ಕೊಡಗಿನಲ್ಲಿ ಕಳೆದ ಎರಡು ವರ್ಷಗಳ ಮಳೆಗಾಲದಲ್ಲಿ ಸುರಿದ ಮಹಾಮಳೆ ಮತ್ತು ಭೀಕರ ಭುಕುಸಿತಕ್ಕೆ ಸಿಲುಕಿ ನೂರಾರು ಜನರು ರಾತ್ರೋರಾತ್ರಿ ಸಂತ್ರಸ್ಥರಾದರು. ರಾಜ್ಯಾದ್ಯಂತ ದಾನಿಗಳಿಂದ ಸಂಘ ಸಂಸ್ಥೆಗಳಿಂದ ನೆರವಿನ ಮಹಾಪೂರವೇ ಹರಿದು ಬಂತು. ಸಂತ್ರಸ್ಥರೂ ಚೇತರಿಸಿಕೊಂಡರು. ರಾಜ್ಯದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರೇ ಕೊಡಗಿಗೆ ಭೇಟಿ ನೀಡಿ ಜನರ, ಸಂತ್ರಸ್ಥರ ಸಂಕಷ್ಟ ಆಲಿಸಿದರು ಜತೆಗೇ ಶೀಘ್ರ ಮನೆಗಳ ನಿರ್ಮಾಣ ಮಾಡಿಕೊಡುವ ಭರವಸೆಯನ್ನೂ ನೀಡಿ ಹೋದರು. ಅಂದಿನ ಮುಖ್ಯ ಮಂತ್ರಿಗಳ ಪ್ರಕಾರ 6 ತಿಂಗಳಿನೊಳಗೆ ಮನೆಗಳನ್ನು ಸಂತ್ರಸ್ಥರಿಗೆ ಹಂಚಿಕೆ ಮಾಡಬೇಕಿತ್ತು.
ತ್ವರಿತ ಮನೆಗಳ ನಿರ್ಮಾಣಕ್ಕಾಗಿ ಸ್ವತಃ ಮುಖ್ಯ ಮಂತ್ರಿಗಳ ಅದ್ಯಕ್ಷತೆಯಲ್ಲೇ ಕೊಡಗು ಪುನರ್‌ನಿರ್ಮಾಣ ಪ್ರಾಧಿಕಾರವನ್ನೂ ರಚನೆ ಮಾಡಲಾಯಿತು. ಈ ಪ್ರಾಧಿಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೊಡಗಿನ ಶಾಸಕರಾದ ಎಂ ಪಿ ಅಪ್ಪಚ್ಚು ರಂಜನ್ ಮತ್ತು ಕೆ ಜಿ ಬೋಪಯ್ಯ ಅವರೂ ಸದಸ್ಯರಾಗಿದ್ದರು. ಆದರೆ ಈ ಪ್ರಾಧಿಕಾರದ ರಚನೆ ಆಗಿರುವುದೇ ಕೊಡಗಿನ ಜನತೆಗೆ ಮರೆತೇ ಹೋಗಿದೆ. ಏಕೆಂದರೆ ಒಂದೆರಡು ಬಾರಿ ಪತ್ರಿಕೆಗಳಲ್ಲಿ ಬಂದದ್ದು ಬಿಟ್ಟರೆ ಈ ಪ್ರಾಧಿಕಾರ ಈವರೆಗೆ ಎಷ್ಟು ಸಭೆ ನಡೆಸಿದೆ ಎಂದು ಯಾರಿಗೂ ಗೊತ್ತಿಲ್ಲ. ಮಡಿಕೇರಿ ತಾಲ್ಲೂಕಿನ ಮದೆ, ಕರ್ಣಂಗೇರಿ, ಕೆ ನಿಡುಗಣೆ ಮತ್ತು ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ಮನೆಗಳಿಗೆ ಸ್ಥಳ ಗುರುತಿಸಿ ಸಂತ್ರಸ್ಥರಿಗಾಗಿ ಒಟ್ಟು 840 ಮನೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಪ್ರತೀ ಮನೆಯೂ 512 ಚದರ ಅಡಿಗಳ ವಿಸ್ತೀರ್ಣವಿದ್ದು ಈ ಮನೆಗಳನ್ನು ತಲಾ 9.85 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 2018 ರ ಮಳೆ ಹಾನಿ ಸಂತ್ರಸ್ಥರ ಮನೆಗಳ ನಿರ್ಮಾಣಕ್ಕೆ ಮುಂಬೈ ಮೂಲದ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿದ್ದರೆ 2019 ರಲ್ಲಿ ಹಾನಿಗೀಡಾದ ಸಂತ್ರಸ್ಥರ ಮನೆಗಳ ನಿರ್ಮಾಣ ಕಾರ್ಯವನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಲಾಗಿದೆ.
