ಕರೋನಾ ಮಹಾಮಾರಿಯ ಹೊತ್ತಲ್ಲಿ ಇಡೀ ಜಗತ್ತು ಒಂದು ದಿಕ್ಕಿನಲ್ಲಿ ಹೋಗುತ್ತಿದ್ದರೆ, ನಮ್ಮ ಪ್ರಧಾನಿ ಮೋದಿಯವರು ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ನೋಡಿದರೆ ‘ಭೀಕರ ದುರ್ದಿನಗಳನ್ನು ಯಾವುದೇ ಕಾರಣಕ್ಕೆ ವ್ಯರ್ಥವಾಗಲು ಬಿಡಬೇಡ’ ಎಂಬ ವಿನ್ಸೆಂಟ್ ಚರ್ಚಿಲ್ ಮಾತನ್ನು ಅವರು ನೂರಕ್ಕೆ ನೂರು ಅನುಸರಿಸುತ್ತಿದ್ದಾರೆ ಎಂದು ಅನಿಸದೇ ಇರದು.
ಹೌದು, ಕೋವಿಡ್ -19ರ ದಾಳಿಯ ಈ ಹೊತ್ತಲ್ಲಿ ಜನರ ಜೀವ ರಕ್ಷಣೆಯೇ ಆದ್ಯತೆಯಾಗಿ ಪರಿಗಣಿಸಿ ಪಕ್ಕಾ ಬಂಡವಾಳಶಾಹಿ, ಕಾರ್ಪೊರೇಟ್ ಆಡಳಿತಗಳನ್ನು ಹೊಂದಿರುವ ಹಲವು ಯುರೋಪಿನ್ ದೇಶಗಳು ಕೂಡ ಕಾರ್ಪೊರೇಟ್ ಪರ ನೀತಿಗಳಿಂದ ಜನಕಲ್ಯಾಣ ನೀತಿಗಳತ್ತ ಹೊರಳಿ ಕಿಂಚಿತ್ತಾದರೂ ಕಲ್ಯಾಣ ರಾಜ್ಯದ ಆಶಯಗಳನ್ನು ಜಾರಿಗೆ ತರುತ್ತಿವೆ. ಆ ಮೂಲಕ ಸಮಾಜದ ದುರ್ಬಲ ಸಮುದಾಯಗಳ ಜನರ ಜೀವ ಮತ್ತು ಬದುಕಿನ ಕನಿಷ್ಟ ಭದ್ರತೆಗೆ ಬದ್ಧತೆ ತೋರುತ್ತಿವೆ. ಆದರೆ, ಭಾರತದಲ್ಲಿ ಮಾತ್ರ ಬಿಜೆಪಿ ಸರ್ಕಾರ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದು ಸ್ವಾತಂತ್ರ್ಯಾ ಬಳಿಕ ಏಳೂವರೆ ದಶಕದಲ್ಲಿ ದುರ್ಬಲರ ಆಸರೆಯಾಗಿದ್ದ ಸಾರ್ವಜನಿಕ ನೀತಿ- ಯೋಜನೆಗಳ ತರಾತುರಿಯ ಖಾಸಗೀಕರಣಕ್ಕೆ, ಕಾರ್ಪೊರೇಟೀಕರಣಕ್ಕೆ ಚಾಲನೆ ನೀಡಿದೆ.
ಹಾಗೆ ನೋಡಿದರೆ; ಖಾಸಗೀಕರಣ ಎಂಬುದು ಕೇವಲ ನರೇಂದ್ರ ಮೋದಿಯವರ ಸರ್ಕಾರವೊಂದರ ಹೆಜ್ಜೆ ಏನಲ್ಲ. 25 ವರ್ಷಗಳ ಹಿಂದೆ ಆರಂಭವಾದ ಜಾಗತೀಕರಣದ ಫಲ ಅದು. ಆದರೆ, ಆ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿದ ನೀತಿಗಳಿಗೆ ದೊಡ್ಡ ವೇಗ ನೀಡಿದ್ದು ಇದೇ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರವೇ ಎಂಬುದನ್ನು ಮರೆಯಲಾಗದು. ಸಾರ್ವಜನಿಕ ವಲಯದ ಕಂಪನಿಗಳಿಂದ ಬಂಡವಾಳ ಹಿಂತೆಗೆದು, ಅವುಗಳನ್ನು ಖಾಸಗೀ ಕಾರ್ಪೊರೇಟ್ ಬಂಡವಾಳಕ್ಕೆ ಮುಕ್ತಗೊಳಿಸಲೆಂದೇ ಪ್ರತ್ಯೇಕ ಬಂಡವಾಳ ಹಿಂತೆಗೆದ ಖಾತೆಯನ್ನೇ ಆರಂಭಿಸಿ ಅದಕ್ಕೊಬ್ಬರು ಸಂಪುಟ ದರ್ಜೆ ಸಚಿವರನ್ನು(ಅರುಣ್ ಶೌರಿ) ನೇಮಿಸಿದ್ದು ವಾಜಪೇಯಿ ಅವರ ಸರ್ಕಾರದ ಹೆಗ್ಗಳಿಕೆ!
