅಂದುಕೊಳ್ಳುವಾಗಲೇ ಬಗಲಲ್ಲೇ ಮತ್ತೆ ಪ್ರತ್ಯಕ್ಷವಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಡಿಯೂರಪ್ಪ ಅವರು ಯಶಸ್ವಿಯಾಗುತ್ತಿರುವುದರ ಹಿಂದೆ ಅವರ ತಂತ್ರಗಾರಿಕೆ ಕೆಲಸ ಮಾಡುತ್ತಿದ್ದು, ಗೊಂದಲ ಬಗೆಹರಿಸಲು ಸಾಮ, ದಾನ, ಬೇಧ ಮತ್ತು ದಂಡ ಎಂಬ ಚತುರೋಪಾಯಗಳನ್ನೂ ಅನುಸರಿಸುತ್ತಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಸದ್ಯ ಅರ್ಹ 11 ಶಾಸಕರ ಪೈಕಿ 10 ಮಂದಿಗೆ ಮತ್ತು ಮೂಲ ಬಿಜೆಪಿಯ ಮೂವರಿಗೆ ಸಚಿವ ಸ್ಥಾನ ನೀಡಲು ಮುಂದಾಗಿರುವ ಯಡಿಯೂರಪ್ಪ ಅವರು, ಸಾಧ್ಯವಾದರೆ ಇದರೊಂದಿಗೆ ಇಬ್ಬರು ಸಚಿವರಿಂದ ರಾಜೀನಾಮೆ ಪಡೆದು ಅವರ ಸ್ಥಾನಕ್ಕೆ ಮೂಲ ಬಿಜೆಪಿಯ ಇಬ್ಬರನ್ನು ಸೇರಿಸಿಕೊಂಡು ಸಂಪುಟ ಪುನಾರಚನೆ ಮಾಡುವ ಯೋಚನೆಯಲ್ಲೂ ಇದ್ದಾರೆ. ಆ ನಿಟ್ಟಿನಲ್ಲಿ ಸಚಿವರ ಮನವೊಲಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಈ ಕೆಲಸ ಸಾಧ್ಯವಾದರೆ ಫೆ. 6ರ ಗುರುವಾರ ಸಂಪುಟ ವಿಸ್ತರಣೆ ಜತೆಗೆ ಪುನಾರಚನೆಯೂ ನಡೆಯುವ ಸಾಧ್ಯತೆ ಇದೆ. ಆದರೆ, ಅಂತಹ ಸಾಧ್ಯತೆಗಳು ಕಮ್ಮಿ ಎನ್ನಲಾಗುತ್ತಿದೆ.
ಈ ಮಧ್ಯೆ ಅನರ್ಹಗೊಂಡು ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ.ನಾಗರಾಜ್ ಅವರೂ ಸಚಿವ ಸ್ಥಾನಕ್ಕೆ ತೀವ್ರ ಹೋರಾಟ ನಡೆಸುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ವಿಶ್ವಾಸ ದ್ರೋಹದ ಅಸ್ತ್ರ ಪ್ರಯೋಗಕ್ಕೂ ಮುಂದಾಗಿದ್ದಾರೆ. ಸಾಮ ಮತ್ತು ದಾನದ ಪ್ರಯತ್ನಕ್ಕೆ ಅವರು ಒಪ್ಪಿಕೊಳ್ಳದೇ ಇದ್ದಲ್ಲಿ ಅನರ್ಹತೆಯ ಅಸ್ತ್ರವನ್ನೇ ಮುಂದಿಟ್ಟುಕೊಂಡು ಸುಮ್ಮನಾಗಿಸಲು ಕೂಡ ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ. ಅನರ್ಹಗೊಂಡು ಉಪ ಚುನಾವಣೆಯಲ್ಲಿ ಸೋತ ಶಾಸಕರನ್ನು ಮೇಲ್ಮನೆಗೆ ಆಯ್ಕತೆ ಮಾಡದೆ ಸಚಿವ ಸ್ಥಾನ ನೀಡಿದರೆ ಅದರ ವಿರುದ್ಧ ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದ್ದು, ಇದರಿಂದ ಸರ್ಕಾರ ಮತ್ತು ಸಚಿವರಾದ ಅನರ್ಹರು ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಹೀಗಾಗಿ ಸೋತವರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಈಗಾಗಲೇ ಅವರಿಗೆ ಹೇಳಿದ್ದಾರೆ. ಮತ್ತೊಬ್ಬ ಸಚಿವಾಕಾಂಕ್ಷಿ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮುಟಳ್ಳಿ ಅವರನ್ನು ರಮೇಶ್ ಜಾರಕಿಹೊಳಿ ಅವರ ಮೂಲಕ ತಣ್ಣಗಾಗಿಸುವ ಕೆಲಸ ಮಾಡುತ್ತಿದ್ದಾರೆ.