ಇದೀಗ ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಸಂತ್ರಸ್ಥರಿಗೆ ಸ್ವತಃ ಮುಖ್ಯ ಮಂತ್ರಿ ಬಿ ಯಸ್ ಯಡಿಯೂರಪ್ಪ ಅವರೇ ಆಗಮಿಸಿ ಹಂಚಿಕೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈಗಾಗಲೇ ಪೂರ್ಣಗೊಂಡಿರುವ ಮನೆಗಳ ಕಾಮಗಾರಿ ಕಳಪೆ ಆಗಿದೆ ಎಂದು ಸಂಘಟನೆಯೊಂದು ಆರೋಪಿಸಿದೆ. ಈ ಕುರಿತು ಚಿತ್ರ ಸಹಿತ ಮಾಹಿತಿಯನ್ನು ಮಾಧ್ಯಮಗಳ ಗಮನಕ್ಕೆ ತಂದಿರುವ ನಮ್ಮ ಕೊಡಗು ತಂಡದ ಮುಖಂಡ ನೌಶಾದ್ ಅವರು ಮನೆಗಳ ಗೋಡೆಗಳ ಕೆಳಭಾಗದಲ್ಲೇ ಟೊಳ್ಳಾಗಿದ್ದು ಗೋಣೀಚೀಲ, ಮರದ ಬೇರುಗಳು ಪತ್ತೆ ಆಗಿವೆ. ಕೆಲವೆಡೆಗಳಲ್ಲಿ ಹಾಕಿರುವ ಪ್ಲಾಸ್ಟರಿಂಗ್ ಈಗಾಗಲೇ ಬಿರುಕು ಬಿಟ್ಟಿದೆ ಎಂದು ಚಿತ್ರ ಸಹಿತ ತೋರಿದರು.
ಮೊನ್ನೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ, ಸಂಸದ ಪ್ರತಾಪ ಸಿಂಹ ಮತ್ತು ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಅವರ ತಂಡ ಜಂಬೂರಿಗೆ ಭೇಟಿ ನೀಡಿ ಮನೆಗಳ ನಿರ್ಮಾಣ ಪ್ರಗತಿಯನ್ನೂ ಪರಿಶೀಲಿಸಿತು. ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ನೌಶಾದ್ ಅವರು ಸ್ವತಃ ಸಚಿವ ಸೋಮಣ್ಣ ಅವರಿಗೇ ಮನೆಗಳ ಕಾಮಗಾರಿ ಕಳಪೆ ಆಗಿರುವುದನ್ನು ತಿಳಿಸಿದರು. ಆದರೆ ಈ ಆರೋಪ ಸಚಿವರನ್ನೇ ಸಿಟ್ಟುಗೊಳಿಸಿತು. ಗರಂ ಆದ ಸಚಿವರು ನೋಡು ನಿನ್ನ ಕೆಲಸ ಎಷ್ಟಿದೆ ಅಷ್ಟು ನೋಡು, ಸಣ್ಣ ಪುಟ್ಟ ತಪ್ಪಾಗಿದ್ದರೆ ಅಧಿಕಾರಿಗಳು ಸರಿಪಡಿಸುತ್ತಾರೆ, ಜಾಸ್ತಿ ಮಾತಾಡಬೇಡ, ಕುಶಾಲನಗರದಿಂದ ಇಲ್ಲಿಗೆ ಬಂದು ಬಡವರಿಗೆ ಮನೆ ಮಾಡುವ ಕೆಲಸಕ್ಕೆ ಅಡ್ಡಿ ಬರಬೇಡ ಎಂದು ಹರಿ ಹಾಯ್ದಿದ್ದಾರೆ. ಜತೆಯಲ್ಲೇ ಇದ್ದ ಸಂಸದ ಪ್ರತಾಪ ಅವರು ಮನೆಗಳ ಗುಣಮಟ್ಟ ಕಳಪೆ ಆಗಿದ್ದರೆ ಅದನ್ನು ಸಂತ್ರಸ್ಥರು ಹೇಳಲಿ. ನೀನೇಕೆ ಮದ್ಯೆ ಬರುತಿದೀಯ ಎಂದು ಆಕ್ಷೇಪಿಸಿದ್ದಾರೆ.
ಇಲ್ಲಿ ಮೇಲ್ನೋಟಕ್ಕೆ ಎಲ್ಲವೂ ಅಲ್ಲದಿದ್ದರೂ ಕೆಲ ಮನೆಗಳ ನಿರ್ಮಾಣದಲ್ಲಿ ಕಳಪೆ ಆಗಿರುವುದು ಕಂಡು ಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ನೌಶಾದ್ ಅವರು ತಾವು ಮತ್ತು ತಮ್ಮ ತಂಡ ಸಂತ್ರಸ್ಥರ ಪರ ಮಾತಾಡಿದ್ದು ಅವರಿಗಾಗುವ ಅನ್ಯಾಯಾದ ವಿರುದ್ದ ಮಾತಾಡಿದ್ದೇವೆ ಅಷ್ಟೇ ಅಲ್ಲ ಆಗಿರುವ ಲೋಪದ ಕುರಿತು ಸಾಕ್ಷಿ ಸಮೇತ ಸಚಿವರಿಗೆ ವಿವರಿಸಿದರೂ ಕೇಳಿಸಿಕೊಳ್ಳುವ, ಸಹಿಸಿಕೊಳ್ಳುವ ವ್ಯವಧಾನ ಅವರಿಗೆ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ನಾವು ಯಾವುದೇ ಜಾತಿ, ಪಕ್ಷ ಮತ್ತು ಪಂಗಡ ದ ಪರ ಇಲ್ಲ ಆದರೆ ಇನ್ನು ಮುಂದಕ್ಕೂ ಸಂತ್ರಸ್ಥರ ಪರ ತಮ್ಮ ಹೋರಾಟ ಮುಂದುವರಿಯುವುದಾಗಿಯೂ ಹೇಳಿದರು.
ಒಟ್ಟಿನಲ್ಲಿ ಈಗಾಗಲೇ ಮನೆ ಮಠ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂತ್ರಸ್ಥರಿಗೆ ಪ್ರಕಾರ ಶೀಘ್ರ ಮನೆಗಳ ಹಸ್ತಾಂತರ ಮಾಡಿ ಕಣ್ಣೀರು ಒರೆಸಲಿ.