ಬಿಜೆಪಿಯ ಮೊದಲ ಪೂರ್ಣಾವಧಿ ಸರ್ಕಾರ ಹಾಕಿಕೊಟ್ಟ ದಾರಿಯಲ್ಲೇ ಇನ್ನಷ್ಟು ವೇಗವಾಗಿ ಹೆಜ್ಜೆ ಹಾಕುತ್ತಿದ್ದ 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಖಾಸಗೀಕರಣವನ್ನು ಇನ್ನಷ್ಟು ಚುರುಕುಗೊಳಿಸಿ ದೇಶದ ಆಯ್ದ ಕೆಲವು ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರಿ ಸ್ವಾಮ್ಯದ ಕಂಪನಿ ಮತ್ತು ಸಂಸ್ಥೆಗಳ ಹೆಬ್ಬಾಗಿಲು ತೆರೆಯಿತು. ಸ್ವದೇಶಿ ಮಂತ್ರ, ಸ್ವಾಭಿಮಾನಿ ಭಾರತದ ಜಪ ಮಾಡುತ್ತಲೇ ದೇಶದ ಜನಸಾಮಾನ್ಯರ ಬೆವರಿನ ಹಣದಲ್ಲಿ ಕಟ್ಟಿದ ಬೃಹತ್ ಕಂಪನಿಗಳನ್ನು ಕಾರ್ಪೋರೇಟ್ ತೆಕ್ಕೆಗೆ ವಹಿಸಿದ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರದ ನಡೆ ಸಾಕಷ್ಟು ಟೀಕೆಗೂ ಒಳಗಾಯಿತು. ಒಎನ್ ಜಿಸಿ, ಬಿಪಿಸಿಎಲ್, ಐಒಸಿಯಂತಹ ಬೃಹತ್ ಸಂಸ್ಥೆಗಳ ಖಾಸಗೀಕರಣದ ಪ್ರಯತ್ನಗಳ ಹಿಂದೆ ದೊಡ್ಡ ಮಟ್ಟದ ಅವ್ಯವಹಾರದ ಶಂಕೆಯೂ ವ್ಯಕ್ತವಾಗಿತ್ತು.
ಇದೀಗ ಇಡೀ ದೇಶದ ಜನತೆ ಭೀಕರ ಜಾಗತಿಕ ಮಹಾಮಾರಿಯ ಸೋಂಕಿನ ವಿರುದ್ಧ ಸಾವು-ಬದುಕಿನ ಹೋರಾಟ ನಡೆಸುತ್ತಿರುವಾಗ, ಇಡೀ ದೇಶದ ಸಾರ್ವಜನಿಕ ಮತ್ತು ಖಾಸಗೀ ವಲಯದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗದ ಸ್ಥಿತಿಯಲ್ಲಿ ತುಂಬಿ ತುಳುಕುತ್ತಿರುವಾಗ, ಸಕಾಲಕ್ಕೆ ಚಿಕಿತ್ಸೆ ಸಿಗದೆ, ಆಸ್ಪತ್ರೆಗಳು ದಾಖಲಿಸಿಕೊಳ್ಳದೆ, ಜನ ಬೀದಿಬೀದಿಯಲ್ಲೇ ನೆರವಿಗೆ ಅಂಗಾಲಾಚುತ್ತಾ ಜೀವ ಬಿಡುತ್ತಿರುವಾಗ ಜನರ ಜೀವ ರಕ್ಷಣೆಯನ್ನೇ ಆದ್ಯತೆಯಾಗಿ ಪರಿಗಣಿಸಿ ಆ ನಿಟ್ಟಿನಲ್ಲಿ ಸಮರೋಪಾದಿಯಾಗಿ ಕೆಲಸ ಮಾಡಬೇಕಾದ್ದು ಯಾವುದೇ ಚುನಾಯಿತ ಸರ್ಕಾರದ ಕರ್ತವ್ಯ ಮತ್ತು ಹೊಣೆಗಾರಿಕೆ. ಆದರೆ, ದೇಶಭಕ್ತಿಯ ಹೆಸರಲ್ಲಿ, ಅಚ್ಛೇದಿನದ ಹೆಸರಲ್ಲಿ, ದೇಶವನ್ನು ವಿಶ್ವಗುರು ಮಾಡುವ ಭರವಸೆಯಲ್ಲಿ ಮತ ಗಳಿಸಿ ಅಧಿಕಾರಕ್ಕೆ ಬಂದ ಮೋದಿಯವರ ಸರ್ಕಾರ ಮಾಡುತ್ತಿರುವುದೇನು?
