ಕಳೆದ ವಾರ ಕೇಂದ್ರ ಸಚಿವ ಸದಾನಂದ ಗೌಡರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸುದ್ದಿಯಾಗಿದ್ದರು. ಬಳಿಕ ರಾಜ್ಯ ಸರ್ಕಾರ ಕೋರಂಟೈನ್ ಸಂಬಂಧಿಸಿದ ಕೋವಿಡ್-19 ಮಾರ್ಗದರ್ಶಿ ಸೂತ್ರವನ್ನೇ ತಿದ್ದುಪಡಿ ಮಾಡಿ ಸಚಿವರನ್ನು ಇನ್ನಷ್ಟು ಮುಜುಗರದಿಂದ ಪಾರುಮಾಡುವ ಯತ್ನ ನಡೆಸಿ ಸಾರ್ವಜನಿಕ ಟೀಕೆಗೂ ಗುರಿಯಾಗಿತ್ತು.
ಇದೀಗ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರುಗಳು ಸಾಮಾಜಿಕ ಅಂತರ ಮತ್ತು ಮಾಸ್ಕ್ ಬಳಕೆಯ ನಿಯಮಗಳನ್ನು ಗಾಳಿಗೆ ತೂರಿ ಶಿವಮೊಗ್ಗ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಕೋವಿಡ್-19 ಸಂಬಂಧಿಸಿದ ಕಾನೂನು- ಕಟ್ಟಳೆಗಳು ಜನಸಾಮಾನ್ಯರ ಪಾಲಿಗೆ ಮಾತ್ರವೇ ವಿನಃ ಬಿಜೆಪಿಯ ನಾಯಕರ ಪಾಲಿಗಲ್ಲಎಂಬ ಸಂದೇಶವನ್ನು ರವಾನಿಸಿದ್ದಾರೆ.
ಅಲ್ಲದೆ, ಸೋಮವಾರ ನಡೆದ ಶಿವಮೊಗ್ಗ ಮಹಾನಗರ ಪಾಲಿಕೆಯ ಸರಣಿ ಕಾರ್ಯಕ್ರಮಗಳಲ್ಲಿ ಸಚಿವದ್ವಯರೊಂದಿಗೆ ಪಾಲಿಕೆಯ ಮೇಯರ್, ಉಪಮೇಯರ್, ಪ್ರತಿಪಕ್ಷ ನಾಯಕರು, ಆಯುಕ್ತರಾದಿಯಾಗಿ ಹಲವು ಅಧಿಕಾರಿಗಳು ಹೀಗೆ ಎಲ್ಲರೂ ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳಿಗೆ ಯಾವ ಕಿಮ್ಮತ್ತನ್ನೂ ನೀಡದೇ ಸಾರ್ವಜನಿಕವಾಗಿಯೇ ತಾವು ರೂಪಿಸಿದ ನಿಯಮಗಳು ತಮ್ಮನ್ನು ಹೊರತುಪಡಿಸಿ ಅನ್ಯರಿಗೆ ಮಾತ್ರ ಅನ್ವಯ ಎಂದು ಸಾರಿ ಹೇಳಿದ್ದಾರೆ.
ಹಾಗೆ ನೋಡಿದರೆ, ಇದೇ ಶಿವಮೊಗ್ಗ ಮಹಾನಗರ ಪಾಲಿಕೆ ಮಾಸ್ ಧರಿಸಿಲ್ಲ ಎಂಬ ಕಾರಣಕ್ಕೆ ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಳೆದ ವಾರವಷ್ಟೇ ದಂಡ ವಿಧಿಸಿತ್ತು. ಜೊತೆಗೆ ದಂಡ ವಿಧಿಸುವ ವೇಳೆ ಸಾಕಷ್ಟು ಮಾತಿನ ಚಕಮಕಿ ನಡೆದು ಸಾರ್ವಜನಿಕ ವಲಯದಲ್ಲಿ ಚರ್ಚೆಗೇ ಗ್ರಾಸವಾಗಿತ್ತು. ಅಲ್ಲದೆ, ನಗರದಲ್ಲಿ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದನ್ನು ಖಾತರಿಗೊಳಿಸುವ ಕ್ರಮವಾಗಿ ವ್ಯಾಪಕವಾಗಿ ದಂಡ ವಿಧಿಸಲಾಗುತ್ತಿದೆ. ಖಾಸಗೀ ಕಾರಿನಲ್ಲಿ ಹೋಗುವವರಿಗೂ ಮಾಸ್ಕ್ ಧರಿಸದೇ ಇರುವುದಕ್ಕೆ ದಂಡ ಹಾಕಿರುವ ಘಟನೆಗಳೂ ಇವೆ. ತನ್ನದೇ ಕಾರಿನಲ್ಲಿ ತಾನೊಬ್ಬನೇ ಸಂಚರಿಸುವಾಗ, ಕಾರಿನ ಒಳಗೆ ಕಿಟಕಿ ಗಾಜು ಏರಿಸಿಕೊಂಡಿರುವಾಗಲೂ ಆತ ಮಾಸ್ಕ್ ಧರಿಸದೇ ಇದ್ದರೆ ದಂಡ ವಿಧಿಸಿದ ಉದಾಹರಣೆಗಳೂ ಇವೆ.