ಯೋಗೇಶ್ವರ್ ಬಗ್ಗೆ ಅಪಸ್ವರ ಎತ್ತದಂತೆ ಸೂಚನೆ
ಆದರೆ, ನಿಜವಾಗಿಯೂ ಯಡಿಯೂರಪ್ಪ ಅವರಿಗೆ ಪೀಕಲಾಟ ತಂದಿರುವುದು ಮೂಲ ಬಿಜೆಪಿ ಶಾಸಕರು. ಇರುವ ಮೂರು ಸ್ಥಾನಗಳನ್ನು ಮೂವರಿಗೆ ಹಂಚಬಹುದಾದರೂ ಪ್ರಬಲ ಆಕಾಂಕ್ಷಿಗಳ ಸಂಖ್ಯೆಯೇ ಅರ್ಧ ಡಜನ್ ಮೇಲಿದೆ. ಅದರಲ್ಲೂ ಒಂದು ಸ್ಥಾನವನ್ನು ವಿಧಾನಸಭೆ ಚುನಾವಣೆಯಲ್ಲಿ ಸೋತ ಸಿ.ಪಿ.ಯೋಗೇಶ್ವರ್ ಅವರಿಗೆ ನೀಡಲು ಮುಂದಾಗಿರುವುದು ಗೆದ್ದ ಆಕಾಂಕ್ಷಿಗಳ ಕಣ್ಣು ಕೆಂಪಗೆ ಮಾಡಿದೆ. ಆಪರೇಷನ್ ಕಮಲ ನಡೆಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಪ್ರಮುಖರಲ್ಲಿ ಯೋಗೇಶ್ವರ್ ಕೂಡ ಒಬ್ಬರಾಗಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡಲೇ ಬೇಕಾದ ಅನಿವಾರ್ಯತೆ ಎದುರಾಗಿರುವುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು 17 ಶಾಸಕರು ಎಷ್ಟು ಕಾರಣವೋ, ಅವರಲ್ಲಿ ಅರ್ಧದಷ್ಟು ಮಂದಿಯನ್ನು ಬಿಜೆಪಿಗೆ ಸೆಳೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸಿ.ಪಿ.ಯೋಗೇಶ್ವರ್. ಹೀಗಾಗಿ ಅನರ್ಹರಾಗಿ ಉಪ ಚುನಾವಣೆಯಲ್ಲಿ ಅರ್ಹರಾದ ಶಾಸಕರಿಗೆ ಮಂತ್ರಿ ಸ್ಥಾನ ನೀಡಿದಂತೆ ಅವರನ್ನು ಬಿಜೆಪಿಯತ್ತ ಸೆಳೆದುಕೊಳ್ಳಲು ಯಶಸ್ವಿಯಾದ ಯೋಗೇಶ್ವರ್ ಅವರಿಗೂ ಅವಕಾಶ ಕಲ್ಪಿಸಬೇಕಾಗುತ್ತದೆ. ಏಕೆಂದರೆ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಮೇಲೆತ್ತಲು ಮುಂದಿನ ದಿನಗಳಲ್ಲಿ ಯೋಗೇಶ್ವರ್ ಅವರ ಸಹಕಾರ ಬೇಕೇ ಬೇಕು. ಅವರನ್ನು ಮಂತ್ರಿ ಮಾಡಿದರೆ ಮಾತ್ರ ಮುಂದೆ ಸಹಕಾರ ಸಿಗುತ್ತದೆ. ಆದ್ದರಿಂದ ಅವರನ್ನು ಮಂತ್ರಿ ಮಾಡಲು ಯಾರೂ ಆಕ್ಷೇಪ ಎತ್ತಬೇಡಿ ಎಂಬ ಸೂಚನೆಯನ್ನು ಯಡಿಯೂರಪ್ಪ ಅವರು ಮೂಲ ಬಿಜೆಪಿ ಶಾಸಕರಿಗೆ ನೀಡಿದ್ದಾರೆ.
ಆಡಳಿತ ಪಕ್ಷದ ಶಾಸಕರಾಗಿರಬೇಕೋ, ಮತ್ತೆ ಚುನಾವಣೆಗೆ ಹೋಗಬೇಕೋ?
ಸಾಮ, ದಾನಗಳಿಗೆ ಬಗ್ಗದೆ ಸಚಿವ ಸ್ಥಾನಕ್ಕಾಗಿ ಒತ್ತಡ, ಬೆದರಿಕೆಗಳನ್ನು ಹೇರುವ ಶಾಸಕರ ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಅದೆಂದರೆ, ಬಯಸಿದ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ನಿಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಮತ್ತೆ ನೀವು ಗೆದ್ದು ಬರಲು ಅನುಕೂಲ ಮಾಡಿಕೊಡುತ್ತೇನೆ. ಇದನ್ನು ಮಾಡಬೇಕಾದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರಬೇಕು ಮತ್ತು ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು.
ಹೀಗಾಗಿ ಸರ್ಕಾರಕ್ಕೆ ಅಪಾಯವಾಗಲು ಅವಕಾಶ ಮಾಡಿಕೊಡಬೇಡಿ. ನಾನಂತೂ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದು, ಸರ್ಕಾರ ಉರುಳಿದರೆ ಮನೆಗೆ ಹೋಗಲು ಸಿದ್ಧನಿದ್ದೇನೆ. ಹೀಗಾಗಿ ನೀವು ಆಡಳಿತ ಪಕ್ಷದ ಸದಸ್ಯರಾಗಿ ಮುಂದುವರಿದು ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಬೇಕೋ ಅಥವಾ ಮತ್ತೆ ಚುನಾವಣೆಗೆ ಹೋಗಬೇಕೋ ಎಂಬುದವನ್ನು ನೀವೇ ನಿರ್ಧರಿಸಿ ಎಂಬ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.
ಏಕೆಂದರೆ, ಮೈತ್ರಿ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆಗೆ ಹೋದರೆ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಪಕ್ಷದ ಗೊಂದಲವೇ ಸೋಲಿಗೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಿನ್ನಮತ, ಬಂಡಾಯದ ಮೂಲಕ ಸರ್ಕಾರಕ್ಕೆ ಅಪಾಯ ತಂದುಕೊಂಡರೆ ಮಧ್ಯಂತರ ಚುನಾವಣೆ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಬಂಡಾಯವೆದ್ದವರಿಗೆ ಟಿಕೆಟ್ ಕೈತಪ್ಪಬಹುದು ಅಥವಾ ಟಿಕೆಟ್ ಸಿಕ್ಕಿದರೂ ಸೋಲು ಅನುಭವಿಸಬೇಕಾದೀತು. ಇಂತಹ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಅತಂತ್ರರಾಗುವ ಬದಲು ಆಡಳಿತ ಪಕ್ಷದ ಸದಸ್ಯರಾಗಿ ಮುಂದುವರಿಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ಪಕ್ಷದ ಶಾಸಕರಲ್ಲಿ ಮೂಡಿಸಲು ಮುಂದಾಗಿದ್ದಾರೆ.
ಮುಂದೆ ಸಂಪುಟ ಪುನಾರಚನೆ ವೇಳೆ ಅವಕಾಶ ನೀಡುವ ಭರವಸೆ
ನಿಮ್ಮೆಲ್ಲರ ಸಹಕಾರ ಮುಂದುವರಿದರೆ ಈ ಸರ್ಕಾರ 2023ರ ಮೇ ತಿಂಗಳವರೆಗೆ ಅಧಿಕಾರದಲ್ಲಿರುತ್ತದೆ. ಈ ನಡುವೆ ಸಂಪುಟ ಪುನಾರಚನೆ ಮಾಡಲು ಅವಕಾಶವಿದೆ. ಅಂತಹ ಸಂದರ್ಭದಲ್ಲಿ ಈಗಾಗಲೇ ಸಚಿವರಾಗಿ ಅಧಿಕಾರ ಅನುಭವಿಸಿದ ಕೆಲವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡಬಹುದು. ಈಗ ಯಾರಿಗೆಲ್ಲಾ ಸಚಿವ ಸ್ಥಾನ ಸಿಕ್ಕಿಲ್ಲ, ಯಾವ ಭಾಗಕ್ಕೆ ಅವಕಾಶ ಸಚಿವ ಸ್ಥಾನ ದೊರಕಿಲ್ಲ ಎಂಬುದೆಲ್ಲವನ್ನೂ ಲೆಕ್ಕಾಚಾರ ಹಾಕಿ ಮುಂದಿನ ದಿನಗಳಲ್ಲಿ ಅವರೆಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಈ ಸರ್ಕಾರ ರಚಿಸಲು ನೀಡಿದ್ದ ವಾಗ್ಧಾನವನ್ನು ಆಈಡೇರಿಸಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ ನಿಮಗೂ ಮಾತು ಕೊಡುತ್ತೇನೆ. ಮುಂದಿನ ದಿನಗಳಲ್ಲಿ ಸಂಪುಟ ಪುನಾಚರನೆ ಮಾಡಿ ಕೆಲವರಿಗೆ ಅವಕಾಶ ಕೊಡುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದಾರೆ.
ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬಂತೆ ಸದ್ಯದ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ಪುನಾರಚನೆ ಹೊರತುಪಡಿಸಿ ಉಳಿದಂತೆ ಮುಖ್ಯಮಂತ್ರಿಗಳ ಈ ತಂತ್ರಗಾರಿಕೆಗಳು ಫಲಿಸುವಂತೆ ಕಾಣುತ್ತಿದೆ. ಆದರೆ, ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಯಾವಾಗ ಬೆಂಕಿಯಾಗಿ ಹೊರಹೊಮ್ಮುವುದೋ ಅಥವಾ ಯಡಿಯೂರಪ್ಪ ಅವರ ಮಾತು ಕೇಳಿಕೊಂಡು ಎಲ್ಲರೂ ಒಟ್ಟಾಗಿ ಹೋಗುತ್ತಾರೆಯೋ ಎಂಬುದನ್ನು ಕಾಲವೇ ನಿರ್ಧರಿಸಬೇಕು.