ಕರೋನಾ ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡು, ಆದಾಯ ಕಳೆದುಕೊಂಡು ಕೈಯಲ್ಲಿ ಕಾಸಿಲ್ಲದೆ, ಹೊತ್ತಿನ ಗಂಜಿಗೂ ಚಿಂತೆ ಮಾಡುವ ಸ್ಥಿತಿಯಲ್ಲಿರುವ ಜನ ಜೀವ ಉಳಿಸಿಕೊಳ್ಳಲು ಕನಿಷ್ಟ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಕೂಡ ಕಾಸಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಭೀಕರ ಹೊತ್ತಲ್ಲಿ; ಜನರ ಜೀವರಕ್ಷಣೆಗೆ ಮುಂದಾಗಬೇಕಾಗಿರುವ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೇ ಖಾಸಗೀಕರಣ ಮಾಡುವುದು ಎಂದರೆ ಅದನ್ನು ಜನಪರ ಕಾಳಜಿಯ, ದೇಶದ ಪರ ಪ್ರೀತಿಯ, ರಾಷ್ಟ್ರಾಭಿಮಾನದ ಕೆಲಸ ಎನ್ನಲಾದೀತೆ? ನಿಜವಾಗಿಯೂ ಈ ದೇಶದ ಜನರ ಬಗ್ಗೆ, ದೇಶದ ಬಗ್ಗೆ ಕಾಳಜಿ ಇರುವ ವ್ಯಕ್ತಿಯೊಬ್ಬರು ಇಂತಹ ಹೆಜ್ಜೆ ಇಡುವುದು ಸಾಧ್ಯವೆ? ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟಿಸಿದೆ ಮೋದಿಯವರ ಈ ನಡೆ.
ಕರೋನಾ ಪರೀಕ್ಷೆ ಮತ್ತು ಚಿಕಿತ್ಸೆಯಂತಹ ವಿಷಯದಲ್ಲಿ ಒಂದು ಜಾಗತಿಕ ಮಹಾಮಾರಿ ಎಂಬುದನ್ನು ಪರಿಗಣಿಸಿ ದೇಶದ ನಾಗರಿಕರೆಲ್ಲರಿಗೂ ಯಾವುದೇ ತಾರತಮ್ಯವಿಲ್ಲದೆ ಉಚಿತ ಚಿಕಿತ್ಸೆ ಮತ್ತು ಪರೀಕ್ಷೆಯನ್ನು ಸರ್ಕಾರಿ ವ್ಯವಸ್ಥೆಯ ಮೂಲಕವೇ ಅಥವಾ ಕನಿಷ್ಟ ಸರ್ಕಾರಿ ವೆಚ್ಚದಲ್ಲೇ ಮಾಡಬೇಕಾದುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಹೊಣೆ. ಜಗತ್ತಿನ ಬಹುತೇಕ ಕೋವಿಡ್ ಸಾಂಕ್ರಾಮಿಕ ಬಾಧಿತ ರಾಷ್ಟ್ರಗಳಲ್ಲಿ ಇದೇ ಕ್ರಮ ಅನುಸರಿಸಲಾಗಿದೆ. ಜರ್ಮನಿ, ಇಟಲಿ, ದಕ್ಷಿಣ ಕೊರಿಯಾ, ವೆನಿಜ್ಯುವೆಲಾದಂತಹ ಕಡೆ ಸೋಂಕಿತರ ವೈದ್ಯಕೀಯ ವೆಚ್ಚದ ಜೊತೆ ಆ ಕುಟುಂಬಗಳ ಆರ್ಥಿಕ ಸಂಕಷ್ಟ ನಿವಾರಣೆಯ ನಿಟ್ಟಿನಲ್ಲಿ ಹಣಕಾಸು ಸಹಾಯವನ್ನು ಕೂಡ ಸರ್ಕಾರಗಳು ಮಾಡಿವೆ. ಆದರೆ, ಭಾರತದಲ್ಲಿ ಅಚ್ಛೇದಿನ ಕನಸು ಬಿತ್ತಿ, ದೇಶೋದ್ಧಾರಕ್ಕಾಗಿಯೇ ತಾವು ರಾಜಕೀಯ ಮಾಡುವುದು ಎಂದೇ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದವರು, ಕರೋನಾ ವೈರಾಣು ಪರೀಕ್ಷೆಯಿಂದ ಹಿಡಿದು ಕ್ವಾರಂಟೈನ್ ವರೆಗೆ ಬಹುತೇಕ ಖಾಸಗೀಯವರ ಕೈಗೆ ಒಪ್ಪಿಸಿ, ಕನಿಷ್ಟ ವೈದ್ಯಕೀಯ ಸಲಕರಣೆ- ಪರೀಕ್ಷೆ- ಔಷಧಿಗಳ ಬೆಲೆ ನಿಗದಿಯನ್ನೂ ಮಾಡದೆ(ಕರ್ನಾಟಕದಂತಹ ಕಡೆ ಕೇವಲ ಕೊಠಡಿ ವೆಚ್ಚದ ಮೇಲೆ ಮಾತ್ರ ದರ ನಿರ್ಬಂಧ ಇದೆ) ಜನರನ್ನು ದೋಚಲು ಅವಕಾಶ ಮಾಡಿಕೊಟ್ಟಿದ್ದಾರೆ!
ಜನರ ಜೀವ ಹಿಂಡುತ್ತಿರುವ ಸಾಂಕ್ರಾಮಿಕದ ಹೊತ್ತಲ್ಲಿ ಆದ್ಯತೆಯ ಆರೋಗ್ಯ ಕ್ಷೇತ್ರವನ್ನೇ ಖಾಸಗೀ ಕಾರ್ಪೊರೇಟ್ ಕುಳಗಳ ಸುಗ್ಗಿಯ ಸಂತೆಯಾಗಿ ಪರಿವರ್ತಿಸಿರುವ ಆಳುವ ಮಂದಿ, ಉಳಿದ ರಂಗಗಳನ್ನು ಬಿಡುತ್ತಾರೆಯೇ? ಇಲ್ಲ; ಇದೇ ಅವಕಾಶವೆಂದು, ಸಂಕಷ್ಟದ ಹೊತ್ತಲ್ಲಿ ಸಂತೆಯಲ್ಲಿ ಗಂಟುಕಳ್ಳರ ಕೈವಾಡದಂತೆ, ದೇಶದ ಕೃಷಿ, ಉದ್ಯಮ, ವಿಮಾನ ಮತ್ತು ರೈಲ್ವೆ ಒಳಗೊಂಡ ಸಾರಿಗೆ, ವಿದ್ಯುತ್, ಬ್ಯಾಂಕಿಂಗ್ ಮತ್ತು ವಿಮಾ ವಲಯಗಳಲ್ಲಿ ಕೂಡ ತೀರಾ ತರಾತುರಿಯ ಖಾಸಗೀಕರಣ ಜಾರಿಗೊಳಿಸುತ್ತಿದ್ದಾರೆ.