ಶಿವಮೊಗ್ಗ ಮಹಾನಗರ ಪಾಲಿಕೆ ಹೀಗೆ ಹಠಕ್ಕೆ ಬಿದ್ದು ಸಾರ್ವಜನಿಕರಿಗೆ ದಂಡ ವಿಧಿಸಿ ವಸೂಲಿ ಮಾಡಿದ ಶುಲ್ಕವೇ ಬರೋಬ್ಬರಿ 1.50 ಲಕ್ಷ ರೂಪಾಯಿ! ಏಪ್ರಿಲ್ 24ರಿಂದ ಜಾರಿಗೆ ಬಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ ಎಂಬ ನಿಯಮಗಳಿಂದಾಗಿ ನಗರಪಾಲಿಕೆಯ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ ಸುಮಾರು 800 ಮಂದಿಗೆ ದಂಡ ವಿಧಿಸಲಾಗಿದ್ದು, ಬರೋಬ್ಬರಿ 1.50 ಲಕ್ಷ ಹಣ ವಸೂಲಿ ಮಾಡಲಾಗಿದೆ. ಹಾಗೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳದ 350ಕ್ಕೂ ಅಧಿಕ ಮಂದಿಗೆ ದಂಡ ವಿಧಿಸಲಾಗಿದ್ದು, ಸುಮಾರು 75 ಸಾವಿರ ರೂ. ವಸೂಲಿ ಮಾಡಲಾಗಿದೆ. ಹಾಗೇ ಸಾರ್ವಜನಿಕ ಸ್ಥಳದಲ್ಲಿ ಉಗುಳಿದವರಿಗೂ ತಲಾ ಒಂದು ಸಾವಿರ ರೂ. ದಂಡ ಹಾಕಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಐದಕ್ಕೂ ಹೆಚ್ಚು ತಂಡಗಳು ಹೀಗೆ ದಂಡ ವಿಧಿಸಲೆಂದೇ ನೇಮಕವಾಗಿವೆ.
ಕಟ್ಟುನಿಟ್ಟಿನ ಕ್ರಮದಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್- ಸಾಮಾಜಿಕ ಅಂತರದಂತಹ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಯೂ ಆಗಿವೆ. ಜನತೆ ಕೂಡ ಬಹುತೇಕ ನಿಯಮ ಪಾಲಿಸುತ್ತಿದ್ದಾರೆ. ಆ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ವೈಯಕ್ತಿಕ ಆರೋಗ್ಯದ ಕಡೆ ಜನರ ಗಮನ ಸೆಳೆಯುವಲ್ಲಿ ಪಾಲಿಕೆಯ ಕ್ರಮ ಯಶಸ್ವಿಯೂ ಆಗಿದೆ.
ಆದರೆ, ಈ ಎಲ್ಲಾ ದಂಡನೆಯ ಕ್ರಮಗಳು ಅಮಾಯಕರ ಜನರ ಪಾಲಿಗೆ ಮಾತ್ರ, ಸಚಿವರು, ಅಧಿಕಾರಿಗಳು ಮುಂತಾದ ಪ್ರಭಾವಿಗಳಿಗಲ್ಲ ಎಂಬುದನ್ನು ಸೋಮವಾರದ ಸರಣಿ ಕಾರ್ಯಕ್ರಮಗಳು ಜಗಜ್ಜಾಹೀರುಮಾಡಿವೆ ಎಂಬುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.