ಅದು ಕರ್ನಾಟಕದ ಬಿಜೆಪಿ ಸರ್ಕಾರ ಜಾರಿಗೆ ತರಲು ಸಿದ್ಧತೆ ನಡೆಸಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಇರಬಹುದು, ಮೋದಿ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಇರಬಹುದು, .. ಎಲ್ಲವೂ ರೈತನಿಗೆ ಅನುಕೂಲ ಕಲ್ಪಿಸುವ ನೆಪದಲ್ಲಿ ಅಂತಿಮವಾಗಿ ಕಾರ್ಪೊರೇಟ್ ಕಾಂಟ್ರಾಕ್ಟ್ ಕೃಷಿಗೆ ಇದ್ದ ಕಾನೂನು ತೊಡಕು ನಿವಾರಿಸುವ ಪ್ರಯತ್ನಗಳೇ. ಅಂತಿಮವಾಗಿ ಕೃಷಿಯ ಕಾರ್ಪೊರೇಟೀಕರಣದ ಯತ್ನಗಳೇ ಎಂಬುದು ತಳ್ಳಿಹಾಕುವಂತಿಲ್ಲ. ಹಾಗೇ ಏರ್ ಇಂಡಿಯಾ, ಬಿಪಿಸಿಎಲ್, ಒಎನ್ ಜಿಸಿ, ಐಒಸಿ, ಬಿಪಿ ಮತ್ತು ದೇಶದ ಮುಂಚೂಣಿ ನವರತ್ನ ಕಂಪನಿಗಳ ಖಾಸಗೀಕರಣ ಮತ್ತು ಬಂಡವಾಳ ಹಿಂತೆಗೆತ ನಿರ್ಧಾರಗಳು ಕೂಡ ಉದ್ಯಮ ವಲಯವನ್ನು ಸಾರ್ವಜನಿಕ ಸ್ವಾಮ್ಯದಿಂದ ಹೊರತುಪಡಿಸ ಸಂಪೂರ್ಣ ಖಾಸಗಿಯವರ ಕೈಗೆ ಇಡುವ ಯತ್ನಗಳೇ.
ಇನ್ನು ವಿಮಾನ ನಿಲ್ದಾಣಗಳ ಖಾಸಗೀಕರಣದ ಬಳಿಕ ಇದೀಗ ಜನಸಾಮಾನ್ಯರ ಪಾಲಿನ ಕೈಗೆಟುಕುವ ದರದ ಪ್ರಯಾಣದ ಬಹುಮುಖ್ಯ ಸಾರಿಗೆ ವ್ಯವಸ್ಥೆಯಾಗಿ ಜಾಗತಿಕ ಮಟ್ಟದಲ್ಲಿ ಹೆಸರಾಗಿದ್ದ ರೈಲ್ವೆಯನ್ನು ಕೂಡ ಖಾಸಗೀಯವರಿಗೆ ಒಪ್ಪಿಸಲು ಮೋದಿ ಸರ್ಕಾರ ತೀರ್ಮಾನಿಸಿ, ಈ ಕರೋನಾ ಕಾಲದಲ್ಲೇ ಜಾರಿಗೂ ತಂದಾಗಿದೆ. ದೇಶದ ಸುಮಾರು 151 ರೈಲುಗಳ ಖಾಸಗೀಕರಣದ ಜೊತೆಗೆ ಇತರೆ ಸಾಮಾನ್ಯ ರೈಲುಗಳಲ್ಲಿನ ದ್ವಿತೀಯ ದರ್ಜೆ ಸ್ಲೀಪರ್ ಕೊಚ್ ಗಳ ಸಂಖ್ಯೆಯನ್ನು ಕಡಿತ ಮಾಡಲು ಸರ್ಕಾರ ತೀರ್ಮಾನಿಸಿದೆ. ಇದು ಖಂಡಿತವಾಗಿಯೂ ಬಡವರು ಮತ್ತು ಸಾಮಾನ್ಯ ವರ್ಗದ ಜನರ ಸಾರಿಗೆ ಸೌಲಭ್ಯವನ್ನು ಕಿತ್ತುಕೊಳ್ಳುವ ಮತ್ತು ಆ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ಲೂಟಿ ಹೊಡೆಯಲು ಅವಕಾಶ ನೀಡುವ ಕ್ರಮ ಎಂಬುದರಲ್ಲಿ ಅನುಮಾನವಿದೆಯೇ?
ಹಾಗೆ ಇಂಧನ ವಲಯದಲ್ಲಿಯೂ ಖಾಸಗೀಕರಣಕ್ಕೆ ಮುಂದಾಗಿದ್ದು, ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಸಗೀ ಹೂಡಿಕೆಗೆ ಅವಕಾಶ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ ಕಲ್ಲಿದ್ದಲು ವಲಯವನ್ನೂ ಖಾಸಗೀಕರಣಕ್ಕೆ ಈಗಾಗಲೇ ತೀರ್ಮಾನ ಕೈಗೊಂಡಿದ್ದು, ಪ್ರಮುಖವಾಗಿ ಮೋದಿಯವರ ಆಪ್ತ ಉದ್ಯಮಿಗಳಿಗೆ ಹೂಡಿಕೆಗೆ ಅವಕಾಶ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಈ ನಡುವೆ ಮೇ 12ರಂದು ಇದೇ ಕರೋನಾ ಲಾಕ್ ಡೌನ್ ನಡುವೆಯೇ ಪ್ರಧಾನಿ ಮೋದಿಯವರು ತಮ್ಮ ಪ್ರಖ್ಯಾತ ಆತ್ಮನಿರ್ಭರ್ ಭಾರತ ಭಾಷಣದಲ್ಲಿ ಸ್ವಾವಲಂಬಿ ಭಾರತ ಕಟ್ಟುವ ಕರೆ ನೀಡಿದರು. ಸ್ವಾಭಿಮಾನಿ ಮತ್ತು ಸ್ವಾವಲಂಬಿ ಭಾರತ ನಿರ್ಮಾಣವೇ ತಮ್ಮ ಗುರಿ ಎಂದರು. ಗ್ಲೋಕಲ್ ಎಂಬ ಪರಿಭಾಷೆಯ ಮೂಲಕ ದೇಸಿ ಉತ್ಪಾದನೆ ಮತ್ತು ದೇಸಿ ಬಳಕೆಯ ಕುರಿತು ವೀರೋಚಿತ ಭಾಷಣ ಮಾಡಿದರು. ಬರೋಬ್ಬರಿ 20 ಲಕ್ಷ ಕೋಟಿ ಸ್ವಾವಲಂಬಿ ಭಾರತ ಪ್ಯಾಕೇಜ್ ಘೋಷಣೆಯ ಮೂಲಕ ಸುವರ್ಣ ಯುಗದ ಕನಸು ಬಿತ್ತಿದರು. ಆದರೆ, ಅದೇ ಹೊತ್ತಿಗೆ ದೇಶದ ಜನಸಾಮಾನ್ಯರ ಕೈಗೆಟುಕುವ ಆರೋಗ್ಯ, ಸಾರಿಗೆ, ವಿದ್ಯುತ್ ಸೇರಿದಂತೆ ಬದುಕಿನ ಅವಕಾಶಗಳನ್ನು ಮೊಟಕುಮಾಡುವ ಖಾಸಗೀಕರಣಕ್ಕೂ ಚಾಲನೆ ನೀಡಿದರು!
ಇದು ಪ್ರಧಾನಿ ಮೋದಿಯವರ ವರಸೆ! ಅವರು ಆಡುವ ಮಾತಿಗೆ ಅರ್ಥ ಒಂದೇ ಇರದು, ಇರಲಾರದು. ಇದ್ದರೂ ಅದು ಬಹುತೇಕ ತದ್ವಿರುದ್ಧವೇ ಇರುತ್ತದೆ! ಕರೋನಾ ಕಾಲದಲ್ಲಿ ಸಾಲು ಸಾಲು ಭಾಷಣ ಮಾಡಿ, ತಟ್ಟೆಲೋಟ ಬಾರಿಸಲು ಹೇಳಿ, ಶಂಖ-ಜಾಗಟೆ ಊದಲು ಹಚ್ಚಿ, ದೀಪ- ಮೊಂಬತ್ತಿ ಬೆಳಗಲು ಕರೆ ನೀಡಿ ‘ಜನರ ಜೊತೆ ತಾವಿದ್ದೇವೆ, ತಮ್ಮ ಸರ್ಕಾರ ಇದೆ’ ಎನ್ನುತ್ತಲೇ ಇಡೀ ಜನಸಮುದಾಯವನ್ನು ಖಾಸಗೀ ಆಸ್ಪತ್ರೆ, ಪ್ರಯೋಗಾಲಯಗಳ ಮುಂದೆ ಜೀತಕ್ಕೆ ತಳ್ಳುವ ಹುನ್ನಾರುಗಳಿಗೆ ರಾಜಾರೋಷವಾಗೇ ಚಾಲನೆ ನೀಡಿದ್ದಾರೆ! ಆ ಅರ್ಥದಲ್ಲಿ’ಭೀಕರ ದುರ್ದಿನಗಳನ್ನು ಯಾವುದೇ ಕಾರಣಕ್ಕೆ ವ್ಯರ್ಥವಾಗಲು ಬಿಡಬೇಡ’ ಎಂದು ಹೇಳಿದ್ದು ಚರ್ಚಿಲ್ ಆದರೂ, ಅದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಜಾರಿಗೆ ತಂದ ಹೆಗ್ಗಳಿಕೆ ಮಾತ್ರ ಪ್ರಧಾನಿ ಮೋದಿಯರದ್ದು!